ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರಿಗೆ ಎಚ್‌ಎಎಲ್ ಘಟಕ ?

Last Updated 2 ಆಗಸ್ಟ್ 2011, 10:10 IST
ಅಕ್ಷರ ಗಾತ್ರ

ತುಮಕೂರು: ಎಲ್ಲವೂ ಅಂದುಕೊಂಡಂತೆ ನಡೆದರೆ ಜಿಲ್ಲೆಗೆ ಎಚ್‌ಎಎಲ್ (ಹಿಂದುಸ್ತಾನ್ ಏರೋನ್ಯಾಟಿಕ್ಸ್ ಲಿಮಿಟೆಡ್) ಹೆಲಿಕಾಪ್ಟರ್ ಬಿಡಿ ಭಾಗಗಳ ತಯಾರಿಕಾ ಘಟಕ ಬರುವ ಸಾಧ್ಯತೆಯಿದೆ. ಒಂದು ವೇಳೆ ಎಚ್‌ಎಎಲ್ ಘಟಕ ಜಿಲ್ಲೆಯಲ್ಲಿ ಸ್ಥಾಪನೆಯಾದರೆ ಜಿಲ್ಲೆಯ ಹೆಸರು ರಾಷ್ಟ್ರದ ನಕ್ಷೆಯಲ್ಲಿ ರಾರಾಜಿಸಲಿದೆ. ಜಿಲ್ಲೆಯ ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ.

ರಕ್ಷಣಾ ಹೆಲಿಕಾಪ್ಟರ್‌ಗಳ ಬಿಡಿಭಾಗಗಳ ತಯಾರಿಕೆಯಲ್ಲಿ ಜಾಗತಿಕ ಮನ್ನಣೆ ಗಳಿಸಿರುವ ಎಚ್‌ಎಎಲ್ ಕೇಂದ್ರ ಸರ್ಕಾರದ ಉದ್ಯಮ. ಈ ಸಂಸ್ಥೆ ಜಿಲ್ಲೆಗೆ ಬಂದರೆ ಸಾಕಷ್ಟು ಉದ್ಯೋಗಾವಕಾಶ ಸೃಷ್ಟಿಯಾಗಲಿವೆ.

ಆರ್ಥಿಕವಾಗಿ, ಸಾಮಾಜಿಕವಾಗಿ ಜಿಲ್ಲೆಯ ಸ್ಥಾನಮಾನ ಸಹ ಬದಲಾಗಲಿದೆ. ಏನೇ ಕಷ್ಟವಾದರೂ ಇಂತಹ ಅವಕಾಶವನ್ನು ತಪ್ಪಿಸಿಕೊಳ್ಳಬಾರದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಎಚ್‌ಎಎಲ್ ತಂತ್ರಜ್ಞರ ತಂಡವೊಂದು ವಸಂತನರಸಾಪುರ ಕೈಗಾರಿಕಾ ವಸಾಹತು ಪ್ರದೇಶಕ್ಕೆ ಕಳೆದ ತಿಂಗಳು ಭೇಟಿ ನೀಡಿ ಜಾಗ ಪರಿಶೀಲಿಸಿದೆ. ಇಲ್ಲಿ ಘಟಕ ಸ್ಥಾಪಿಸಲು ಸುಮಾರು 650ರಿಂದ 700 ಎಕರೆ ಜಾಗ ಕೇಳಲಾಗಿದೆ. ವಸಂತನರಸಾಪುರ ಕೈಗಾರಿಕಾ ವಸಾಹತು ಪ್ರದೇಶದ 2, 3 ಮತ್ತು 4ನೇ ಹಂತವನ್ನು ತಂಡಕ್ಕೆ ತೋರಿಸಲಾಗಿದೆ. ಅಧಿಕಾರಿಗಳ ತಂಡವು ಜಾಗದ ಕುರಿತು ತೃಪ್ತಿ ವ್ಯಕ್ತಪಡಿಸಿದೆ ಎಂದು ಕೆಐಎಡಿಬಿ ಮೂಲಗಳು ತಿಳಿಸಿವೆ.

ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ಸಮೀಪ ಇರುವ ಎಚ್‌ಎಎಲ್ ಘಟಕವನ್ನು ಇಲ್ಲಿಗೆ ಸ್ಥಳಾಂತರಿಸುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಆದರೆ ಬೆಂಗಳೂರಿನ ಘಟಕವನ್ನು ಇಲ್ಲಿಗೆ ಸ್ಥಳಾಂತರಿಸಲಾಗುತ್ತದೆಯೇ ಅಥವಾ ಹೊಸ ಘಟಕವನ್ನು ಸ್ಥಾಪಿಸಲಾಗುತ್ತದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಈ ಎರಡು ಸಾಧ್ಯತೆಗಳನ್ನು ಇಟ್ಟುಕೊಂಡು ಜಾಗದ ಪರಿಶೀಲನೆ ನಡೆಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ತುಮಕೂರು ಮಾತ್ರವಲ್ಲದೆ ಶಿವಮೊಗ್ಗ, ಹುಬ್ಬಳ್ಳಿ- ಧಾರವಾಡ, ದಾವಣಗೆರೆ ಹಾಗೂ ಕೋಲಾರದ ನರಸಾಪುರ ಎಂಬಲ್ಲಿಯೂ ಎಚ್‌ಎಎಲ್ ಘಟಕ ಸ್ಥಾಪನೆಗೆ ಜಾಗ ಇರುವುದಾಗಿ ಹೇಳಲಾಗಿತ್ತು. ಆದರೆ ಇವುಗಳಲ್ಲಿ ಶಿವಮೊಗ್ಗಕ್ಕೆ ಯೋಜನೆ ಕೊಂಡೊಯ್ಯಲು ಬಿ.ಎಸ್.ಯಡಿಯೂರಪ್ಪ ತೀವ್ರ ಪ್ರಯತ್ನ ನಡೆಸಿದ್ದರು. ಆದರೆ ಬೆಂಗಳೂರಿಗೆ ತುಮಕೂರು ಹತ್ತಿರ ಇರುವುದರಿಂದ ಇಲ್ಲೇ ಘಟಕ ಸ್ಥಾಪನೆಗೆ ಹೆಚ್ಚಿನ ಒಲವು ತೋರಬಹುದು ಎಂಬ ಆಶಾವಾದ ಅಧಿಕಾರಿಗಳದ್ದಾಗಿದೆ.

`ವಸಂತನರಸಾಪುರದಲ್ಲಿ ಈಗಾಗಲೇ 782 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಎಚ್‌ಎಎಲ್ ಘಟಕ ಸ್ಥಾಪನೆಗೆ  500ರಿಂದ 600 ಎಕರೆ ಭೂಮಿ ಬೇಕಾಗಬಹುದು. ವಸಂತನರಸಾಪುರ ಕೈಗಾರಿಕಾ ಪ್ರದೇಶದ 2ರಿಂದ 4ನೇ ಹಂತದವರೆಗಿನ 500 ಎಕರೆ ಜಾಗವನ್ನು ತೋರಿಸಲಾಗಿದೆ~ ಎಂದು ಕೆಐಎಡಿಬಿ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಓಂಕಾರಮೂರ್ತಿ `ಪ್ರಜಾವಾಣಿ~ಗೆ ತಿಳಿಸಿದರು.

ವಸಂತನರಸಾಪುರ ಜಾಗಕ್ಕೆ ಸಂಬಂಧಿಸಿದಂತೆ ಎಚ್‌ಎಎಲ್ ಹಿರಿಯ ಅಧಿಕಾರಿಗಳು ಕೆಐಎಡಿಬಿ ಅಧ್ಯಕ್ಷ ಜ್ಯೋತಿ ರಾಮಲಿಂಗಂ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರ ಜತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ಜಿಲ್ಲೆಗೆ ಎಚ್‌ಎಎಲ್ ಘಟಕವನ್ನು ತರಲೇಬೇಕೆಂಬ ಪಣ ತೊಟ್ಟಿರುವ ಸಂಸದ ಜಿ.ಎಸ್.ಬಸವರಾಜು ಕೂಡ ಯೋಜನೆಯ ಹಿಂದೆ ಬಿದ್ದಿದ್ದಾರೆ. ಆದರೆ ವಸಂತನರಸಾಪುರಕ್ಕಿಂತ ಗುಬ್ಬಿ ಸಮೀಪದ ಬಿದರೆಹಳ್ಳ ಕಾವಲ್‌ನಲ್ಲಿ ಘಟಕ ಸ್ಥಾಪಿಸಬೇಕೆಂಬ ಅಭಿಪ್ರಾಯ ಅವರದು. ತುಮಕೂರು ವಸಂತನರಸಾಪುರ ಜಾಗವನ್ನು ಉದ್ಯೋಗ ಮಿತ್ರ ಹಾಗೂ ಎಚ್‌ಎಎಲ್ ಅಧಿಕಾರಿಗಳ ತಂಡ ಪರಿಶೀಲನೆ ಮಾಡಿದ ಸುದ್ದಿ ತಿಳಿಯುತ್ತಿದ್ದಂತೆ ಮತ್ತಷ್ಟು ಚುರುಕಾಗಿರುವ ಸಂಸದರು ಕೇಂದ್ರ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರಿಗೆ ಪತ್ರ ಬರೆದು ಬಿದರೆಹಳ್ಳ ಕಾವಲ್‌ನಲ್ಲಿ ಭೂಮಿ ಇರುವ ಬಗ್ಗೆ ಗಮನ ಸೆಳೆದಿದ್ದಾರೆ. ಈ ಸಂಬಂಧ ಸಭೆ ನಡೆಸಲು ಎಚ್‌ಎಎಲ್ ಅಧ್ಯಕ್ಷ ಅಶೋಕ್ ನಾಯ್ಕ ಸಮಯ ಕೇಳಿ ಸಂಸದರು ಪತ್ರ ಬರೆದಿದ್ದಾರೆ.

ಬಿದರೆಹಳ್ಳ ಕಾವಲ್‌ನಲ್ಲಿ ಈಗಾಗಲೇ 863 ಎಕರೆ ಭೂಮಿ ಸ್ವಾಧೀನಕ್ಕೆ ಪ್ರಾಥಮಿಕ ನೋಟಿಸ್ ಜಾರಿಯಾಗಿದೆ. ಆದರೆ ಈ ಭಾಗದಲ್ಲಿ ವಿದ್ಯುತ್ ಹೈಟೆನ್ಷನ್ ಲೈನ್ ಹಾದು ಹೋಗಿರುವುದರಿಂದ ಘಟಕ ಸ್ಥಾಪನೆಗೆ ಹಿನ್ನಡೆಯಾಗಬಹುದು. ಹಾಸನದಲ್ಲಿ ಹೈ ಟೆನ್ಷನ್ ಮಾರ್ಗವನ್ನು ಸ್ಥಳಾಂತರಿಸಿದ ಉದಾರಣೆಯಿದ್ದು, ಅನಿವಾರ್ಯವಾದರೆ ಇಲ್ಲಿಯೂ ಹೈಟೆನ್ಷನ್ ತಂತಿ ಸ್ಥಳಾಂತರಿಸಬಹುದಾಗಿದೆ ಎಂದು ಸಂಸದರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿದರೆಹಳ್ಳ ಕಾವಲ್‌ಗೆ ಸಿಗದಿದ್ದರೂ ಜಿಲ್ಲೆಗೆ ಎಚ್‌ಎಎಲ್ ಘಟಕ ತರಲೇಬೆಂಕೆಂಬ ಹಂಬಲ ಹೊಂದಿದ್ದು, ಈಗ ಆರಂಭವಾಗಿರುವ ಅಧಿವೇಶನದ ವೇಳೆ ರಕ್ಷಣಾ ಸಚಿವರನ್ನು ಭೇಟಿಯಾಗಿ ಈ ಬಗ್ಗೆ ಮನವಿ ಮಾಡಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT