ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಜಸ್ವಿ ಕಥೆಗಳ ವಿಸ್ಮಯರಂಗ

Last Updated 5 ಜುಲೈ 2012, 19:30 IST
ಅಕ್ಷರ ಗಾತ್ರ

ಪತ್ರಿಕೋದ್ಯಮದ ದಿಕ್ಕನ್ನೇ ಬದಲಿಸಿದ ಹೆಮ್ಮೆಯ ಪತ್ರಕರ್ತರಾದ ಪಿ. ಸಾಯಿನಾಥರು ಮೊನ್ನೆಮೊನ್ನೆಯಷ್ಟೆ ತಮ್ಮ ಅನುವಾದಿತ ಪುಸ್ತಕವೊಂದರ ಬಿಡುಗಡೆಗೆ ಬಂದಿದ್ದರು. ಕನ್ನಡ ಪತ್ರಿಕೋದ್ಯಮದ ಹಿರಿಯ ಬರಹಗಾರರಾದ ನಾಗೇಶ ಹೆಗಡೆಯವರು ಅವರನ್ನು ಪರಿಚಯಿಸುತ್ತ ಅವರು ಹಿಂದೆ ತಮಗೆ ಹೇಳಿದ್ದ ಮಾತನ್ನು ನೆನಪಿಸಿಕೊಂಡರು. ಮುಖ್ಯವಾಹಿನಿಯ ಪ್ರಮುಖ ಪತ್ರಿಕೆಗಳು ಲೇಖನವನ್ನು ಪ್ರಕಟಿಸದೇ ತಿರಸ್ಕರಿಸಿದಾಗ ಧೃತಿಗೆಡದೆ ಸಣ್ಣಸಣ್ಣ ಪತ್ರಿಕೆಗಳಿಗೆ ಕಳುಹಿಸಿ ಪ್ರಕಟಿಸಬೇಕು.

ಇತ್ತೀಚೆಗೆ ನೋಡಿದ ರಂಗವಿಸ್ಮಯ ತಂಡ ಅಭಿನಯಿಸಿದ ತೇಜಸ್ವೀ `ಪರಿಸರ ಲೋಕ~ ಎಂಬ ಪ್ರಯೋಗವನ್ನು ನೋಡಿದ ನಂತರ ಆ ಮಾತಿನ ವ್ಯಾಪ್ತಿ ಬರೀ ಪತ್ರಿಕಾವಲಯಕ್ಕಷ್ಟೆ ಅಲ್ಲದೆ ಸಿನಿಮಾ, ರಂಗಭೂಮಿಯ ವಲಯಕ್ಕೂ ತುಂಬಾ ಪ್ರಸ್ತುತ ಎನಿಸುತ್ತಿದೆ.

ಸಿನಿಮಾ ಕ್ಷೇತ್ರದಲ್ಲಾದರೆ, ಅದರಲ್ಲೂ ಹಿಂದಿ ಸಿನಿಮಾಕ್ಷೇತ್ರದಲ್ಲಿ ಒಂದು ಕಡೆ ದೊಡ್ಡ ತಾರಾಗಣದ ಬಹುಕೋಟಿ ವೆಚ್ಚದ ಅದ್ದೂರಿ ಸಿನಿಮಾಗಳು ಎಗ್ಗಿಲ್ಲದೆ ತಯಾರಾಗುತ್ತಿದ್ದರೆ, ಮತ್ತೊಂದು ಕಡೆ ಸಾಮಾಜಿಕ ಕಳಕಳಿಯ ಕಡಿಮೆವೆಚ್ಚದ ಮಧ್ಯಮ ತಾರಾಗಣದ ಚಿತ್ರಗಳೂ ತಯಾರಾಗಿ ಜನರ ಮನ ಗೆಲ್ಲುತ್ತಿರುವುದು ವಿಶೇಷವಷ್ಟೇ ಅಲ್ಲ, ಆರ್ಥಿಕವಾಗಿಯೂ ತಾರ್ಕಿಕವಾಗಿಯೂ ಗೆಲ್ಲುತ್ತಿವೆ. ಹೀಗೆ ಅವು ಒಂದು ನಮೂನೆಯ ಸೇತುವೆಯ ಕೆಲಸವನ್ನು ಮಾಡುತ್ತ ಜನರ ಅಭಿರುಚಿಯನ್ನು, ಅವರ ಯೋಚನಾ ಪ್ರವೃತ್ತಿಯನ್ನು ಹರಿತಗೊಳಿಸುತ್ತಿವೆ.

ಆದರೆ ಕನ್ನಡದ ಮಟ್ಟಿಗೆ ಇದು ತೀರಾ ಕಠಿಣವಾಗಿದೆ. ಒಂದೋ, ತೀರಾ ಕಲಾತ್ಮಕವಾಗಿ ಜನರೇ ನೋಡದ ಚಿತ್ರಗಳು ಒಂದು ಕಡೆಯಾದರೆ, ಯಾವ ತಾರ್ಕಿಕತೆಯೂ ಇಲ್ಲದೆ ಸುಮ್ಮನೆ ಹುಸಿ ರೀಲು ಸುತ್ತುವ ಬಹುಕೋಟಿ ಚಿತ್ರಗಳು ಮತ್ತೊಂದೆಡೆ. ಇದೆಲ್ಲ ಸಿನಿಮಾಕ್ಷೇತ್ರದ ಪಾಡಾದರೆ, ರಂಗಭೂಮಿಯಲ್ಲೂ ಕೂಡ ಈ ರೀತಿಯ ದ್ವಂದ್ವಮಾರ್ಗಗಳನ್ನು ಸೂಕ್ಷ್ಮವಾಗಿ ಗುರುತಿಸಿಬಹುದು. ಒಂದು ಕಡೆ ಬಹುನಟವರ್ಗ, ಹಲವು ವರ್ಷಗಳಿಂದ ಬೇರೂರಿದ ರಂಗತಂಡಗಳು, ಪ್ರಸಿದ್ಧ ನಾಟಕಕಾರರು, ಲೇಖಕರು ಬರೆದ, ಪ್ರಸಿದ್ಧ ನಿರ್ದೇಶಕರು ನಿರ್ದೇಶಿಸಿದ, ದೊಡ್ಡದೊಡ್ಡ ರಂಗಸಜ್ಜಿಕೆಯ, ಭಾರೀ ಪ್ರಚಾರದ, ರಾಜಧಾನಿಯ ಆಯಕಟ್ಟಿನ ಜಾಗಗಳಲ್ಲಿ ಪ್ರದರ್ಶನವಾಗುವ, ಸರ್ಕಾರದ ಅಲ್ಪಸ್ವಲ್ಪ ಅನುದಾನದಿಂದ ಮಾಡುವ ನಾಟಕಗಳು. ಇನ್ನೊಂದು ಕಡೆ ತಮ್ಮದೇ ಸಣ್ಣ ಸಣ್ಣ ತಂಡ ಕಟ್ಟಿಕೊಂಡು ಯಾವ ದೊಡ್ಡದೊಡ್ಡ ನಾಟಕಕ್ಕೂ ಕೈಹಾಕದೇ, ಬೆಂಗಳೂರಿನಿಂದ ಹೊರಗೆ ನಿಂತು ಬೇರೆಬೇರೆ ಪ್ರೇಕ್ಷಕರನ್ನು ತಲುಪಲು ಹವಣಿಸುವ ತಂಡ ಹಾಗೂ ನಾಟಕಗಳು. ಇವು ರಾಜ ಮಾರ್ಗಗಳನ್ನು ತೊರೆದು ಒಳಮಾರ್ಗದ ಮೂಲಕ ಜನರನ್ನು ತಲುಪಲು ಹೊರಟ ತಂಡ ಹಾಗೂ ನಾಟಕಗಳು. ಸಾಯಿನಾಥರು ಉಲ್ಲೇಖಿಸಿದ್ದು ಬಹುಶಃ ಈ ರೀತಿಯ ಒಳಮಾರ್ಗದ ಪತ್ರಿಕೋದ್ಯಮವೇ ಎಂದು ಕಾಣುತ್ತದೆ.

ರಂಗವಿಸ್ಮಯ ತಂಡದ ತೇಜಸ್ವಿ ಪರಿಸರ ಲೋಕ ಎಂಬ ಪ್ರಯೋಗವನ್ನು ನೋಡುವಾಗ ಈ ರೀತಿಯ ಒಳಮಾರ್ಗದ ರಂಗಭೂಮಿಯ ಕುರುಹು ಕಂಡಿದ್ದರಿಂದ ಇಷ್ಟೆಲ್ಲ ಹೇಳಬೇಕಾಯಿತು. ತೇಜಸ್ವಿಯವರ ಬಹುಪ್ರಸಿದ್ಧ ಪರಿಸರದ ಕತೆಗಳು ಸಂಕಲನದಿಂದ ಆಯ್ದ ಕತೆಗಳನ್ನು ನಾಟಕ ಎನ್ನುವುದಕ್ಕಿಂತ ರಂಗರೂಪವನ್ನಾಗಿ ಮಾಡಿ ನಿರ್ದೇಶಿಸಿಸುವುದರ ಜೊತೆಗೆ ಕತೆಗಾರ ತೇಜಸ್ವಿಯ ಪಾತ್ರದಲ್ಲಿ ಅಭಿಯಿಸಿದವರು ಅ. ನಾ. ರಾವ್ ಜಾದವ್. ತೇಜಸ್ವಿಯವರ ನಿಕಟ ಸಂಪರ್ಕದಲ್ಲಿದ ಜಾದವ್ ಈಗಾಗಲೇ ಅವರ `ಕಿರಗೂರಿನ ಗಯ್ಯೊಳಿಗಳು~, `ಕರ್ವಾಲೊ~ ಕೃತಿಗಳನ್ನು ರಂಗಕ್ಕೆ ತಂದಿದ್ದಾರೆ. ಅಲ್ಲದೆ ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿವೆ.

ಪ್ರಯೋಗದಲ್ಲಿ ಬಹುತೇಕ ಹೊಸ ಹೊಸ ಹುಡುಗರನ್ನೇ ಬಳಸಿಕೊಂಡು ಅವರಿಗೆಲ್ಲ ರಂಗಭೂಮಿಯ ಪ್ರಾಥಮಿಕ ಪಾಠಗಳನ್ನು ಹೇಳಿಕೊಡುವುದರ ಮೂಲಕ ನಾಟಕ ಕಟ್ಟಿದ್ದಾರೆ. ಬಹುತೇಕ ಎಲ್ಲ ಹುಡುಗರಿಗೂ ಇದು ಮೊದಲ ಯತ್ನ. ಆಡಂಬರವಿಲ್ಲದ ರಂಗಸಜ್ಜಿಕೆ, ಬರೀ ಒಂದು ಬಾಗಿಲ ಚೌಕಟ್ಟು, ಎರಡು ಬಾಕ್ಸುಗಳನ್ನು ಬಳಸಿಕೊಂಡು ಬರೀ ರಂಗಪಠ್ಯದ ಮೂಲಕವೇ ಪ್ರಯೋಗವನ್ನು ಯಶಸ್ವಿಯಾಗಿ ಕಟ್ಟಿದ್ದಾರೆ. ಆದರೆ ರಂಗಸಜ್ಜಿಕೆ ಎನ್ನುವುದು ಬರೀ ಕನಿಷ್ಠವಾಗಿರದೆ ಅದಕ್ಕೊಂದು ಸೌಂದರ್ಯಾತ್ಮಕವಾದ ಗುಣವಿಶೇಷತೆಗಳು ಹಾಗೂ ನಟರ ಸಹಚರ್ಯೆ ದಕ್ಕದಿದ್ದರೆ ಅವು ಕೇವಲ ಮರದ ಕಟ್ಟಿಗೆಗಳಾಗುತ್ತವೆ. ಪ್ರಯೋಗಕ್ಕೆ ಮಾಡಿಕೊಂಡ ರಂಗಪಠ್ಯ ನಿಜಕ್ಕೂ ಸಮಂಜಸವಾಗಿತ್ತು.
ಅದಕ್ಕೆ ಮುಖ್ಯ ಕಾರಣ ತೇಜಸ್ವಿಯವರ ಪರಿಸರದ ಕತೆಗಳಲ್ಲಿನ ನಾಟಕೀಯತೆ. ಆದರೆ ಇಂತಹ ನಾಟಕೀಯತೆಯನ್ನು ಆಂಗಿಕಾಭಿನಯವಿಲ್ಲದೆ ಬರಿದೇ ವಾಚಿಕದ ಮೂಲಕವೇ ಮುಟ್ಟಿಸಲು ಬರುವುದಿಲ್ಲ. ಬೆಳಕು ಮತ್ತು ಧ್ವನಿಯ ನಿರ್ವಹಣೆ ಸೃಷ್ಟಿಸಿದ ಆಭಾಸಕ್ಕೆ ಪ್ರೇಕ್ಷಕನಿಗೆ ಸಬೂಬು ಹೇಳಲು ಬರುವುದಿಲ್ಲ. ನಟರೆಲ್ಲ ಹೊಸಬರೇ ಆದ್ದರಿಂದ ಈ ರೀತಿಯ ಯಡವಟ್ಟುಗಳು ಸಹಜ. ಇದಕ್ಕೆಲ್ಲ ಇರುವ ಏಕೈಕ ಪರಿಹಾರವೆಂದರೆ ಹತ್ತು ಹಲವು ನಾಟಕಗಳನ್ನು ನೋಡುವುದರ ಮೂಲಕ, ಅಭಿನಯ ಕಮ್ಮಟಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಕಲಿಯುತ್ತಾ ಹೋಗುವುದು.

ಇಷ್ಟಾಗಿಯೂ ಒಬ್ಬರೇ ಕುಳಿತು ಓದಿಕೊಂಡಾಗಲೂ ನಗು ತರಿಸುವ ತೇಜಸ್ವಿಯವರ ಕಥಾಸನ್ನಿವೇಶಗಳನ್ನು ಸವಿಯಲು ಒಮ್ಮೆ ಈ ಪ್ರಯೋಗವನ್ನು ನೋಡಬಹದು. ಪರಿಸರ ಮತ್ತು ವೈಜ್ಞಾನಿಕ ಸಾಹಿತ್ಯವೇ ಕಡಿಮೆಯಾಗುತ್ತಿರುವ ಕಾಲದಲ್ಲಿ ನಾಟಕ ಪ್ರಯೋಗಗಳಂತೂ ದೂರದ ಮಾತೇ ಆಯಿತು. ರಂಗ ವಿಸ್ಮಯವು ಇಂಥ ವಿಷಯಕ್ಕೆ ಸಂಬಂಧಪಟ್ಟ ನಾಟಕ ಪ್ರಯೋಗಗಳನ್ನೇ ಹೆಚ್ಚುಹೆಚ್ಚು ಆಸ್ಥೆ ವಹಿಸಿ ಮಾಡುವುದಾದರೆ ರಂಗಭೂಮಿಗೆ ಹೊಸ ಮಜಲು ತರಲು ಸಾಧ್ಯವಾದೀತು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT