ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರೋಡೆ ಯತ್ನ: ನಾಲ್ವರ ಸೆರೆ

Last Updated 19 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯಾರಣ್ಯಪುರದ ಅಂಬಾಭವಾನಿನಗರದ ಮೊದಲನೇ ಹಂತದಲ್ಲಿ ದರೋಡೆ ನಡೆಸಲು ಯತ್ನಿಸುತ್ತಿದ್ದ ನಾಲ್ಕು ಜನರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.ಚಲ್ಲಕುಮಾರ್ (28), ಮಂಜುನಾಥ (24), ವಿಜಯ್ (25) ಮತ್ತು ಇಬ್ರಾಹಿಂ ಖಲೀಲ್ ಉಲ್ಲಾ (22) ಬಂಧಿತರು.

ಆರೋಪಿಗಳು ಇದೇ ತಿಂಗಳ 6ರಂದು ವಿದ್ಯಾರಣ್ಯಪುರದ ಅಂಬಾಭವಾನಿನಗರದ ಮುಖ್ಯರಸ್ತೆಯಲ್ಲಿ ಕಾರನ್ನು ನಿಲ್ಲಿಸಿಕೊಂಡು ದರೋಡೆಗೆ ಹೊಂಚು ಹಾಕುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು ಬಾಣಸವಾಡಿ ನಿವಾಸಿ ಮೈಕೆಲ್ ಎಂಬುವರ ಕೊಲೆಗೆ ಸಂಚು ರೂಪಿಸಿದ್ದರು ಎಂಬ ಮಾಹಿತಿ ವಿಚಾರಣೆ ವೇಳೆ ಬಹಿರಂಗಗೊಂಡಿದೆ. ಅಲ್ಲದೇ, ಆರೋಪಿಗಳ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದರೋಡೆ, ಕಳವು ಹಾಗೂ ಕೊಲೆ ಯತ್ನದ ಪ್ರಕರಣಗಳು ದಾಖಲಾಗಿವೆ.

ಬಾಣಸವಾಡಿ ಠಾಣೆಯ ಅಪರಾಧಿಗಳ ಪಟ್ಟಿಯಲ್ಲಿ ಆರೋಪಿ ಚಲ್ಲಕುಮಾರ್ ಹೆಸರಿದೆ ಎಂದು ಪೊಲೀಸರು ತಿಳಿಸಿದ್ದಾರೆ.`ಆರೋಪಿಗಳು ಮೇ 12ರಂದು ಬಾಣಸವಾಡಿಯ ಮನೆಯೊಂದಕ್ಕೆ ನುಗ್ಗಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿದ್ದರು.
 
ಮೇ 20 ರಂದು ರಾಮಮೂರ್ತಿನಗರದ ಪೆಟ್ರೋಲ್ ಬಂಕ್‌ನಲ್ಲಿ ಕ್ಯಾಷಿಯರ್‌ಗೆ ಮಾರಕಾಸ್ತ್ರಗಳಿಂದ ಬೆದರಿಸಿ, ಒಂದು ಲಕ್ಷದ ಮೂವತ್ತು ಸಾವಿರ ರೂಪಾಯಿಗಳನ್ನು ದೋಚಿದ್ದರು. ಜೂನ್ 11ರಂದು ಆರ್.ಟಿ.ನಗರದಲ್ಲಿ ಗೋವಿಂದರಾಜು ಎಂಬುವರ ಮೇಲೆ ಹಲ್ಲೆ ನಡೆಸಿ 88 ಸಾವಿರ ರೂಪಾಯಿ ದೋಚಿದ್ದರು.

ಜೂನ್ 16 ರಂದು ಹಲಸೂರಿನ ಎಂ.ಎ.ಗಾರ್ಡನ್‌ನಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರು.
ಜೂನ್ 19ರಂದು ಆರ್.ಟಿ.ನಗರದ ಪುಷ್ಪಾಂಜಲಿ ಚಿತ್ರಮಂದಿರದಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು~ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾರು ದರೋಡೆ: ಸಾಫ್ಟ್‌ವೇರ್ ಕಂಪೆನಿ ಉದ್ಯೋಗಿಯೊಬ್ಬರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು, ಅವರ ಕಾರನ್ನು ದರೋಡೆ ಮಾಡಿರುವ ಘಟನೆ ಜೆ.ಪಿ.ನಗರದ ಸಾರಕ್ಕಿ ಮುಖ್ಯರಸ್ತೆಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಈ ಸಂಬಂಧ ಸೌರಬ್ ಘೋಷ್ ಎಂಬುವರು ದೂರು ನೀಡಿದ್ದಾರೆ.

`ಹೆಬ್ಬಾಳದ ಕಚೇರಿಯಿಂದ ಕೆಲಸ ಮುಗಿಸಿಕೊಂಡು ಪೇಯಿಂಗ್ ಗೆಸ್ಟ್‌ನಲ್ಲಿ ನೆಲೆಸಿರುವ ಗೆಳತಿಯನ್ನು ಭೇಟಿ ಮಾಡಲು ಸಾರಕ್ಕಿ ಮುಖ್ಯರಸ್ತೆಗೆ ಹೋಗಿದ್ದೆ. ಇಬ್ಬರೂ ಕಾರಿನಲ್ಲಿ ಕುಳಿತು ಮಾತಾನಾಡುತ್ತಿದ್ದ ವೇಳೆ 12.30ರ ಸುಮಾರಿಗೆ ಮತ್ತೊಂದು ಕಾರಿನಲ್ಲಿ ಬಂದ ಮೂವರು ಅಪರಿಚಿತರು ನನ್ನ ಮೇಲೆ ಹಲ್ಲೆ ನಡೆಸಿ ಕಾರನ್ನು ದರೋಡೆ ಮಾಡಿದರು~ ಎಂದು ಸೌರಭ್ ದೂರಿನಲ್ಲಿ ತಿಳಿಸಿದ್ದಾರೆ.ಜೆ.ಪಿ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT