ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಘಲಕ್ ಅಲ್ಲ, ತುಗ್ಲಕ್

Last Updated 2 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

`ಈ ಸಿನಿಮಾ ಹೊಸ ಪ್ರೇಕ್ಷಕ ವಲಯವನ್ನು ಹುಟ್ಟು ಹಾಕುತ್ತದೆ~- `ತುಗ್ಲಕ್~ ಚಿತ್ರದ ನಿರ್ದೇಶಕ ಅರವಿಂದ್ ಕೌಶಿಕ್ ಅವರ ಆತ್ಮವಿಶ್ವಾಸದ ಮಾತಿದು.

ಇದು ನಮ್ಮ ಮನಸ್ಸಿನ ದ್ವಂದ್ವಗಳನ್ನು ಪ್ರತಿಬಿಂಬಿಸುವ ಚಿತ್ರ. ಪ್ರತಿಯೊಬ್ಬರಲ್ಲೂ ಒಬ್ಬ ತುಗ್ಲಕ್ ಇದ್ದಾನೆ. ಪ್ರತಿ ವಿಚಾರದ ಆಯ್ಕೆಯಲ್ಲೂ ಜನರಲ್ಲಿ ಗೊಂದಲಗಳಿರುತ್ತವೆ. ಅದನ್ನೇ ನಾವು ತೆರೆಯ ಮೇಲೆ ತರುತ್ತಿದ್ದೇವೆ. ಈ ರೀತಿಯ ಚಿತ್ರಗಳಿಗೆ ಜನರಿಂದ ಉತ್ತಮ ಬೆಂಬಲ ಸಿಗುತ್ತದೆ ಎನ್ನುವುದು ಕೌಶಿಕ್ ಭರವಸೆ.

`ತುಗ್ಲಕ್~ ಶೀರ್ಷಿಕೆ ಸಾಕಷ್ಟು ಗೊಂದಲಗಳನ್ನು ಮೂಡಿಸುತ್ತದೆ ಎಂದು ಅದರ ಒಳಾರ್ಥಗಳನ್ನು ವಿವರಿಸಲು ಮಾತಿಗಿಳಿದ ಕೌಶಿಕ್ ಮತ್ತಷ್ಟು ಗೊಂದಲಗಳನ್ನು ಮೂಡಿಸಿದರು. ಜಾಸ್ತಿ ಮಾತನಾಡುತ್ತಿದ್ದೇನೆ ಎಂಬುದನ್ನು ಮತ್ತೆ ಮತ್ತೆ ಹೇಳಿಕೊಂಡರೂ ಅವರ ಮಾತಿಗೆ ಬ್ರೇಕ್ ಬೀಳಲಿಲ್ಲ.

ಸುಲ್ತಾನ್ ಮಹಮದ್ ಬಿನ್ ತುಘಲಕ್‌ನಿಗೂ ಈ `ತುಗ್ಲಕ್~ನಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಅವರ ಸ್ಪಷ್ಟನೆ. ಯಾವುದೇ ಒಂದನ್ನು ನಿಚ್ಚಳವಾಗಿ ಆಯ್ಕೆ ಮಾಡಿಕೊಳ್ಳದ ವ್ಯಕ್ತಿಯನ್ನು ತುಗ್ಲಕ್ ಎಂದು ಕರೆಯುವ ಪದ್ಧತಿ ಕೆಲವು ಕಡೆಯಿದೆ. ಅದೇ ರೀತಿ ಚಿತ್ರದ ನಾಯಕನೂ ಬದುಕುತ್ತಿರುತ್ತಾನೆ ಎಂಬುದು ಅವರ ವಿವರಣೆ.

ಚಿತ್ರ ಫೆಬ್ರುವರಿ 10ರಂದು ತೆರೆಕಾಣುತ್ತಿದೆ. 15 ಚಿತ್ರಮಂದಿರಗಳಲ್ಲಿ ಮತ್ತು ಮಲ್ಟಿಫ್ಲೆಕ್ಸ್‌ಗಳಲ್ಲಿ ತೆರೆಕಾಣಲಿದೆ. 100-150 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದರೆ ಚಿತ್ರ ಗೆಲ್ಲುತ್ತದೆ ಎಂಬ ಭ್ರಮೆ ನಮಗಿಲ್ಲ. ಹಾಗೆಯೇ ಜನ ತಮ್ಮ ಚಿತ್ರವನ್ನು ಸೂಪರ್‌ಹಿಟ್ ಮಾಡುತ್ತಾರೆ ಎಂಬ ಅತಿ ಆತ್ಮವಿಶ್ವಾಸವೂ ತಮಗಿಲ್ಲ ಎಂಬ ಮಾತನ್ನೂ ಕೌಶಿಕ್ ಸೇರಿಸಿದರು.

ಚಿತ್ರದ ಮೊದಲರ್ಧ ಸಿನಿಮಾ, ಉಳಿದರ್ಧ ಜೀವನ ಎಂದು ವಿಶ್ಲೇಷಿಸಿದರು ನಾಯಕ ರಕ್ಷಿತ್ ಶೆಟ್ಟಿ. ಆರಂಭದಲ್ಲಿ ಗೊಂದಲ ದ್ವಂದ್ವಗಳನ್ನು ಚಿತ್ರ ಬಿಂಬಿಸುತ್ತದೆ. ದ್ವಿತಿಯಾರ್ಧದಲ್ಲಿ ನಾಯಕ ಅದನ್ನು ಬಗೆಹರಿಸುವ ಕ್ರಾಂತಿಕಾರನಾಗಿ ಪರಿವರ್ತಿತನಾಗುತ್ತಾನೆ ಎಂದು ತಮ್ಮ ಪಾತ್ರದ ಆಳ ಅಗಲಗಳ ವ್ಯಾಪ್ತಿಯನ್ನು ತೆರೆದಿಟ್ಟರು.

ನಾಯಕಿ ಮೇಘನಾ ಕಥೆ ಬಗೆಗಿನ ಗೊಂದಲದಿಂದ ಇನ್ನೂ ಹೊರಬಂದಂತಿರಲಿಲ್ಲ. ಅವರೊಂದಿಗೆ ನಟರಾದ ಬಾಲು, ರಿಷಬ್ ಮತ್ತು ಕೈಲಾಷ್ ಕೂಡ ತಮ್ಮ ಗೊಂದಲಗಳನ್ನು ಹಂಚಿಕೊಂಡರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT