ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ಬೆಳೆಗಾರರಿಗೆ ಪರಿಹಾರ ನೀಡಲು ಆಗ್ರಹ

Last Updated 22 ಅಕ್ಟೋಬರ್ 2011, 6:20 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ತಂಬಾಕು ಬ್ಯಾರನ್‌ಗೆ ಕನಿಷ್ಠ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಪ್ರಕಾಶ್‌ರಾಜೇಅರಸ್ ಒತ್ತಾಯಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರ ರೈತರಿಗೆ ಪರ್ಯಾಯ ಬೆಳೆ ಬೆಳೆಯುವಂತೆ ಉತ್ತೇಜಿಸುತ್ತಿದೆ. ಮುಂದಿನ 9 ವರ್ಷದಲ್ಲಿ ತಂಬಾಕು ಬೆಳೆಯನ್ನು ಸಂಪೂರ್ಣ ನಿಷೇಧಿಸುವ ಸಲುವಾಗಿ ಈ ಕ್ರಮಕ್ಕೆ ಮುಂದಾಗಿದೆ. ಆದರೆ ಪರ್ಯಾಯವಾಗಿ ರಾಗಿ, ಜೋಳ,  ಶುಂಠಿ, ರೇಷ್ಮೆ ಮತ್ತಿತರರ ಬೆಳೆ ಬೆಳೆಯುವಂತೆ ತಿಳಿಸುತ್ತಿದ್ದು, ಪ್ರಸ್ತುತ ಎಲ್ಲಾ ಬೆಳೆಗಳ ಬೆಲೆಗಳು ಕುಸಿದಿವೆ ಎಂದು ಆತಂಕ ವ್ಯಕ್ತಪಡಿಸಿದರು.
 
ಮೈಸೂರು ಭಾಗದ ಪಿರಿಯಾಪಟ್ಟಣ, ಹುಣಸೂರು, ಎಚ್.ಡಿ.ಕೋಟೆ ಹಾಗೂ ಕೆ.ಆರ್.ನಗರ ತಾಲ್ಲೂಕುಗಳ ರೈತರು ತಂಬಾಕು ಉತ್ಪಾದನೆಗಾಗಿ  ಹಿಂದಿನಿಂದಲೂ ಸಾಲ ಮಾಡುತ್ತಾ ಬಂದಿದ್ದಾರೆ. ಸಾಲವು ಹೆಚ್ಚಿನ ಪ್ರಮಾಣದಲ್ಲಿದ್ದು ಪರ್ಯಾಯ ಬೆಳೆಗಳನ್ನು ಬೆಳೆದು ಈ ಸಾಲವನ್ನು ತಿರಿಸುವುದು ಅಸಾಧ್ಯ ಕೆಲಸವಾಗಿದೆ. ಆದ್ದರಿಂದ ಬ್ಯಾರನ್ ಒಂದಕ್ಕೆ ಕನಿಷ್ಠ 5 ಲಕ್ಷ ರೂಪಾಯಿ ಪರಿಹಾರ ನೀಡಿದಲ್ಲಿ ಮುಂದಿನ ವರ್ಷದಿಂದಲೇ ತಂಬಾಕು ಬೆಳೆ ಬೆಳೆಯುವುದನ್ನು ನಿಲ್ಲಿಸುತ್ತೇವೆ ಎಂದು ತಿಳಿಸಿದರು.

ಪಟ್ಟಣದಲ್ಲಿರುವ ಸಬ್‌ರಿಜಿಸ್ಟರ್ ಕಚೇರಿ, ಭೂಮಾಪನ ಕಚೇರಿ, ಕಾರ್ಯನಿರ್ವಹಣಾಧಿಕಾರಿ ಕಚೇರಿ ಹಾಗೂ ತಾಲ್ಲೂಕು ಕಚೇರಿ ಸೇರಿದಂತೆ ಮತ್ತಿತರ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು ರೈತರನ್ನು ಸುಲಿಗೆ ಮಾಡಲಾಗುತ್ತಿದೆ. ಈ ಸಂಬಂದ ತಹಶಿಲ್ದಾರ್ ಸೂಕ್ತ ಕ್ರಮಕೈಗೊಳ್ಳಬೇಕು. 7 ದಿನಗಳೊಳಗೆ ತಾಲ್ಲೂಕು ಅಧಿಕಾರಿಗಳು ಹಾಗೂ ರೈತರ ಸಭೆಯನ್ನು ಕರೆದು ಚರ್ಚಿಸಿ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ  ತಾಲ್ಲೂಕು ಕಚೇರಿ ಮುಂಭಾಗ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.

ತಾಲ್ಲೂಕು ರೈತ ಸಂಘದ ಉಪಾಧ್ಯಕ್ಷ ಬಿ.ಜೆ.ದೇವರಾಜ್ ಮಾತನಾಡಿ ಪ್ರಸ್ತುತ ಉತ್ತಮ ದರ್ಜೆಯ ತಂಬಾಕಿಗೆ ಮಾತ್ರ ಸರಾಸರಿ 100 ರೂಪಾಯಿ ದೊರೆಯುತ್ತಿದ್ದು ಮುಂದಿನ ದಿನಗಳಲ್ಲಿ ಕಡಿಮೆ ದರ್ಜೆಯ ತಂಬಾಕನ್ನು ಮಾರಾಟದ ನಂತರ ಸರಾಸರಿ ಬೆಲೆಯು ಕೆ.ಜಿಯೊಂದಕ್ಕೆ 60 ರಿಂದ 70 ರೂ ಗೆ ಕುಸಿಯಲಿದೆ. ಇದರಿಂದ ರೈತರಿಗೆ ನಷ್ಟ ಸಂಭವಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಬೋರಲಿಂಗೇಗೌಡ, ಪಿ.ಜೆ.ಶಿವಣ್ಣಶೆಟ್ಟಿ, ತಾಲ್ಲೂಕು ಗೌರವಾಧ್ಯಕ್ಷ ಕರೀಗೌಡ, ಕಾರ್ಯದರ್ಶಿ ಕೊಣಸೂರು ಆನಂದ್, ಮುಖಂಡರಾದ ಎಸ್.ರಾಜೇಅರಸ್, ಶಿವಣ್ಣ,  ಸತೀಶ್ ರಾಜೇಅರಸ್, ಕಾಳಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT