ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಡಿಗೊಬ್ಬಳು! ದಾಳಿಗೊಬ್ಬಳು!

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

`ದಂಡುಪಾಳ್ಯ~ ತಂಡಕ್ಕೆ ಮತ್ತಿಬ್ಬರು ಸದಸ್ಯರು ಸೇರಿಕೊಂಡಿದ್ದಾರೆ! ಇವರೇ ರಘು ಮುಖರ್ಜಿ ಮತ್ತು ನಿಶಾ ಕೊಠಾರಿ. ಚಿತ್ರದ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭದಲ್ಲಿ ರಾರಾಜಿಸುತ್ತಿದ್ದ ಫ್ಲೆಕ್ಸ್‌ಗಳು ಇವರಿಬ್ಬರ ಕತೆ ಹೇಳುತ್ತಿದ್ದವು. ಆದರೆ ಇವರು `ಅಪರಾಧಿ~ಗಳಲ್ಲ. ಕ್ರೌರ್ಯದ ಮಜಲುಗಳನ್ನು ಹೊಂದಿರುವ ಚಿತ್ರಕ್ಕೆ ಗ್ಲಾಮರ್ ಸ್ಪರ್ಶ ನೀಡಲು ಬಂದವರು.

ಪೂಜಾ ಗಾಂಧಿ ಅವರೊಂದಿಗೆ ರಘು ಮೂರನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. `ರಾಜ್~ ಚಿತ್ರದ ನಂತರ ನಿಶಾ ಅವರಿಗೆ ದಂಡುಪಾಳ್ಯ ಮೂಲಕ ಕನ್ನಡ ಚಿತ್ರರಂಗಕ್ಕೆ ಮರು ಪ್ರವೇಶ ದೊರೆತಿದೆ. ಚಿತ್ರಕ್ಕೆ ಸಂಗೀತ ನೀಡಿರುವವರು ಅರ್ಜುನ್ ಜನ್ಯ; ದಂಡುಪಾಳ್ಯದಂತಹ ದಂಡುಪಾಳ್ಯಕ್ಕೆ ಕೂಡ ಮಾಧುರ್ಯದ ಬೆಸುಗೆ ಹಾಕಿರುವವರು.

ಐಟಂ ಹಾಡು, ಥೀಮ್ ಸಾಂಗ್‌ಗೆ ಕೂಡ ರಾಗ ಜೋಡಿಸಿರುವವರು. ನಿರ್ಮಾಪಕರಾದ ಜಿ.ಆರ್.ಪ್ರಶಾಂತ್ ಮತ್ತು ಟಿ.ಗಿರೀಶ್ `ಆಪಲ್ ಬ್ಲಾಸಂ~ ಸಂಸ್ಥೆ ಹುಟ್ಟುಹಾಕಿ ಹಾಡುಗಳನ್ನು ಹೊರತಂದಿದ್ದಾರೆ. ಒಟ್ಟು ಐದು ಹಾಡುಗಳು ಚಿತ್ರದಲ್ಲಿವೆ. `ಸವಾರಿ~ ಚಿತ್ರದ `ಅಲೆ ಅಲೆ~ ಹಾಡಿನ ಗುಂಗಿನಿಂದ ಗೀತರಚನಕಾರ ವಿ.ನಾಗೇಂದ್ರಪ್ರಸಾದ್ ಹೊರಬಂದಂತಿಲ್ಲ. ದಂಡುಪಾಳ್ಯದಲ್ಲಿ ಕಾಣಿಸಿಕೊಂಡಿರುವುದು ಕೂಡ ಇಂಥ `ಅಲೆಯೇ~.

ಮಾತಿನ ಮಧ್ಯೆ ನಾಗೇಂದ್ರಪ್ರಸಾದ್ `ಆತಂಕ, ಭಯ ತಂದೊಡ್ಡುವ ನಿರ್ದೇಶಕರಲ್ಲಿ ಶ್ರೀನಿವಾಸ್ ರಾಜು ಕೂಡ ಒಬ್ಬರು~ ಎಂದರು. ನಿರ್ದೇಶಕರು ಬರೆದುದಕ್ಕೆ ಚಕಾರ ಎತ್ತದಿರುವ ಬಗ್ಗೆ ಅವರಿಗೆ ಭಯ, ಆತಂಕ.

ಹಾಗೆಯೇ ಕಾವ್ಯಾತ್ಮಕ ಸ್ವಾತಂತ್ರ್ಯ ನೀಡಿರುವುದಕ್ಕೆ ಸಂಭ್ರಮ. ದಂಡುಪಾಳ್ಯ ಗ್ಯಾಂಗ್‌ನ ಮನಸ್ಥಿತಿ ಹಾಗೂ ಅವರಿಂದ ಜರ್ಝರಿತವಾದ ಜೀವಗಳ ಮನಸ್ಥಿತಿ ಎರಡನ್ನೂ ಧ್ಯಾನಿಸಿ ಹಾಡು ಹೆಣೆದಿದ್ದಾರೆ ಅವರು.  

ನಂತರ ಮಾತನಾಡಿದ್ದು ಡಿವೈಎಸ್‌ಪಿ ಎನ್.ಛಲಪತಿ. ಇಡೀ ಗ್ಯಾಂಗ್‌ನ ಕೃತ್ಯಗಳನ್ನು ಬಯಲು ಮಾಡಿದ್ದು ಇವರೇ. `ಚಿತ್ರವೇ ಬೇರೆ ವಾಸ್ತವವೇ ಬೇರೆ. ವಿವಿಧ ಪ್ರಕರಣಗಳಲ್ಲಿ 16 ಬಾರಿ ಗಲ್ಲುಶಿಕ್ಷೆಗೆ ಒಳಗಾದ ವಿಶ್ವದ ಏಕೈಕ ತಂಡ ಇದೇ ಇರಬಹುದು. ಈ ಬಗ್ಗೆ ಸಮೀಕ್ಷೆ ನಡೆಯುತ್ತಿದೆ. ಶೀಘ್ರದಲ್ಲಿಯೇ ಈ ಪ್ರಕರಣವನ್ನು ಗಿನ್ನೆಸ್ ಬುಕ್‌ಗೆ ಸೇರಿಸುವ ಚಿಂತನೆ ಇದೆ~ ಎಂದರು.

ಇದುವರೆಗೆ ಖಳನಾಯಕನಾಗಿಯೇ ಮಿಂಚಿದ್ದ ರವಿಶಂಕರ್ ಅವರು ಚಿತ್ರದ ಮೂಲಕ ಪಾಸಿಟೀವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಪೊಲೀಸ್ ಅಧಿಕಾರಿ
ಎನ್.ಛಲಪತಿ ಅವರ ಪಾತ್ರ. ಇಂಥ ಪಾತ್ರ ಕೊಟ್ಟದ್ದಕ್ಕಾಗಿ ಅವರು ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಿದರು.

`ಅಪರಾಧಿಗಳ ಯಾವ ಪಾತ್ರ ನೋಡಿದರೂ ಎದೆಗೆ ಒದೆಯಬೇಕು ಅನ್ನಿಸುತ್ತೆ. ಅಷ್ಟು ಮನೋಜ್ಞವಾಗಿ ಪಾತ್ರಗಳು ಮೂಡಿ ಬಂದಿವೆ. ನಿರ್ದೇಶಕರು ತೆಲುಗು ಮೂಲದವರಾದರೂ ಸಂಭಾಷಣೆಗಳ ಮೇಲೆ ಹೊಂದಿರುವ ಹಿಡಿತ ಗಮನಿಸಬೇಕಾದದ್ದು.

ಪ್ರತಿ ಸಾಲನ್ನು ಕೂಡ ತಿದ್ದಿ ತೀಡಿ ಒಪ್ಪಗೊಳಿಸಿದ್ದಾರೆ~ ಎಂಬ ಮೆಚ್ಚುಗೆಯ ಮಾತು ಹಿರಿಯ ಕಲಾವಿದ ಶ್ರೀನಿವಾಸಮೂರ್ತಿ ಅವರಿಂದ. ಅವರು ಚಿತ್ರದ ಪಾತ್ರವೊಂದಕ್ಕೆ ಧ್ವನಿ ನೀಡಿದ್ದಾರೆ.

ಕೊನೆಗೆ ಮಾತನಾಡಿದ್ದು ನಿರ್ದೇಶಕ ಶ್ರೀನಿವಾಸರಾಜು. `ಚಿತ್ರದಲ್ಲಿ ಯಾವುದೇ ಸಂದೇಶವಿಲ್ಲ. ಆದರೆ ಆಸ್ವಾದಿಸುವವರಿಗೆ ಯಾವುದೇ ಕೊರತೆಯಿಲ್ಲ.

ಚಿತ್ರಪ್ರೇಮಿಗಳಿಗಂತೂ ನಮ್ಮ ಪ್ರಯತ್ನ ಇಷ್ಟವಾಗಲಿದೆ~ ಎಂದು ನಕ್ಕರು. ನಟರಾದ  ರಘು ಮುಖರ್ಜಿ, ನಿಶಾ ಕೊಠಾರಿ, ಕರಿಸುಬ್ಬು, ಪೆಟ್ರೋಲ್ ಪ್ರಸನ್ನ, ಡ್ಯಾನಿ, ಸಂಕಲನಕಾರ ಮನೋಹರ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT