ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಗು ಉದ್ಯಮಕ್ಕೆ ಬೇಕು ಕಾಯಕಲ್ಪ

Last Updated 1 ಮಾರ್ಚ್ 2011, 19:30 IST
ಅಕ್ಷರ ಗಾತ್ರ


ರಾಜ್ಯ ತೆಂಗು ಮಹಾಮಂಡಳಿ ಈ ವರ್ಷ 50ನೇ ಸಂಭ್ರಮ ಆಚರಿಸಿಕೊಳ್ಳುತ್ತಿದೆ. ಮೈಸೂರಿನ ಹೂಟಗಳ್ಳಿಗೆ ಬಂದರೆ ಇಡೀ ರಾಜ್ಯದ ತೆಂಗಿನ ನಾರು  ಉದ್ಯಮದ ದರ್ಶನವಾಗುತ್ತದೆ. ಇಲ್ಲಿನ ಸೂರ್ಯೋದಯ ತೆಂಗಿನ ನಾರು ಸೊಸೈಟಿ  ಕಲ್ಪವೃಕ್ಷದ ಕಾವಲಿಗೆ ನಿಂತಂತೆ ಕಾಣುತ್ತದೆ.

ಕಾಲು ಒರೆಸುವ ಮ್ಯಾಟ್, ಬಾವಿಯಿಂದ ನೀರೆಳೆಯುವ ಹಗ್ಗ, ಸೆಕೆಗೆ ಬೀಸಣಿಕೆ, ತಲೆಯಾನಿಸಲು ತಲೆದಿಂಬು ಒಂದೇ ಎರಡೇ ತೆಂಗಿನ ಉತ್ಪನ್ನಗಳು. ಪರಿಸರ ಸ್ನೇಹಿ ಮತ್ತು ಅಗ್ಗದ ವಸ್ತುಗಳು. ನೆರೆಯ ಕೇರಳಕ್ಕೆ ಹೋಲಿಸಿದರೆ ರಾಜ್ಯದ ತೆಂಗು ಉದ್ಯಮದ ಸ್ಥಿತಿ ಚಿಂತಾಜನಕ. ಕಚ್ಚಾ ವಸ್ತು ಮತ್ತು ಮಾನವ ಸಂಪನ್ಮೂಲ ಹೇರಳವಾಗಿದ್ದರೂ, ಬೇಡಿಕೆಗಿಂತ ಉತ್ಪಾದನೆ ನಮ್ಮಲ್ಲಿ ಕಡಿಮೆ. ಹಾಗಾದರೆ ಸಮಸ್ಯೆ ಎಲ್ಲಿ?

ಇದಕ್ಕೆ ಉತ್ತರಗಳು ಹಲವು. ರಾಜ್ಯದಲ್ಲಿ ಸಕ್ರಿಯವಾಗಿರುವ 60 ತೆಂಗಿನ ನಾರು ತಯಾರಿಕಾ  ಘಟಕಗಳಿಗೆ ಸ್ವಂತ ಕಟ್ಟಡ ಇಲ್ಲ. ವಿದ್ಯುತ್, ಡೀಸೆಲ್, ಸಬ್ಸಿಡಿ, ಸಾರಿಗೆ ವೆಚ್ಚ, ರಫ್ತು ಉತ್ತೇಜನ, ಬ್ಯಾಂಕ್‌ನಿಂದ ಸಾಲ ಸೌಲಭ್ಯ ಇದ್ಯಾವುದೂ ರಾಜ್ಯ ಸರ್ಕಾರದಿಂದ ಲಭಿಸಿಲ್ಲ. ಕೇಂದ್ರ ಸರ್ಕಾರದ ತೆಂಗಿನ ನಾರು ಮಂಡಳಿ ಸ್ವಲ್ಪ ಉತ್ತೇಜನ ನೀಡುತ್ತದೆ ಎನ್ನುವುದನ್ನು ಬಿಟ್ಟರೆ ರಾಜ್ಯದಿಂದ ಬಿಡಿಗಾಸಿನ ನೆರವಿಲ್ಲ. 50 ವರ್ಷ ಕಳೆದರೂ ಮಂಡಳಿಗೆ ಬೆಂಗಳೂರಿನಲ್ಲಿ ಸ್ವಂತ ಕಟ್ಟಡ, ‘ಕಾಯಿರ್ ಭವನ’ ನಿರ್ಮಾಣವಾಗಿಲ್ಲ.   

ತೆಂಗು ಬೆಳೆಯುವ ತುಮಕೂರು, ಹಾಸನ, ಚಿಕ್ಕಮಗಳೂರು ಹಾಗೂ ಕರಾವಳಿಯಲ್ಲಿ ಉದ್ಯಮಕ್ಕೆ ಪೂರಕ ವಾತಾವರಣವಿದೆ. ಸ್ಥಳೀಯ ಮಾನವ ಸಂಪನ್ಮೂಲ ಮತ್ತು ಕಚ್ಚಾವಸ್ತುವನ್ನು ಸಮರ್ಥವಾಗಿ ಬಳಸಿಕೊಂಡರೆ ಅದರಿಂದ ಸಾವಿರಾರು ಕುಟುಂಬಗಳಿಗೆ ಉದ್ಯೋಗ ಲಭಿಸುತ್ತದೆ. ಬೇಡಿಕೆ ಹೆಚ್ಚಿರುವುದರಿಂದ ರಫ್ತಿಗೆ ಉತ್ತೇಜನ ದೊರೆಯುತ್ತದೆ. ಆದರೆ, ಇಡೀ ಉದ್ಯಮ ಸಹಕಾರಿ ಮಾದರಿಯಲ್ಲಿ ರೂಪಗೊಳ್ಳದ ಕಾರಣ  ನಿರೀಕ್ಷಿತ ಏಳಿಗೆ ಕಂಡಿಲ್ಲ.

ಹಾಗೆ ನೋಡಿದರೆ  ತೆಂಗಿನ ನಾರಿನ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗಿದ್ದೇ ಇಲ್ಲ. ತೆಂಗು ಮಂಡಳಿ ಮಾಹಿತಿ ಪ್ರಕಾರ ಈಗಿರುವ ಬೇಡಿಕೆಯನ್ನೇ ಪೂರೈಸಲು ಆಗುತ್ತಿಲ್ಲ. ರಾಜ್ಯದ ಬೇಡಿಕೆಯ ಶೇಕಡ 20ರಷ್ಟು ಮಾತ್ರ ನಮ್ಮ ಉದ್ಯಮಗಳು ಪೂರೈಸಿದರೆ ಇನ್ನು ಶೇ 80ರಷ್ಟನ್ನು ಕೇರಳ ಹಾಗೂ ತಮಿಳುನಾಡು ರಾಜ್ಯಗಳು ಪೂರೈಸುತ್ತವೆ.
ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಕಡೆಯಿಂದ ಆರ್ಡರ್‌ಗಳಿವೆ. ಆದರೆ, ಒಟ್ಟಾರೆ ಪ್ರಗತಿ ಮಾತ್ರ ಶೂನ್ಯ.

2009-10ರಲ್ಲಿ  ಕೇರಳ ` 500 ಕೋಟಿ  ವಹಿವಾಟು ಮಾಡಿದರೆ, ಕರ್ನಾಟಕದ್ದು ಕೇವಲ `3 ಕೋಟಿಗಳ ವಹಿವಾಟು. ಉದ್ಯಮದ ನಿರ್ಲಕ್ಷ್ಯಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕೇ ಎಂದು ಪ್ರಶ್ನಿಸುತ್ತಾರೆ  ಕರ್ನಾಟಕ ರಾಜ್ಯ ನಾರು ಮಹಾ ಮಂಡಳದ ಅಧ್ಯಕ್ಷರಾಗಿರುವ ನಾರಾಯಣ ರಾವ್.

1961ರಿಂದ ‘ಕರ್ನಾಟಕ ರಾಜ್ಯ ತೆಂಗಿನ ನಾರು ಮಹಾಮಂಡಳ’ ಅಸ್ತಿತ್ವದಲ್ಲಿದೆ. ತೆಂಗಿನ ಉಪ ಉತ್ಪನ್ನಗಳ ತಯಾರಿಕೆಗೆ ಪ್ರೋತ್ಸಾಹಿಸುವುದು ಮಂಡಳಿಯ ಕೆಲಸ. ಆದರೆ, ಸರ್ಕಾರದ ನೆರವಿಲ್ಲದೆ ಮಂಡಳಿ ತಾನೆ ಏನು ಮಾಡಿತು. ಮಂಡಳಿಯ ಅಧ್ಯಕ್ಷರೇ ಹೂಟಗಳ್ಳಿಯಲ್ಲಿರುವ ಸೂರ್ಯೋದಯ ತೆಂಗಿನ ನಾರು ಸೊಸೈಟಿ ಮಾಲೀಕರು.

 ‘ನಮ್ಮ ಹೂಟಗಳ್ಳಿ ಘಟಕದ ಸಮಸ್ಯೆ ಇಡಿ ರಾಜ್ಯದ ಕನ್ನಡಿ. ಕಾರ್ಮಿಕರ ಸಮಸ್ಯೆ ಸಾಕಷ್ಟಿದೆ.  ಮುಖ್ಯವಾಗಿ ನಾವು ಕೊಡುವ ಸಂಬಳಕ್ಕೆ ಯಾವ ಕಾರ್ಮಿಕರೂ ಸಿಗುವುದಿಲ್ಲ. ಕಚ್ಚಾ ಸಾಮಗ್ರಿ ತಂದರೂ ಅದನ್ನು ಹದ ಮಾಡುವ ಕುಶಲ ಕೆಲಸಗಾರರು ಅಲಭ್ಯ. ಬೇಡಿಕೆಯ ಗುರಿ ಮುಟ್ಟಲು ಆಗುತ್ತಿಲ್ಲ ಎನ್ನುತ್ತಾರೆ ಅವರು.  ತೆಂಗು ಉದ್ಯಮಕ್ಕೆ ಬೇಕಿದೆ ಕಾಯಕಲ್ಪ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲವಲ್ಲ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT