ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಗಿ ಬಿದ್ದ ಕೇಂದ್ರ ಜಾಗೃತ ಆಯುಕ್ತ ಥಾಮಸ್: ಸಂಸದರತ್ತ ಬೆರಳು!

Last Updated 7 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್ತಿನಲ್ಲಿನ 153 ಸಂಸದರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಆದರೆ ಭ್ರಷ್ಟಾಚಾರ ಪ್ರಕರಣದಲ್ಲಿ ತಮ್ಮ ವಿರುದ್ಧ ದೋಷಾರೋಪಣ ಪಟ್ಟಿ ವಿಚಾರಣೆ ಇನ್ನೂ ಬಾಕಿ ಇದೆ ಎಂದು ಸೋಮವಾರ ಸುಪ್ರಿಂಕೋರ್ಟ್ ಮುಂದೆ ಹೇಳುವ ಮೂಲಕ ವಿವಾದಾತ್ಮಕ ಕೇಂದ್ರ ಜಾಗೃತ ಆಯುಕ್ತ ಪಿ.ಜೆ. ಥಾಮಸ್ ಅವರು ತಮ್ಮ ನೇಮಕವನ್ನು     ಸಮರ್ಥಿಸಿಕೊಳ್ಳಲು ಯತ್ನಿಸಿದರು.

ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ಅವರ ನೇತೃತ್ವದ ಪೀಠದ ಮುಂದೆ ಹಾಜರಾದ ಥಾಮಸ್ ಅವರ ಪರ ಹಿರಿಯ ವಕೀಲ ಕೆ.ಕೆ. ವೇಣುಗೋಪಾಲ್ ಅವರು ಕ್ರಿಮಿನಲ್ ಪ್ರಕರಣಗಳಲ್ಲಿ ತಪ್ಪಿತಸ್ಥರಾಗಿದ್ದವರ ವಿರುದ್ಧದ ಮೇಲ್ಮನವಿ ವಿಚಾರಣೆಗೆ ಬಾಕಿ ಇದ್ದರೂ ಚುನಾವಣಾ ಕಾನೂನು ಅಂತಹ ಸಂಸದರು ಮತ್ತು ಶಾಸಕರು ತಮ್ಮ ಹುದ್ದೆಗಳಲ್ಲಿ ನಿರಾತಂಕವಾಗಿ ಮುಂದುವರಿಯಲು ಅವಕಾಶ ಮಾಡಿಕೊಟ್ಟಿದೆ ಎಂದು ವಾದಿಸಿದರು.

ಸಂಸದರಲ್ಲಿ ಶೇಕಡಾ 28ರಷ್ಟು ಮಂದಿ ಅಂದರೆ 534ರಲ್ಲಿ ರಲ್ಲಿ 153 ಮಂದಿ ವಿರುದ್ಧ ಈಗ ಕ್ರಿಮಿನಲ್ ಪ್ರಕರಣ ಬಾಕಿ ಇದೆ ಎಂದರು. ಕೇಂದ್ರ ಜಾಗೃತ ಆಯೋಗದ ಆಯುಕ್ತರ ನೇಮಕದ ವಿಷಯ ನ್ಯಾಯಾಂಗ ಪರಿಶೀಲನೆಗೆ ಒಳಪಡಲು ಸಾಧ್ಯವಿಲ್ಲ. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಥಾಮಸ್ ವಿರುದ್ಧ ಪ್ರಕರಣ ಬಾಕಿ ಇದೆ ಎಂಬ ಮಾತ್ರಕ್ಕೆ ಅವರ ನೇಮಕ ದುರ್ಬಲ ಆಗುವುದಿಲ್ಲ ಎಂದೂ ಪ್ರತಿಪಾದಿಸಿದರು.

ಆಗ ಪೀಠವು ‘ತಪ್ಪಿತಸ್ಥರೆಂದು ಸಾಬೀತಾಗಿದ್ದರೆ ಮತ್ತು ಅಂತಹ ವ್ಯಕ್ತಿ ನೇಮಕಗೊಂಡಿದ್ದರೆ, ನೇಮಕದ ನ್ಯಾಯಾಂಗ ಪರಿಶೀಲನೆ ನಡೆಯಬಾರದೆಂದು ನಾವು ಹೇಳಲಾಗುತ್ತದೆಯೇ’ ಎಂದು ಪ್ರಶ್ನಿಸಿತು.

‘ಇಂದು ನ್ಯಾಯಾಂಗ ಪರಿಶೀಲನೆ ಪ್ರಯುಕ್ತವೇ ಸಂವಿಧಾನದ ತಿದ್ದುಪಡಿಗಳನ್ನೇ ತೆಗೆದುಹಾಕಬಹುದಾಗಿದೆ’ ಎಂದೂ ಪೀಠ ಹೇಳಿತು.
ದೋಷಾರೋಪಣ ಪಟ್ಟಿ ವಿಚಾರಣೆ ಬಾಕಿ ಇದೆ ಎಂಬ ಕಾರಣಕ್ಕೆ ಸಿವಿಸಿ ಕಾಯಿದೆಯಡಿ ವ್ಯಕ್ತಿಯನ್ನು ಅನರ್ಹಗೊಳಿಸಲು ಅವಕಾಶವಿಲ್ಲದಿರುವುದರಿಂದ ಇದೇ ಕಾರಣ ಮುಂದಿಟ್ಟುಕೊಂಡು ಅಧಿಕಾರಿ ನೇಮಕವನ್ನು ದುರ್ಬಲಗೊಳಿಸಬಾರದು ಎಂದು ವೇಣುಗೋಪಾಲ್ ವಾದಿಸಿದರು.

ಥಾಮಸ್ ವಿರುದ್ಧ ಬಾಕಿ ಇರುವ ಪ್ರಕರಣ ಮತ್ತು ತನಿಖೆಗೆ 1999ರಲ್ಲಿ ಕೇರಳ ಸರ್ಕಾರ ಅನುಮತಿ ನೀಡಿದ್ದರ ಬಗ್ಗೆ ಅಗತ್ಯ ಮಾಹಿತಿಗಳನ್ನು ಪ್ರಚುರ ಪಡಿಸದೇ ಇರುವುದು ಅವರ ನೇಮಕದ ನಿರ್ಧಾರವನ್ನು ದುರ್ಬಲಗೊಳಿಸುವುದಿಲ್ಲವೇ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಸಿವಿಸಿಯಾಗಿ ವ್ಯಕ್ತಿಯ ನೇಮಕಾತಿಯ ಅರ್ಹತೆ ಮತ್ತು ಅನರ್ಹತೆ ವಿಷಯ ಬಂದಾಗ ಆಯ್ಕೆ ಸಮಿತಿಯು ಪರಿಶೀಲಿಸಿಯೇ ನಿರ್ಧಾರಕ್ಕೆ ಬಂದಿರುತ್ತದೆ ಎಂದೂ ವೇಣುಗೋಪಾಲ್ ನುಡಿದರು.

ಕಡತ ಮಂಡಿಸಿರಲಿಲ್ಲ: ನೇಮಕಾತಿಯನ್ನು ನಿರ್ಧರಿಸಿದ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಉನ್ನತಾಧಿಕಾರದ ಸಮಿತಿ ಸದಸ್ಯರ ಮುಂದೆ ವಿವಾದಾತ್ಮಕ ಥಾಮಸ್ ಅವರ ಇಡೀ ಕಡತಗಳನ್ನು ಮಂಡಿಸಿರಲಿಲ್ಲ ಎಂದೂ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತು.

‘ನೇಮಕವನ್ನು ನಿರ್ಧರಿಸಿದ ಸಮಿತಿ ಸದಸ್ಯರಿಗೆ ಇಡೀ ಕಡತಗಳನ್ನು ನೀಡಲಾಗಿತ್ತೇ’ ಎಂದು ಪೀಠ ತಿಳಿಯಬಯಸಿದಾಗ ಅಟಾರ್ನಿ ಜನರಲ್ ಜಿ.ಇ. ವಹನ್ವತಿ ಅವರು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.

ಆದರೆ ಸಮಿತಿ ಸಭೆಯಲ್ಲಿ ಏನು ನಡೆಯಿತು ಮತ್ತು ಸಮಿತಿ ಏನು ಹೇಳಿತು, ಸದಸ್ಯರಿಗೆ ಯಾವ ಮಾಹಿತಿ ಹಂಚಿಕೆಯಾಗಿತ್ತು ಎಂಬ ಬಗ್ಗೆ ವೈಯಕ್ತಿಕವಾಗಿ ತಮಗೆ ಗೊತ್ತಿಲ್ಲ ಎಂದೂ ವಹನ್ವತಿ ತಿಳಿಸಿದರು.

ಥಾಮಸ್ ವಿರುದ್ಧ ತನಿಖೆಗೆ 1999ರಲ್ಲಿ ಅನುಮತಿ ದೊರೆತ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಸಮಿತಿಯ ಮುಂದೆ ಇಡಲಾಗಿತ್ತೇ ಎಂದು ಪೀಠ ಕೇಳಿದಾಗ ಅವರು ‘ಇಲ್ಲ’ ಎಂದು ಉತ್ತರಿಸಿದರು.

‘ಸಭೆಯ ಕಾರ್ಯಕ್ರಮ ಪಟ್ಟಿಯೊಂದಿಗೆ ಅದನ್ನೂ ಸದಸ್ಯರ ಮುಂದಿಡಬೇಕಿತ್ತು’ ಎಂದು ನ್ಯಾಯಮೂರ್ತಿ ಕೆ.ಎಸ್. ರಾಧಾಕೃಷ್ಣನ್ ಮತ್ತು ಸ್ವತಂತ್ರ ಕುಮಾರ್ ಅವರನ್ನು ಒಳಗೊಂಡ ಪೀಠ ಹೇಳಿತು.
ಸಿವಿಸಿಯಾಗಿ ಥಾಮಸ್ ಅವರ ನೇಮಕಾತಿ ಪ್ರಕ್ರಿಯೆಯಲ್ಲಿ ಉಲ್ಲಂಘನೆಯೇನಾದರೂ ಆಗಿರಬಹುದು ಎಂಬುದನ್ನು ತಳ್ಳಿ ಹಾಕಿದ ಅಟಾರ್ನಿ ಜನರಲ್, ‘ಅಗತ್ಯ ಮಾಹಿತಿಗಳನ್ನು ಯಾಕೆ ನೀಡಲಿಲ್ಲ, ಯಾವ ಮಾಹಿತಿ ನೀಡಲಾಗಿತ್ತು ಎಂಬುದನ್ನು ಹೇಳುವ ಸ್ಥಿತಿಯಲ್ಲಿ ನಾನಿಲ್ಲ’ ಎಂದು ಹೇಳಿದರು.
ಈ ಹಂತದಲ್ಲಿ ಹಿರಿಯ ವಕೀಲ ವೇಣುಗೋಪಾಲ್ ಅವರು ಮಧ್ಯ ಪ್ರವೇಶಿಸಿ ಈ ಎಲ್ಲಾ ಅಂಶಗಳಿಗಾಗಿ ಥಾಮಸ್ ಬಲಿ ಆಗಬಾರದು ಎಂದರು. ವಾದ ಮಂಡನೆ ಅಪೂರ್ಣಗೊಂಡಿದ್ದು ಗುರುವಾರ ಪುನರಾರಂಭವಾಗುವ ಸಾಧ್ಯತೆ ಇದೆ.


ಆದರೆ ಪೀಠವು ‘ಎಲ್ಲಾ ಮಾಹಿತಿಗಳನ್ನು ಕಾರ್ಯಕ್ರಮ ಪಟ್ಟಿ ಒಳಗೊಂಡಿರಬೇಕು ಎಂದು ನಿಮಗನಿಸುವುದಿಲ್ಲವೇ ಮತ್ತು ಕಾರ್ಯಕ್ರಮ ಪಟ್ಟಿಯಲ್ಲಿ ಏನೂ ಇಲ್ಲದಿದ್ದರೆ ಅವರು (ಸಮಿತಿ ಸದಸ್ಯರು) ಅಗತ್ಯ ಮಾಹಿತಿಗಳ ಬಗ್ಗೆ ಕೇಳಬಹುದಲ್ಲವೇ? ಎಂದು ತಿರುಗೇಟು ನೀಡಿತು.

ವೇಣುಗೋಪಾಲ್ ಅವರಿಂದ ನೇರ ಉತ್ತರ ಲಭಿಸದಿದ್ದಾಗ ‘ಬಹಳ ಪ್ರಸ್ತುತವೆನಿಸಿದ್ದ ಮಾಹಿತಿಯನ್ನೇ ಕಾರ್ಯಕ್ರಮ ಪಟ್ಟಿಯೊಂದಿಗೆ ಯಾಕೆ ನೀಡಲಿಲ್ಲ ಎಂಬುದು ನಮ್ಮನ್ನು ಕಾಡುತ್ತಿದೆ’ ಎಂದು ಪೀಠ ಹೇಳಿತು.

ವೇಣುಗೋಪಾಲ್ ಅವರಿಗೆ ಹಲವು ಪ್ರಶ್ನೆಗಳನ್ನು ಹಾಕಿದ ಸುಪ್ರೀಂಕೋರ್ಟ್, ‘ಮುಂದಿನ ನೇಮಕಾತಿಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ನಾವು ಬಯಸಿದ್ದೇವೆ. ವಿಶೇಷವಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲ’ ಎಂದು ತಿಳಿಸಿತು.

ಥಾಮಸ್ ಅವರು ಸಿವಿಸಿಯಾಗಿ ಕಳೆದ ವರ್ಷದ ಸೆ. 7ರಂದು ನೇಮಕಗೊಂಡಿದ್ದರು. ಆದರೆ ಸಿಪಿಐಎಲ್‌ನಂತಹ ಅನೇಕ ಸಂಘಟನೆಗಳು ಮತ್ತು ನಿವೃತ್ತ ಚುನಾವಣಾ ಆಯುಕ್ತ ಜೆ.ಎಂ. ಲಿಂಗ್ಡೊ ಸೇರಿದಂತೆ ಹಲವು ಗಣ್ಯರು ಈ ನೇಮಕದ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

ಥಾಮಸ್ ಅವರು ಕೇರಳದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯದ ಕಾರ್ಯದರ್ಶಿಯಾಗಿದ್ದಾಗ ನಡೆದ ಪಾಮೊಲಿನ್ ಆಮದು ಹಗರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT