ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ವರಿತ ಕೋರ್ಟ್‌ಗೆ ಸಿ.ಎಂ.ಗಳ ಒತ್ತಾಯ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಇತ್ಯರ್ಥ
Last Updated 7 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಮಹಿಳೆಯರ ವಿರುದ್ಧದ ದೌರ್ಜನ್ಯ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಬೇಕೆಂಬ ಕೂಗಿನ ನಡುವೆಯೇ ಇಂಥ ಪ್ರಕರಣಗಳಿಗಾಗಿಯೇ ತ್ವರಿತ ನ್ಯಾಯಾಲಯವನ್ನು ಸ್ಥಾಪಿಸಬೇಕೆಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಒತ್ತಾಯಿಸಿದರು.

ಭಾನುವಾರ ಇಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಉದ್ಘಾಟಿಸಿದ ಎಲ್ಲ ರಾಜ್ಯಗಳ ಮುಖ್ಯ ನ್ಯಾಯಮೂರ್ತಿಗಳು ಮತ್ತು ಮುಖ್ಯಮಂತ್ರಿಗಳ ಸಭೆಯಲ್ಲಿ ಈ ಒತ್ತಾಯ ಹೇರಿದ ಅವರು, ತ್ವರಿತ ನ್ಯಾಯಾಲಯಗಳ ಸ್ಥಾಪನೆಗೆ ಕೇಂದ್ರದ ನೆರವಿಗೆ ಬೇಡಿಕೆ ಇಟ್ಟರು.

ತ್ವರಿತ ನ್ಯಾಯಾಲಯಗಳು ಹಲವು ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಿದ ಉದಾಹರಣೆ ನಮ್ಮ ಮುಂದಿದ್ದರೂ, ಕೇಂದ್ರದಿಂದ ದೊರೆಯುತ್ತಿದ್ದ ನೆರವು ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಅವುಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕಾಯಿತು ಎಂದು ಹಲವು ಮುಖ್ಯಮಂತ್ರಿಗಳು ಇದೇ ವೇಳೆ ಅಭಿಪ್ರಾಯಪಟ್ಟರು.

`ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವಲ್ಲಿ ಮತ್ತು ಹಣಕಾಸು ನೆರವನ್ನು ನೀಡುವ ಕುರಿತು ಮರುಚಿಂತನೆ ನಡೆಸುವಂತೆ ಕೇಂದ್ರ ಸರ್ಕಾರವನ್ನು ಕೋರುತ್ತೇನೆ. ಗುಜರಾತ್ ಸರ್ಕಾರ ಸ್ಥಾಪಿಸಿದ 166 ತ್ವರಿತ ನ್ಯಾಯಾಲಯಗಳು ಸುಮಾರು ನಾಲ್ಕು ಲಕ್ಷದಷ್ಟು ಪ್ರಕರಣಗಳನ್ನು ಇತ್ಯರ್ಥಗೊಳಿಸಿವೆ' ಎಂದು ಮೋದಿ ತಿಳಿಸಿದರು.

ಪ್ರಧಾನಿ ಎಚ್ಚರಿಕೆ: ಮಹಿಳೆಯರ ವಿರುದ್ಧದ ಹಿಂಸಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಡಬೇಕಾದ್ದು ಇನ್ನೂ ಬಹಳಷ್ಟಿದೆ ಎಂದು ಸಭೆಯಲ್ಲಿ ಪ್ರಧಾನಿ ಸಿಂಗ್ ಸ್ಪಷ್ಟಪಡಿಸಿದರಲ್ಲದೆ, `ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ತಟ್ಟನೆಯ ಪ್ರತಿಕ್ರಿಯೆಯು ವಿವೇಕದ ದನಿಯನ್ನು ಅಡಗಿಸುತ್ತದೆ' ಎಂದು ಎಚ್ಚರಿಸಿದರು.

`ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣವು ಮಹಿಳೆಯರಿಗೆ ಸಂಬಂಧಿಸಿದ ಕಾನೂನಿನಲ್ಲಿ ಬದಲಾವಣೆ ತರುವಂತೆ ಸರ್ಕಾರದ ಮೇಲೆ ಒತ್ತಡ ಹೇರಿತ್ತು' ಎಂಬುದನ್ನು ಅವರು ಒಪ್ಪಿದರು.

`ನ್ಯಾಯಾಂಗ ಸುಧಾರಣೆ ಮತ್ತು ಕಾನೂನು ಪ್ರಕ್ರಿಯೆಯಲ್ಲಿನ ಬದಲಾವಣೆಗೆ ಕುರಿತು ಬಲವಾದ ಕೂಗು ಕೇಳಿಬರುತ್ತಿದ್ದು, ಕ್ಷಣಿಕದ ಉದ್ರೇಕದಲ್ಲಿ ವಿವೇಕ ಮತ್ತು ತಾರ್ಕಿಕತೆಯ ಸದ್ದಡಗಬಾರದು ಎಂದು ಅವರು ಹೇಳಿದರು. `ಕಾನೂನು ಮತ್ತು ನ್ಯಾಯ ಪ್ರದಾನ ವ್ಯವಸ್ಥೆಯ ಕುರಿತು ಆತ್ಮಾವಲೋಕನ ನಡೆಸುವುದು ಅತ್ಯಗತ್ಯ' ಎಂದೂ ನುಡಿದರು. 

ಸಿಜೆ ಒತ್ತಾಯ: ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸುವ ಸಲುವಾಗಿ ಕೆಳಹಂತದ ನ್ಯಾಯಾಲಯಗಳಲ್ಲಿನ ನ್ಯಾಯಾಧೀಶರು ಮತ್ತು ಸಿಬ್ಬಂದಿಯ ಸಂಖ್ಯೆ ಹೆಚ್ಚಿಸುವಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೂಚಿಸಿದರು.

`ಸದ್ಯ ಇರುವ ನ್ಯಾಯಾಲಯಗಳ ಮೂಲಸೌಕರ್ಯವನ್ನು ಹೆಚ್ಚಿಸುವ ಮೂಲಕ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದೆ. ಮೂಲಸೌಕರ್ಯ ಹೆಚ್ಚಳ ಎಂದರೆ ಕಟ್ಟಡಗಳಲ್ಲ, ಬದಲಾಗಿ ಸಿಬ್ಬಂದಿ' ಎಂದು ಅವರು ಹೇಳಿದರು.

ದೇಶದಲ್ಲಿನ ಬಾಲ ನ್ಯಾಯ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ ಎಂದ ಕಬೀರ್, `ಕಾನೂನಿನ ಜೊತೆ ಸಂಘರ್ಷ ಎದುರಿಸುತ್ತಿರುವ ಮಕ್ಕಳ ಸೂಕ್ತ ರಕ್ಷಣೆ ಮಾಡದಿದ್ದಲ್ಲಿ ದೇಶ ಗೊಂದಲದ ಸ್ಥಿತಿಯನ್ನು ಎದುರಿಸಬೇಕಾದೀತು' ಎಂದು ಎಚ್ಚರಿಸಿದರು.

ದೇಶದ ಜನಸಂಖ್ಯೆಯಲ್ಲಿ ಶೇ 42ರಷ್ಟು ಭಾಗ ಮಕ್ಕಳೇ ತುಂಬಿದ್ದಾರೆ. ಭವಿಷ್ಯದ ಪ್ರಜೆಗಳಾಗಿರುವ ಅವರ ಕುರಿತಂತೆ ಹೆಚ್ಚಿನ ಸಾಧನೆ ಏನನ್ನೂ ಮಾಡಲಾಗಿಲ್ಲ. ಜೊತೆಗೆ ಅವರಲ್ಲಿ ಬಹುಪಾಲು ಮಂದಿ ಮಾದಕವಸ್ತು ವ್ಯಸನಿಗಳಾಗಿದ್ದಾರೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT