ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲಾ ವಿದ್ಯುತ್ ಬಳಕೆ ಪ್ರಮಾಣದಲ್ಲಿ ಏರಿಕೆಯಾಗಿಲ್ಲ

Last Updated 2 ಫೆಬ್ರುವರಿ 2011, 19:35 IST
ಅಕ್ಷರ ಗಾತ್ರ

ಬೆಂಗಳೂರು: ‘ಗ್ರಾಹಕರ ಅಗತ್ಯಗಳಿಗೆ ಪೂರಕವಾಗಿ ವಿದ್ಯುತ್ ಪೂರೈಸಲು ಸಾಕಷ್ಟು ಕ್ರಮ ಕೈಗೊಂಡರೂ ರಾಜ್ಯದಲ್ಲಿ ಜನತೆಯ ತಲಾ ವಿದ್ಯುತ್ ಬಳಕೆ ಪ್ರಮಾಣದಲ್ಲಿ ಏರಿಕೆ ಮಾಡಲು ಸಾಧ್ಯವಾಗಿಲ್ಲ’ ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ ಹೇಳಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು (ಎಫ್‌ಕೆಸಿಸಿಐ) ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ವಾರ್ಷಿಕವಾಗಿ ಜನರ ತಲಾ ವಿದ್ಯುತ್ ಬಳಕೆ ಪ್ರಮಾಣ 684 ಯೂನಿಟ್ ಇದೆ. ಆದರೆ ರಾಷ್ಟ್ರ ಮಟ್ಟದಲ್ಲಿ ಜನರ ತಲಾ ವಿದ್ಯುತ್ ಬಳಕೆ ಪ್ರಮಾಣ 735 ಯೂನಿಟ್ ಇದೆ’ ಎಂದರು.

‘ನೆರೆಯ ತಮಿಳುನಾಡಿನಲ್ಲಿ ತಲಾ ವಿದ್ಯುತ್ ಬಳಕೆ ಪ್ರಮಾಣ 1,032 ಯೂನಿಟ್, ಆಂಧ್ರಪ್ರದೇಶದಲ್ಲಿ 851 ಯೂನಿಟ್ ಹಾಗೂ ಗುಜರಾತ್‌ನಲ್ಲಿ 1090 ಯೂನಿಟ್ ಇದೆ. ಹಾಗಾಗಿ ರಾಜ್ಯದಲ್ಲಿ ತಲಾ ವಿದ್ಯುತ್ ಬಳಕೆ ಪ್ರಮಾಣ ಏರಿಕೆ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

‘ವಿದ್ಯುತ್ ಪ್ರಸರಣ, ಪೂರೈಕೆ, ಕೈಗಾರಿಕೆಗಳು ಹಾಗೂ ಇತರೆ ಕೆಲವು ವಲಯಗಳಲ್ಲಿ ವಿದ್ಯುತ್ ಸೋರಿಕೆಯಾಗುತ್ತಿದ್ದು, ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಶೇ 20ರಷ್ಟು ವಿದ್ಯುತ್ ಇದೇ ರೀತಿ ಪೋಲಾಗುತ್ತಿದೆ. ಮುಂದಿನ ವರ್ಷದಲ್ಲಿ ಈ ಪ್ರಮಾಣವನ್ನು ಕನಿಷ್ಠ ಶೇ 15ಕ್ಕೆ ಇಳಿಸಲು ಪ್ರಯತ್ನಿಸಲಾಗುವುದು’ ಎಂದರು.

‘ಬೆಂಗಳೂರಿನಲ್ಲಿ ನಿರಂತರವಾಗಿ 24 ಗಂಟೆ ವಿದ್ಯುತ್, ಇತರೆ ನಗರಗಳಲ್ಲಿ ನಿತ್ಯ 22 ಗಂಟೆ ವಿದ್ಯುತ್ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 11 ಗಂಟೆ ಸಿಂಗಲ್ ಫೇಸ್ ವಿದ್ಯುತ್ ಪೂರೈಸುವ ವ್ಯವಸ್ಥೆ ತರುವಂತೆ ಸರ್ಕಾರಕ್ಕೆ ಸಲಹೆ ನೀಡಲಾಗಿದ್ದು, ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಗುವ ನಿರೀಕ್ಷೆ ಇದೆ’ ಎಂದು ಹೇಳಿದರು.

‘ಈ ಬಾರಿಯ ಬೇಸಿಗೆ ಕಾಲದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವ ಸಾಧ್ಯತೆ ಕಡಿಮೆ. ವಿದ್ಯುತ್ ಬೇಡಿಕೆ ತೀವ್ರವಾಗಿರುವ ಸಂದರ್ಭದಲ್ಲೇ ವಿದ್ಯುತ್ ಖರೀದಿಸಿದರೆ ಹೆಚ್ಚು ಹಣ ವೆಚ್ಚ ಮಾಡಬೇಕಾಗುತ್ತದೆ. ಹಾಗಾಗಿ ಮಳೆಗಾಲದಲ್ಲೇ ವಿದ್ಯುತ್ ಪಡೆದರೆ ಕಡಿಮೆ ದರದಲ್ಲಿ ಖರೀದಿಸಬಹುದಾಗಿದೆ ಎಂಬ ಅಂಶವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಅದರಂತೆ ಸರ್ಕಾರವು ಕಾರ್ಯ ಪ್ರವೃತ್ತವಾಗಿದೆ. ಹಾಗಾಗಿ 2010ರ ಸೆಪ್ಟೆಂಬರ್‌ನಿಂದ ವಿದ್ಯುತ್ ವ್ಯತ್ಯಯ ಕಡಿಮೆಯಾಗಿದೆ’ ಎಂದರು. ಎಫ್‌ಕೆಸಿಸಿಐ ಅಧ್ಯಕ್ಷ ಎನ್.ಎಸ್. ಶ್ರೀನಿವಾಸಮೂರ್ತಿ, ಹಿರಿಯ ಉಪಾಧ್ಯಕ್ಷ ಜೆ.ಆರ್. ಬಂಗೇರ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT