ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರೀಕೆರೆ ಕ್ಷೇತ್ರ: ರಾಜಕೀಯ ಮೇಲಾಟಕ್ಕೆ ಸಾಕ್ಷಿ

ಚುನಾವಣೆ ಹಣಾಹಣಿ
Last Updated 15 ಏಪ್ರಿಲ್ 2013, 6:27 IST
ಅಕ್ಷರ ಗಾತ್ರ

ತರೀಕೆರೆ: ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ತರೀಕೆರೆಯೂ ಒಂದು. 1952ರಿಂದ 2008ರ ತನಕ ನಡೆದಿರುವ 13 ಚುನಾವಣೆಯನ್ನು ಅವಲೋಕಿಸಿದಾಗ ಇಲ್ಲಿನ ಮತದಾರ ಹೆಚ್ಚು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಆಶೀರ್ವದಿಸಿದ್ದಾರೆ. 8 ಬಾರಿ  ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದಿದೆ.

1952ರಲ್ಲಿ ಕಿಸಾನ್ ಮಜ್ದೂರ್ ಪ್ರಜಾಪಾರ್ಟಿ, 1967ರಲ್ಲಿ ಪ್ರಜಾ ಸೋಷಿಯಲಿಸ್ಟ್ ಪಾರ್ಟಿ, 1985ರಲ್ಲಿ ಜನತಾಪಕ್ಷ, 1994ರಲ್ಲಿ ಪಕ್ಷೇತರ ಮತ್ತು 2008ರಲ್ಲಿ ಬಿಜೆಪಿ ಅಭ್ಯರ್ಥಿ ತಲಾ ಒಮ್ಮೆ ಜಯ ಸಾಧಿಸಿದ್ದಾರೆ.

1952ರಲ್ಲಿ ನಡೆದ ಮೊಟ್ಟ ಮೊದಲ ಚುನಾವಣೆಯಲ್ಲಿ ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿಯ ಟಿ.ನಾಗಪ್ಪ ಜಯಗಳಿಸಿದ್ದರು. ಚುನಾವಣೆಯಲ್ಲಿ ಪರಾಭವಗೊಂಡ  ಅಭ್ಯರ್ಥಿ ಟಿ.ಸಿ.ಬಸಪ್ಪ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಇದು ದೇಶದ ಮೊದಲ ಚುನಾವಣೆ ಮೊಕದ್ದಮೆ. (ಕಾನೂನು ಪುಸ್ತಕದಲ್ಲಿ ಇಂದಿಗೂ ಸಹಾ ದಾಖಲಾಗಿ ದಾಖಲೆ ಸ್ಥಾಪಿಸಿದ ಚರಿತ್ರಾರ್ಹ ಪ್ರಕರಣ) ಸುಪ್ರೀಂಕೋರ್ಟ್ ಟಿ. ನಾಗಪ್ಪ ಅವರ ಆಯ್ಕೆ ಅಸಿಂಧು ಎಂದು ಘೋಷಿಸಿದ ಕಾರಣ ಟಿ.ಸಿ. ಬಸಪ್ಪ ಶಾಸಕರಾದರು. (ಎರಡನೇ ಸ್ಥಾನ ಪಡೆದ ಅಭ್ಯರ್ಥಿಯನ್ನು ವಿಜಯಿ ಎಂದು ಘೋಷಿಸುವ ಪದ್ಧತಿ ಜಾರಿ ಇದ್ದ ಕಾರಣ ಟಿ.ಸಿ. ಬಸಪ್ಪ ಅವರನ್ನು ನ್ಯಾಯಾಲಯದ ಆದೇಶದಂತೆ ಶಾಸಕರೆಂದು ಘೋಷಿಸಲಾಯಿತು.

ನಂತರ ಈ ಪದ್ಧತಿಯನ್ನು ಬದಲಿಸಲಾಯಿತು.) ಟಿ.ಸಿ.ಬಸಪ್ಪ ನ್ಯಾಯಾಲಯದ ಮೂಲಕ ಗೆಲವು ಪಡೆದರೂ ಸಹಾ ಹೆಚ್ಚು ದಿನ ಶಾಸಕರಾಗಿ ಅಧಿಕಾರ ಅನುಭವಿಸುವ ಭಾಗ್ಯ ಅವರಿಗೆ ಇರಲಿಲ್ಲ. ಸ್ಪಲ್ಪ ಸಮಯದಲ್ಲಿಯೇ  ಇವರ ಅಕಾಲಿಕ ಮರಣದ ಕಾರಣದಿಂದ ಉಪಚುನಾವಣೆ ನಡೆದು ಟಿ.ಸಿ. ಶಾಂತಪ್ಪ ಶಾಸಕರಾದರು. ಒಂದೇ ಅವಧಿಯಲ್ಲಿ  ಕ್ಷೇತ್ರ ಮೂವರು ಶಾಸಕರನ್ನು ಕಂಡದ್ದು ವಿಶೇಷ.1957 ಮತ್ತು 1962 ರಲ್ಲಿ ಟಿ.ಆರ್. ಪರಮೇಶ್ವರಯ್ಯ ಸತತವಾಗಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾದರು.  ಪ್ರಥಮ ಮತದಾನ ಅವಕಾಶದಲ್ಲಿಯೇ ಶಾಸಕರಾಗುವ  ಭಾಗ್ಯ ಅವರಿಗೆ ಒದಗುವ ಮೂಲಕ ತಾಲ್ಲೂಕಿನ ಅತ್ಯಂತ ಕಿರಿಯವ ವಯಸ್ಸಿನ ಶಾಸಕರಾಗಿ ಆಯ್ಕೆಯಾದ ಹೆಮ್ಮೆ ಟಿ.ಆರ್. ಪರಮೇಶ್ವರಯ್ಯ ಅವರದ್ದು. 

1967 ಮತ್ತು 1972ರಲ್ಲಿ ಹಂಜಿ ಶಿವಣ್ಣ ಸತತವಾಗಿ ಎರಡು ಸಲ ಆಯ್ಕೆಯಾಗಿದ್ದು,  ಈ ಇಬ್ಬರನ್ನು ಬಿಟ್ಟರೆ ನಂತರ ಸತತವಾಗಿ ಎರಡು ಬಾರಿ ಕ್ಷೇತ್ರವನ್ನು ಪ್ರತಿನಿಧಿಸುವ ಭಾಗ್ಯ ಯಾರಿಗೂ ಇದುವರೆಗೂ ದೊರೆತಿಲ್ಲ. 1983ರಲ್ಲಿ ಚುನಾವಣೆ ಇನ್ನು ಕೆಲವು ದಿನಗಳು ಇರುವಾಗ ಚುನಾವಣೆಗೆ ಸ್ಪರ್ಧಿಸಿದ್ದ ಎಚ್.ಆರ್.ಬಸವರಾಜ್ ನಿಧನರಾದ ಕಾರಣ  ವೃತ್ತಿಯಲ್ಲಿ ವೈದ್ಯರಾಗಿದ್ದ ಅವರ ಸಹೋದರ ಡಾ.ಎಚ್. ಆರ್. ರಾಜು ಅನಿರೀಕ್ಷತವಾಗಿ ರಾಜಕೀಯಕ್ಕೆ ಕಾಲಿಟ್ಟು  ಅನುಕಂಪದ ಅಲೆಯ ಮೇಲೆ ಶಾಸಕರಾದರು. 1983 ಮತ್ತು 1989ರಲ್ಲಿ ಎರಡು ಬಾರಿ ಶಾಸಕರಾಗಿದ್ದ ಕಾಂಗ್ರೆಸ್‌ನ ಡಾ.ಎಚ್.ಆರ್.ರಾಜು  ಈ ಕ್ಷೇತ್ರದ ಪ್ರಥಮ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 1985ರಲ್ಲಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಿಲ್ಲ.

1985ಚುನಾವಣೆಯಲ್ಲಿ ಮೊದಲ ಬಾರಿಗೆ  ಜನತಾ ಪಕ್ಷದ ಅಭ್ಯರ್ಥಿಯಾಗಿ ಬಿ.ಆರ್. ನೀಲಕಂಠಪ್ಪ ಶಾಸಕರಾಗಿ ಆಯ್ಕೆ ಯಾದರು. 1999ರ ಚುನಾವಣೆಯಲ್ಲಿ ಮತ್ತೆ ಬಿ.ಆರ್. ನೀಲಕಂಠಪ್ಪ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 1994ರ ಚುನಾ ವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್.ಎಂ. ನಾಗರಾಜ್ ವಿಧಾನ ಸಭೆಗೆ ಆಯ್ಕೆಯಾದರು. 2004ರ ಚುನಾವಣೆಯಲ್ಲಿ ಟಿ.ಎಚ್. ಶಿವಶಂಕರಪ್ಪ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಜಯಗಳಿಸಿದ್ದರು 

1957, 1962, 1972, 1978 ಮತ್ತು 1983ರಲ್ಲಿ ಕ್ಷೇತ್ರ ಕಾಂಗ್ರೆಸ್ ಕೈ ಹಿಡಿದಿತ್ತು, 1985ರಲ್ಲಿ ಮೊದಲ ಸಲ ಜನತಾಪಕ್ಷದ ತೆಕ್ಕೆ ಜಾರಿತ್ತು.1989, 1999 ಮತ್ತು 2004ರಲ್ಲಿ ಮತದಾರ ಮತ್ತೆ ಕೈ ಹಿಡಿದ ಫಲವಾಗಿ ಕಾಂಗ್ರೆಸ್ ಜಯಗಳಿಸಿತ್ತು. 1994ರಲ್ಲಿ ಮಾತ್ರ ಪಕ್ಷೇತರ ಅಭ್ಯರ್ಥಿ ಎಸ್.ಎಂ.ನಾಗರಾಜ್ ಅತ್ಯಲ್ಪ ಮತಗಳಿಂದ ಜಯ ಸಾಧಿಸಿದ್ದರು. 2008 ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಪ್ರಭಾವದಿಂದ ಬಿಜೆಪಿ ಮೊದಲ ಬಾರಿ ಜಯಗಳಿಸಿತು. 

ತಾಲೂಕಿನ ಒಂದು ಭಾಗವಾಗಿದ್ದ ಲಿಂಗದಹಳ್ಳಿ 1967ರಲ್ಲಿ ಬೀರೂರು ಕ್ಷೇತ್ರಕ್ಕೆ ಸೇರಿತು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆಯ ಹಿನ್ನೆಲೆಯಲ್ಲಿ ಲಿಂಗದಹಳ್ಳಿ ಹೋಬಳಿ ಪುನಃ ತರೀಕೆರೆ ಕ್ಷೇತ್ರಕ್ಕೆ ಸೇರ್ಪಡೆಯಾಯಿತು. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಶಾಸಕ ಡಿ.ಎಸ್.ಸುರೇಶ್ ಬಿಜೆಪಿಯಿಂದ  ಕೆಜೆಪಿಗೆ ಹಾರಿದ್ದಾರೆ.

ಕಾಂಗ್ರೆಸ್‌ನಲ್ಲಿ 13 ಜನ ಟಿಕೆಟ್ ನೀಡುವಂತೆ  ಸಲ್ಲಿಸಿದ್ದರು.  ಇವರಲ್ಲಿ ಮಾಜಿ ಶಾಸಕರಾದ ಬಿ.ಆರ್.ನೀಲಕಂಠಪ್ಪ, ಟಿ.ಎಚ್.ಶಿವಶಂಕರಪ್ಪ, ಎಸ್.ಎಂ.ನಾಗರಾಜ್, ಕೆಪಿಸಿಸಿ ಸದಸ್ಯ ಟಿ.ವಿ.ಶಿವಶಂಕರಪ್ಪ, ಜಿ.ಎಚ್.ಶ್ರಿನಿವಾಸ್, ಓಂಕಾರಪ್ಪ , ಪರಮೇಶ್ , ದ್ರುವಕುಮಾರ್  ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೆ ಹೈಕಮಾಂಡ್ ಭಾನುವಾರ ಬಿಡುಗಡೆ ಮಾಡಿರುವ  ಎರಡನೇ ಪಟ್ಟಿಯಲ್ಲಿ  ಜಿ.ಎಚ್.ಶ್ರಿನಿವಾಸ್‌ಗೆ ಟಿಕೆಟ್ ನೀಡಿದೆ.  

ಕೆಜೆಪಿಯಿಂದ ಹಾಲಿ ಶಾಸಕ ಡಿ.ಎಸ್.ಸುರೇಶ್ ಸ್ಪರ್ಧಿ ಸಲಿದ್ದಾರೆ. ಜನತಾದಳದಿಂದ ಟಿ.ಆರ್.ನಾಗರಾಜ್, ಎಸ್.ಶಿವಾನಂದ ಹಾಗೂ ಬಿಜೆಪಿಯಿಂದ ಅವಿನಾಶ್, ಮುದು ಗುಂಡಿ ಲೋಹಿತ್, ಎ.ಸಿ.ಚಂದ್ರಪ್ಪ, ಆರ್.ದೇವಾನಂದ್ ಹೆಸರುಗಳಿವೆ.  ಪಕ್ಷೇತರ ಅಭ್ಯರ್ಥಿಯಾಗಿ ಎಚ್.ಎಂ.ಗೋಪಿ ಕೃಷ್ಣ,ಭದ್ರಾ ಮೇಲ್ದಂಡೆ ಯೋಜನೆಯ ಹೋರಾಟದಲ್ಲಿ  ಹೈಕೋರ್ಟ್‌ನಿಂದ ಮಧ್ಯಂತರ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿರುವ ಎಚ್. ಎಸ್. ನೀಲಕಂಠಪ್ಪ  ಚುನಾವಣೆ ಯಲ್ಲಿ ಸ್ಪರ್ಧಿಸುವುದು ಖಚಿತವೆನ್ನಲಾಗಿದೆ. ಬಿಎಸ್‌ಆರ್ ಕಾಂಗ್ರೆಸ್ ಕೂಡ ಅಭ್ಯರ್ಥಿಯ ಹುಡುಕಾಟದಲ್ಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT