ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ನೂರಾರು ಗುಡಿಸಲುಗಳು ಭಸ್ಮ

Last Updated 23 ಫೆಬ್ರುವರಿ 2011, 17:20 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ಕೈಗಾರಿಕಾ ಪ್ರದೇಶದ ಬಳಿಯ ರಾಮನಗರದಲ್ಲಿ ಬೆಂಕಿ ಬಿದ್ದು ನೂರಾರು ಗುಡಿಸಲುಗಳು ಭಸ್ಮವಾದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.ಆವರಗೆರೆ ಸುತ್ತಮುತ್ತಲ ಭಾಗಗಳ ದಲಿತರು, ಹಿಂದುಳಿದ ವರ್ಗದವರು ಆವರಗೆರೆ ಸರ್ವೆ ನಂ. 213ರ ವಿವಾದಿತ ಪ್ರದೇಶದಲ್ಲಿ ಸುಮಾರು 3 ತಿಂಗಳ ಹಿಂದೆ ಗುಡಿಸಲು ಹಾಕಿಕೊಂಡಿದ್ದರು.

ಇದು ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ್ದು, ಅದನ್ನು ಈ ಮೊದಲು ಶೈಕ್ಷಣಿಕ ಉದ್ದೇಶಕ್ಕೆ ನೀಡಲಾಗಿತ್ತು. ಸ್ಥಳವು ಶೈಕ್ಷಣಿಕ ಉದ್ದೇಶಕ್ಕೆ ಸೂಕ್ತವಲ್ಲ ಎಂಬ ಕಾರಣಕ್ಕೆ ಅದನ್ನು ಅವರು ಬೇರೆಯವರಿಗೆ ಮಾರಾಟ ಮಾಡಿದ್ದರು. ನಿಗದಿತ ಉದ್ದೇಶಕ್ಕೆ ಬಳಕೆಯಾಗದ ಭೂಮಿಯನ್ನು ತಮಗೆ ನೀಡಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆ, ನಾಗರಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ 350ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ಗುಡಿಸಲು ಹಾಕಿಕೊಂಡಿದ್ದವು ಎಂದು ದಲಿತ ಮುಖಂಡ ಆಲೂರು ನಿಂಗರಾಜ್ ತಿಳಿಸಿದರು.

ಅಡುಗೆಯ ಪಾತ್ರೆ ಪಗಡ, ಬಟ್ಟೆ-ಬರೆ ಹಾಸಿಗೆ ಸುಟ್ಟಿವೆ. ಎರಡು ಹಂದಿ, ಕೋಳಿ ಮತ್ತು ಹಾವು ಕೂಡಾ ಬೆಂಕಿಗಾಹುತಿಯಾಗಿ ಮೃತಪಟ್ಟಿರುವುದು ಸ್ಥಳದಲ್ಲಿ ಕಂಡುಬಂತು.ಬುಧವಾರ ಮಧ್ಯಾಹ್ನ 1 ಗಂಟೆ ವೇಳೆಗೆ 5, 6 ಮಂದಿ ಅಪರಿಚಿತ ದುಷ್ಕರ್ಮಿಗಳು ಮಾರುತಿ ಕಾರಿನಲ್ಲಿ ಆಗಮಿಸಿ, ಬೆಂಕಿಹಚ್ಚಿ ಪರಾರಿಯಾಗಿದ್ದಾರೆ ಎಂದು ದಲಿತ ಮುಖಂಡರು ದೂರಿದರು. ಘಟನೆಗೆ ಕಾರಣರಾದ ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು. ತಮಗೆ ಪರಿಹಾರ ಒದಗಿಸಬೇಕು. ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಬೆಂಕಿ ಆಕಸ್ಮಿಕ ನಡೆದಾಗ ಅಲ್ಲಿ ಯಾರೂ ಇರಲಿಲ್ಲ. ಹಾಗಾಗಿ, ಯಾವುದೇ ಪ್ರಾಣ ಹಾನಿಯಾಗಿಲ್ಲ. ಯಾರಾದರೂ ಉದ್ದೇಶ ಪೂರ್ವಕವಾಗಿ ಹಚ್ಚಿದ್ದಾರೆಯೇ? ಆಕಸ್ಮಿಕವೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಎಸ್. ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.ಸ್ಥಳಕ್ಕಾಗಮಿಸಿದ ಅಧಿಕಾರಿಗಳ ವಿರುದ್ಧ ನಿವಾಸಿಗಳು ಹರಿಹಾಯ್ದರು.

ರಸ್ತೆಯಲ್ಲೇ ಕುಳಿತು ಪ್ರತಿಟನೆ ನಡೆಸಿದರು. ನಗರ ಸಾರಿಗೆ ಬಸ್ ಮೇಲೆ ಕಲ್ಲು ತೂರಾಟ ನಡೆಯಿತು. ಬೆಂಕಿ ನಂದಿಸಲು ಮುಂದಾದ ಇಬ್ಬರ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ. ‘ಅದು ಪರಿಶಿಷ್ಟರಿಗೆ ಸೇರಿದ ಶಿಕ್ಷಣ ಸಂಸ್ಥೆಗೆ ನೀಡಿದ ಜಾಗವಾಗಿದ್ದು, ವಿವಾದ ನ್ಯಾಯಾಲಯದಲ್ಲಿದೆ. ಜಿಲ್ಲಾಧಿಕಾರಿ ಕೇಂದ್ರದಲ್ಲಿ ಇಲ್ಲ. ಬಂದ ನಂತರ ಘಟನೆ ಬಗ್ಗೆ ಚರ್ಚಿಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಚ್. ವಿಜಯಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT