ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕು ಕೇಂದ್ರ ಘೊಷಣೆಗೆ ಒತ್ತಾಯ

Last Updated 2 ಜನವರಿ 2012, 9:15 IST
ಅಕ್ಷರ ಗಾತ್ರ

ಜಮಖಂಡಿ: ಕೃಷ್ಣಾ ನದಿಯಿಂದ ಉತ್ತರ ದಿಕ್ಕಿನಲ್ಲಿರುವ ಜಮಖಂಡಿ ತಾಲ್ಲೂಕಿನ 22 ಗ್ರಾಮಗಳು, ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ 8 ಗ್ರಾಮಗಳು ಹಾಗೂ ವಿಜಾಪುರ ಜಿಲ್ಲೆಯ 6 ಗ್ರಾಮಗಳನ್ನು ಸೇರಿಸಿ ಸಾವಳಗಿ ಗ್ರಾಮವನ್ನು ತಾಲ್ಲೂಕು ಕೇಂದ್ರವನ್ನಾಗಿ ರಚಿಸಬೇಕು ಎಂದು ಸಾಹಿತಿ ಎಂ.ಎಸ್.ಸಿಂಧೂರ ಒತ್ತಾಯಿಸಿದರು. 

ತಾಲ್ಲೂಕಿನ ಸಾವಳಗಿ ಗ್ರಾಮದ ಬಿಎಲ್‌ಡಿ ಶಿಕ್ಷಣ ಸಂಸ್ಥೆಯ ಎಸ್‌ಡಿಎಸ್‌ಜಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಿರ್ಮಿಸಿದ ರಾವಬಹಾದ್ದೂರ ಪ್ರಧಾನ ವೇದಿಕೆಯಲ್ಲಿ ಭಾನುವಾರ ಜರುಗಿದ 2ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮೂಲ ಸಾಹಿತ್ಯದ ಒಲವು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿರಬೇಕು. ಸಾಹಿತ್ಯ ಉಳಿಯಬೇಕು, ಸಾಹಿತ್ಯ ಬೆಳಯಬೇಕು. ಇದಕ್ಕೆ ವ್ಯಕ್ತಿಯ ಆರ್ಥಿಕ ನಿಶ್ಚಿಂತೆ, ಬೌದ್ಧಿಕ ಹಸಿವು ಮುಖ್ಯ. ಈ ಎರಡೂ ಕಾರ್ಯಗಳಿಗೆ ಒತ್ತುಕೊಟ್ಟು ಸಾಹಿತ್ಯ ಹೊರಹೊಮ್ಮಬೇಕು.

ಸಾಮಾನ್ಯ ಹಾಗೂ ಆರ್ಥಿಕವಾಗಿ ಹಿಂದುಳಿದ ಬರಹಗಾರರಿಗೆ ಪುಸ್ತಕಗಳ ಮುದ್ರಣ ಶಕ್ತಿ ಇರುವುದಿಲ್ಲ. ಇದು ಎಲ್ಲ ಸಾಹಿತಿಗಳಿಗೆ ಆದ ಅನುಭವ. ಸರಕಾರ ಒಂದು ಸ್ಥಿರ ಯೋಜನೆ ರೂಪಿಸಿ ಬರಹಗಾರರಿಗೆ, ಲೇಖಕರಿಗೆ ಆರ್ಥಿಕ ನೆರವು ನೀಡಬೇಕು.

ಕೃಷಿ ಉತ್ಪನ್ನಗಳ ವ್ಯಾಪಾರದಲ್ಲಿ ಶೋಷಣೆ ನಿಲ್ಲಬೇಕಾದರೆ ಕೃಷಿಕನ ಮನೆ ಬಾಗಿಲಿಗೆ ಖರೀದಿದಾರರು ಬರಬೇಕು. ಕೃಷಿಕರಿಗೆ ತಮ್ಮ ಉತ್ಪನ್ನಗಳ ಮಾರಾಟ ದರ ನಿಗದಿ ಮಾಡುವ ವ್ಯವಸ್ಥೆ ಜಾರಿಯಾಗಬೇಕು ಎಂದು ಒತ್ತಾಯಿಸಿದರು.

ಶಾಸಕ ಶ್ರೀಕಾಂತ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಮಖಂಡಿ ಜಿಲ್ಲಾ ಕೇಂದ್ರವಾಗಬೇಕು. ತಾಲ್ಲೂಕಿನ ತೇರದಾಳ ಮತ್ತು ಸಾವಳಗಿ ಗ್ರಾಮಗಳನ್ನು ತಾಲ್ಲೂಕು ಕೇಂದ್ರಗಳನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿ, ಈ ನಿಟ್ಟಿನಲ್ಲಿ ಸಾರ್ವಜನಿಕರು ಹೋರಾಟ ರೂಪಿಸಬೇಕು ಎಂದರು.

ಕೃಷ್ಣಾ ನದಿಗೆ ಅಡ್ಡಲಾಗಿ ತಾಲ್ಲೂಕಿನ ಜಂಬಗಿ ಬಿಕೆ ಗ್ರಾಮದ ಹತ್ತಿರ ನಿರ್ಮಿಸಲಾಗುತ್ತಿರುವ ಸಂಪರ್ಕ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಬಳಿಕ ಜಮಖಂಡಿ-ಸಾವಳಗಿಯ 18 ಕಿ.ಮೀ. ರಸ್ತೆಯನ್ನು ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದರು.

ಜಮಖಂಡಿಯ ಓಲೆಮಠದ ಡಾ.ಚನ್ನಬಸವ ಶ್ರೀಗಳು ಸಮ್ಮೇಳನ ಉದ್ಘಾಟಿಸಿ, ಒಂದು ಪರಂಪರೆಯನ್ನು ನೆನಪಿಸಿ ನಮ್ಮ ನಾಡು, ನುಡಿ, ಗಡಿ, ಭಾಷೆ, ಜಲ, ನೆಲದ ವ್ಯಾಪ್ತಿಯನ್ನು ಗಮನಕ್ಕೆ ತಂದು ಕನ್ನಡಿಗರನ್ನು ಬಡಿದೆಬ್ಬಿಸುವ ಕೆಲಸ ಸಮ್ಮೇಳನದ ಮೂಲಕ ನಡೆಯಬೇಕು ಎಂದು ನುಡಿದರು.

ಎಂಎಲ್‌ಸಿ ಜಿ.ಎಸ್. ನ್ಯಾಮಗೌಡ, ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿದರು. ನಿರುಪಾಧೀಶ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಮ್ಮೇಳನದ ಕಾರ್ಯಾಧ್ಯಕ್ಷ ಸತಗೌಡ ನ್ಯಾಮಗೌಡ ಸ್ವಾಗತಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಎಸ್.ಜಿ. ಕೋಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಸಂಗ ಮೇಶ ಬಿರಾದಾರ ಮಾತನಾಡಿದರು. ತಾಲ್ಲೂಕು ಕಸಾಪ ಅಧ್ಯಕ್ಷ ಮಧುಕೇಶ್ವರ ಬೆಳಗಲಿ ವಂದಿಸಿದರು. ಮ.ಕೃ. ಮೇಗಾಡಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT