ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಬಸ್‌ಪೇಟೆಗೆ ಹೇಮಾವತಿ ನೀರು

ಬುಗುಡನಹಳ್ಳಿ ಕೆರೆಯಲ್ಲಿ ನಿಯಮ ಬಾಹಿರವಾಗಿ ಜಾಕ್‌ವೆಲ್
Last Updated 4 ಡಿಸೆಂಬರ್ 2013, 6:43 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ಹಿರೇಹಳ್ಳಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ದಾಬಸ್‌ಪೇಟೆ ಕೈಗಾರಿಕಾ ಪ್ರದೇಶಕ್ಕೆ ಹೇಮಾವತಿ ನೀರು ಹರಿಸುವ ಯೋಜನೆ ಸದ್ದಿಲ್ಲದೆ ಆರಂಭವಾಗಿದೆ.

ಹೇಮಾವತಿ ನೀರು ಹಂಚಿಕೆ ಯೋಜನೆಯ ಮೂಲ ಉದ್ದೇಶವೇ ಇನ್ನೂ ಈಡೇರಿಲ್ಲ. ಒಂದೇ ಒಂದು ಎಕರೆ ಅಚ್ಚುಕಟ್ಟು ಪ್ರದೇಶವನ್ನು ವಿಂಗಡಿ­ಸಿಲ್ಲ. ಅಲ್ಲದೇ ಈ ವರ್ಷ ಡಿಸೆಂಬರ್‌ ತಿಂಗಳು ಬಂದರೂ ಕುಣಿಗಲ್‌, ಗುಬ್ಬಿ, ತುರುವೇಕೆರೆ, ತಿಪಟೂರು, ಶಿರಾ ತಾಲ್ಲೂಕಿನ ಸಾಕಷ್ಟು ಕೆರೆ­ಗಳನ್ನು ತುಂಬಿಸಲು ಸಾಧ್ಯವಾಗಿಲ್ಲ. ಇಷ್ಟಿದ್ದು ಹಿರೇಹಳ್ಳಿ, ದಾಬಸ್‌ಪೇಟೆ ಕೈಗಾರಿಕಾ ಪ್ರದೇಶಕ್ಕೆ 15 ಎಂಎಲ್‌ಡಿ ನೀರು ಕೊಡಲು ಮುಂದಾ­ಗಿರು­ವು­ದರಿಂದ ಮುಂದಿನ ದಿನಗಳಲ್ಲಿ ಹೇಮಾವತಿ ನೀರಿನ ವಿಷಯದಲ್ಲಿ ಮತ್ತಷ್ಟು ಸಮಸ್ಯೆ ಉಂಟಾಗಲಿದೆ ಎಂದು ಹೇಳಲಾಗುತ್ತಿದೆ.

ತುಮಕೂರು ನಗರದ ಇನ್ನೂ 9 ವಾರ್ಡ್‌ಗಳಿಗೆ ಹೇಮಾವತಿ ನೀರಿನ ಸೌಲಭ್ಯ ಕಲ್ಪಿಸಿಲ್ಲ. ಎರಡನೇ ಹಂತದ ಯೋಜನೆ ವ್ಯಾಪ್ತಿಯ ವಾರ್ಡ್‌ಗಳಲ್ಲೂ ಪೂರ್ಣವಾಗಿ ಪೂರೈಕೆ ಮಾಡುತ್ತಿಲ್ಲ. ಹೀಗಿದ್ದು ಬುಗುಡನಹಳ್ಳಿ ಕೆರೆಯಿಂದ ಹಿರೇಹಳ್ಳಿ, ದಾಬಸ್‌ಪೇಟೆಗೆ ನೀರು ಹರಿಸುವ ಪ್ರಯತ್ನ ನಡೆದಿದೆ.

ಕರ್ನಾಟಕ ಕೈಗಾರಿಕಾ ಅಭಿವೃದ್ಧಿ  ಮಂಡಳಿ (ಕೆಐಡಿಯುಬಿ) ನಿಯಮ ಬಾಹಿರವಾಗಿ ಬುಗುಡನಹಳ್ಳಿ ಕೆರೆಯಲ್ಲಿ ಜಾಕ್‌ವೆಲ್‌ ನಿರ್ಮಾಣ ಮಾಡಿರುವುದಲ್ಲದೇ ದೇವರಾಯಪಟ್ಟಣ, ಮೈದಾಳ­­ದವರೆಗೂ ಎಂ.ಎಸ್‌. ಪೈಪ್‌  ಅಳವಡಿ­ಸಿದೆ. ನಗರಸಭೆ ಒಪ್ಪಿಗೆ ಪಡೆಯದೆ ಜಾಕ್‌ವೆಲ್‌ ನಿರ್ಮಾಣ ಅನೇಕ ಪ್ರಶ್ನೆ, ಸಂದೇಹಗಳಿಗೆ ಕಾರಣವಾಗಿದೆ.


ಮೊನ್ನೆಯಷ್ಟೆ ನಡೆದ ನಗರಸಭೆ ಸಾಮಾನ್ಯಸಭೆಯಲ್ಲಿ ಬುಗುಡನಹಳ್ಳಿ ಕೆರೆಯಿಂದ ನೀರು ಹರಿಸುವುದಕ್ಕೆ ವಿರೋಧ ವ್ಯಕ್ತವಾಗಿದೆ. ಆದರೆ ಕುಪ್ಪೂರು ಕೆರೆಯಿಂದ ನೀರು ಕೊಡಲು ಮೌಖಿಕ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೂ ನೀರು ಸಾಕಾಗುತ್ತಿಲ್ಲ. ಆದರೂ ನಮ್ಮ ಜಿಲ್ಲೆಗೆ ಹಂಚಿಕೆಯಾಗಿರುವ ನೀರಿನಲ್ಲಿ ಬೇರೆ ಜಿಲ್ಲೆಯ ಕೈಗಾರಿಕಾ ಪ್ರದೇಶಕ್ಕೆ ನೀರು ಕೊಟ್ಟರೆ ಜಿಲ್ಲೆಯ ನೀರಾವರಿ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸುರೇಶ್‌ಕುಮಾರ್‌ ಅಣತಿಯಂತೆ ಈ ಯೋಜನೆಗೆ ಅನುಮತಿ ನೀಡಲಾಗಿದೆ. ಆದರೆ ಜಿಲ್ಲೆಗೆ ಹಂಚಿಕೆಯಾಗಿರುವ 25 ಟಿಎಂಸಿ ನೀರಿನ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಇದರ ಹಿಂದೆ ಕೈಗಾರಿಕೆಗಳ ಲಾಬಿಯೂ ಕೆಲಸ ಮಾಡಿದೆ ಎನ್ನಲಾಗಿದೆ.

ಆಗಸ್ಟ್‌ನಿಂದ ಡಿಸೆಂಬರ್‌ವರೆಗೂ ನೀರು ಹರಿಸುವುದಾಗಿ ಹೇಳಲಾಗುತ್ತಿದೆ. ಈಗ ಡಿಸೆಂಬರ್‌ ಮೊದಲ ವಾರದಲ್ಲೂ ಜಿಲ್ಲೆಯ ಕೆರೆಗಳನ್ನು ತುಂಬಿಸಲು ಸಾಧ್ಯವಾಗಿಲ್ಲ. ಕೃಷಿ ಹೊರತುಪಡಿಸಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಲ್ಲಿರುವ ಕೆರೆಗಳನ್ನು ತುಂಬಿಸಲು ನೀರು ಸಾಲುತ್ತಿಲ್ಲ. ಇನ್ನು ದಾಬಸ್‌ಪೇಟೆಗೆ ನೀರು ಹರಿದರೆ ಕಾವೇರಿ ಕೊಳ್ಳದ ಜನರಿಗೆ ಮತ್ತಷ್ಟು ಅನ್ಯಾಯವಾಗಲಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಅಚ್ಚುಕಟ್ಟು ಪ್ರದೇಶ ನಿರ್ಮಾಣ ಮಾಡಿದರೆ ಜಿಲ್ಲೆಯ ಕೃಷ್ಣಕೊಳ್ಳದ ಶಿರಾ ಸೇರಿ ಎಲ್ಲಾ ಭಾಗಕ್ಕೂ ನೀರು ಸಿಗುವುದು ಕಷ್ಟವಾಗಲಿದೆ. ಅಲ್ಲದೇ ಈಚೆಗಷ್ಟೇ ಹೆಚ್ಚುವರಿಯಾಗಿ ಶಿರಾ ತಾಲ್ಲೂಕಿಗೆ ಮತ್ತೇ ಸರ್ಕಾರ 1.5 ಟಿಎಂಸಿ ನೀರು ಹಂಚಿಕೆ ಮಾಡಿದೆ.

ತುರುವೇಕೆರೆ, ಕುಣಿಗಲ್ ಶಾಸಕರ ಮೌನ
ತುಮಕೂರು: ಕುಣಿಗಲ್‌ ಹಾಗೂ ಗುಬ್ಬಿ ತಾಲ್ಲೂಕಿನ ಸಿ.ಎಸ್‌.ಪುರ ಭಾಗದ ಕೆರೆಗಳಿಗೆ ಹೇಮಾವತಿ ನೀರು ತುಂಬಿಸದಿರಲು ಶಾಸಕರಾದ ಡಿ.ನಾಗರಾಜಯ್ಯ, ಎಂ.ಟಿ.ಕೃಷ್ಣಪ್ಪ ಮೃದು ಧೋರಣೆ ಕಾರಣ ಎಂದು ಆ ಭಾಗದ ಜನರ ಆರೋಪವಾಗಿದೆ.

ತುಮಕೂರು ತಾಲ್ಲೂಕಿನ ಗೂಳೂರು– ಹೆಬ್ಬೂರು ಏತ ನೀರಾವರಿ ಯೋಜನೆಯಲ್ಲಿ ಶಾಸಕ ಸುರೇಶ್ ಗೌಡ ಒತ್ತಡದ ಕಾರಣ ಸಾಕಷ್ಟು ಕೆರೆಗಳು ತುಂಬಿವೆ. ಆದರೆ ಕುಣಿಗಲ್‌ಗೆ ಈ ಭಾಗ್ಯ ಒದಗಿಬಂದಿಲ್ಲ. ಸಿ.ಎಸ್‌.ಪುರ ಕೆರೆಗೆ ನೀರು ಹರಿದಿಲ್ಲ. ಈ ಕೆರೆಯನ್ನು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ತರಲಾಗಿದೆ. ಆದರೆ ಇದಕ್ಕೆ ಸಿ.ಎಸ್.ಪುರ ಹೋಬಳಿ ಜನ ವಿರೋಧ ವ್ಯಕ್ತಪಡಿಸಿದ್ದರು.

ತಮ್ಮದೇ ಯೋಜನೆಗೆ ಜನತೆ ವಿರೋಧ ವ್ಯಕ್ತಪಡಿಸಿದ್ದರಿಂದ ಸಿಟ್ಟಾಗಿರುವ ಶಾಸಕರು ಕೆರೆ ತುಂಬಿಸಲು ಆಸಕ್ತಿ ತೋರುತ್ತಿಲ್ಲ ಎಂದು ಶಾಸಕರ ಆಪ್ತರು ಹೇಳುತ್ತಿದ್ದಾರೆ. ಯೋಜನೆಗೆ ವಿರೋಧ ವ್ಯಕ್ತಪಡಿಸಿದವರೂ ತಮ್ಮಲ್ಲಿಗೆ ಬಂದು ಕೇಳಿದರೆ ಕೆರೆ ತುಂಬಿಸುವುದಾಗಿ ಹೇಳುತ್ತಿದ್ದಾರೆ. ಇದರಿಂದ ಅಡಕತ್ತರಿಯಲ್ಲಿ ಸಿಲುಕುವಂತಾಗಿದೆ ಎಂದು ಶಾಸಕರ ಆಪ್ತರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT