ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆಯ ಹಿಂದೆ ಸರಿದು ಹೋದ ಸೂಪರ್‌ಸ್ಟಾರ್

Last Updated 18 ಜುಲೈ 2012, 19:30 IST
ಅಕ್ಷರ ಗಾತ್ರ

ಹಲವು ದಿನಗಳಿಂದ ರಾಜೇಶ್‌ಖನ್ನಾ ಅನಾರೋಗ್ಯದ ಬಗ್ಗೆ ಸುದ್ದಿಗಳು ಬಂದಾಗಲೆಲ್ಲಾ ಅಭಿಮಾನಿಗಳು ಆತಂಕಗೊಳ್ಳುತ್ತಿದ್ದರು. ನಮ್ಮ ಕಾಲದ ನಮ್ಮ ಅಭಿಮಾನದ ನಟ ಎಂದೇ ಎಲ್ಲರೂ ಹೇಳುತ್ತಿದ್ದರು. ಅವರನ್ನು ಉತ್ಕಟ ಭಾವನೆಗಳ ಮಹಾರಾಜ ಎಂದೋ, ಪ್ರೀತಿಯ ಪ್ರತೀಕ ಎಂದೋ, ಅಭಿನಯದ ಸಾಮ್ರಾಟ್ ಎಂದೋ ಬಣ್ಣಿಸುವಾಗ ರಾಜೇಶ್ ಖನ್ನಾ ಬಾಲಿವುಡ್‌ನ ಮೊದಲ ಸೂಪರ್‌ಸ್ಟಾರ್ ಆದದ್ದು ಹೇಗೆ ಎಂಬ ಸುಳಿವು ಸಿಕ್ಕಿತು.

1967 ನೇ ಇಸವಿಗೆ ಸ್ವಲ್ಪ ಹೋಗಿಬನ್ನಿ. ಮಹಾರಾಷ್ಟ್ರ ಸರ್ಕಾರ ಚಲನಚಿತ್ರದ ಮನರಂಜನಾ ತೆರಿಗೆಯನ್ನು ಹೆಚ್ಚಿಸಿತು. ಅದನ್ನು ವಿರೋಧಿಸಿ ಬಾಲಿವುಡ್‌ನಲ್ಲಿ ಒಂಬತ್ತು ದಿನಗಳ ಕಾಲ ಚಿತ್ರರಂಗ ಬಂದ್ ನಡೆಸಲಾಯಿತು. ಆಗ ಹಿಂದಿ ಚಿತ್ರಗಳು ಒಂದರ ಹಿಂದೆ ಒಂದರಂತೆ ಸೋಲುತ್ತಿದ್ದವು. ಯಾವುದೇ ನಟನ ಮೇಲೆ ಬಂಡವಾಳ ಹೂಡಿದರೂ ಸಂಪೂರ್ಣ ಗಂಟು ಮುಳುಗಿಹೋಗುತ್ತಿತ್ತು. ಬರಗಾಲದಲ್ಲಿ ಅಧಿಕಮಾಸವೆಂಬಂತೆ ಇದೇ ಸಮಯದಲ್ಲಿ ಸರ್ಕಾರ ತೆರಿಗೆಯನ್ನು ಏರಿಸಿದರೆ ಏನಾಗುತ್ತದೆ? ಸರ್ಕಾರ ಬಂದ್‌ಗೆ ಹೆದರಿ, ಸ್ವಲ್ಪ ಪ್ರಮಾಣದ ರಿಯಾಯಿತಿಯನ್ನೇನೋ ನೀಡಿತು. ಆದರೆ ಅದರಿಂದ ಚಿತ್ರರಂಗಕ್ಕೆ ಏನೂ ಪ್ರಯೋಜನವಾಗಲಿಲ್ಲ. ಉದ್ಯಮದಲ್ಲಿ ಹಿರೋಗಳೆಲ್ಲಾ ಕಳಾಹೀನರಾಗಿ, ಜನ ಚಲನಚಿತ್ರಗಳಿಂದ ದೂರವಾಗತೊಡಗಿದರು. ದಿಲೀಪ್‌ಕುಮಾರ್, ದೇವಾನಂದ್, ಶಮ್ಮಿ ಕಪೂರ್, ರಾಜ್‌ಕಪೂರ್ ಮುಂತಾದ ಹೀರೋಗಳನ್ನೆಲ್ಲಾ ವಯಸ್ಸಾದವರು ಎಂಬ ಹಣೆಪಟ್ಟಿ ಕಟ್ಟಿ ಪ್ರೇಕ್ಷಕರು ಸಾರಾಸಗಟಾಗಿ ತಳ್ಳಿಹಾಕಿದ್ದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಆದರೂ ಬಾಲಿವುಡ್ ನಿರ್ಮಾಪಕರಿಗೆ ಇವರನ್ನು ಬಿಡಲಾಗದ ಪರಿಸ್ಥಿತಿ. ಹೊಸಬರು ಕಾಣುತ್ತಲೆ ಇಲ್ಲ. ಈ ದ್ವಂದ್ವದಲ್ಲಿ ಚಿತ್ರರಂಗ ಆರ್ಥಿಕವಾಗಿ ಕುಸಿದುಹೋಗಿತ್ತು. ಹೊಸಮುಖಗಳಿಗಾಗಿ ಪ್ರೇಕ್ಷಕರು ತವಕಿಸುತ್ತಿದ್ದರು. ನಿರ್ಮಾಪಕರು ಚಿತ್ರರಂಗ ಚೇತರಿಸಿಕೊಳ್ಳುವಂತಹ ಒಂದು ಮಿಂಚಿಗಾಗಿ ಕಾಯುತ್ತಿದ್ದರು.

ಚಿತ್ರರಂಗದಲ್ಲಿ ಇಂತಹ ನಿರ್ವಾತ ಪರಿಸ್ಥಿತಿ ತಲೆದೋರಿದ್ದ ಸಮಯದಲ್ಲಿ ಉದಯಿಸಿ, ಇಡೀ ಚಿತ್ರರಂಗದಲ್ಲಿ ಹೊನ್ನಿನ ಮಳೆಯನ್ನೇ ಹರಿಸಿದ ಖ್ಯಾತಿ ರಾಜೇಶ್ ಖನ್ನಾ ಅವರದು. 1966 ರಲ್ಲಿ `ಆಖ್ರಿ ಖತ್~ ಚಿತ್ರದ ಮೂಲಕ ನಾಯಕನಾಗಿ ಉದಯಿಸಿದರೂ, ಶಕ್ತಿ ಸಾಮಂತರ `ಆರಾಧನಾ~ (1969) ಚಿತ್ರ ಬಂದದ್ದೇ ತಡ, ಇಡೀ ದೇಶದಲ್ಲಿ ಚಂಡಮಾರುತವೇ ಬೀಸಿದಂತಾಯಿತು. ರಾಜೇಶ್ ಖನ್ನಾ ದ್ವಿಪಾತ್ರದಲ್ಲಿ ತಂದೆ -ಮಗನಾಗಿ ಅಭಿನಯಿಸಿದ್ದರು. ತನ್ನದೇ ಆದ ವಿಶೇಷ ಕೇಶ ಶೈಲಿ (ಇದು ಬಹಳ ಕಾಲ ರಾಜೇಶ್ ಖನ್ನಾ ಸ್ಟೈಲ್ ಎಂದೇ ಹೆಸರಾಯಿತು), ಕುರ್ತಾ, ಡೈಲಾಗ್ ಹೇಳುವ ವಿಚಿತ್ರ ವೈಖರಿ, ಆಕರ್ಷಕ ರೂಪ ಇವೆಲ್ಲ ಒಮ್ಮೆಲೆ ಯುವಜನರಲ್ಲಿ ಹುಚ್ಚು ಎಬ್ಬಿಸಿದುವು. `ಆರಾಧನಾ~ ವರ್ಷಗಟ್ಟಳೆ ಪ್ರದರ್ಶನಗೊಂಡು ಹಿಂದಿ ಚಿತ್ರರಂಗಕ್ಕೆ ಇನ್ನಿಲ್ಲದ ಚೇತರಿಕೆ ನೀಡಿತು. ಈ ಚಿತ್ರದ ಎಲ್ಲ ಹಾಡುಗಳೂ ಸೂಪರ್‌ಹಿಟ್ ಆದುವು. ದೇಶದ ಉದ್ದಗಲಕ್ಕೂ ಈ ಚಿತ್ರದ ಹಾಡುಗಳು ಕಾಲೇಜು ಹುಡುಗ-ಹುಡುಗಿಯರ ತುಟಿಗಳಲ್ಲಿ ಗುಣುಗುಣಿಸಿದುವು. ಒಂದೇ ಚಿತ್ರದಲ್ಲಿ ರಾಜೇಶ್ ಖನ್ನಾ ಸೂಪರ್‌ಸ್ಟಾರ್ ಎನಿಸಿಕೊಂಡು ಬಿಟ್ಟರು. ರಾಜೇಶ್ ಖನ್ನಾ ಅಂದರೆ ಒಂದು ರೀತಿಯ ಸಮೂಹ ಸನ್ನಿ ಆರಂಭವಾದದ್ದೇ ತಡ, ಅವರ ಮನೆಯ ಮುಂದೆ ನಿರ್ಮಾಪಕರು ಸಾಲುಗಟ್ಟಿ ನಿಂತರು.

ಈ ರಭಸದಲ್ಲಿ 1969 ರಿಂದ 1972 ರವರೆಗೆ ಅಂದರೆ ನಾಲ್ಕೇ ವರ್ಷಗಳಲ್ಲಿ ಸತತವಾಗಿ 15 ಸೂಪರ್‌ಹಿಟ್ ಚಿತ್ರಗಳು ಅವರ ಖಾತೆಗೆ ಸೇರಿದವು. ಇಂತಹ ವೇಗದ ದಾಖಲೆ ಇದುವರೆಗೆ ಇನ್ನಾವ ನಟನ ಪಾಲಿಗೂ ಸಿಕ್ಕಿಲ್ಲ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸೂಪರ್‌ಸ್ಟಾರ್‌ಗಳು ಇದ್ದರು.

ಎಂಜಿಆರ್ ಅವರಂತಹ ನಟರಿಗಾಗಿ ಜನ ಎಂತಹ ತ್ಯಾಗಕ್ಕೂ ಸಿದ್ಧರಾಗಿದ್ದರು. ಅವರನ್ನು ನೋಡಲು  ಜನ ಹಿಂಡುಹಿಂಡಾಗಿ ಬರುತ್ತಿದ್ದರು. ಉತ್ತರ ಭಾರತದಲ್ಲಿ ನಟರಿಗೆ ಈ ರೀತಿಯ ಅಭಿಮಾನಿಗಳ ವರ್ತನೆ ಆ ಸಮಯದಲ್ಲಿ ಹೊಸದಾಗಿತ್ತು. ರಾಜೇಶ್ ಖನ್ನಾ ಅವರ ಭಾವಚಿತ್ರವನ್ನೇ ಮದುವೆಯಾಗುವ ಹುಡುಗಿಯರ ಸುದ್ದಿ ಅಲ್ಲಲ್ಲಿ ಕೇಳಿಬರುತ್ತಿತ್ತು. ರಕ್ತದಲ್ಲಿ ಬರೆದ ಪತ್ರದ ಮೂಲಕ ಪ್ರೇಮನಿವೇದನೆ ಮಾಡಿಕೊಳ್ಳುವ ಹುಡುಗಿಯರಿಗೇನೂ ಕಡಿಮೆಯಿರಲಿಲ್ಲ.  ಅವರು ತಂಗಿದ್ದ ಹೋಟೆಲಿಗೆ ಸಮಯದ ಪರಿವೆಯೇ ಇಲ್ಲದೆ ಹುಡುಗಿಯರು ನುಗ್ಗುತ್ತಿದ್ದರು. ಯುವಜನ ಆಗ ಹುಚ್ಚೆದ್ದಿದ್ದರು. ಇಂತಹ ಹುಚ್ಚನ್ನು ಕಂಡು ಬಿಬಿಸಿ ರಾಜೇಶ್ ಖನ್ನಾ ಅವರನ್ನು ಕುರಿತೇ `ಬಾಂಬೆ ಸೂಪರ್‌ಸ್ಟಾರ್~ ಎಂಬ ಕಿರು ಸಾಕ್ಷ್ಯಚಿತ್ರವನ್ನೇ ತಯಾರಿಸಿತ್ತು. ಮುಂಬೈ ವಿಶ್ವವಿದ್ಯಾನಿಲಯ ಪಠ್ಯಪುಸ್ತಕದಲ್ಲಿ `ರಾಜೇಶ್‌ಖನ್ನಾ ವರ್ಚಸ್ಸು~ ಎಂಬ ಪಾಠವನ್ನು ಸೇರಿಸಿತು. ಆ ಸಮಯದಲ್ಲಿ `ಖಾಮೋಷಿ~, `ಕಟಿಪತಂಗ್~, `ಆನಂದ್~, `ಅಮರಪ್ರೇಮ್~, `ಹಾಥಿ ಮೇರೆ ಸಾಥಿ~, `ಇತ್ತೇಫಾಕ್~, `ರಾಜ್~, `ಬಹಾರೊಂಕೆ ಸಪ್ನೆ~...ಮೊದಲಾದ ಚಿತ್ರಗಳೆಲ್ಲಾ ದಾಖಲೆಗಳೇ. ರಾಜೇಶ್ ಖನ್ನಾ ಅವರ ಖ್ಯಾತಿಯಲ್ಲಿ ಕಿಶೋರ್ ಕುಮಾರ್ ಅವರ ದನಿಯೂ ಸಾಥಿಯಾಗಿತ್ತು ಎನ್ನುವುದನ್ನು ಮರೆಯುವಂತೆಯೇ ಇಲ್ಲ. `ಆರಾಧನಾ~ ಚಿತ್ರದಿಂದಲೇ ಈ ಜೋಡಿ ಬಹಳ ಚೆನ್ನಾಗಿ ಹೊಂದಾಣಿಕೆಯಾದದ್ದೇ ಚಿತ್ರದ ಅಪಾರ ಯಶಸ್ಸಿಗೆ ಕಾರಣವಾಯಿತು. ರಾಜೇಶ್ ಖನ್ನಾ ಅವರ ಬಹುತೇಕ ಚಿತ್ರಗಳಲ್ಲಿ ಮಧುರ ಹಾಡುಗಳೂ ಅದರ ಗೆಲುವಿಗೆ ಕಾರಣವಾಗಿದ್ದವು. ಹೀಗಾಗಿ ಖನ್ನಾ ಅವರನ್ನು ಚಿತ್ರ ಜಗತ್ತಿನ ನೂರು ವರ್ಷಗಳ ಇತಿಹಾಸದಲ್ಲಿ ಬಾಲಿವುಡ್ ಕಂಡ ಮೊದಲ ಸೂಪರ್‌ಸ್ಟಾರ್ ಎಂದು ಚಲನಚಿತ್ರ ಇತಿಹಾಸಕಾರರು ನಮೂದಿಸುತ್ತಾರೆ. ಅವರು ಹಾಕಿದ ಮೋಡಿ ನೋಡಿದರೆ ಅವರನ್ನು ಸೂಪರ್‌ಸ್ಟಾರ್ ಎಂದು ಕರೆಯಲು ಅಡ್ಡಿಯಿಲ್ಲ. ಆದರೆ ಮೊದಲ ಸೂಪರ್ ಸ್ಟಾರ್ ಹೌದೋ ಅಲ್ಲವೋ ಎನ್ನುವುದನ್ನು ಸ್ವಲ್ಪ ನಿಧಾನವಾಗಿ ನಿರ್ಧರಿಸಬೇಕಾಗಬಹುದೇನೋ.

ಅಮೃತಸರ ಮೂಲದ ದಾರಾಸಿಂಗ್ ಮೊನ್ನೆಮೊನ್ನೆಯಷ್ಟೇ ನಿಧನರಾದರು. ರಾಜೇಶ್ ಖನ್ನಾ ಕೂಡಾ ಅಮೃತಸರದವರೇ. ಜತಿನ್ ಖನ್ನಾ ಎನ್ನುವ ಹೆಸರಿನಲ್ಲಿ ಬಾಲ್ಯ ಕಳೆದರು ಚುನ್ನಿಲಾಲ್ ಖನ್ನಾ ಅವರ ದತ್ತು ಮಗನಾಗಿ ಗಿರ್‌ಗಾಂವ್‌ಗೆ ಬಂದು ಶಾಲಾ ದಿನಗಳಲ್ಲಿ ನಾಟಕ, ಪ್ರತಿಭಾ ಪ್ರದರ್ಶನ, ಸಿನಿಮಾ ಸೇರುತ್ತೇನೆ ಎಂದಾಗ ಪೋಷಕರೇ ಬದಲಿಸಿದ ಹೆಸರು ರಾಜೇಶ್ ಖನ್ನಾ.

ಖನ್ನಾ ಸೂಪರ್‌ಸ್ಟಾರ್ ಆದ ಮೂರುವರ್ಷದ ನಂತರ ಅಮಿತಾಬ್‌ಬಚ್ಚನ್ ಮತ್ತೊಬ್ಬ ಸೂಪರ್‌ಸ್ಟಾರ್ ಆಗಿ ಉದಯಿಸಿದರು. ಅಮಿತಾಬ್ ಬಚ್ಚನ್ ಜೊತೆ ಅಭಿನಯಿಸಿದ ಚಿತ್ರಗಳಲ್ಲೂ ಇಬ್ಬರದೂ ಒಬ್ಬರಿಗಿಂತ ಒಬ್ಬರದು ಮಿಗಿಲಾದ ಅಭಿನಯ. `ಹಾಥಿ ಮೇರೆ ಸಾಥಿ~ ಚಿತ್ರದ ಹೆಸರು ಯಾರು ಕೇಳಿಲ್ಲ?. ಎಲ್ಲ ಚಿತ್ರಗಳ ಗಲ್ಲಾಪೆಟ್ಟಿಗೆ ದಾಖಲೆಗಳನ್ನು ಚಿಂದಿಮಾಡಿದ ಚಿತ್ರ. ಈ ಚಿತ್ರಕ್ಕೆ ಚಿತ್ರಕಥೆ ಬರೆಯುವಂತೆ ಸಲೀಂ-ಜಾವೆದ್ ಅವರನ್ನು ಪ್ರೊತ್ಸಾಹಿಸಿ ಸೂಪರ್‌ಹಿಟ್ ಆಗಲು ಕಾರಣರಾದದ್ದು ರಾಜೇಶ್‌ಖನ್ನಾ. 1991 ರಲ್ಲಿ ನವದೆಹಲಿ ಕ್ಷೇತ್ರದಿಂದ  ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭೆಗೆ ಆಯ್ಕೆಯಾಗಿದ್ದರು. ಆ ವೇಳೆಗೆ ಅವರು ಚಿತ್ರರಂಗದಲ್ಲಿ ಎಲ್ಲರ ಪಾಲಿಗೂ `ಕಾಕಾ~ ಎಂದೇ ಪ್ರಿಯರಾಗಿದ್ದರು.

ಒಂದು ತಿಂಗಳಿಂದ ಅವರು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆ ಸೇರುವುದು, ಮರುದಿನವೇ ಮನೆಗೆ ಹೋಗುವುದು ಈ ದೃಶ್ಯಗಳನ್ನು ನೋಡಿನೋಡಿ ಮರುಗದ ಅಭಿಮಾನಿಗಳಿಲ್ಲ. ಈ ಎಲ್ಲ ಸಮಯದಲ್ಲೂ ಅವರೊಂದಿಗೆ ಇದ್ದವರು ಅವರ ತಾರಾಪತ್ನಿ ಡಿಂಪಲ್ ಕಪಾಡಿಯಾ. ಶರ್ಮಿಳಾ ಟ್ಯಾಗೋರ್, ಮುಮ್ತಾಜ್, ಆಶಾ ಪರೇಖ್, ಟೀನಾ, ಹೇಮಾ ಮಾಲಿನಿ ಇವರೆಲ್ಲಾ ರಾಜೇಶ್‌ಗೆ ತೆರೆಯ ಮೇಲೆ ಜನಪ್ರಿಯ ನಾಯಕಿಯರೇ ಆಗಿದ್ದರು. ಆದರೆ ನಿಜ ಜೀವನದಲ್ಲಿ ರಾಜೇಶ್ ಖನ್ನಾ ದಾಂಪತ್ಯ ಜೀವನ ಅಷ್ಟೇನೂ ಸುಗಮವಾಗಿದ್ದಂತೆ ಅನ್ನಿಸುವುದಿಲ್ಲ. ಫ್ಯಾಷನ್ ಡಿಸೈನರ್ ಆಗಿದ್ದ ಅಂಜು ಮಹೇಂದ್ರ ಅವರ ಪ್ರೇಮಪಾಶದಲ್ಲಿ ಬಂದಿಯಾಗಿದ್ದ ರಾಜೇಶ್‌ಖನ್ನಾ ಅರವತ್ತರ ದಶಕದಲ್ಲಿ ಅವರೊಂದಿಗೆ ಏಳು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದರು. ಇಬ್ಬರೂ ಬೇರೆ ಬೇರೆ ಆದ ಮೇಲೆ ಹದಿನೇಳು ವರ್ಷಗಳ ಕಾಲ ಅವರಿಬ್ಬರೂ ಪರಸ್ಪರ ಮುಖ ಕೂಡ ನೋಡಲಿಲ್ಲವಂತೆ. ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿದ್ದ ರಾಜೇಶ್ ಖನ್ನಾ ಅವರನ್ನು ಅಂಜು ಬಂದು ನೋಡಿಕೊಂಡು ಹೋದರಂತೆ. 1973 ರಲ್ಲಿ `ಬಾಬ್ಬಿ~ ಚಿತ್ರದ ಮೂಲಕ ಡಿಂಪಲ್ ಕಪಾಡಿಯಾ ಚಿಗುರುತಾರೆಯಾಗಿ ಉದಯಿಸಿದರು. ತನಗಿಂತ 16 ವರ್ಷ ಚಿಕ್ಕವಳಾದ ಡಿಂಪಲ್‌ಳನ್ನು ರಾಜೇಶ್‌ಖನ್ನಾ ಮದುವೆಯಾದರು. 1984 ರವರೆಗೆ ಇವರಿಬ್ಬರ ದಾಂಪತ್ಯ ಜೀವನ ಚೆನ್ನಾಗಿಯೇ ಇತ್ತು. ಆನಂತರ ಇಬ್ಬರೂ ಬೇರೆಬೇರೆಯಾಗಿ ಬದುಕಲಾರಂಭಿಸಿದರು. ಸಿನಿಮಾ ನಟರ ಜೀವನದಲ್ಲಿ ಇದೆಲ್ಲಾ ಸಹಜ. ಏಕೆ ಬೇರೆಯಾಗುತ್ತಾರೆ, ಏಕೆ ಒಂದಾಗುತ್ತಾರೆ ಎನ್ನುವುದು ಅರ್ಥವೇ ಆಗುವುದಿಲ್ಲ. 1980 ರಲ್ಲಿ ಟೀನಾ ಮುನಿಮ್ ಜೊತೆ ಖನ್ನಾ ಇದ್ದಾರೆ ಎನ್ನುವ ಗಾಸಿಪ್ ಇತ್ತು. ಟೀನಾ, ರಾಜೇಶ್‌ಖನ್ನಾ ಅವರನ್ನು ಬಿಟ್ಟು ಅಂಬಾನಿ ಜೊತೆ ಹೋದ ನಂತರ, ಡಿಂಪಲ್ ಮತ್ತೆ ರಾಜೇಶ್ ತೆಕ್ಕೆಗೆ ಬಂದರು. ರಾಜೇಶ್ ಸ್ಟಾರ್‌ಗಿರಿ ಆಕಾಶದಿಂದ ಭೂಮಿಗೆ ಇಳಿದ ಸಮಯದಲ್ಲಿ ಅವರ ಸ್ವಂತ ನಿರ್ಮಾಣದಲ್ಲಿ ತೊಡಗಿದರು. ಅವರದೇ ಸ್ವಂತ ತಯಾರಿಕೆ “ಜೈ ಶಿವಶಂಕರ್‌” ಚಿತ್ರಕ್ಕೆ ಡಿಂಪಲ್ ದುಡಿದರು. ರಾಜೇಶ್ ಖನ್ನಾ ಅವರ ನಿಧನದೊಂದಿಗೆ ಹಿಂದಿ ಚಿತ್ರರಂಗದ ವರ್ಣರಂಜಿತ ಸೂಪರ್‌ಸ್ಟಾರ್ ಯುಗವೊಂದು ಅಂತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT