ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಗಿನ ತ್ಯಾಜ್ಯ- ರಂಗಿನ ರಾಜ್ಯ!

Last Updated 7 ಜನವರಿ 2013, 19:59 IST
ಅಕ್ಷರ ಗಾತ್ರ

ತೆಂಗು ಅಡುಗೆಗೆ ಮಾತ್ರ ಸೀಮಿತವಲ್ಲ. ಅದು ತ್ಯಾಜ್ಯವಾದ ನಂತರವೂ ಹಲವು ರೀತಿಯಲ್ಲಿ ಪ್ರಯೋಜನಕ್ಕೆ ಬರುತ್ತದೆ. ಮೊದಲೆಲ್ಲಾ ಕೇವಲ ಹಗ್ಗ ಮಾಡಲು ಬಳಸುತ್ತಿದ್ದ ನಾರಿನಿಂದ ಈಗ ಹಲವು ಬಗೆಯ ಪೀಠೋಪಕರಣಗಳನ್ನು ತಯಾರಿಸಲಾಗುತ್ತಿದೆ. ಮನೆ, ಕಚೇರಿಯ ಒಳಾಂಗಣ ವಿನ್ಯಾಸಕ್ಕೂ ಸೈ ಎನಿಸಿಕೊಂಡಿರುವ ತೆಂಗಿನ ಉತ್ಪನ್ನ ಮರಕ್ಕೆ ಪರ್ಯಾಯವಾಗಿ ಬಳಕೆಯಾಗುತ್ತಿರುವುದು ವಿದ್ಯಮಾನ.

ತೆಂಗಿನ ತ್ಯಾಜ್ಯವನ್ನು ಪರಿಪೂರ್ಣವಾಗಿ ಬಳಕೆಗೆ ಬರುವಂತೆ ಮಾಡುವಲ್ಲಿ ಕಾರ್ಯನಿರತವಾಗಿರುವುದು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಗುಬ್ಬಿ ಕಾಯರ್ ಕ್ಲಸ್ಟರ್ ಸಂಸ್ಥೆ. ರಾಜ್ಯದ ಕಾಯರ್ ಬೋರ್ಡ್ ಸ್ಫೂರ್ತಿ ಯೋಜನೆ ಅಡಿಯಲ್ಲಿ 2011ರಲ್ಲಿ ಆರಂಭವಾದ ಈ ಸಂಸ್ಥೆ ತೆಂಗಿನ ತ್ಯಾಜ್ಯದಿಂದ ತಯಾರಿಸಬಹುದಾದ ಹಲವು ಉತ್ಪನ್ನಗಳನ್ನು ಪರಿಚಯಿಸುತ್ತಿದೆ.

`ತೆಂಗಿನ ನಾರು ಹಲವು ಕಡೆಯಲ್ಲಿ ಅಪಾರವಾಗಿ ನಶಿಸಿ ಹೋಗುತ್ತಿದೆ. ಆದರೆ ಇವುಗಳನ್ನು ಸೂಕ್ತವಾಗಿ ಬಳಸಿಕೊಂಡರೆ, ವಿವಿಧ ಗೃಹೋಪಯೋಗಿ ವಸ್ತುಗಳನ್ನು ತಯಾರಿಸಬಹುದು. ಇದೇ ನಿಟ್ಟಿನಲ್ಲಿ ತೆಂಗಿನ ನಾರಿನ ಕುಶಲ ಕೈಗಾರಿಕಾ ಸಹಕಾರ ಸಂಘ ಗುಬ್ಬಿ ಕ್ಲಸ್ಟರ್ ಸಂಸ್ಥೆಯನ್ನು ಆರಂಭಿಸಿದೆ' ಎನ್ನುತ್ತಾರೆ ಸಂಸ್ಥೆಯ ಅಧ್ಯಕ್ಷ ಟಿ. ಎಸ್. ಕಿಡಿಗಣ್ಣಪ್ಪ.

`ಕಾಯರ್ ಕಾಂಪೊಸಿಟ್' ನಿಂದ ಪ್ಲೇವುಡ್‌ಗೆ ಪರ್ಯಾಯವಾಗಿ ಹಲವು ಉತ್ಪನ್ನಗಳನ್ನು ತಯಾರಿಸುವುದು ಸಾಧ್ಯವಿದೆ. ಇದರಿಂದ ಮರಗಳನ್ನು ಕಡಿಯುವುದನ್ನು ತಪ್ಪಿಸಿ ಪರಿಸರವನ್ನು ರಕ್ಷಿಸಬಹುದು. ಸುಮ್ಮನೆ ವ್ಯರ್ಥವಾಗುವ ತೆಂಗಿನ ನಾರಿನಿಂದ ಹಲವು ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವುದರೊಂದಿಗೆ ಗ್ರಾಮೀಣ ಜನರಿಗೆ ಉದ್ಯೋಗವನ್ನೂ ನೀಡುವುದು ನಮ್ಮ ಉದ್ದೇಶ. ಮರದಷ್ಟೇ ಉತ್ತಮ ಗುಣಮಟ್ಟ ಹೊಂದಿರುವ ತೆಂಗಿನ ನಾರನ್ನು ಏಕೆ ಸದುಪಯೋಗ ಮಾಡಿಕೊಳ್ಳಬಾರದು ಎನ್ನುವುದು ಅವರು ಮುಂದಿಡುವ ಪ್ರಶ್ನೆ.

ಗುಬ್ಬಿ ತಾಲ್ಲೂಕಿನಲ್ಲಿರುವ ಈ ಸಂಸ್ಥೆಯಲ್ಲಿ ಸುಮಾರು 150 ಮಂದಿಗೆ ಉದ್ಯೋಗ ದೊರೆತಿದ್ದು, ಸ್ವಸಹಾಯ ಗುಂಪಿನ ಶೇ 80ರಷ್ಟು ಮಹಿಳೆಯರು ಇಲ್ಲಿ ಕೆಲಸ ನಿರ್ವಹಿಸುತ್ತಾರೆ. ತೆಂಗು ಬೆಳೆಗಾರರೂ ಇದರಿಂದ ಶೇ.50ರಷ್ಟು ಲಾಭ ಪಡೆದುಕೊಂಡಿದ್ದಾರೆ. ನಾರು ಸಂಗ್ರಹಿಸಿದವರಿಗೂ ಹಣ ನೀಡಲಾಗುತ್ತಿದೆ. ಇದರಿಂದ ಗ್ರಾಮಗಳಲ್ಲಿನ ಆರ್ಥಿಕ ಪರಿಸ್ಥಿತಿಯನ್ನು ಒಂದಿಷ್ಟು ಚೇತರಿಸಿಕೊಳ್ಳುವಂತೆ ಮಾಡುವುದು ಸಾಧ್ಯವಿದೆ ಎಂಬುದು ಅವರ ವಿವರಣೆ.

ತೆಂಗಿನ ಉತ್ಪನ್ನಗಳು
ತೆಂಗಿನ ನಾರಿನಿಂದ ಪೀಠೋಪಕರಣಗಳಿಂದ ಹಿಡಿದು ಒಳಾಂಗಣ ವಿನ್ಯಾಸದವರೆಗೂ ಹಲವು ನಮೂನೆಯ ಸಾಮಗ್ರಿಗಳನ್ನು ತಯಾರಿಸಬಹುದು. ಟೇಬಲ್, ಕಂಪ್ಯೂಟರ್ ಟೇಬಲ್, ಕುರ್ಚಿಗಳು, ಡೈನಿಂಗ್ ಟೇಬಲ್, ಸೋಫಾ ಸೆಟ್‌ಗಳು ಮಾತ್ರವಲ್ಲದೆ, ಮನೆಯ ಒಳಾಂಗಣ ಅಲಂಕಾರಿಕ ಸಾಮಗ್ರಿಗಳು, ವಾರ್ಡ್‌ರೋಬ್, ಕಿಚನ್ ಕ್ಯಾಬಿನೆಟ್, ವಾಲ್ ಪ್ಯಾನ್, ವಾಲ್ಸ್ ಸೀಲಿಂಗ್, ಶಾಲೆಗಳಲ್ಲಿ ಡೆಸ್ಕ್‌ಗಳನ್ನು ಮರಕ್ಕೆ ಬದಲಿಯಾಗಿ ತಯಾರಿಸಬಹುದು.

ಮಂಚಗಳು, ಅಡುಗೆ ಮನೆಗೆ ಅಂದದ ಶೆಲ್ಫ್‌ಗಳನ್ನೂ ತಯಾರಿಸಲಾಗುತ್ತಿದ್ದು, ಈ ಉತ್ಪನ್ನಗಳು ವಿವಿಧ ಬಣ್ಣಗಳಲ್ಲೂ ಲಭ್ಯವಿರುವುದರಿಂದ ಒಳಾಂಗಣ ವಿನ್ಯಾಸಕ್ಕೆ ಹೇಳಿಮಾಡಿಸಿದಂತಿವೆ. ನೆಲದ ಮೇಲೆ ಕಾಯರ್ ಮ್ಯಾಟಿಂಗ್ಸ್ ಉತ್ಕೃಷ್ಟ ಆಯ್ಕೆ. ಮೆಟ್ಟಲುಗಳಿಗೆ, ವರಾಂಡದಲ್ಲಿ ಹಾಸಿದರೆ ಅತಿ ಸುಂದರವಾಗಿ ಕಂಗೊಳಿಸುತ್ತದೆ.

ಪರಿಸರಸ್ನೇಹಿ ತೆಂಗು
ತೆಂಗಿನ ನಾರಿನಿಂದ ತಯಾರಿಸಲಾಗುವ ಉತ್ಪನ್ನಗಳು ಪರಿಸರಸ್ನೇಹಿಯಾಗಿವೆ. ಮಣ್ಣಿನಲ್ಲಿ ಅತಿ ಸುಲಭವಾಗಿ ಕರಗಬಹುದಾದ ಶಕ್ತಿ ಇರುವುದರಿಂದ ಪರಿಸರಕ್ಕೆ ಪೂರಕ. ಅಷ್ಟೇ ಅಲ್ಲ, ತೆಂಗಿನ ಉತ್ಪನ್ನಗಳು ತಂಪಾಗಿದ್ದು, ಮನೆಯಲ್ಲಿ, ಕಚೇರಿಯಲ್ಲಿ ತಂಪು ವಾತಾವರಣವನ್ನು ಸೃಷ್ಟಿಸುತ್ತದೆ. ಕಾಯರ್‌ನಲ್ಲಿ ಗಾಳಿ, ಬೆಳಕು ಸರಾಗವಾಗಿ ಹರಿಯುತ್ತದೆ. ಅಗ್ನಿ ಪ್ರತಿರೋಧಕವೂ ಆಗಿದ್ದು,  ಆರೋಗ್ಯಕರ ವಾತಾವರಣದೊಂದಿಗೆ ದೀರ್ಫಬಾಳಿಕೆಯನ್ನೂ ಒದಗಿಸುತ್ತದೆ. ಗೆದ್ದಲು ರಹಿತ ಮತ್ತು ವಾಟರ್‌ಪ್ರೂಫ್ ಆಗಿದೆ. ಸ್ಕ್ರೂ ಹೋಲ್ಡಿಂಗ್ ಸಾಮರ್ಥ್ಯ ಮರಕ್ಕಿಂತ ಹೆಚ್ಚಿದೆ.

ಸರ್ಕಾರ ಗಮನ ನೀಡಲಿ
ತೆಂಗಿನ ನಾರಿನ ಉತ್ಪನ್ನಗಳ ಬಳಕೆಯತ್ತ ಸರ್ಕಾರ ಗಮನತೋರಬೇಕು. ಈ ಉತ್ಪನ್ನಗಳ ಪ್ರಚಾರಕ್ಕೆ ಸರ್ಕಾರ ಮುಂದೆ ಬಂದರೆ, ಇವುಗಳು ಜನರ ಗಮನಕ್ಕೆ ಬರುತ್ತದೆ. ಕೇರಳ ಸರ್ಕಾರದಲ್ಲಿ ಕಾಯರ್ ಸಚಿವರೂ ಇದ್ದಾರೆ. ತೆಂಗಿನ ನಾರನ್ನು ಮರುಬಳಕೆ ಮಾಡಿಕೊಳ್ಳುವುದಷ್ಟೇ ಅಲ್ಲ, ಅದರ ಮಾರುಕಟ್ಟೆಗೂ ಕೇರಳ ಸರ್ಕಾರ ಸೂಕ್ತ ಬೆಂಬಲ ನೀಡುತ್ತದೆ. ಆದರೆ ನಮ್ಮ ರಾಜ್ಯದಲ್ಲಿ ಮಾರುಕಟ್ಟೆಗೆ ಸರಿಯಾದ ಬೆಂಬಲ ದೊರೆತಿಲ್ಲ -ಟಿ. ಎಸ್. ಕಿಡಿಗಣ್ಣಪ್ಪ.

ತೆಂಗಿನ ಉತ್ಪನ್ನಗಳ ತಯಾರಿಕೆಯ ಪ್ರಕ್ರಿಯೆ
* ತೆಂಗಿನ ಮಟ್ಟೆಗಳನ್ನು ಮೊದಲು ಗ್ರಾಮೀಣ ಪ್ರದೇಶದ ತೆಂಗು ಬೆಳೆಗಾರರಿಂದ, ಆಯ್ದ ಸ್ತ್ರೀಶಕ್ತಿ ಸಂಘಗಳಿಂದ ಸಂಗ್ರಹಣೆ ಮಾಡಿ ನಾರು ಉತ್ಪಾದನಾ ಘಟಕಗಳಿಗೆ ಪೂರೈಕೆ ಮಾಡುವುದು.

* ನಾರು ಉತ್ಪಾದನೆಯಾದ ನಂತರ ನುರಿತ ಕೆಲಸಗಾರರಿಂದ ನಾರಿನ ವಸ್ತುಗಳಾಗಿ ಮಾರ್ಪಾಟು ಮಾಡಲಾಗುತ್ತದೆ. ಇದರಿಂದ ಅಲಂಕಾರಿಕ ಸಾಮಗ್ರಿಗಳನ್ನು ಮತ್ತು ಪ್ಲೇಬೋರ್ಡ್‌ಗಳನ್ನೂ ನಿರ್ಮಾಣ ಮಾಡಲಾಗುತ್ತದೆ. ಸಂಪರ್ಕಕ್ಕೆ: 08131-201266.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT