ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪ್ಪಗೊಂಡನಹಳ್ಳಿ ಜಲಾಶಯ ಕಾಯಕಲ್ಪಕ್ಕೆ ಒತ್ತು

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನಗರದ ಉತ್ತರ ಭಾಗಕ್ಕೆ ನೀರು ಸರಬರಾಜು ಮಾಡುವ ಪ್ರಮುಖ ಜಲಮೂಲವಾದ ತಿಪ್ಪಗೊಂಡನಹಳ್ಳಿ ಜಲಾಶಯ ಪುನಶ್ಚೇತನ ಕೆಲಸ ತೀವ್ರಗೊಳಿಸಲು ಸಂಬಂಧಪಟ್ಟ ಇಲಾಖೆಗಳು ಮುಂದಾಗಬೇಕು. ಡಿಸೆಂಬರ್ ಅಂತ್ಯದ ವೇಳೆಗೆ ಜಲಾಶಯದ ಹೂಳೆತ್ತುವ ಕೆಲಸ ಆರಂಭಿಸಬೇಕು. ಅಲ್ಲದೇ ಒತ್ತುವರಿ ತೆರವುಗೊಳಿಸುವ ಕಾರ್ಯ ದೊಡ್ಡಮಟ್ಟದಲ್ಲಿ ನಡೆಯಬೇಕು~ ಎಂದು ಬೆಂಗಳೂರು ಜಲಮಂಡಳಿ ಸಚಿವ ಎಸ್. ಸುರೇಶ್ ಕುಮಾರ್ ಸೂಚಿಸಿದರು. 

ಬೆಂಗಳೂರು ಜಲ ಮಂಡಲಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ತಿಪ್ಪಗೊಂಡನಹಳ್ಳಿ ಜಲಾಶಯ ಅಭಿವೃದ್ಧಿಯ ಉನ್ನತಾಧಿಕಾರ ಸಭೆಯಲ್ಲಿ ಅವರು ಮಾತನಾಡಿದರು.

`ಶತಮಾನದ ಆರಂಭದಿಂದಲೂ ನಗರಕ್ಕೆ ನೀರುಣಿಸುತ್ತಿರುವ ಚಾಮರಾಜಸಾಗರ (ತಿಪ್ಪಗೊಂಡನ ಹಳ್ಳಿ ಜಲಾಶಯವನ್ನು) ರಕ್ಷಿಸಬೇಕಾದದ್ದು ಎಲ್ಲರ ಕರ್ತವ್ಯ. ಇಲ್ಲವಾದರೆ ಮುಂದೆ ಬೆಂಗಳೂರು ಗಂಭೀರವಾದ ಜಲಕ್ಷಾಮ ಎದುರಿಸಬೇಕಾಗುತ್ತದೆ. ಕೂಡಲೇ ಜಲಾಶಯದ ನೀರಿನ ಹರಿವಿಗೆ ಇರುವ ಅಡೆತಡೆಗಳನ್ನು ನಿವಾರಿಸಬೇಕು. ಜಲಾನಯನ ಪ್ರದೇಶದಲ್ಲಿ ಆಗಿರುವ ಕಾನೂನು ಬಾಹಿರ ಬಡಾವಣೆಗಳನ್ನು ಕೂಡಲೇ ತೆರವುಗೊಳಿಸಬೇಕು~ ಎಂದರು.

`ಜಲಾನಯನ ಪ್ರದೇಶದ ವ್ಯಾಪ್ತಿ ಸಮೀಕ್ಷೆ ಮಾಡಿ ಅಲ್ಲಿ ಗಡಿ ಗುರುತು ಕಲ್ಲುಗಳನ್ನು ನೆಡಬೇಕು. ಜಲಾಶಯಕ್ಕೆ ಹರಿಯುತ್ತಿರುವ ತ್ಯಾಜ್ಯ ನೀರು ನಿಲುಗಡೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಆದರೆ ಬಹುತೇಕ ಕೈಗಾರಿಕೆಗಳು ನಿಯಮ ಉಲ್ಲಂಘಿಸಿ ನಿರ್ಮಾಣವಾಗಿದ್ದು ಇವುಗಳನ್ನು ಸ್ಥಳಾಂತರಿಸಬೇಕು~ ಎಂದು ಹೇಳಿದರು. 

`ಇಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಸೂಚಿಸಲಾಗಿದೆ. ಜಲಾಶಯದ ಸುತ್ತಲಿನ ಸಂರಕ್ಷಿತ ಪ್ರದೇಶಗಳಲ್ಲಿ ಯಾವುದೇ ಹೊಸ ಖಾತೆಗಳನ್ನು ಮಾಡಬಾರದು ಎಂದು ಕಂದಾಯ ಇಲಾಖೆಗೆ ತಿಳಿಸಲಾಗಿದೆ. ಈಗಾಗಲೇ ನೆಲಮಂಗಲ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸುಮಾರು 21 ಅನಧಿಕೃತ ಲೇಔಟ್‌ಗಳನ್ನು ತೆರವು ಮಾಡಲಾಗಿದೆ~ ಎಂದು ಅವರು ತಿಳಿಸಿದರು.

`ಜಲಾಶಯ ಪುನಶ್ಚೇತನ ಸಂಬಂಧ ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳ ನೇತತ್ವದಲ್ಲಿ  ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿಗಳ ಸಭೆ ಕರೆಯಲಾಗುವುದು. ಡಿಸೆಂಬರ್ ವೇಳೆಗೆ ಒಂದು ಅಂತಿಮ ರೂಪು ರೇಷೆ ಸಿದ್ಧಪಡಿಸಿ ಪೂರ್ಣಪ್ರಮಾಣದಲ್ಲಿ ಕೆಲಸ ಕೈಗೆತ್ತಿಕೊಳ್ಳಲಾಗುವುದು~ ಎಂದು ತಿಳಿಸಿದರು.

 ಶಾಸಕ ನೆ.ಲ.ನರೇಂದ್ರಬಾಬು, ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ.ಚಂದ್ರಶೇಖರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ರಾಜ್‌ಕುಮಾರ್ ಖತ್ರಿ, ನಗರಾಭಿವದ್ಧಿ ಇಲಾಖೆ ಕಾರ್ಯದರ್ಶಿ ಶಂಭು ದಯಾಳ್ ಮೀನಾ, ಜಲಮಂಡಲಿ ಅಧ್ಯಕ್ಷ ಪಿ.ಬಿ.ರಾಮಮೂರ್ತಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಎಂ.ಕೆ.ಅಯ್ಯಪ್ಪ ಮತ್ತಿತರ ಉನ್ನತ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT