ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿನಿಂದ ನ್ಯಾಯಾಂಗ ನಿಂದನೆ ದೂರು ದಾಖಲು

Last Updated 10 ಅಕ್ಟೋಬರ್ 2012, 9:15 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೃಷ್ಣರಾಜ ಸಾಗರ ಅಣೆಕಟ್ಟೆಯಿಂದ (ಕೆಆರ್‌ಎಸ್) ಸೆ.29 ರಿಂದ ಹರಿಸುತ್ತಿದ್ದ ಕಾವೇರಿ ನೀರನ್ನು ಕರ್ನಾಟಕ ಸೋಮವಾರ ಸಂಜೆಯಿಂದ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ತಮಿಳುನಾಡು ಬುಧವಾರ ಈ ಕುರಿತಂತೆ ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕದ ವಿರುದ್ಧ ನ್ಯಾಯಾಂಗ ನಿಂದನೆ ದೂರು ದಾಖಲಿಸಿತು.

ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ನೇತೃತ್ವದಲ್ಲಿ ಮಂಗಳವಾರ ನಡೆದ ಪರಿಸ್ಥಿತಿ ಅವಲೋಕನಾ ಸಭೆಯಲ್ಲಿ ಈ ಕರ್ನಾಟಕದ ಕ್ರಮದ ವಿರುದ್ಧ `ಸುಪ್ರೀಂ~ ಮೊರೆ ಹೋಗುವ ನಿರ್ಣಯ ಕೈಗೊಳ್ಳಲಾಗಿತ್ತು.

ಪ್ರಧಾನ ಮಂತ್ರಿ ನೇತೃತ್ವದಲ್ಲಿ ಸೆಪ್ಟೆಂಬರ್ 19ರಂದು ನಡೆದ `ಕಾವೇರಿ ನದಿ ಪ್ರಾಧಿಕಾರ~ (ಸಿಆರ್‌ಎ) ಸಭೆಯಲ್ಲಿ ತಮಿಳುನಾಡಿಗೆ ಸೆ. 20ರಿಂದ ಅ.15ರವರೆಗೆ ನಿತ್ಯ 9000 ಕ್ಯೂಸೆಕ್ ನೀರು ಬಿಡಬೇಕೆಂದು ಸಿಆರ್‌ಎ ಕರ್ನಾಟಕಕ್ಕೆ ನಿರ್ದೇಶನ ನೀಡಿತ್ತು. ಇದರಿಂದಾಗಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರು ಸಭೆಯ ಮಧ್ಯದಲ್ಲೇ ಸಭಾತ್ಯಾಗ ಮಾಡಿದ್ದರು.
 
ಸಿಆರ್‌ಎ ಈ ನಿರ್ದೇಶನದಿಂದ ಕರ್ನಾಟಕದಲ್ಲಿ ತಮಿಳುನಾಡಿಗೆ ನೀರು ಬಿಡಲು ಭಾರಿ ವಿರೋಧ ವ್ಯಕ್ತವಾಯಿತು. ಆದರೆ ಮುಂದೆ ಸಿಆರ್‌ಎ ನಿರ್ದೇಶನ ಪಾಲಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದ ಹಿನ್ನೆಲೆಯಲ್ಲಿ ಒತ್ತಡಕ್ಕೆ ಮಣಿದ ಸರ್ಕಾರ ಸೆ.29ರಿಂದ ತಮಿಳುನಾಡಿಗೆ ನೀರು ಹರಿಸಲು ಪ್ರಾರಂಭಿಸಿತ್ತು.

ಸರ್ಕಾರ ಈ ಕ್ರಮ ವಿರೋಧಿಸಿ ರಾಜ್ಯದಾದ್ಯಂತ ಭಾರಿ ವಿರೋಧ, ಪ್ರತಿಭಟನೆಗಳು ಹಾಗೂ ಬಂದ್‌ಗಳು ನಡೆದವು. ಪ್ರತಿಭಟನೆಗಳಿಗೆ ಮಣಿದ ಸರ್ಕಾರ ಸಿಆರ್‌ಎ ನಿರ್ದೇಶನ ಪುನರ್ ಪರಿಶೀಲಿಸುವಂತೆ ಮನವಿ ಮಾಡಿ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿತು.
 
ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಕರ್ನಾಟಕದ ಪುನರ್ ಪರಿಶೀಲನಾ ಅರ್ಜಿ ವಿಚಾರಣೆ ವೇಳೆ ನ್ಯಾ.ಡಿ.ಕೆ.ಜೈನ್ ಮತ್ತು ನ್ಯಾ. ಮದನ್ ಬಿ.ಲೋಕೂರ್ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಹಿರಿಯ ವಕೀಲ ಎಫ್.ಎಸ್. ನಾರಿಮನ್ ಅವರು `ಕಾವೇರಿ ನದಿಯಿಂದ ತಮಿಳುನಾಡಿಗೆ ಇನ್ನು ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ~ ಎಂದು ಕರ್ನಾಟಕ ಸುಪ್ರೀಂಕೋರ್ಟ್‌ಗೆ ಖಡಾಖಂಡಿತವಾಗಿ ತಿಳಿಸಿದ್ದರು.

ಈ ನಿರ್ದೇಶನ ಪಾಲಿಸುವಂತೆ ನೀಡಿರುವ ಆದೇಶ ತಡೆ ಹಿಡಿಯಬೇಕು ಇಲ್ಲವೆ ಮಾರ್ಪಾಡು ಮಾಡಬೇಕೆಂಬ ಕರ್ನಾಟಕದ ಅರ್ಜಿಯ ವಿಚಾರಣೆ ನಡೆಸಿದ ಪೀಠ, ಕರ್ನಾಟಕದ ಪುನರ್ ಪರಿಶೀಲನಾ ಅರ್ಜಿ ಮೇಲೆ ತೀರ್ಮಾನ ಕೈಗೊಳ್ಳಲು ಪ್ರಧಾನಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಸ್ಪಷ್ಟಪಡಿಸಿತು.

ನಾರಿಮನ್ ಮನವಿಯಂತೆ ಕರ್ನಾಟಕದ ಅರ್ಜಿಯ ವಿಚಾರಣೆಯನ್ನು ಅ.12ಕ್ಕೆ ಮುಂದೂಡಿತು. ಈ ಅರ್ಜಿಗೆ ಎರಡು ದಿನದೊಳಗೆ ಆಕ್ಷೇಪಣೆ ಸಲ್ಲಿಸಲು ತಮಿಳುನಾಡಿಗೆ ಅನುಮತಿ ನೀಡಿತು.

ವಿಚಾರಣೆ ವೇಳೆ ಕರ್ನಾಟಕದ ವಾದಕ್ಕೆ ತಮಿಳುನಾಡಾಗಲೀ ಅಥವಾ ಕೇಂದ್ರವಾಗಲೀ ಯಾವುದೇ ತಕರಾರು ಎತ್ತದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಕಾವೇರಿ ಕೊಳ್ಳದ ಜಲಾಶಯಗಳ ಗೇಟುಗಳನ್ನು ಬಂದ್ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT