ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲೆಮಾರುಗಳ ಸಂಗಮದ `ವಸುಂಧರ'

Last Updated 4 ಜುಲೈ 2013, 19:59 IST
ಅಕ್ಷರ ಗಾತ್ರ

`ಇದೊಂದು ರೀತಿಯಲ್ಲಿ ಹಳೆ ಮತ್ತು ಯುವ ಪೀಳಿಗೆಯ ಕಲಾವಿದರ ಸಮಾಗಮ' ಎಂದು ವರ್ಣಿಸಿದರು ನಿರ್ದೇಶಕ ಟಿ.ಎಸ್. ನಾಗಾಭರಣ. ಜಯಂತಿ, ರಾಜೇಶ್, ಸುಧಾರಾಣಿ ಮುಂತಾದ ಕಲಾವಿದರ ಜೊತೆಯಲ್ಲಿ ಐಶ್ವರ್ಯಾ ನಾಗ್, ಧರ್ಮ, ಅವಿನಾಶ್ (ಜುಗಾರಿ), ಭರತ್ ಕಲ್ಯಾಣ್, ಪನ್ನಗಾಭರಣ ಮುಂತಾದ ಹೊಸಬರ ದಂಡು ಜೊತೆಗೂಡಿದ ಪಡೆ `ವಸುಂಧರೆ'ಯದು.

2008ರಲ್ಲಿ ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಿಂದ ಪ್ರೇರಣೆ ಪಡೆದು ಜನ್ಮತಳೆದ ಕಥೆ `ವಸುಂಧರ' ಚಿತ್ರದ್ದು. ಚಿತ್ರೀಕರಣ ಮುಕ್ತಾಯದ ಅಂಚಿನಲ್ಲಿರುವ ಸಿನಿಮಾದ ಕಥೆಯ ಗುಟ್ಟನ್ನು ಬಿಟ್ಟುಕೊಡಬಾರದೆಂಬ ಷರತ್ತನ್ನು ನಾಗಾಭರಣ ಕಲಾವಿದರಿಗೆ ವಿಧಿಸಿದ್ದರು.

ಸರಣಿ ಬಾಂಬ್ ಸ್ಫೋಟದ ಬಳಿಕ ಸಾಮಾಜಿಕ ವ್ಯವಸ್ಥೆಯೊಳಗೆ ವೈಯಕ್ತಿಕ ನೆಲೆಗಳಲ್ಲಿ ಆದ ಪರಿವರ್ತನೆಗಳನ್ನು `ವಸುಂಧರ' ಬಿಂಬಿಸುತ್ತದೆಯಂತೆ. ಕಥನವನ್ನು ಸ್ತ್ರೀಪಾತ್ರವೊಂದರ ಮೂಲಕ ಹೇಳುತ್ತಿದ್ದಾರೆ ನಾಗಾಭರಣ. ಗ್ರಾಮೀಣ ಪರಿಸರದ ಕಥೆಗಳನ್ನು ಹುಡುಕುತ್ತಿದ್ದ ಅವರು ಅಪರೂಪವೆಂಬಂತೆ ನಗರ ಪರಿಸರದ ಕಥೆಯನ್ನು ಕೈಗೆತ್ತಿಕೊಂಡಿದ್ದಾರೆ.

ಟಿ.ಎಸ್. ನಾಗಾಭರಣ 
ರಾಜೇಶ್

ಶೇ. 20ರಷ್ಟು ಕಥೆ ಕೋರ್ಟ್‌ನಲ್ಲಿಯೇ ಸಾಗಿದರೆ ಉಳಿದದ್ದು ಅಪಾರ್ಟ್‌ಮೆಂಟ್ ಮತ್ತು ರಸ್ತೆಗಳಲ್ಲಿ ಸಾಗುತ್ತದೆ. ಸಂಕೀರ್ಣ ಕಥೆಯನ್ನು ಹೆಣೆಯಲು ಭರಣರಿಗೆ ನೆರವಾಗಿದ್ದು ಲಕ್ಷ್ಮೀಪತಿ ಕೋಲಾರ.

ಸಂಸ್ಕೃತಿ, ಸಂಸ್ಕಾರ, ಭಾವುಕತೆ, ಸಂದೇಶವುಳ್ಳ ಚಿತ್ರವಿದು ಎಂದರು ಹಿರಿಯ ನಟ ರಾಜೇಶ್. ಚಿತ್ರರಂಗದಲ್ಲಿ ಅವರದು

ಸುವರ್ಣಯಾನ. ಸಿನಿಮಾ ಮಾಡಬೇಕೆಂದು ಹಂಬಲಿಸುತ್ತಿದ್ದ ವಾಯುವಿಹಾರದ ಸ್ನೇಹಿತ ನಂಜಪ್ಪ ಅವರ ಬಯಕೆಯನ್ನು ಈಡೇರಿಸುವ ರಾಜೇಶ್ ಅವರ ಪ್ರಯತ್ನದ ಫಲವೇ `ವಸುಂಧರ'.

ಸುದ್ದಿಗೋಷ್ಠಿಯಲ್ಲಿ ನಟ ನರಸಿಂಹರಾಜು ಅವರ ನೆನಪೂ ತಣ್ಣನೆ ಹಾದುಹೋಯಿತು. ಅದಕ್ಕೆ ಕಾರಣರಾಗಿದ್ದು ಅವರ ಮೊಮ್ಮ

ಗ ಅವಿನಾಶ್. ಹಿಂದಿನ ಕಾಲದವರ ಕೆಲಸ ಹೇಗಿತ್ತು ಎಂದು ಅಜ್ಜಿ ಬಾಯಲ್ಲಿ ಆಗಾಗ್ಗೆ ಕೇಳುತ್ತಿದ್ದ ಅವಿನಾಶ್‌ರಿಗೆ ಅದನ್ನು ಅನುಭವಿಸುವ ಅವಕಾಶ ಈ ಚಿತ್ರತಂಡದಿಂದ ಸಿಕ್ಕಿದೆಯಂತೆ.

ನಟಿ ಜಯಂತಿ ನ್ಯಾಯಾಧೀಶೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಧಾರಾಣಿ ಅವರದು ಪಬ್ಲಿಕ್ ಪ್ರಾಸಿಕ್ಯೂಟರ್ ಪಾತ್ರ. ಕಮರ್ಷಿಯಲ್ ಚಿತ್ರಗಳಲ್ಲಿ ನಟಿಸಿರುವ ಐಶ್ವರ್ಯಾ ನಾಗ್, ಈ ಚಿತ್ರದಲ್ಲಿ ಅವಕಾಶ ದೊರೆತಾಗ ಖುಷಿಯ ಜೊತೆಗೆ ಭಯವೂ ಆಯಿತು ಎಂದರು.

ಚಿತ್ರದ ಶೀರ್ಷಿಕೆಯೇ ತಮ್ಮ ಪಾತ್ರವಾಗಬೇಕು ಎಂಬ ಕನಸು ಇಷ್ಟು ಬೇಗ ಈಡೇರುತ್ತಿರುವುದು ಅವರಲ್ಲಿ ಸಂತಸ ತಂದಿದೆ. ಸಿನಿಮಾ ಮಾಡಬೇಕೆಂದು ಒಂದೂವರೆ ವರ್ಷದ ಹಿಂದೆಯೇ ಹಣ ಕೂಡಿಟ್ಟುಕೊಂಡಿದ್ದೆ.

ಆದರೆ ನಾಗಾಭರಣ ಕಥೆ ಸಿದ್ಧಮಾಡಿಕೊಡುವ ವೇಳೆಗೆ ಕೂಡಿಟ್ಟ ಹಣವೆಲ್ಲಾ ಖರ್ಚಾಯಿತು ಎಂದು ನಕ್ಕರು ನಿರ್ಮಾಪಕ ನಂಜಪ್ಪ. ವೃತ್ತಿಯಲ್ಲಿ ಕೃಷಿಕರಾಗಿರುವ ಅವರಿಗೆ ಈ ಚಿತ್ರ ಗೆದ್ದರೆ ವರ್ಷಕ್ಕೊಂದು ಸಿನಿಮಾ ಮಾಡುವ ಆಸೆ. ಸ್ಟೀಫನ್ ಪ್ರಯೋಗ್ ಸಂಗೀತ ಮತ್ತು ಗೋಪಾಲ ವಾಜಪೇಯಿ ಅವರ ಸಾಹಿತ್ಯ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT