ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆಯಿಂದ ರಾಜ್ಯ ಬೊಕ್ಕಸಕ್ಕೂ ಸಿಂಹಪಾಲು

Last Updated 24 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪೆಟ್ರೋಲ್ ದರ ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರದ ನೀತಿಗೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸುವುದಿಲ್ಲ. ಕಾರಣ, ಪೆಟ್ರೋಲ್ ಮೇಲಿನ ತೆರಿಗೆಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೂ ಸಿಂಹಪಾಲು ದೊರೆಯುತ್ತಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ಪೆಟ್ರೋಲ್ ಮೂಲ ದರ ಪ್ರತಿ ಲೀಟರ್‌ಗೆ 50 ರೂಪಾಯಿ ಮಾತ್ರ. ಆದರೆ, ಸರ್ಕಾರ ಶೇ 25 ರಷ್ಟು ಮಾರಾಟ ತೆರಿಗೆ ಹಾಗೂ ಶೇ 5 ರಷ್ಟು ಪ್ರವೇಶ ತೆರಿಗೆ ವಿಧಿಸುತ್ತಿದೆ. ಜತೆಗೆ ಡೀಲರ್‌ಗಳ ಕಮಿಷನ್ ಶೇ 2 ರಷ್ಟಿರುತ್ತದೆ. ಹೀಗಾಗಿ ನಗರದಲ್ಲಿ ಈಗ ಲೀಟರ್ ಪೆಟ್ರೋಲ್ ದರ ರೂ 82ಕ್ಕೆ ಹೆಚ್ಚಳವಾಗಿದೆ.

ಪೆಟ್ರೋಲ್ ಮಾರಾಟ ತೆರಿಗೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಂಚಿಕೊಳ್ಳುತ್ತವೆ. ಒಂದು ವೇಳೆ ಪೆಟ್ರೋಲ್ ದರ ಹೆಚ್ಚಳವನ್ನು ರಾಜ್ಯ ಸರ್ಕಾರ ವಿರೋಧಿಸಿದರೆ, ರಾಜ್ಯದಲ್ಲಿ ಪೆಟ್ರೋಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿ ಎಂಬ ಬೇಡಿಕೆ ಬರುತ್ತದೆ. ಇದರಿಂದ ಪೆಟ್ರೋಲ್ ಮೇಲಿನ ತೆರಿಗೆ ಮೂಲಕ ಸರ್ಕಾರಕ್ಕೆ ಬರುವ ಆದಾಯವೂ ಕಡಿಮೆಯಾಗುತ್ತದೆ. ಆದರೆ ಕೇಂದ್ರ ಮೂಲ ಬೆಲೆ ಹೆಚ್ಚಳ ಮಾಡಿದಂತೆ ರಾಜ್ಯ ಸರ್ಕಾರಕ್ಕೆ ದೊರಕುವ ಆದಾಯ ಹೆಚ್ಚಾಗುತ್ತದೆ.

 

ಗೋವಾದ ನಿಯಮ ಬೇಕು
 ಒಂದು ಲೀಟರ್ ಪೆಟ್ರೋಲ್‌ಗೆ ಮೂವತ್ತು ರೂಪಾಯಿ ತೆರಿಗೆ ವಿಧಿಸುತ್ತಿರುವ ನಿಯಮ ಸರಿಯಲ್ಲ. ಈಗಿನ ತೆರಿಗೆಯಲ್ಲಿ ಅರ್ಧದಷ್ಟು ತೆರಿಗೆ ವಿಧಿಸಿದರೂ ಪೆಟ್ರೋಲ್ ದರ ಲೀಟರ್‌ಗೆ 65 ರೂಪಾಯಿ ಆಗಲಿದೆ. ಗೋವಾ ರಾಜ್ಯದಲ್ಲಿ ಈ ನಿಯಮ ಇದ್ದು, ನಮ್ಮಲ್ಲೂ ಇದು ಜಾರಿಗೆ ಬರಬೇಕು~ ಎಂದು ಎಫ್‌ಕೆಸಿಸಿಐನ ಅಧಿಕಾರಿಯೊಬ್ಬರು ಹೇಳಿದರು.

`ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಾಗದಿದ್ದರೂ ತೈಲೋತ್ಪನ್ನ ಕಂಪೆನಿಗಳ ಅನುಕೂಲಕ್ಕಾಗಿ ಕೇಂದ್ರ ಪೆಟ್ರೋಲ್ ದರವನ್ನು ಹೆಚ್ಚಿಸಿದೆ. ಇದರಿಂದ ಸಾಮಾನ್ಯ ಜನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ~ ಎಂದು ಆರೋಪಿಸಿದರು.

ಸಾಮಾನ್ಯನಿಗೆ ಬರೆ
 `ಕೇಂದ್ರ ಸರ್ಕಾರ ಪೆಟ್ರೋಲ್ ದರವನ್ನು ಏಕಾಏಕಿ ಏರಿಸಿ ಜನಸಾಮಾನ್ಯರ ಜೀವನವನ್ನು ಮತ್ತಷ್ಟು ದುರ್ಬಲಗೊಳಿಸಿದೆ. ಸಾಮಾನ್ಯ ಜನರ ಬದುಕನ್ನು ದೃಷ್ಟಿಯಲ್ಲಿಟ್ಟುಕೊಂಡು ಕೂಡಲೇ ಪೆಟ್ರೋಲ್ ಬೆಲೆ ಇಳಿಸುವ ನಿರ್ಧಾರಕ್ಕೆ ಸರ್ಕಾರ ಬರಬೇಕು~ ಎಂದು ಜೆಡಿಎಸ್ ಪಕ್ಷದ ಮುಖಂಡ ಪಿ.ಜಿ.ಆರ್. ಸಿಂಧ್ಯ      ಒತ್ತಾಯಿಸಿದ್ದಾರೆ.

`ಆಡಳಿತದ ದುಂದುವೆಚ್ಚಗಳನ್ನು ತಗ್ಗಿಸಿ, ಪೆಟ್ರೋಲ್ ದರ ಇಳಿಕೆಗೆ ಸರ್ಕಾರ ಮುಂದಾಗಬೇಕು. ಇಲ್ಲದಿದ್ದರೆ ಯುಪಿಎ ಸರ್ಕಾರ ಮುಂಬರುವ ದಿನಗಳಲ್ಲಿ ಇದಕ್ಕಾಗಿ ತಕ್ಕ ಬೆಲೆ ತೆರಬೇಕಾಗುತ್ತದೆ~ ಎಂದು ಅವರು ಹೇಳಿದ್ದಾರೆ.

ಸೈಕಲ್, ಎತ್ತಿನಗಾಡಿ ಸೂಕ್ತ
 `ಈಗ ಪೆಟ್ರೋಲ್ ದರ ಹೆಚ್ಚಳವಾಗಿದ್ದು ಸಹಜವಾಗಿಯೇ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಲಿದೆ. ಮೂಲ ಬೆಲೆಗೆ (ತೆರಿಗೆ ರಹಿತ) ಪೆಟ್ರೋಲ್ ಮಾರಾಟ ಮಾಡಬೇಕು ಎಂದು ಒತ್ತಾಯಿಸುತ್ತಲೇ ಬಂದಿದ್ದೇವೆ. ಆದರೆ, ಸರ್ಕಾರ ಅದನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಈಗಿರುವ ಪರಿಸ್ಥಿತಿಯಲ್ಲಿ ಜನ ಸಾಮಾನ್ಯರು ಸೈಕಲ್ ಹಾಗೂ ಎತ್ತಿನ ಗಾಡಿಗಳನ್ನು ಬಳಸುವ ಲಕ್ಷಣಗಳು ಕಾಣಿಸುತ್ತಿವೆ~ ಎಂದು ಸಿಐಟಿಯು ಆಟೊ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ತಿಳಿಸಿದರು.

ನಿಧಿ ಸ್ಥಾಪಿಸಬೇಕು
 `ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಮಧ್ಯಮ ವರ್ಗದ ಗ್ರಾಹಕನಿಗೆ ಹೊರೆಯಾಗಲಿದೆ. ತೈಲ ಬೆಲೆಯಲ್ಲಿ ವ್ಯತ್ಯಾಸವಾದಾಗ ಅದನ್ನು ಸರಿದೂಗಿಸಲು ಸ್ಥಾಪಿಸಲಾಗಿದ್ದ ನಿಧಿಯನ್ನು(ಆಯಿಲ್ ಪೋಲ್ ಅಕೌಂಟ್) ಸರ್ಕಾರ ಹಿಂತೆಗೆದುಕೊಂಡಿದೆ. ಆ ನಿಧಿಯನ್ನು ಮತ್ತೆ ಸ್ಥಾಪಿಸಬೇಕು ಹಾಗೂ ವರ್ಷಕ್ಕೆ ಒಮ್ಮೆ ಮಾತ್ರ ತೈಲ ಬೆಲೆ ಏರಿಕೆ ಮಾಡಬೇಕು~ ಎಂದು ನಗರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಗ್ರಾಹಕರ ವೇದಿಕೆ ಅಧ್ಯಕ್ಷ ವಿ.ಎಸ್. ಮೋಹನ್ ಕುಮಾರ್ ಹೇಳಿದ್ದಾರೆ.

ಕೈಗಾರಿಕಾ ವಲಯಕ್ಕೆ ತೊಂದರೆ
`ಕೇಂದ್ರ ಸರ್ಕಾರ ಏಕಾಏಕಿ ಏಳೂವರೆ ರೂಪಾಯಿ ಪೆಟ್ರೋಲ್ ದರ ಹೆಚ್ಚಳ ಮಾಡಿರುವುದರಿಂದ ಯಂತ್ರಗಳ ಚಾಲನೆ, ಸಾಗಣೆ ವೆಚ್ಚ ಸೇರಿದಂತೆ ಕೈಗಾರಿಕಾ ವಲಯಕ್ಕೆ ಖಂಡಿತ ತೊಂದರೆಯಾಗಲಿದೆ.

ಪೆಟ್ರೋಲ್ ದರ ಏರಿಕೆಯಾಗಿದೆ ಎಂದು ಕಾರ್ಮಿಕರಿಗೆ ವೇತನ ಹೆಚ್ಚಳ ಮಾಡಲು ಸಾಧ್ಯವಿಲ್ಲ. ಅಲ್ಲದೇ ಎರಡು ದಿನಗಳಲ್ಲಿ ಸರ್ಕಾರ ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ ಐದು ರೂಪಾಯಿ ಹೆಚ್ಚಳ ಮಾಡುವ ಇಂಗಿತ ವ್ಯಕ್ತಪಡಿಸಿರುವುದು ಆತಂಕ ಸೃಷ್ಟಿಸಿದೆ~ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಫ್‌ಕೆಸಿಸಿಐ) ಯ ಮಾಜಿ ಅಧ್ಯಕ್ಷ ಜಿ. ಕ್ರಾಸ್ತ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT