ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಪಡಿತರಕ್ಕೆ ಅಗ್ನಿಶಾಮಕ ಸಿಬ್ಬಂದಿ ಪರದಾಟ

Last Updated 14 ಜುಲೈ 2012, 19:30 IST
ಅಕ್ಷರ ಗಾತ್ರ

ತುಮಕೂರು: ಅಗ್ನಿಶಾಮಕ ಸಿಬ್ಬಂದಿಗೆ ಬಿಪಿಎಲ್ ಪಡಿತರ ದರದಲ್ಲಿ ಅಕ್ಕಿ, ಗೋಧಿ ಕೊಡುವಂತೆ ಸರ್ಕಾರದ ಆದೇಶವಿದ್ದರೂ ಜಿಲ್ಲೆಯ ಅಗ್ನಿಶಾಮಕ ಸಿಬ್ಬಂದಿ  ಪಡಿತರಕ್ಕಾಗಿ ಏಳು ತಿಂಗಳುಗಳಿಂದ  ಪರದಾಡುತ್ತಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಉನ್ನತಾಧಿಕಾರಿಗಳ ನಡುವಿನ ಮುಸುಕಿನ ಗುದ್ದಾಟವು ಕೆಳ ಹಂತದ ಸಿಬ್ಬಂದಿ ಹೊಟ್ಟೆಯ ಮೇಲೆ ಬರೆ ಹಾಕಿದಂತಾಗಿದೆ.

ಅಕ್ಷಯ, ಅಂತ್ಯೋದಯ ಅನ್ನ ಯೋಜನೆಯಡಿ ರಾಜ್ಯದಲ್ಲಿ ಪೊಲೀಸರಿಗೆ ಅಕ್ಕಿ, ಗೋಧಿ ವಿತರಣೆ ಮಾಡಲಾಗುತ್ತಿದೆ. ಪೊಲೀಸರಿಗೆ ವಿತರಣೆ ಮಾಡಿದ ರೀತಿಯಲ್ಲೇ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗಳ ಸಿಬ್ಬಂದಿಗೂ ಮಾಸಿಕ 15 ಕೆ.ಜಿ ಅಕ್ಕಿ, 3 ಕೆ.ಜಿ ಗೋಧಿ ವಿತರಿಸುವಂತೆ ಸರ್ಕಾರ ಆದೇಶ ಜಾರಿಗೊಳಿಸಿದೆ. ಅಗ್ನಿ ಶಾಮಕ ಸಿಬ್ಬಂದಿಗೆ ಆಹಾರ ಇಲಾಖೆ ಪೂರೈಸುವ ಅಕ್ಕಿ, ಗೋಧಿಯ ಹಣವನ್ನು ಅಗ್ನಿ ಶಾಮಕ ಇಲಾಖೆ ನೇರವಾಗಿ ಆಹಾರ ಇಲಾಖೆಗೆ ತುಂಬಲಿದೆ.

ಅಕ್ಕಿ, ಗೋಧಿ ನೀಡುವ ಸರ್ಕಾರದ ಆದೇಶಕ್ಕೆ ಜಿಲ್ಲೆಯಲ್ಲಿ ಕೊಂಚವೂ ಬೆಲೆ ಇಲ್ಲದಂತಾಗಿದೆ. ಮೊದಲ ತಿಂಗಳಿನಿಂದಲೇ ಆದೇಶ ಜಾರಿಗೊಳಿಸುವಲ್ಲಿ ಎರಡೂ ಇಲಾಖೆಗಳ ಉನ್ನತಾಧಿಕಾರಿಗಳು ಅಡ್ಡಿಯಾಗಿದ್ದಾರೆ. ಆಹಾರ ಹಂಚಿಕೆ ಯಾರು ಮಾಡಬೇಕೆಂದು ಎರಡು ಇಲಾಖೆಗಳ ನಡುವೆ ಉಂಟಾಗಿರುವ ವಿವಾದದಿಂದ ಬಡಪಾಯಿ ಸಿಬ್ಬಂದಿ ಕಷ್ಟ ಅನುಭವಿಸುವಂತಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಗ್ನಿಶಾಮಕ ಸಿಬ್ಬಂದಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ಜಿಲ್ಲೆಯಲ್ಲಿ 8 ಅಗ್ನಿಶಾಮಕ ಠಾಣೆಗಳಿದ್ದು, 180 ಸಿಬ್ಬಂದಿ ಇದ್ದೇವೆ. ಸರ್ಕಾರದ ಆದೇಶದಿಂದ ಖುಷಿಯಿಂದ ಮೊದಲ ತಿಂಗಳು ನ್ಯಾಯಬೆಲೆ ಅಂಗಡಿಗಳಿಗೆ ಹೋದರೆ ಪಡಿತರ ಕೊಡಲು ಸಾಧ್ಯವಿಲ್ಲ ಎಂದು ವಾಪಸ್ ಕಳುಹಿಸಿದರು. ಆಹಾರ ಇಲಾಖೆ ಗೋದಾಮಿನಿಂದ ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜಾಗುವ ಪಡಿತರದ ಮೇಲಿನ ಸಾಕಣೆ ವೆಚ್ಚ, ಮತ್ತಿತರ ಕೂಲಿ, ಖರ್ಚಿನ ವೆಚ್ಚವನ್ನು ಸರ್ಕಾರ ಭರಿಸುವುದಿಲ್ಲ. ಹೀಗಾಗಿ ಪಡಿತರ ಕೊಡುವುದಿಲ್ಲ ಎಂದು ನ್ಯಾಯಬೆಲೆ ಅಂಗಡಿಗಳ ಮಾಲೀಕರು ಹೇಳಿದರು ಎಂದು ಸಿಬ್ಬಂದಿ ನೋವು ತೋಡಿಕೊಂಡರು.

ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಣೆ ಸಾಧ್ಯವಿಲ್ಲ ಎಂದು ಆಹಾರ ಇಲಾಖೆ ಉಪ ನಿರ್ದೇಶಕರು ಕೂಡ ಹೇಳಿದ್ದಾರೆ. ಪಡಿತರವನ್ನು ನೇರವಾಗಿ ಅಗ್ನಿಶಾಮಕ ಠಾಣೆಗೆ ನೀಡುತ್ತೇವೆ. ಅಲ್ಲಿಂದ ಎಲ್ಲ ಸಿಬ್ಬಂದಿ ಹಂಚಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅಕ್ಕಿ, ಗೋಧಿ ನೀಡಿದರೆ ನಾವೇ ವಿತರಣೆ ಮಾಡಿಕೊಳ್ಳಲು ಸಿದ್ಧರಿದ್ದೇವೆ. ಆದರೆ ಇದಕ್ಕೆ ಇಲಾಖೆಯ ಉನ್ನತಾಧಿಕಾರಿಗಳು ಒಪ್ಪುತ್ತಿಲ್ಲ ಎಂದು ಮತ್ತೊಬ್ಬರು ಸಿಬ್ಬಂದಿ ನೊಂದು ನುಡಿದರು.

`ನ್ಯಾಯಬೆಲೆ ಅಂಗಡಿಗಳ ಮೂಲಕ ಹಂಚಿಕೆ ಸಾಧ್ಯವಿಲ್ಲ ಎಂದು ಆಹಾರ ಇಲಾಖೆಯು ತಿಳಿಸಿದೆ. ಬದಲಿಗೆ  ಹಂಚಿಕೆಯಾಗಿರುವಷ್ಟು ಪ್ರಮಾಣದ ಪಡಿತರವನ್ನು ಆಹಾರ ಇಲಾಖೆಯು ಅಗ್ನಿಶಾಮಕ ಇಲಾಖೆಗೆ ನೇರವಾಗಿ ನೀಡಲಿದೆ. ಅಗ್ನಿಶಾಮಕ ಠಾಣೆಗಳಲ್ಲೇ ಸಿಬ್ಬಂದಿಗೆ ಮರು ಹಂಚಿಕೆ ಮಾಡುವಂತೆ ಹೇಳಿದೆ.

ಆದರೆ ಇದಕ್ಕೆ ಅಗ್ನಿಶಾಮಕ ಇಲಾಖೆಯ ಹಿರಿಯ ಅಧಿಕಾರಿಗಳು ಒಪ್ಪದ ಕಾರಣ ಏಳು ತಿಂಗಳಾದರೂ ಸಿಬ್ಬಂದಿಗೆ ಪಡಿತರ ಸಿಕ್ಕಿಲ್ಲ. ಈ ಸಮಸ್ಯೆಯನ್ನು ಎರಡೂ ಇಲಾಖೆಗಳ ಉನ್ನತಾಧಿಕಾರಿಗಳು ಬಗೆಹರಿಸಬೇಕು~ ಎಂದು ಸಿಬ್ಬಂದಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT