ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು, ದಕ್ಷಿಣ ಕನ್ನಡಕ್ಕೆ ಪ್ರಶಸ್ತಿ

Last Updated 18 ಅಕ್ಟೋಬರ್ 2012, 8:55 IST
ಅಕ್ಷರ ಗಾತ್ರ

ತುಮಕೂರು: ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ಕೊಕ್ಕೊ ಪಂದ್ಯಾವಳಿಯ ಅಂತಿಮ ಸುತ್ತಿನ ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ತಂಡ ತುಮಕೂರು ತಂಡವನ್ನು ಮಣಿಸಿ ಮೊದಲ ಪ್ರಶಸ್ತಿ ಗಳಿಸಿದರೆ, ಅತಿಥೇಯ ತುಮಕೂರು ಬಾಲಕರು ಬೆಂಗಳೂರು ದಕ್ಷಿಣ ಬಾಲಕರ ತಂಡವನ್ನು ಮಣಿಸಿ ಮೊದಲ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಪಂದ್ಯಾವಳಿಯಲ್ಲಿ ಒಟ್ಟು 31 ಜ್ಲ್ಲಿಲೆಗಳ 62 ತಂಡಗಳು ಭಾಗವಹಿಸಿದ್ದವು.
ಬುಧವಾರ ಇಲ್ಲಿ ಮುಕ್ತಾಯಗೊಂಡ ಪಂದ್ಯಾವಳಿಯ ಅಂತಿಮ ಸುತ್ತು ರೋಚಕವಾಗಿತ್ತು.

ತುಮಕೂರು ಬಾಲಕಿಯರ ತೀವ್ರ ಸೆಣಸಾಟದ ನಡುವೆಯೂ ದಕ್ಷಿಣ ಕನ್ನಡ ಜಿಲ್ಲೆಯ ಬಾಲಕಿಯರು ಅಂತಿಮ ಹಂತದಲ್ಲಿ ಮೇಲುಗೈ ಸಾಧಿಸಿ ಪ್ರಶಸ್ತಿ ಬಾಚಿಕೊಂಡರು. ತೀವ್ರ ಸೆಣೆಸಾಟದಿಂದ ಅತೀವ ಕುತೂಹಲ ಮೂಡಿಸಿತ್ತು. ದಕ್ಷಿಣ ಕನ್ನಡ ಬಾಲಕಿಯರು ತುಮಕೂರು ಬಾಲಕಿಯರನ್ನು 7-6 ಅಂಕಗಳಿಂದ ಪರಾಭವಗೊಳಿಸಿದರು. ದಕ್ಷಿಣ ಕನ್ನಡದ ಪರವಾಗಿ ಪವಿತ್ರಾ, ದೀಕ್ಷಾ ಉತ್ತಮ ಆಟವಾಡಿದರೆ, ತುಮಕೂರು ಪರ ಅಶ್ವಿನಿ, ತೇಜಸ್ವಿನಿ ಉತ್ತಮ ಪ್ರದರ್ಶನ ನೀಡಿದರು.

ಬಾಲಕರ ವಿಭಾಗದಲ್ಲಿ ಮೊದಲಿನಿಂದಲೂ ಉತ್ತಮ ಅಂತರ ಕಾಯ್ದುಕೊಂಡ ತುಮಕೂರು ಬಾಲಕರ ತಂಡವು ಆಡಿದ ಎಲ್ಲ ಐದು ಪಂದ್ಯಗಳಲ್ಲೂ ವಿಜೇತರಾಗಿದ್ದು ದೊಡ್ಡ ಸಾಧನೆ ಎನಿಸಿತು. ಅಂತಿಮ ಪಂದ್ಯಾವಳಿಯಲ್ಲೂ ಬೆಂಗಳೂರು ದಕ್ಷಿಣ ಬಾಲಕರ ತಂಡದ ವಿರುದ್ಧ 22-15 ಭಾರಿ ಅಂತರದ ಅಂಕಗಳಿಂದ ವಿಜಯ ಸಾಧಿಸಿತು.
ತುಮಕೂರು ಪರವಾಗಿ ವಿನಯ್, ಸಂಜಯ್‌ಯಾದವ್ ಉತ್ತಮ ಪ್ರದರ್ಶನ ನೀಡಿದರೆ, ಬೆಂಗಳೂರು ದಕ್ಷಿಣ ತಂಡದಲ್ಲಿ ಬಾಲಾಜಿ, ಪ್ರವೀಣ್ ಉತ್ತಮ ಆಟಗಾರರೆನಿಸಿದರು.

ವೈಯಕ್ತಿಕ ಪ್ರಶಸ್ತಿ: ಉತ್ತಮ ಓಟಗಾರ್ತಿ ಪ್ರಶಸ್ತಿಯು ತುಮಕೂರು ಅಶ್ವಿನಿ, ಉತ್ತಮ ಹಿಡಿತಗಾರ್ತಿ ಪ್ರಶಸ್ತಿಯು ದಕ್ಷಿಣ ಕನ್ನಡದ ಪವಿತ್ರಾ ಪಾಲಾಯಿತು. ಸರ್ವೋತ್ತಮ ಆಟಗಾರ್ತಿಯಾಗಿ ದಕ್ಷಿಣ ಕನ್ನಡದ ದೀಕ್ಷಾ ಹೊರಹೊಮ್ಮಿದರು.

ಬಾಲಕರ ವಿಭಾಗದಲ್ಲಿ ಉತ್ತಮ ಓಟಗಾರ ಪ್ರಶಸ್ತಿಯು ತುಮಕೂರಿನ ಕೆ.ಎಚ್.ಪ್ರಜ್ವಲ್, ಉತ್ತಮ ಹಿಡಿತಗಾರ ಪ್ರಶಸ್ತಿಯನ್ನು ವಿನಯ್‌ಕುಮಾರ್ ಪಡೆದರು. ಸರ್ವೋತ್ತಮ ಆಟಗಾರ ಪ್ರಶಸ್ತಿಯು ಬೆಂಗಳೂರಿನ ದಕ್ಷಿಣ ತಂಡದ ಬಾಲಾಜಿ ಪಾಲಾಯಿತು.

ಬಹುಮಾನ ವಿತರಣೆ: ಸಂಜೆ ನಡೆದ ಬಹುಮಾನ ವಿತರಣೆ ಸಮಾರಂಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಯಪ್ರಕಾಶ್ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಸರ್ವೋದಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ನಂಜುಂಡಯ್ಯ, ಆಡಳಿತ ಅಧಿಕಾರಿ ಜಿ.ಸೀತಾರಾಂ, ಪ್ರಾಂಶುಪಾಲ ಕೆ.ವಿ.ಸುಬ್ಬರಾವ್, ಸಿದ್ದಗಂಗಾ ಪಾಲಿಟೆಕ್ನಿಕ್ ಕಾಲೇಜು ಆಡಳಿತ ಅಧಿಕಾರಿ ಕೆ.ಎಂ.ಚಂದ್ರಶೇಖರ್, ದೈಹಿಕ ಶಿಕ್ಷಣ ಉಪನ್ಯಾಸಕ ಎಚ್.ಜಗದೀಶಪ್ಪ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT