ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೌಡನಹಳ್ಳಿ ಎಂಬ ಕಲಾವಿದರ ಗ್ರಾಮ!

Last Updated 13 ಜುಲೈ 2013, 10:47 IST
ಅಕ್ಷರ ಗಾತ್ರ

ಗೌರಿಬಿದನೂರು ತಾಲ್ಲೂಕು ಚಿಂತಲಪಲ್ಲಿ ಗ್ರಾಮದಲ್ಲಿ ಯಾರದ್ದೇ ಮನೆ ಬಾಗಿಲು ತಟ್ಟಿದರೂ ಸಂಗೀತಗಾರರ ಧ್ವನಿ ಕೇಳಿ ಬರುತ್ತದೆ ಎಂಬ ಮಾತಿದೆ.

ಧಾರವಾಡದಲ್ಲಿ ಯಾರ ಮನೆಗೆ ಕಲ್ಲು ಬೀಸಿದರೂ ಅಲ್ಲಿ ಸಾಹಿತಿಗಳು ವಾಸವಿರುತ್ತಾರೆ ಎಂಬುದು ವಾಡಿಕೆ. ಅದೇ ರೀತಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಹೊರವಲಯದಲ್ಲಿ ತೌಡನಹಳ್ಳಿ ಎಂಬ ಪುಟ್ಟ ಗ್ರಾಮವಿದೆ. ಇಲ್ಲಿ ಯಾರದ್ದೇ ಮನೆಯ ಗೋಡೆ ಬಳಿ ಹೋಗಿ ಸ್ವಲ್ಪ ಪಿಸುಗುಟ್ಟಿದರೂ ಅದು ಕಲಾವಿದರ ಮನೆಯಾಗಿರುತ್ತದೆ. `ನಾಟಕ, ನೃತ್ಯ, ಕಲೆ, ಕಲಾವಿದ' ಎಂಬ ವಿಷಯ ಪ್ರಸ್ತಾಪವಾದರೆ ಸಾಕು, ಒಂದೊಂದು ಮನೆಯಿಂದ ಒಬ್ಬರು ಅಥವಾ ಇಬ್ಬರು ಕಲಾವಿದರು ಹೊರಬರುತ್ತಾರೆ.

ಈ ಗ್ರಾಮದಲ್ಲಿನ ಕಲಾವಿದರು ಯಾವುದೇ ನಾಟಕ ಶಾಲೆಯಲ್ಲಿ ತರಬೇತಿ ಪಡೆದವರಲ್ಲ. ನಾಟಕ ಕ್ಷೇತ್ರವನ್ನು ಅಧ್ಯಯನ ಮಾಡಿ, ಪದವಿ ಗಳಿಸಿದವರೂ ಅಲ್ಲ. ಒಂದರ್ಥದಲ್ಲಿ ಇಲ್ಲಿನ ನಿವಾಸಿಗಳು ದ್ವಿಪಾತ್ರ ನಿರ್ವಹಿಸುತ್ತಾರೆ.

ಮಳೆಗಾಲದಲ್ಲಿ ಕೃಷಿಯಲ್ಲಿ ತೊಡಗಿಕೊಂಡು, ಚಳಿಗಾಲ-ಬೇಸಿಗೆಗಾಲದಲ್ಲಿ ತಮ್ಮ ಬಹುತೇಕ ಸಮಯವನ್ನು ಕಲಾ ಚಟುವಟಿಕೆಗೆ ಮೀಸಲಿಡುತ್ತಾರೆ. ಹಬ್ಬಹರಿದಿನ ಮತ್ತು ಜಾತ್ರೆ ಸಮೀಪಿಸುತ್ತಿರುವುದು ಗೊತ್ತಾದರೆ ಸಾಕು, ಅವರೆಲ್ಲರೂ ಕಲಾವಿದರಾಗಿ `ಕಲಾ ಸೇವೆ'ಗೆ ಅರ್ಪಿಸಿಕೊಳ್ಳುತ್ತಾರೆ.

ಕುಟುಂಬದ ಬಳುವಳಿಯಾಗಿ ಕೆಲವರು ಕಲಾ ಸೇವೆಗೆ ಸಮರ್ಪಣೆ ಮಾಡಿಕೊಂಡಿದ್ದರೆ, ಇನ್ನು ಕೆಲವರು ಸ್ವಂತ ಆಸಕ್ತಿಯಿಂದ ಕಲಾವಿದರಾಗಿ ರೂಪುಗೊಂಡಿದ್ದಾರೆ. ಶಿಕ್ಷಣ ಶಾಲಾ ಮಟ್ಟಕ್ಕೆ ಸೀಮಿತಗೊಂಡಿದ್ದರೂ; ಕಲಾ ಕ್ಷೇತ್ರದಲ್ಲಿ ನಿಪುಣರೆಂದು ನೇರವಾಗಿ ತೋರಿಸಿಕೊಳ್ಳುವ ಅವರು ಹೆಚ್ಚಿನ ಸಂಭಾವನೆಗೆ ಆಸೆ ಪಡುವುದಿಲ್ಲ. `ಸಂಭಾವನೆ ಎಷ್ಟಾದರೂ ಕೊಡಲಿ, ಅದನ್ನು ಪ್ರೀತಿಯಿಂದ ಸ್ವೀಕರಿಸುತ್ತೇವೆ. ಅವರಿಗೆ ನಮ್ಮ ಕಲೆ ಇಷ್ಟವಾದರೆ ಸಾಕು, ಅದಕ್ಕಿಂತ ಬೇರೆ ತೃಪ್ತಿ ಮತ್ತು ಸಾರ್ಥಕತೆ ಇನ್ನೊಂದಿಲ್ಲ' ಎಂದು ಅವರು ನುಡಿಯುತ್ತಾರೆ.

`ನನಗೆ ಕಲೆ ಎಂಬುದು ವಂಶಪಾರಂಪರ್ಯವಾಗಿ ಬಂದಿದೆ. ಪ್ರಸಿದ್ಧ ಕಲಾವಿದರಾಗಿದ್ದ ನಮ್ಮ ತಾತಾ ದೊಡ್ಡಪಾಪಣ್ಣ ವೇಷ ಧರಿಸಿಕೊಂಡು ನಾಟಕದಲ್ಲಿ ಪಾತ್ರ ವಹಿಸುತ್ತಿದ್ದಾರೆ ಎಂದು ಗೊತ್ತಾದ ಕೂಡಲೇ ಅವರನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು. ಅವರಿಂದ ಸ್ಫೂರ್ತಿ ಪಡೆದ ನಾನು ಪೌರಾಣಿಕ, ಸಾಮಾಜಿಕ ಮತ್ತು ಹವ್ಯಾಸಿ ನಾಟಕಗಳಲ್ಲಿ ಹಲವಾರು ಪಾತ್ರ ವಹಿಸಿದ್ದೇನೆ. ದೆವ್ವ, ಭೂತದ ಪಾತ್ರಗಳನ್ನು ನಿರ್ವಹಿಸಿದಾಗಲೆಲ್ಲ, ಜನರು ಬೆಚ್ಚಿ ಬಿದ್ದಿದ್ದಾರೆ. ಎಲ್ಲಕ್ಕಿಂತ ನನ್ನ ಕೋಳಿ ಕಳ್ಳನ ಪಾತ್ರವನ್ನು ಜನರು ತುಂಬ ಮೆಚ್ಚಿಕೊಂಡಿದ್ದಾರೆ' ಎಂದು ಕಲಾವಿದ ಶಿವಣ್ಣ `ಪ್ರಜಾವಾಣಿ'ಗೆ ತಿಳಿಸಿದರು. ಅವರು ಓದು-ಬರಹ ಕಲಿತವರಲ್ಲ. ಶಾಲೆಯೊಳಗೆ ಒಂದು ಹೆಜ್ಜೆ ಇಟ್ಟವರೂ ಅಲ್ಲ.

`ಮೂರು ವರ್ಷಕ್ಕೊಮ್ಮೆ ಗ್ರಾಮದಲ್ಲಿ ಆಚರಿಸಲಾಗುವ ಬಾಬಯ್ಯನ ಹಬ್ಬದ ಸಂದರ್ಭದಲ್ಲಿ ನನ್ನ ವೇಗದ ಓಟ ಮತ್ತು ರೌದ್ರಾವತಾರ ಕಂಡು ಜನರು ಮನೆಯಿಂದ ಹೊರಬರಲು ಭಯಪಡುತ್ತಾರೆ. ಕೋಳಿಯೇನಾದರೂ ಕೈಗೆ ಸಿಕ್ಕರೆ, ಅದನ್ನು ಬಲಿ ತೆಗೆದುಕೊಳ್ಳುತ್ತೇನೆ ಎಂಬ ಭೀತಿಯಲ್ಲಿ ಕೋಳಿಗಳನ್ನು ಮನೆಯಲ್ಲಿ ಮುಚ್ಚಿಟ್ಟುಕೊಳ್ಳುತ್ತಾರೆ. ನನ್ನ ಕಂಡು ಹೆದರಿಕೊಳ್ಳುವ ಮಕ್ಕಳು ಅಳವುದನ್ನು ನಿಲ್ಲಿಸುತ್ತಿರಲಿಲ್ಲ' ಎಂದು ಅವರು ತಿಳಿಸಿದರು. ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರದರ್ಶನಗೊಂಡ ನಾಟಕ, ಜಾತ್ರೆ ಮತ್ತು ಉತ್ಸವಗಳಲ್ಲಿ ಪಾಲ್ಗೊಂಡಿರುವ ಹಲವಾರು ಪಾತ್ರಗಳನ್ನು ನಿರ್ವಹಿಸಿರುವ ಇವರಿಗೆ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.

ಇದೇ ಗ್ರಾಮದಲ್ಲಿ ಎಂ.ಶಿವನರಸಿಂಹಪ್ಪ ಎಂಬ ಸರ್ವ ಕಲೆಗಳ ಸರ್ದಾರರು ಒಬ್ಬರಿದ್ದಾರೆ. ಗಾಯನ, ನೃತ್ಯ, ನಾಟಕ ಸೇರಿದಂತೆ ವಿವಿಧ ಕಲೆಗಳನ್ನು ಕರಗತ ಮಾಡಿಕೊಂಡಿರುವ ಅವರು ಸೋಬಾನೆ ಪದ, ತತ್ವಪದ ಮುಂತಾದವುಗಳನ್ನು ಸರಾಗವಾಗಿ ಹಾಡುತ್ತಾರೆ. ವಯಸ್ಸು ಅರವತ್ತು ದಾಟಿದರೂ ಉತ್ಸಾಹ ಕುಂದಿಸಿಕೊಳ್ಳದ ಅವರು ಅವಕಾಶ ಸಿಕ್ಕರೆ, 20ರ ಯುವನಕನಂತೆ ಪಾತ್ರ ನಿರ್ವಹಿಸಲು ಶುರುಮಾಡಿ ಬಿಡುತ್ತಾರೆ.

ಶಿಥಿಲಾವಸ್ಥೆಯಲ್ಲಿರುವ ಮನೆಯಲ್ಲಿನ ಗಂಟುಮೂಟೆಗಳಲ್ಲಿ ರಾಶಿಗಟ್ಟಲೇ ಪ್ರಮಾಣಪತ್ರ, ಪ್ರಶಸ್ತಿ ಪತ್ರಗಳನ್ನು ಇಟ್ಟುಕೊಂಡಿರುವ ಅವರಿಗೂ ಕಲೆ ಕುಟುಂಬದ ಬಳುವಳಿಯಾಗಿ ಬಂದಿದ್ದು.

`ನಮ್ಮ ತಂದೆ ಮುನಿಚಿನ್ನಪ್ಪ ಸಹ ಕಲಾವಿದರಾಗಿದ್ದರು. ಅವರೊಂದಿಗೆ ಊರುಗಳಿಗೆಲ್ಲ ಸುತ್ತಾಡಿ ನಾನು ಕ್ರಮೇಣ ನಾಟಕ, ಗಾಯನದತ್ತ ಆಸಕ್ತಿ ಮೂಡಿಸಿಕೊಂಡೆ. ಗಬ್ಬಿಯಾಳೋ ಪದ, ಬೀಸೋ ಪದ, ಸೋಬಾನೆ ಪದ, ಯಾಲಪದ, ತತ್ವಪದ, ಕೋಲಾಟ ಪದ, ಲಾವಣಿ ಪದಗಳನ್ನು 40 ವರ್ಷಗಳಿಂದ ಹಾಡುತ್ತಿದ್ದೇನೆ. ಶಿಶು ಸಾಹಿತ್ಯ, ಪ್ರೌಢ ಸಾಹಿತ್ಯ, ದಾಸ ಸಾಹಿತ್ಯ, ಪೌರಾಣಿಕ ಸಾಹಿತ್ಯ, ಭಾವ ಸಾಹಿತ್ಯ, ಕವನ ಮುಂತಾದವನ್ನು ರಚಿಸಿದ್ದೇನೆ. ಯಕ್ಷಗಾನ, ಜನಪದ, ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳಲ್ಲೂ ಅಭಿನಯಿಸಿದ್ದೇನೆ. 18ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದೇನೆ' ಎಂದು ಅವರು ತಿಳಿಸಿದರು.

`ನಮ್ಮ ತೌಡನಹಳ್ಳಿಯಲ್ಲಿ ಪ್ರತಿಭಾವಂತ ಕಲಾವಿದರು ತುಂಬ ಜನರಿದ್ದಾರೆ. ಆರ್ಥಿಕ ಸಮಸ್ಯೆ, ಬಡತನ ಮತ್ತು ಇನ್ನಿತರ ಕಾರಣಗಳಿಂದ ಅವರು ಬೆಳಕಿಗೆ ಬಂದಿಲ್ಲ. ಮೂರು ವರ್ಷಕ್ಕೊಮ್ಮೆ ಆಚರಿಸಲಾಗುವ ಬಾಬಯ್ಯನ ಹಬ್ಬದ ಸಂದರ್ಭದಲ್ಲಂತೂ ಮನಬಿಚ್ಚಿ ಕುಣಿಯುತ್ತಾರೆ. ಎಲ್ಲರೊಂದಿಗೆ ಬೆರೆತು ತಮ್ಮ ಕಲೆ ಪ್ರದರ್ಶಿಸುತ್ತಾರೆ' ಎಂದು ಗ್ರಾಮಸ್ಥರು ಹೇಳುತ್ತಾರೆ. ಕಲಾವಿದರಾದ ಕೃಷ್ಣಮೂರ್ತಿ, ನರಸಿಂಹಪ್ಪ, ವೆಂಕಟೇಶ್, ಮಂಜುನಾಥ್, ಮುನಿಯಪ್ಪ, ಚಿಕ್ಕಬೈರಪ್ಪ, ಪೋತಲಪ್ಪ ಮುಂತಾದವರು ತಮ್ಮದೇ ಆದ ರೀತಿಯಲ್ಲಿ ಕಲಾ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT