ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ತತ್ವಪದ ಉಳಿವಿಗೆ ಸಾಂಘಿಕ ಯತ್ನ ಅಗತ್ಯ'

Last Updated 2 ಆಗಸ್ಟ್ 2013, 9:40 IST
ಅಕ್ಷರ ಗಾತ್ರ

ಶಿಗ್ಗಾವಿ: `ಶಿಶುವಿನಹಾಳ ಶರೀಫರು ಅಜರಾಮರವಾಗಿರುವಂತೆ ಅವರ ತತ್ವಪದ ಸಾಹಿತ್ಯ ಹಾಗೂ ಗಾಯನ ಕಲೆ  ಶಾಶ್ವತವಾಗಿ ಉಳಿಯಲು ಸಮಾಜದ ಪ್ರತಿಯೊಬ್ಬರು ಶ್ರಮ ವಹಿಸಬೇಕಿದೆ' ಎಂದು ಸಂತ ಶಿಶುವಿನಹಾಳ ಶರೀಫರ ಸಂತತಿಯ ತತ್ವಪದ ಗಾಯಕ ಹುಸೇನ್ ಸಾಹೇಬ್ ಶರೀಫನವರ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ತಿಂಗಳ ಅತಿಥಿಯೊಂದಿಗೆ ಪಟ್ಟಾಂಗ-9 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಶರೀಫರು ಸರ್ವಧರ್ಮ ಸಮನ್ವಯದ ತತ್ವವನ್ನು ಜಗತ್ತಿಗೆ ಬೋಧಿಸಿದ್ದಾರೆ. ಅವರು ಹಾಕಿಕೊಟ್ಟ ಪರಂಪರೆಯಲ್ಲಿ ನಡೆದು, ಮೂಲ ತತ್ವಪದ, ಸಾಹಿತ್ಯ ಮತ್ತು ಗಾಯನ ಕಲೆಯನ್ನು ಮುಂದಿನ ಪೀಳಿಗೆಗೆ ಕಲ್ಪಿಸಿಕೊಡಬೇಕಾಗಿದೆ' ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ, `ಪಾರಂಪರಿಕ ವಿಶ್ವವಿದ್ಯಾಲಯಗಳಿಗಿಂತ ಜಾನಪದ ವಿಶ್ವವಿದ್ಯಾಲಯ ಅತ್ಯಂತ ಭಿನ್ನವಾಗಿದೆ. ಜಾಗತೀಕರಣದ ದಾಳಿಗೆ ತುತ್ತಾಗಿ ನಮ್ಮ ಪರಂಪರೆ ನಶಿಸಿ ಹೋಗುತ್ತಿದ್ದು, ಅದನ್ನು ಉಳಿಸಿ ಬೆಳೆಸಿಕೊಳ್ಳುವ ಉದ್ದೆೀಶದಿಂದ ಬರುವ ನಾಗರ ಪಂಚಮಿ ಹಬ್ಬದ ನಿಮಿತ್ತ ಜಿಲ್ಲೆಯ ಎಲ್ಲ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ನಾಗರ ಪಂಚಮಿ ಹಾಡುಗಳನ್ನು ಹೇಳುವ ಸ್ಪರ್ಧೆಯನ್ನು ಏರ್ಪಡಿಸಲಾಗುವುದು' ಎಂದರು. `ತತ್ವಪದ ಗಾಯನ ಕಲೆಯನ್ನು ಇನ್ನು ಜೀವಂತಗೊಳಿಸುವ ಮೂಲಕ ಶರೀಫರ ಪರಂಪರೆಯನ್ನು ಮುಂದುವರಿಸುವ ಹುಸೇನ್ ಸಾಹೇಬರ ಕಾರ್ಯದ ಬಗ್ಗೆ ಶ್ಲಾಘನೀಯ' ಎಂದರು.

ತತ್ವಪದಕಾರ ಹುಸೇನ್ ಸಾಹೇಬ್ ಶರೀಫನವರ ಹಾಗೂ ಅವರ ಪತ್ನಿ ಮುನ್ನಾಬಿ ಅವರನ್ನು ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನಿಸಿಲಾಯಿತು.

ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಚಂದ್ರಪೂಜಾರಿ, ಸಂದರ್ಶಕ ಪ್ರಾಧ್ಯಾಪಕ ಡಾ. ಕೆ.ಕಮಲಾಕ್ಷ, ಡಾ. ಶ್ರಿಶೈಲ ಹುದ್ದಾರ, ಡಾ.ರಾಮು ಮೂಲಗಿ, ಪಿಎಚ್.ಡಿ. ಸಂಶೋಧನಾರ್ಥಿಗಳು, ಷರೀಫನವರ ಕುಟುಂಬದ ಸದಸ್ಯರು ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.

ಕೆ.ಎಲ್.ಲಕ್ಷ್ಮಣ ಪ್ರಾರ್ಥಿಸಿದರು. ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಸ.ಚಿ.ರಮೇಶ ಸ್ವಾಗತಿಸಿದರು. ಹಿರಿಯ ಸಂಶೋಧನಾ ಅಧಿಕಾರಿ ಡಾ.ಕೆ.ಪ್ರೇಮಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಹಾಯಕ ಪ್ರಾಧ್ಯಾಪಕಿ ಎಂ.ಬಿ. ಶ್ವೇತಾ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ವೃಷಭಕುಮಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT