ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯದಿಂದ ಬಯೊ ಡೀಸೆಲ್, ವಿದ್ಯುತ್

Last Updated 17 ಜುಲೈ 2012, 19:30 IST
ಅಕ್ಷರ ಗಾತ್ರ

ತುಮಕೂರು: ಇಷ್ಟು ವರ್ಷಗಳ ಕಾಲ ರಾಜ್ಯದ ನಗರಸಭೆ, ನಗರದ ಜನರನ್ನು ಬೆಂಬಿಡದ ಭೂತದಂತೆ ಕಾಡುತ್ತಿದ್ದ ನಗರದ ಘನತ್ಯಾಜ್ಯಕ್ಕೆ ಅದೃಷ್ಟ ಖುಲಾಯಿಸತೊಡಗಿದೆ. ನಗರದಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯ ಬಳಸಿ ವಿದ್ಯುತ್ ಜೊತೆಗೆ ಜೈವಿಕ ಇಂಧನ (ಬಯೊ ಡೀಸೆಲ್) ಉತ್ಪಾದನಾ ಘಟಕ ಆರಂಭಕ್ಕೆ ತುಮಕೂರು ನಗರಸಭೆ ಆಸಕ್ತಿ ತೋರಿದೆ.

ತ್ಯಾಜ್ಯ ಬಳಸಿ ವಿದ್ಯುತ್ ಉತ್ಪಾದನೆಗೆ ಕೆಲ ಖಾಸಗಿ ಕಂಪೆನಿಗಳು ಈ ಹಿಂದೆ ಆಸಕ್ತಿ ತೋರಿದ್ದವು. ಈಗ ಬೆಂಗಳೂರು ಮೂಲದ ಖಾಸಗಿ ಕಂಪೆನಿ ವಿದ್ಯುತ್ ಜೊತೆಗೆ ಬಯೋ ಡೀಸೆಲ್ ಉತ್ಪಾದನೆಗೆ ಮುಂದಾಗಿದ್ದು, ಸರ್ಕಾರದ ಮಟ್ಟದಲ್ಲೇ ಒಪ್ಪಿಗೆ ದೊರೆತಿದೆ.

ಪುಣೆ ಪಾಲಿಕೆಯಲ್ಲಿ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ವಿದ್ಯುತ್ ಜೊತೆಗೆ ಜೈವಿಕ  ಡೀಸೆಲ್ ಉತ್ಪಾದನೆ ಎಲ್ಲಿಯೂ ನಡೆದಿಲ್ಲ. ಬೆಂಗಳೂರು ಮೂಲದ `ಶಮ್‌ಗಿರ್ ರಿನಿವೇಬಲ್ ಎನರ್ಜಿ ಪ್ರವೈಟ್ ಲಿಮಿಟೆಡ್~ ಕಂಪೆನಿಯು ತ್ಯಾಜ್ಯ ಬಳಸಿ ಡೀಸೆಲ್, ವಿದ್ಯುತ್ ಉತ್ಪಾದನೆಗೆ  ಮುಂದಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ (ಜಿಮ್) ಸರ್ಕಾರದೊಂದಿಗೆ ಕಂಪೆನಿ ಒಪ್ಪಂದಕ್ಕೆ ಸಹಿಹಾಕಿದೆ.

ಪಿರೊಲೊಸಿಸ್ (Pyrolo­ysis) ತಂತ್ರಜ್ಞಾನದ ಮೂಲಕ ತ್ಯಾಜ್ಯದಿಂದ ಬಯೊ  ಡೀಸೆಲ್, ವಿದ್ಯುತ್ ಉತ್ಪಾದನೆ ಮಾಡಲಾಗುವುದು. ದೇಶದಲ್ಲಿ ಇದೇ ಮೊದಲ ಸಲ ಈ ತಂತ್ರಜ್ಞಾನ ಬಳಸಿ ಡೀಸೆಲ್ ಮತ್ತು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಎಂದು ನಗರಸಭೆ ಮೂಲಗಳು ತಿಳಿಸಿವೆ.

ಇದು ಕೊರಿಯಾ ದೇಶದ ತಂತ್ರಜ್ಞಾನವಾಗಿದ್ದು, ಇದರಿಂದ ಪರಿಸರಕ್ಕೆ ಯಾವುದೇ ಹಾನಿ ಇಲ್ಲ. ಕಂಪೆನಿಗೆ ಭೂಮಿ, ನೀರು, ವಿದ್ಯುತ್ ನೀಡಲಿದ್ದು, ಬದಲಿಗೆ ನಗರಸಭೆಗೆ ಕಂಪೆನಿ ಗೌರವಧನ ನೀಡಲಿದೆ ಎಂದು ಮೂಲಗಳು ಹೇಳಿವೆ.
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯದ ಮೈಸೂರು, ತುಮಕೂರು, ರಾಯಚೂರು, ದಾವಣಗೆರೆ ಮತ್ತು ಬೆಳಗಾವಿಯಲ್ಲಿ ಇಂಥ ಘಟಕಗಳನ್ನು ಸ್ಥಾಪಿಸಲು ಆಸಕ್ತಿ ತೋರಿದೆ ಎನ್ನಲಾಗಿದೆ.

ತುಮಕೂರು ಸಮೀಪದ ಅಜ್ಜಗೊಂಡನಹಳ್ಳಿಯಲ್ಲಿ ನೂತವಾಗಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಯ ಕೆಲಸ ಆರಂಭವಾಗಿದೆ. ಇದೇ ಜಾಗದಲ್ಲೇ ಕೇವಲ 5 ಎಕರೆ ಬಳಸಿಕೊಂಡು ಡೀಸೆಲ್ ಮತ್ತು ವಿದ್ಯುತ್ ಘಟಕ ತಲೆ ಎತ್ತಲಿದೆ.

ಮೊದಲ ಹಂತವಾಗಿ ತುಮಕೂರಿನಲ್ಲಿ ಈ ಘಟಕ ತಲೆ ಎತ್ತಲಿದ್ದು, ನಂತರದ ದಿನಗಳಲ್ಲಿ ಉಳಿದ ನಾಲ್ಕೂ ನಗರಗಳಲ್ಲೂ ಇಂಥ ಘಟಕ ಆರಂಭಿಸಲಾಗುತ್ತದೆ ಎನ್ನಲಾಗಿದೆ. ಘಟಕ ಆರಂಭಕ್ಕೆ ರೂ 250 ಕೋಟಿ ಬಂಡವಾಳ ಹೂಡಿಕೆಯಾಗಲಿದೆ ಎಂದು ನಗರಸಭೆ ಎಂಜಿನಿಯರೊಬ್ಬರು ತಿಳಿಸಿದರು.

ತುಮಕೂರಿನಲ್ಲಿ ಘಟಕ ಆರಂಭಿಸಲು ನಗರಸಭೆ ಆಯುಕ್ತೆ ರೋಹಿಣಿ ಸಿಂಧೂರಿ ಅವರ ಪ್ರಯತ್ನ ಕಾರಣವಾಗಿದೆ. ಈಗಾಗಲೇ ಕರ್ನಾಟಕ ಉದ್ಯೋಗ ಮಿತ್ರ ನಗರಸಭೆಯೊಂದಿಗೆ ಪತ್ರವ್ಯವಹಾರ ಮಾಡಿದ್ದು, ಭೂಮಿ ಮತ್ತು ತಾಜ್ಯದ ಲಭ್ಯತೆಯ ಕುರಿತು ಮಾಹಿತಿ ಪಡೆದುಕೊಂಡಿದೆ.

ಘಟಕ ಸ್ಥಾಪಿಸುವುದರಿಂದ ಆಗುವ ಅನುಕೂಲ, ಪರಿಸರ ಮೇಲಿನ ಪರಿಣಾಮದ ಸಾಧಕ-ಬಾಧಕಗಳು, ವಿದ್ಯುತ್ ಮತ್ತು ಡೀಸೆಲ್ ಹೇಗೆ ಉತ್ಪಾದನೆ ಮಾಡಲಾಗುವುದು ಎಂಬ ಕುರಿತು ನಗರಸಭೆಯಲ್ಲಿ ಪವರ್ ಪಾಯಿಂಟ್ ಪ್ರದರ್ಶನ ಕೂಡ ನೀಡಲಾಗಿದೆ. ಮುಂದಿನ ನಗರಸಭೆ ಸಾಮಾನ್ಯಸಭೆಯಲ್ಲಿ ಯೋಜನೆಗೆ ಒಪ್ಪಿಗೆ ಪಡೆದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಯೋಜನೆಗೆ ಒಪ್ಪಿಗೆ ಸಿಕ್ಕ 6ರಿಂದ 7 ತಿಂಗಳ ಒಳಗೆ ಘಟಕ ಸ್ಥಾಪನೆ ಮಾಡುವುದಾಗಿ ಕಂಪೆನಿ ತಿಳಿಸಿದೆ. ಪ್ರತಿದಿನ ನಗರದಲ್ಲಿ 110 ಟನ್ ತ್ಯಾಜ್ಯ ಸಂಗ್ರಹವಾಗುತ್ತದೆ. 30 ಟನ್ ತ್ಯಾಜ್ಯದಿಂದ 3ರಿಂದ 4 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಇದರ ಜತೆಗೆ ಉಪ ಉತ್ಪನ್ನವಾಗಿ ಬಯೋ ಡೀಸೆಲ್ ಉತ್ಪಾದನೆ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT