ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ವಿಲೇವಾರಿಗೆ ಗ್ರಾಮಸ್ಥರ ವಿರೋಧ

Last Updated 19 ಜುಲೈ 2013, 6:35 IST
ಅಕ್ಷರ ಗಾತ್ರ

ಹಿರೇಕೆರೂರ: ಪಟ್ಟಣದ ಘನತ್ಯಾಜ್ಯ ವಸ್ತು ವಿಲೇವಾರಿಗೆ ತಾಲ್ಲೂಕಿನ ಬಸರೀಹಳ್ಳಿ ಗ್ರಾಮದ ಸಮೀಪ ನಿರ್ಮಿಸಿರುವ ಘಟಕದಲ್ಲಿ ತ್ಯಾಜ್ಯ ವಿಲೇವಾರಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಪಟ್ಟಣ ಪಂಚಾಯ್ತಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ಘಟನೆ ಗುರುವಾರ ನಡೆಯಿತು.

ಬೆಳಿಗ್ಗೆ ಪಟ್ಟಣದಿಂದ ಟ್ರ್ಯಾಕ್ಟರ್‌ನಲ್ಲಿ ಕಸ ವಿಲೇವಾರಿಗಾಗಿ ಬಸರೀಹಳ್ಳಿ ಗ್ರಾಮದ ಬಳಿ ಇರುವ ಘನತ್ಯಾಜ್ಯ ವಸ್ತು ಘಟಕಕ್ಕೆ ಬರುತ್ತಿದಂತೆಯೇ ಗ್ರಾಮಸ್ಥರು ವಾಹನವನ್ನು ತಡೆದು ಘಟಕದಲ್ಲಿ ತ್ಯಾಜ್ಯವನ್ನು ಹಾಕಲು ಆಕ್ಷೇಪ ವ್ಯಕ್ತಪಡಿಸಿದರು. ಆಗ ಕೆಲವರು ಟ್ರ್ಯಾಕ್ಟರ್‌ನ್ನು ತಡೆದು ಸಂಸ್ಕರಣೆ ಮತ್ತು ನಿರ್ವಹಣೆ ಘಟಕಕ್ಕೆ ಬೀಗ ಹಾಕಿ ಕಸ ವಿಲೇವಾರಿಗೆ ವಿರೋಧ ವ್ಯಕ್ತಪಡಿಸಿದರು.

ಘಟಕದೊಳಗೆ ಪ್ರವೇಶಿಸಿಲು ಯತ್ನಿಸಿದ ಗ್ರಾಮಸ್ಥರನ್ನು ಪೊಲೀಸರು ಘಟಕದ ಬಳಿ ತಡೆದರು. ಇದೇ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಮಧ್ಯೆ ಮಾತಿನ ಚಕಮಕಿ ನಡೆಯಿತು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ವೀರನಗೌಡ ಹೊಳೆಜ್ಜೇರ ಮಾತನಾಡಿ, `ಈ ಜಮೀನು ಬಸರೀಹಳ್ಳಿ ಗ್ರಾಮಕ್ಕೆ ಸೇರಿದೆ. ಗ್ರಾಮದ 48 ಎಕರೆ ಗೋಮಾಳ ಜಮೀನಿನಲ್ಲಿ 10 ಎಕರೆ ಪ್ರದೇಶದಲ್ಲಿ ಉಗ್ರಾಣ ನಿರ್ಮಿಸಿದ್ದಾರೆ. ಗ್ರಾಮಸ್ಥರ ಜಾನುವಾರುಗಳು ಮೇಯಲು ಗೋಮಾಳ ಅಗತ್ಯವಿದೆ. ಆದರೆ ಪಟ್ಟಣ ಪಂಚಾಯ್ತಿಯವರು ಗೋಮಾಳದಲ್ಲಿ ಪಟ್ಟಣದಿಂದ ಕಸ ಹಾಗೂ ವಿವಿಧ ತ್ಯಾಜ್ಯವನ್ನು ತಂದು ಹಾಕುತ್ತಿದ್ದು, ಇದರಿಂದ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು. 

ನಾಗೇಂದ್ರಪ್ಪ ಮಡಿವಾಳರ, ಮಲ್ಲನಗೌಡ ಮೇಗಳಮನಿ, ಸುರೇಶ ದೊಡ್ಡಗೌಡ್ರ, ಹನುಮಂತಗೌಡ ದೊಡ್ಡಗೌಡ್ರ, ಬಸನಗೌಡ ದೊಡ್ಡಗೌಡ್ರ, ಸದಾಶಿವಪ್ಪ ಸಿದ್ದಾಪುರ, ಗುರುರಾಜ ಮಲ್ಲಜ್ಜೇರ, ಹರೀಶ ಯಡಚಿ, ಮಾಲತೇಶ ಸಂತೇರ, ಬಸವರಾಜ ಸಿದ್ದಪ್ಪಗೌಡ್ರ, ಸುರೇಶ ಲಕ್ಕಪ್ಪಳ್ಳವರ, ರಾಜು ಸಿದ್ದಪ್ಪಗೌಡ್ರ, ಪ್ರಕಾಶ ಪಾಟೀಲ ಹಾಗೂ ಮುಂತಾದವರು ಹಾಜರಿದ್ದರು.

ಕೊನೆಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಗ್ರಾಮಸ್ಥರು ನ್ಯಾಯಾಲಯದ ಮೊರೆ ಹೋಗುವುದಾಗಿ ಅಲ್ಲಿಂದ ತೆರಳಿದರು. ಪ.ಪಂ. ಅಧಿಕಾರಿಗಳು ಪೊಲೀಸರ ರಕ್ಷಣೆಯೊಂದಿಗೆ ಘಟಕಕ್ಕೆ ಹಾಕಿದ್ದ ಬೀಗವನ್ನು ತೆಗೆದು ಒಳ ಪ್ರವೇಶಿಸಿದರು. ನಂತರ ಘಟಕದ ಆವರಣದಲ್ಲಿ ಪ.ಪಂ. ಹಾಗೂ ಅರಣ್ಯ ಸಿಬ್ಬಂದಿ ಸಸಿ ನೆಡಲು ಜೆಸಿಬಿಯಿಂದ ಗುಂಡಿಗಳನ್ನು ತೆಗೆದರು.

  ಡಿವೈಎಸ್‌ಪಿ ಜಯಪ್ರಕಾಶ ಹಕ್ಕರಕಿ, ಸಿಪಿಐ ವಿಜಯ ಮುರಗುಂಡಿ, ಪಿಎಸ್‌ಐಗಳಾದ ಜಿ.ಟಿ.ಶ್ರೀಶೈಲಮೂರ್ತಿ, ಜಿ.ಎಂ.ಶಶಿಧರ, ಕಂದಾಯ ನಿರೀಕ್ಷಕ ಎಂ.ಎಚ್.ಕಿಚಡೇರ, ಪ.ಪಂ. ಮುಖ್ಯಾಧಿಕಾರಿ ಎಂ.ಎಚ್.ರಾಜಕುಮಾರ, ಎಂಜಿನಿಯರ್ ರಂಗಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT