ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ.ಕ; ಪಕ್ಷಕ್ಕೆ ಶಸ್ತ್ರಚಿಕಿತ್ಸೆ ತುರ್ತು ಅಗತ್ಯ

Last Updated 4 ಜೂನ್ 2011, 8:55 IST
ಅಕ್ಷರ ಗಾತ್ರ

ಮಂಗಳೂರು: `ಕಾಂಗ್ರೆಸ್‌ನ ಹಿರಿಯ ನಾಯಕರು ಒಟ್ಟಾಗಿ ಜಿಲ್ಲಾ ಕಾಂಗ್ರೆಸ್ ಘಟಕಕ್ಕೆ `ಶಸ್ತ್ರಚಿಕಿತ್ಸೆ~ ನಡೆಸದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷ ಇನ್ನಷ್ಟು ಪಾತಾಳಕ್ಕೆ ಇಳಿಯಲಿದೆ. ಪ್ರಸ್ತುತ ಗಳಿಸಿರುವ ಸ್ಥಾನಗಳೂ ಕೈ ತಪ್ಪಲಿವೆ~...

ಕಾಂಗ್ರೆಸ್ ಪ್ರಮುಖ ನಾಯಕರೊಬ್ಬರ ಎಚ್ಚರಿಕೆ ಮಿಶ್ರಿತ ಸಲಹೆ ಇದು. ಜಿಲ್ಲಾ ಕಾಂಗ್ರೆಸ್‌ನಲ್ಲಿನ ಪ್ರಮುಖ ನಾಯಕರ ಮನಸ್ಸಲ್ಲಿಯೂ ಕಾಡುತ್ತಿರುವ ಪ್ರಶ್ನೆ ಇದೇ ಆಗಿದೆ. ಕರಾವಳಿ ಭಾಗದಲ್ಲಿ ಕಾಂಗ್ರೆಸ್‌ನ ತ್ರಿಮೂರ್ತಿಗಳಾದ (ಜನಾರ್ದನ ಪೂಜಾರಿ, ಎಂ. ವೀರಪ್ಪ ಮೊಯಿಲಿ, ಆಸ್ಕರ್ ಫರ್ನಾಂಡಿಸ್) ಅವರದ್ದು ಒಂದೊಂದು ದಿಕ್ಕು. ಕಳೆದ ಕೆಲವು ವರ್ಷಗಳಿಂದ ಮೂವರೂ ಜತೆಯಾಗಿ ಕೆಲಸ ಮಾಡಿದ ಉದಾಹರಣೆ ಇಲ್ಲ.

ಇದರ ನೇರ ಪರಿಣಾಮ ಕಾಂಗ್ರೆಸ್ ಜಿಲ್ಲಾ ಘಟಕದ ಮೇಲಾಗಿದೆ. ಮೂವರು ಹಿರಿಯ ನಾಯಕರ ಬೆಂಬಲಿಗರ ಚಾಳಿಯೂ ಅದೇ. ಅವರೆಂದೂ ಒಟ್ಟಾಗಿ ಕೆಲಸ ಮಾಡಿದ್ದಿಲ್ಲ. ಪ್ರತ್ಯೇಕ ಪ್ರತ್ಯೇಕವಾಗಿ ಪ್ರತಿಭಟನೆ, ಸುದ್ದಿಗೋಷ್ಠಿ, ಹೋರಾಟ ನಡೆಸುವುದರಲ್ಲಿಯೇ ಅವರಿಗೆ ತುಂಬಾ ಆಸಕ್ತಿ ಎಂದು ಜಿಲ್ಲೆಯ ಮತ್ತೊಬ್ಬರ ಮುಖಂಡರು ಅಸಮಾಧಾನ ಸೂಚಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕಕ್ಕೆ ಇನ್ನೂ ಪೂರ್ಣ ಪ್ರಮಾಣದ ಸಮಿತಿಯೇ ರಚನೆ ಆಗಿಲ್ಲ. ಜನಾರ್ದನ ಪೂಜಾರಿ ಹಾಗೂ ಜಿಲ್ಲಾ ಘಟಕ ಅಧ್ಯಕ್ಷ ರಮಾನಾಥ ರೈ ಕೆಪಿಸಿಸಿಗೆ ಜಿಲ್ಲಾ ಪದಾಧಿಕಾರಿಗಳ ಪಟ್ಟಿ ಸಲ್ಲಿಸಿದ್ದರು. ಕೆಪಿಸಿಸಿ ರೈ ಪಟ್ಟಿಯನ್ನು ಮಾನ್ಯ ಮಾಡಿಲ್ಲ ಎಂದು ಅವರು ತಿಳಿಸಿದರು.

ಕರಾವಳಿಯಿಂದ ಶಾಸಕ ಯು.ಟಿ. ಖಾದರ್, ಜಿ.ಎ.ಬಾವಾ, ಬಿ.ಎ.ಮೊಯ್ದಿನ್, ಎಂ.ಎ.ಗಫೂರ್, ಐವನ್ ಡಿಸೋಜ ಅವರನ್ನು ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಗೆ ಸೇರಿಸಿಕೊಳ್ಳಲಾಗಿದೆ. ಆದರೆ ಹಿಂದೂ ಮುಖಂಡರಿಗೆ ಅವಕಾಶ ನೀಡಿಲ್ಲ. ಅಲ್ಪಸಂಖ್ಯಾತ ಸಮುದಾಯದ ಐವರು ಮುಖಂಡರನ್ನು ಸೇರಿಸಿಕೊಳ್ಳುವ ಔಚಿತ್ಯವೇನಿತ್ತು. ಇದು ಪಕ್ಷಕ್ಕೆ ಮತ್ತೊಂದು ಹಿನ್ನಡೆ.

ನಿಷ್ಠಾವಂತ ಕಾರ್ಯಕರ್ತರು ಈ ಬೆಳವಣಿಗೆ ಬಳಿಕ ಮತ್ತಷ್ಟು ತೆರೆಮರೆಗೆ ಸರಿದಿದ್ದಾರೆ ಎಂದು ಹಿರಿಯ ಮುಖಂಡರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು. ಯುವ ಕಾಂಗ್ರೆಸ್ ಅಭಿಯಾನದಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ 15,000 ಹಾಗೂ ಉಡುಪಿ ಲೋಕಸಭಾ ಕ್ಷೇತ್ರದಲ್ಲಿ 10,000 ಹೊಸ ಸದಸ್ಯರು ಆಗಿದ್ದಾರೆ. ಮಂಗಳೂರಿನಲ್ಲಿ ಒಂದು ಲಕ್ಷ ಸದಸ್ಯರ ಗುರಿ ಎಂದು ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ನಾಯಕರು ಹೇಳಿಕೆ ನೀಡಿದ್ದರು.

ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ಪಕ್ಷದ ಜಿಲ್ಲಾ ಕಚೇರಿಗೆ ಬಂದಾಗ ಪಾಲಿಕೆ ಸದಸ್ಯರು 200-250 ಸದಸ್ಯರ ಸೇರ್ಪಡೆಗೊಳಿಸುವುದಾಗಿ ಭರವಸೆ ನೀಡಿದ್ದರು. ಯಾರೂ ಸಹ ಅಷ್ಟು ಸಂಖ್ಯೆಯ ಸದಸ್ಯರ ಸೇರ್ಪಡೆಗೊಳಿಸಲಿಲ್ಲ. ತಮ್ಮನ್ನು ತಾವು ನಿಷ್ಕ್ರಿಯರು ಎಂಬುದನ್ನು ತೋರಿಸಿಕೊಟ್ಟರು ಎಂದು ಅವರು ಆಕ್ರೊಶ ವ್ಯಕ್ತಪಡಿಸಿದರು.

ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕ, ಎನ್‌ಎಸ್‌ಯುಐ, ಎಸ್‌ಸಿ-ಎಸ್‌ಟಿ ಘಟಕ, ಇಂಟಕ್ ನಿಷ್ಕ್ರಿಯಗೊಂಡಿವೆ. ಅವರಿಗೆ ಮಾರ್ಗದರ್ಶನ ಕೊಡುವವರು ಇಲ್ಲ. ಹಾಗಾಗಿ ಅವರಿಂದ ಹೆಚ್ಚು ನಿರೀಕ್ಷೆ ಮಾಡುವುದು ತಪ್ಪು. ಈ ಘಟಕಗಳನ್ನು ಸರಿಪಡಿಸದೆ ಹೆಚ್ಚಿನ ನಿರೀಕ್ಷೆ ಇಡುವುದು ತಪ್ಪು ಎಂಬ ಅಭಿಪ್ರಾಯ ಜಿಲ್ಲಾ ಮುಖಂಡರಲ್ಲಿದೆ.

ಲೋಕಸಭಾ ಚುನಾವಣೆಯಲ್ಲಿ ಜನಾರ್ದನ ಪೂಜಾರಿ ಸೋಲು ಕಾಂಗ್ರೆಸ್ ಕಾರ್ಯಕರ್ತರ ಪಾಲಿಗೆ ಮರ್ಮಾಘಾತ. ಜಿಲ್ಲಾ ಪಂಚಾಯಿತಿಯಲ್ಲಿ 16 ಸ್ಥಾನ ಇದ್ದುದು 11ಕ್ಕೆ ಇಳಿದಿದೆ. ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯ(ಎಸ್‌ಡಿಪಿಐ) ಸ್ಪರ್ಧಿಸಿದ್ದರಿಂದ ಅಲ್ಪಸಂಖ್ಯಾತರ ಮತಗಳು ಒಡೆದುಹೋಗಿ ಕಾಂಗ್ರೆಸ್ 4-5 ಸ್ಥಾನ ಕಳೆದುಕೊಂಡಿತು.

ಎಸ್‌ಡಿಪಿಐನಿಂದ ಉಂಟಾಗಬಹುದಾದ ಸಮಸ್ಯೆಯನ್ನು ಮೊದಲೇ ಅರಿತು ಸ್ಥಳೀಯ ಕಾಂಗ್ರೆಸ್ ನಾಯಕರು ಸರಿ ಮಾಡಬೇಕಿತ್ತು. ಹಾಗೆ ಮಾಡಲಿಲ್ಲ. ಅದರ ಪರಿಣಾಮವನ್ನು ಪಕ್ಷವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯಲ್ಲಿ ಅನುಭವಿಸುವಂತಾಯಿತು.

ಈ ರಾಜಕೀಯ ಸಮಸ್ಯೆಯನ್ನು ಈಗಲೂ ಸರಿಪಡಿಸಬಹುದು. ಆದರೆ ಆ ಕೆಲಸ ಆಗುತ್ತಿಲ್ಲ. ಹಾಗೆ ಬಿಟ್ಟರೆ ಮುಂದಿನ ಚುನಾವಣೆಗಳಲ್ಲಿ ಇನ್ನಷ್ಟು ಸೋಲು ಕಾಣವುದು ಖಚಿತ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೊಸ ಪಕ್ಷವೊಂದರಿಂದಾದ ಸಮಸ್ಯೆಯನ್ನು ವಿಶ್ಲೇಷಿಸಿದರು.

ಪಾಲಿಕೆ ಆಡಳಿತವೂ ಇಲ್ಲ: ಪಾಲಿಕೆ ವ್ಯಾಪ್ತಿಯಲ್ಲಿ ಕಾಂಗ್ರೆಸ್ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಆಡಳಿತದ ಹಿಡಿತ ಇಲ್ಲ. ಅಧಿಕಾರಿಗಳು ಕಾಂಗ್ರೆಸ್ ನಾಯಕರ ಮಾತು ಕೇಳುವುದಿಲ್ಲ. ಹಾಗಾಗಿ ಪಾಲಿಕೆ ಕಾಂಗ್ರೆಸ್ ಸದಸ್ಯರ ಕ್ಷೇತ್ರದಲ್ಲಿ ಸುಸೂತ್ರವಾಗಿ ಕೆಲಸ ಆಗಲ್ಲ. ಕಾಂಗ್ರೆಸ್‌ನ ಹಿರಿಯ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಕಿರಿಯ ಸದಸ್ಯರು ಅದರಲ್ಲೂ ಮಹಿಳಾ ಸದಸ್ಯರ ಕ್ಷೇತ್ರದಲ್ಲಿ ನಿಧಾನಗತಿಯಲ್ಲಿ ಕೆಲಸಗಳು ಸಾಗುತ್ತಿವೆ.

ಹಿರಿಯ ಸದಸ್ಯರು ಸಹಕಾರ, ಮಾರ್ಗದರ್ಶನ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಕಾರ್ಪೊರೇಟರ್ ಒಬ್ಬರು ಪ್ರಜಾವಾಣಿ ಬಳಿ ಅಸಮಾಧಾನ ವ್ಯಕ್ತಪಡಿಸಿದರು.ನಗರ ವ್ಯಾಪ್ತಿಯಲ್ಲಿ ಪಕ್ಷದಲ್ಲಿ ಸಮರ್ಥ ನಾಯಕರು ಇಲ್ಲ. ನಾಯಕತ್ವ ಗುಣ ಇರುವವರಿಗೆ ಹುದ್ದೆ ನೀಡದೆ ಮೂಲೆಗೆ ಸರಿಸಲಾಗಿದೆ. ಹಿಂಬಾಲಕರು ಹೆಚ್ಚು ಸುದ್ದಿಯಲ್ಲಿರುತ್ತಾರೆ ಎಂಬ ಆಕ್ರೋಶ ಕಾಂಗ್ರೆಸ್ ವಲಯದಲ್ಲಿ ಕೇಳಿ ಬಂದಿದೆ.

ಜಿಲ್ಲೆಯ 16 ಬ್ಲಾಕ್‌ಗಳಿಗೆ ಅಧ್ಯಕ್ಷರನ್ನು ಜಿ.ಪಂ. ಚುನಾವಣೆಗೆ ಮೊದಲು ನೇಮಿಸಲಾಗಿತ್ತು. ಈ ಪೈಕಿ ಕೆಲವರು ಚುನಾವಣೆಯಲ್ಲಿ ನಿಂತು ಸೋಲು ಅನುಭವಿಸಿದರು. ಆದರೆ ಅವರಿಗೆ ಧೈರ್ಯ ತುಂಬುವ ಕೆಲಸ ಆಗಿಲ್ಲ.

ಮತ್ತೆ ಹೇಗೆ ಪಕ್ಷ ಸಂಘಟನೆಯ ನಿರೀಕ್ಷೆ ಮಾಡುವುದು ಹೇಗೆ? ಎಂಬುದು ಪಕ್ಷದ ನಿಷ್ಠಾವಂತರ ಕಾರ್ಯಕರ್ತರೊಬ್ಬರ ಪ್ರಶ್ನೆ. ಜನಾರ್ದನ ಪೂಜಾರಿ ಪಕ್ಷದ ಜಿಲ್ಲಾ ಕಚೇರಿಗೆ ಭೇಟಿ ನೀಡದೆ ವರ್ಷ ಕಳೆಯಿತು. ಕೇಂದ್ರ ಸಚಿವ ವೀರಪ್ಪ ಮೊಯಿಲಿ ತಾವು ಈ ವಿಷಯದಲ್ಲಿ ತಲೆ ಹಾಕುವುದಿಲ್ಲ ಎಂದು ಈಗಾಗಲೇ ಸ್ಪಷ್ಟವಾಗಿ ತಿಳಿಸಿದ್ದಾರೆ. ಆಸ್ಕರ್ ಫರ್ನಾಂಡಿಸ್ ಅವರಿಗೆ ಸಮಸ್ಯೆ ಬಗೆಹರಿಸುವ ಸಾಮರ್ಥ್ಯ ಇದೆ.

ಗಾಂಧಿ ಕುಟುಂಬಕ್ಕೂ ಅವರು ಆಪ್ತರು. ಆದರೆ ಜಿಲ್ಲೆಯಲ್ಲಿನ ಪಕ್ಷದ ಸಂಘಟನೆ-ನಾಯಕತ್ವ ಸಮಸ್ಯೆ ಪರಿಹರಿಸುವ ಆಸಕ್ತಿ ತೋರುತ್ತಿಲ್ಲ ಎಂಬ ಬೇಸರವನ್ನು ಹಿರಿಯ ಕಾರ್ಯಕರ್ತರೊಬ್ಬರು ಹೊರಹಾಕಿದರು.
ಪಕ್ಷದ ಜಿಲ್ಲಾ ಮಟ್ಟದ ಸಭೆಯೂ ಸಮರ್ಪಕವಾಗಿ ನಡೆಯುತ್ತಿಲ್ಲ. ಬಿಜೆಪಿ ಸರ್ಕಾರದ ಹಗರಣಗಳ ಬಗ್ಗೆ ಸಾಕಷ್ಟು ಹೋರಾಟ ನಡೆಸುವ ಅವಕಾಶ ಇದ್ದರೂ ಪಕ್ಷ ಅದನ್ನು ಬಳಸಿಕೊಂಡಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪದಾಧಿಕಾರಿ ಪಟ್ಟಿಯಲ್ಲಿ ಸಾಕಷ್ಟು ಪಳಗಿದವರಿಗೆ, ನಿಷ್ಠಾವಂತರಿಗೆ ಅವಕಾಶ ಸಿಗಬೇಕು. ಆಗ ಪಕ್ಷಕ್ಕೆ ಸ್ವಲ್ಪ ಕಾಯಕಲ್ಪ ಸಿಗಬಹುದು. ಇಲ್ಲದಿದ್ದರೆ ಚುನಾವಣೆಯಲ್ಲಿ ವಿರೋಧ ಪಕ್ಷದವರು ಗೆಲುವು ಸಾಧಿಸಲು ಹೆಚ್ಚು ಪ್ರಚಾರ ನಡೆಸಬೇಕಿಲ್ಲ ಎಂದು ಅವರು ಭವಿಷ್ಯದ ದಿನಗಳ ಬಗ್ಗೆ ಎಚ್ಚರಿಕೆಯ ಮಾತನ್ನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT