ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ.ಕ: ರೂ 34 ಕೋಟಿ ವಿಶೇಷ ಅನುದಾನ

Last Updated 15 ಅಕ್ಟೋಬರ್ 2011, 10:55 IST
ಅಕ್ಷರ ಗಾತ್ರ

ಮಂಗಳೂರು: ಮುಖ್ಯಮಂತ್ರಿ ಅವರ ತವರು ಜಿಲ್ಲೆ ದಕ್ಷಿಣ ಕನ್ನಡವನ್ನು ಮಾದರಿ ಜಿಲ್ಲೆಯನ್ನಾಗಿ ರೂಪಿಸುವುದಕ್ಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಜಿಲ್ಲೆಗೆ 34 ಕೋಟಿ ರೂಪಾಯಿಗಳ ವಿಶೇಷ ಅನುದಾನದ ಭರವಸೆ ಸಿಕ್ಕಿದೆ. ಜತೆಗೆ 2020ರ ವೇಳೆಗೆ ಜಿಲ್ಲೆಯಲ್ಲಿ ಆಗಬೇಕಿರುವ ಅಭಿವೃದ್ಧಿ ಕಾಮಗಾರಿಗಳ ದೂರದೃಷ್ಟಿ ಯೋಜನೆ (ವಿಷನ್ ಡಾಕ್ಯುಮೆಂಟ್) ಕಡತವೂ ಸಿದ್ಧವಾಗಿದ್ದು, ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಟಿ.ಶೈಲಜಾ ಭಟ್ ಹೇಳಿದ್ದಾರೆ.

ಜಿಲ್ಲೆಯಲ್ಲಿ ಆಗಬೇಕಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಲು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಇದೇ 17ರಂದು ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ಕರೆದಿದ್ದಾರೆ. ಜಿಲ್ಲಾ ಪಂಚಾಯಿತಿ ಸಿದ್ಧಪಡಿಸಿರುವ 2,500 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳ ವಿವರಗಳನ್ನು ಒಳಗೊಂಡ 600 ಪುಟಗಳ ಈ ವಿಷನ್ ಡಾಕ್ಯುಮೆಂಟ್ ಇದೇ ಸಂದರ್ಭದಲ್ಲಿ ಸಿಎಂ ಅವರಿಗೆ ನೀಡಲಾಗುವುದು ಎಂದು ಅವರು ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯ ರಸ್ತೆಗಳು ತೀರಾ ಹದಗೆಟ್ಟಿದ್ದು, ಅವುಗಳ ದುರಸ್ತಿಗಾಗಿ 13.14 ಕೋಟಿ ರೂಪಾಯಿ ನೀಡುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ. ಜಿಲ್ಲೆಯ ಮೂಲಸೌಕರ್ಯ ಅಭಿವೃದ್ಧಿ ಅದರಲ್ಲೂ ಮುಖ್ಯವಾಗಿ ರಸ್ತೆಗಳ ಅಭಿವೃದ್ಧಿಗೆ ಹೆಚ್ಚುವರಿಯಾಗಿ ಇನ್ನೂ 20 ಕೋಟಿ ರೂಪಾಯಿ ನೀಡಲು ಸಹ ಸಿಎಂ ಒಪ್ಪಿಕೊಂಡಿದ್ದಾರೆ.

ಈ ಅನುದಾನವನ್ನು ಜಿಲ್ಲಾ ಪಂಚಾಯಿತಿಯ ಎಲ್ಲ 35 ಕ್ಷೇತ್ರಗಳಿಗೂ ಸಮನಾಗಿ ಹಂಚಿಕೆ ಮಾಡಲಾಗುವುದು. ಸರ್ಕಾರ ಈಗಾಗಲೇ 1 ಕೋಟಿ ರೂಪಾಯಿ ಒದಗಿಸಿದೆ ಎಂದು ಅವರು ವಿವರಣೆ ನೀಡಿದರು.

ಬೇಸಿಗೆಯಲ್ಲಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಬವಣೆ ತಪ್ಪಿಸಲು ಬಹುಗ್ರಾಮಗಳ ಮೇಲ್ಮೈ ಕುಡಿಯುವ ನೀರಿಗಾಗಿ 46 ಕಾಮಗಾರಿಗಳನ್ನು ಕೈಗೊಳ್ಳಲು 564.31 ಕೋಟಿ ರೂಪಾಯಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಜಿಲ್ಲೆಯ 368 ಗ್ರಾಮಗಳ ಪೈಕಿ 206 ಗ್ರಾಮಗಳಿಗೆ ಇದರಿಂದ ಕುಡಿಯುವ ನೀರಿನ ಶಾಶ್ವತ ಯೋಜನೆ ರೂಪಿಸಿದಂತಾಗುತ್ತದೆ ಎಂದರು.

ಅನುದಾನ ಬಿಡುಗಡೆ: 2011-12ನೇ ಸಾಲಿಗೆ ಜಿಲ್ಲೆಗೆ ಯೋಜನೆ ಮತ್ತು ಯೋಜನೇತರ ಬಾಬ್ತಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ 372.94 ಕೋಟಿ ರೂಪಾಯಿ ಅನುದಾನ ನಿಗದಿಪಡಿಸಲಾಗಿದ್ದು, ಸರ್ಕಾರ 260.12 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ರಾಜ್ಯ ವಲಯದಲ್ಲಿ 28.26 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಈ ಎಲ್ಲಾ ಅನುದಾನವನ್ನು ವಿವಿಧ ಜಿ.ಪಂ. ಅಧೀನ ಇಲಾಖೆಗಳಿಗೆ ಬಿಡುಗಡೆ ಮಾಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಾಧಿಸಲಾಗುವುದು ಎಂದು ಅಧ್ಯಕ್ಷರು ವಿಶ್ವಾಸ ವ್ಯಕ್ತಪಡಿಸಿದರು.

ಗ್ರಾಮೀಣ ನೀರು ಪೂರೈಕೆಗೆ 56.38 ಕೋಟಿ ರೂಪಾಯಿ ನಿಗದಿಗೊಳಿಸಲಾಗಿದ್ದು, 13.49 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ರಸ್ತೆ, ಸೇತುವೆಗಾಗಿ 13ನೇ ಹಣಕಾಸಿನಲ್ಲಿ ರೂ. 5.46 ಕೋಟಿ, ಇಂದಿರಾ ಆವಾಸ್ ವಸತಿ ಯೋಜನೆಯಲ್ಲಿ ರೂ. 11.16 ಕೋಟಿ, ಬಸವ ವಸತಿ ಯೋಜನೆಯಲ್ಲಿ ರೂ. 70 ಕೋಟಿ ನಿಗದಿಪಡಿಸಲಾಗಿದೆ.
 
ಸಾರ್ವಜನಿಕ ಶಿಕ್ಷಣ ಇಲಾಖೆಗೆ ರೂ. 230.42 ಕೋಟಿ, ಕೃಷಿ ಇಲಾಖೆಗೆ ರೂ.3.72 ಕೋಟಿ, ತೋಟಗಾರಿಕೆ ಇಲಾಖೆಗೆ ರೂ. 13.04 ಕೋಟಿ, ಮೀನುಗಾರಿಕೆ ಇಲಾಖೆಗೆ ರೂ. 73.55 ಲಕ್ಷ, ಸಮಾಜ ಕಲ್ಯಾಣ ಇಲಾಖೆಗೆ ರೂ. 8.39 ಕೋಟಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ರೂ. 9.45 ಕೋಟಿ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ರೂ. 67.26 ಲಕ್ಷ, ಪಶುಸಂಗೋಪನೆ ಇಲಾಖೆಗೆ ರೂ. 5.47 ಕೋಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರೂ. 31.31 ಕೋಟಿ, ಆಯುಷ್ ಇಲಾಖೆಗೆ ರೂ. 89.19 ಲಕ್ಷ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ರೂ. 38.46 ಕೋಟಿ, ಐಟಿಡಿಪಿ ಇಲಾಖೆಗೆ ರೂ. 5.91 ಕೋಟಿ ನಿಗದಿಯಾಗಿದೆ ಎಂದರು.

ತೋಟಗಾರಿಕಾ ಮಿಷನ್‌ನಿಂದ ಸುಳ್ಯದ ಹಳದಿ ರೋಗ ಪೀಡಿತ ಅಡಿಕೆ ಬೆಳೆ ಪ್ರದೇಶಗಳಲ್ಲಿ ತಾಳೆ ಎಣ್ಣೆ, ರಬ್ಬರ್, ಭತ್ತದಂತಹ ಬದಲಿ ಬೆಳೆಗಳನ್ನು ಬೆಳೆಸುವುದಕ್ಕೆ ಆ ಭಾಗದ ಜನರ ಒಲವಿದೆ. ಹೀಗಾಗಿ ಮತ್ತೆ ಅಡಿಕೆ ತೋಟ ಬೆಳೆಸುವ ವಿಚಾರವನ್ನು ಸದ್ಯ ಕೈಬಿಟ್ಟಿರುವುದಾಗಿ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ಕುಮಾರ್ ಮೇನಾಲ ಹೇಳಿದರು.

ಉಪಾಧ್ಯಕ್ಷೆ ಧನಲಕ್ಷ್ಮಿ ಜನಾರ್ದನ್, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಜನಾರ್ದನ ಗೌಡ, ಉಪಕಾರ್ಯದರ್ಶಿ ಶಿವರಾಮೇ ಗೌಡ, ಮುಖ್ಯ ಯೋಜನಾ ಅಧಿಕಾರಿ ಮಹಮ್ಮದ್ ನಜೀರ್, ಇತರ ಅಧಿಕಾರಿಗಳು ಇದ್ದರು.

`ಹಿರೇಬಂಡಾಡಿ ಗ್ರಾ.ಪಂ.ಗೆ ಆಡಳಿತಾಧಿಕಾರಿ~
ಸಾಮಾನ್ಯ ಸಭೆ ನಡೆಸುವಲ್ಲಿ ವಿಫಲವಾದ ಪುತ್ತೂರು ತಾಲ್ಲೂಕು ಹಿರೇಬಂಡಾಡಿ ಗ್ರಾ, ಪಂಚಾಯಿತಿ ಬರ್ಖಾಸ್ತುಗೊಳಿಸಲು ಜಿಲ್ಲಾ ಪಂಚಾಯಿತಿ ಕೈಗೊಂಡಿರುವ ನಿರ್ಣಯದ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸುವುದಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ. ಅವರಿಂದ ಸಮ್ಮತಿ ದೊರೆತ ತಕ್ಷಣ ಗ್ರಾ.ಪಂ. ಸಹಜವಾಗಿಯೇ ಬರ್ಖಾಸ್ತುಗೊಳ್ಳಲಿದ್ದು, ಬಳಿಕ ಆಡಳಿತಾಧಿಕಾರಿ ನೇಮಿಸಲಾಗುವುದು ಎಂದು ಉಪ ಕಾರ್ಯದರ್ಶಿ ಶಿವರಾಮೇ ಗೌಡ ಹೇಳಿದರು.

`ಪಟಾಲಪ್ಪ ವಿರುದ್ಧ ಸುಪ್ರೀಂಗೆ ಅರ್ಜಿ~
ಭಾರಿ ಅವ್ಯವಹಾರ ನಡೆಸಿ ಅಮಾನತುಗೊಂಡಿರುವ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಎಸ್.ಆರ್.ಪಟಾಲಪ್ಪ ಅವರಿಗೆ ಹೈಕೋರ್ಟ್ ಜಾಮೀನು ನೀಡಿರುವುದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಅವರೀಗ ಬೆಂಗಳೂರಿನಲ್ಲೇ ಇದ್ದಾರೆ ಎಂದು ಶಿವರಾಮೇ ಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2020 ವಿಷನ್ ಡಾಕ್ಯುಮೆಂಟ್
ಮುಂದಿನ 10 ವರ್ಷಗಳಲ್ಲಿ ಆಗಬೇಕಿರುವ ಎಲ್ಲಾ ಇಲಾಖೆಗಳಲ್ಲೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸಲಾಗಿದೆ. ಅರಸಿನಮಕ್ಕಿ-ಶಿಬಾಜೆ ರಸ್ತೆ, ಬಳ್ಪ-ಗುತ್ತಿಗಾರು ರಸ್ತೆ, ನಡುಗಲ್ಲು-ಕಲ್ಮಕಾರು ರಸ್ತೆ, ಅರಸಿನಮಕ್ಕಿ-ಶಿಬಾಜೆ ರಸ್ತೆ ಸಹಿತ 15 ರಸ್ತೆಗಳ ಅಭಿವೃದ್ಧಿ, 360 ಕಾಲು ಸೇತುವೆಗಳು, 15 ತೂಗು ಸೇತುವೆ ನಿರ್ಮಾಣ ಮತ್ತಿತರೆ ಹಲವು ಯೋಜನೆಗಳು ಸೇರಿವೆ ಎಂದು ಅಧ್ಯಕ್ಷೆ ಕೆ.ಟಿ.ಶೈಲಜಾ ಭಟ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT