ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖೆ ನಡೆಯಲಿ

Last Updated 11 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ಕುರಿತ ವಿವಾದ ಹೊಸದೊಂದು ತಿರುವು ಪಡೆಯುತ್ತಿದೆ. ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಎದುರಾದ ವಿರೋಧವನ್ನು ರಾಜಕೀಯ ಚಾತುರ್ಯದ ಬಲದಿಂದ ಎದುರಿಸಿದ ಯುಪಿಎ ಸರ್ಕಾರವನ್ನು ಮಣಿಸಲು ವಿರೋಧ ಪಕ್ಷಗಳ ಕೈಗೆ ಹೊಸ ಅಸ್ತ್ರವೊಂದು ಸಿಕ್ಕಿದೆ.

ಇದರ ಪರಿಣಾಮದಿಂದಾಗಿ ಉಂಟಾಗಿರುವ ಗದ್ದಲ ಸಂಸತ್ ಕಲಾಪದ ಅವಧಿಯನ್ನು ನುಂಗಿಹಾಕುತ್ತಿದೆ. ಭಾರತದ ಚಿಲ್ಲರೆ ಮಾರಾಟ ಕ್ಷೇತ್ರಕ್ಕೆ ಪ್ರವೇಶಿಸಲಿಕ್ಕಾಗಿ ಲಾಬಿ ನಡೆಸಲು ವಾಲ್‌ಮಾರ್ಟ್ ಸುಮಾರು 125 ಕೋಟಿ ರೂಪಾಯಿ ಖರ್ಚು ಮಾಡಿದೆ ಎನ್ನುವ ಸುದ್ದಿಯ ಸ್ಫೋಟ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಡವಳಿಕೆಯನ್ನು ಸಂಶಯದಿಂದ ನೋಡುವಂತೆ ಮಾಡಿದೆ.

ಲಾಬಿ ನಡೆಸಲು ಹಣ ನೀಡಿರುವುದನ್ನು ವಾಲ್‌ಮಾರ್ಟ್ ಅಮೆರಿಕದ ಸೆನೆಟ್‌ಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.  ಸೆಪ್ಟೆಂಬರ್‌ಗೆ ಕೊನೆಗೊಂಡಿರುವ ಮೂರು ತಿಂಗಳ ಅವಧಿಯಲ್ಲಿಯೇ ವಾಲ್‌ಮಾರ್ಟ್ ಲಾಬಿಗಾಗಿ 10 ಕೋಟಿ ರೂಪಾಯಿ ಖರ್ಚುಮಾಡಿರುವುದು ವರದಿಯಿಂದ ಬೆಳಕಿಗೆ ಬಂದಿದೆ. ವಿವಾದಾತ್ಮಕ `ವಿದೇಶಿ ಬಂಡವಾಳ ಹೂಡಿಕೆ ಬಗೆಗಿನ ಚರ್ಚೆ'ಕೂಡಾ ವರದಿಯಲ್ಲಿ ಸೇರಿರುವುದು ವಿಶೇಷ.

ಅಮೆರಿಕದಲ್ಲಿ ಅಧಿಕೃತವಾಗಿ ಲಾಬಿ ನಡೆಸಲು ಅವಕಾಶ ಇದ್ದರೂ ಭಾರತದಲ್ಲಿ ಇದು ಕಾನೂನು ಬಾಹಿರ. ಯುಪಿಎ ಸರ್ಕಾರ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಬಗ್ಗೆ ತೋರುತ್ತಿರುವ ಅತ್ಯಾಸಕ್ತಿಯನ್ನು ವಿರೋಧಪಕ್ಷಗಳು  ಈಗ ಬಯಲಾಗಿರುವ ಲಾಬಿ ಹಗರಣಕ್ಕೆ ಜೋಡಿಸುತ್ತಿರುವುದು ಸಹಜವೇ ಆಗಿದೆ. ವಿರೋಧ ಪಕ್ಷಗಳ ಕೆಲವು ನಾಯಕರು ಇನ್ನಷ್ಟು ಮುಂದುವರಿದು ಬೋಪೋರ್ಸ್ ಹಗರಣವನ್ನು ನೆನಪು ಮಾಡಿಕೊಡುತ್ತಿದ್ದಾರೆ.

`ಸಾರ್ವಜನಿಕ ಕ್ಷೇತ್ರದ ಉದ್ಯಮಗಳೆಲ್ಲವೂ ಭ್ರಷ್ಟಾಚಾರದ ಹುತ್ತಗಳಾಗಿ ಹೋಗಿವೆ. ಇದಕ್ಕೆ ಖಾಸಗೀಕರಣವೊಂದೇ ಪರಿಹಾರ' ಎಂದು ವಾದಿಸುವವರ ಕಣ್ಣುಗಳನ್ನು ತೆರೆಸುವಂತಿದೆ ಈ ಬೆಳವಣಿಗೆ. ಆರ್ಥಿಕ ಉದಾರೀಕರಣದಿಂದಾಗಿ ಲೈಸೆನ್ಸ್‌ರಾಜ್ ಕೊನೆಗೊಂಡ ಕಾರಣ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ ಎಂಬ ಅಭಿಪ್ರಾಯವನ್ನು ಕೂಡಾ ಈ ಹಗರಣ ಮರುಪರಿಶೀಲಿಸುವಂತೆ ಮಾಡಿದೆ.

ದೇಶದ ಅನೇಕ ಉದ್ಯಮಿಗಳು ಸರ್ಕಾರದ ನೀತಿ-ನಿರ್ಧಾರಗಳನ್ನು ಮಾತ್ರವಲ್ಲ, ತಮಗೆ ಅನುಕೂಲಕಾರಿಗಳಲ್ಲದ ಸಚಿವರ ಖಾತೆಗಳನ್ನೇ ಬದಲಾಯಿಸಬಲ್ಲಷ್ಟು ಶಕ್ತಿಶಾಲಿಯಾಗಿರುವುದಕ್ಕೆ ಇತ್ತೀಚಿನ ಕೆಲವು ಪ್ರಕರಣಗಳು ಸಾಕ್ಷಿ. ವಿದೇಶಿ ಬಂಡವಾಳ ಹೂಡಿಕೆಯ ಕೇಂದ್ರ ಸರ್ಕಾರದ ನೀತಿ ಕೂಡಾ ಕೇವಲ ದೇಶದ ಜನರ ಹಿತವನ್ನಷ್ಟೇ ಗಮನದಲ್ಲಿಟ್ಟುಕೊಂಡು ಕೈಗೊಂಡದ್ದಲ್ಲ ಎನ್ನುವ ಆರೋಪವನ್ನು ಪುಷ್ಟೀಕರಿಸುವಂತಿದೆ ವಾಲ್‌ಮಾರ್ಟ್ ಲಾಬಿ ಹಗರಣ.

ಇದರ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂದು ಸಂಸತ್‌ನ ಉಭಯಸದನಗಳಲ್ಲಿ ವಿರೋಧಪಕ್ಷಗಳು ಮಾಡಿರುವ ಒತ್ತಾಯ ಸರಿಯಾಗಿಯೇ ಇದೆ. ತನಿಖೆಗೆ ಸಿದ್ಧ ಇರುವುದಾಗಿ  ಸದನದಲ್ಲಿ ಘೋಷಿಸಿರುವ ಯುಪಿಎ ನುಡಿದಂತೆ ನಡೆಯಬೇಕಾಗಿದೆ. ತನಿಖೆ ಎನ್ನುವುದು ಬೀಸೋ ದೊಣ್ಣೆಯಿಂದ ಪಾರಾಗುವ ತಂತ್ರವಾಗಬಾರದು.

ವಿರೋಧಪಕ್ಷಗಳು ಒತ್ತಾಯಿಸಿರುವಂತೆ ಹಗರಣದ ತನಿಖೆ ಜಂಟಿ ಸಂಸದೀಯ ಸಮಿತಿಯಿಂದಲೇ ನಡೆಸಲು ಸರ್ಕಾರ ಒಪ್ಪಿಕೊಳ್ಳಬೇಕು, ಇಲ್ಲದೆ ಇದ್ದರೆ ವಿರೋಧಪಕ್ಷಗಳು ಮಾಡುತ್ತಿರುವ ಆರೋಪಗಳು ನಿಜ ಇರಬಹುದೆಂದು ಜನ ನಂಬುತ್ತಾರೆ. ವ್ಯಕ್ತಿ, ಸಂಸ್ಥೆ ಇಲ್ಲವೇ ಸರ್ಕಾರದ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಬೇಕಾದರೆ ನಡವಳಿಕೆಯಲ್ಲಿ ಪಾರದರ್ಶಕತೆ ಇರಬೇಕಾಗಿರುವುದು ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT