ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಿಯೇಟರ್ ಕಿರಿಕಿರಿ

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

`ಪೂರಿ ಜಗನ್ನಾಥ್ ಅಥವಾ ಶಂಕರ್ ನಿದೇರ್ಶನದ ಚಿತ್ರಗಳು ಬಿಡುಗಡೆ ಆಗುತ್ತವೆ ಎಂದು ಹೆದರಿ ಕೂಡುವ ಜಾಯಮಾನ ನಮ್ಮದಲ್ಲ. ಅವರ ಚಿತ್ರಗಳು ಬಿಡುಗಡೆ ಆಗುವ ದಿನವೇ ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡುವ ತಾಕತ್ತು ನಮಗೂ ಇದೆ. ನಾವೇನು ಯಾರಿಗೂ ಕಮ್ಮಿ ಇಲ್ಲ~ ಎಂದು ಸ್ವಲ್ಪ ಗರಂ ಆಗಿಯೇ ಹೇಳಿದರು `ಕೋ... ಕೋ~ ಚಿತ್ರದ ನಿರ್ದೇಶಕ ಚಂದ್ರು.

ಈ ವಾರ ಕನ್ನಡದ `ಕೋ... ಕೋ~ ಮತ್ತು `ಸಿದ್ಲಿಂಗು~ ಹಾಗೂ ಪರಭಾಷಾ ಚಿತ್ರಗಳಾದ `ಬಿಸಿನೆಸ್‌ಮನ್~, `ಬಾಡಿಗಾರ್ಡ್~, `ನನ್ಬನ್~ ಮತ್ತು `ವೇಟೆ~ ಸಿನಿಮಾಗಳು ಸೇರಿದಂತೆ ಬರೋಬ್ಬರಿ ಆರು ಚಿತ್ರಗಳು ತೆರೆ ಕಾಣುತ್ತಿವೆ. ಕನ್ನಡ ಸಿನಿಮಾಗಳು ರಿಲೀಸ್ ಆಗಬೇಕಿದ್ದ ಥಿಯೇಟರ್‌ಗಳಲ್ಲಿ ಪರಭಾಷಾ ಚಿತ್ರಗಳು ತೆರೆಕಾಣುತ್ತಿವೆ. ಕನ್ನಡದ ಜನ ಹೆಚ್ಚಿರುವ ಸ್ಥಳದಲ್ಲೆಲ್ಲಾ ಪರಭಾಷಾ ಚಿತ್ರಗಳನ್ನು ತೆರೆಕಾಣಿಸುವ ಹುನ್ನಾರ ನಡೆಯುತ್ತಿದೆ ಎಂದು ನಿರ್ದೇಶಕ ಚಂದ್ರು, ಮತ್ತು ನಿರ್ಮಾಪಕ ಸಿದ್ದರಾಜು, ನಟ ಯೋಗಿಶ್ ಹರಿಹಾಯ್ದರು. 

`ವಿತರಕರು ನಿಯಮ ಉಲ್ಲಂಘಿಸಿ ಕನ್ನಡ ಚಿತ್ರಗಳಿಗೆ ದೊರಕಬೇಕಾಗಿದ್ದ ಚಿತ್ರಮಂದಿರಗಳಲ್ಲಿ ಪರಭಾಷಾ ಚಿತ್ರಗಳಿಗೆ ಮಣೆ ಹಾಕುತ್ತಿರುವುದು ದೊಡ್ಡ ದುರಂತ. 27 ಚಿತ್ರಮಂದಿರಗಳಲ್ಲಿ ಮಾತ್ರ ಪರಭಾಷಾ ಚಿತ್ರಗಳು ಪ್ರದರ್ಶನಗೊಳ್ಳಬೇಕು ಎಂಬ ನಿಯಮವಿದೆ. ಆದರೆ, ನಿಯಮವನ್ನು ಗಾಳಿಗೆ ತೂರಿ ಕನ್ನಡ ಚಿತ್ರಗಳು ತೆರೆಕಾಣಬೇಕಿದ್ದ ಚಿತ್ರಮಂದಿರಗಳಲ್ಲಿ ಪರಭಾಷಾ ಚಿತ್ರಗಳನ್ನು ಬಿಡುಗಡೆಮಾಡುತ್ತಿದ್ದಾರೆ. ಹೀಗಾದರೆ ಕನ್ನಡ ಚಿತ್ರಗಳನ್ನು ಎಲ್ಲಿ ಬಿಡುಗಡೆ ಮಾಡಬೇಕು~ ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಕೋ... ಕೋ ಚಿತ್ರವನ್ನು 200 ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಬೇಕೆಂದುಕೊಂಡಿದ್ದೆವು. ಆದರೆ, ಪರಭಾಷಾ ಚಿತ್ರಗಳಿಂದಾಗಿ ಅದು 150ಕ್ಕೆ ಇಳಿಯುವ ಸಂಭವವಿದೆ. ಅದೇ ರೀತಿ ಸಿದ್ಲಿಂಗು ಸಿನಿಮಾಕ್ಕೂ ಥಿಯೇಟರ್ ಸಮಸ್ಯೆ ಕಾಡುತ್ತಿದೆ. ಈ ಕುರಿತು ಎರಡು ಚಿತ್ರತಂಡ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದೇವೆ. ಸಭೆ ಕರೆದು ಸಮಸ್ಯೆ ಇತ್ಯರ್ಥಪಡಿಸುವುದಾಗಿ ಮಂಡಳಿ ತಿಳಿಸಿದೆ. ನಮಗೆ ನ್ಯಾಯ ದೊರೆಯುತ್ತದೆ ಎಂಬ ವಿಶ್ವಾಸವಿದೆ~ ಎಂದರು ಚಂದ್ರು.

ಕನ್ನಡ ಚಿತ್ರರಂಗದ ಮಾರುಕಟ್ಟೆ ವ್ಯಾಪ್ತಿ ಸಣ್ಣದು. ಪರಭಾಷಾ ಚಿತ್ರಗಳು ಆಯಾಯ ಭಾಷೆಯ ಚಿತ್ರಗಳಿಂದ ಮಾತ್ರ ಸ್ಪರ್ಧೆ ಎದುರಿಸಿದರೆ, ಕನ್ನಡ ಸಿನಿಮಾಗಳ ಕತೆ ಆಗಲ್ಲ. ಹಿಂದಿ, ತಮಿಳು, ತೆಲುಗು ಸಿನಿಮಾಗಳೊಂದಿಗೆ ಏಕಕಾಲಕ್ಕೆ ಸ್ಪರ್ಧೆ ಎದುರಿಸಬೇಕು. ಕನ್ನಡ ಚಿತ್ರಗಳ ಕತೆ  ಚೆನ್ನಾಗಿದ್ದರೆ, ವೀಕ್ಷಕರು ಥಿಯೇಟರ್‌ಗೆ ಬಂದೇ ಬರುತ್ತಾರೆ. ಆದರೆ ಚಿತ್ರ ವಿತರಕರು ಇತರೆ ಚಿತ್ರಗಳಿಗೆ ಮಣೆ ಹಾಕುತ್ತಿರುವುದು ದುರದೃಷ್ಟಕರ ಎಂದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT