ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆಯಲ್ಲಿ 3,137 ಸೀಟು ಮೀಸಲು; ಆರ್‌ಟಿಇ: ಹಕ್ಕು ಬಳಕೆಗೂ ನೀರಸ ಪ್ರತಿಕ್ರಿಯೆ!

Last Updated 23 ಮೇ 2012, 5:20 IST
ಅಕ್ಷರ ಗಾತ್ರ

ದಾವಣಗೆರೆ: ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ, ಜಿಲ್ಲೆಯ `ಪ್ರತಿಷ್ಠಿತ~ ಎನಿಸಿಕೊಂಡಿರುವ ಅನುದಾನರಹಿತ ಶಾಲೆಗಳಲ್ಲಿ 1ನೇ ತರಗತಿಗೆ ಉಚಿತ ಪ್ರವೇಶ ಪಡೆಯಲು ಪೋಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ!
ಕಾಯ್ದೆ ಪ್ರಕಾರ, ಅವಕಾಶ ವಂಚಿತ ಹಾಗೂ ದುರ್ಬಲ ವರ್ಗದ 3,137 (ಶೇ 25 ಮೀಸಲಿನಂತೆ) ಮಕ್ಕಳಿಗೆ ಈ ಸಾಲಿನಲ್ಲಿ ಅನುದಾನರಹಿತ ಶಾಲೆಗಳಲ್ಲಿ ಪ್ರವೇಶ ಅವಕಾಶವಿದೆ.

ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ. ಇದನ್ನು ಹೊರತುಪಡಿಸಿ ಜಿಲ್ಲೆಯಲ್ಲಿ 310 ಅನುದಾನರಹಿತ ಶಾಲೆಗಳಿವೆ. ಇಲ್ಲಿ ಶೇ 25ರಷ್ಟು ಸೀಟುಗಳನ್ನು ಮೀಸಲಿಡಲಾಗಿದ್ದು, ಪ್ರವೇಶ ಕಲ್ಪಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ. ಆದರೆ, ಪೋಷಕರು ಅರ್ಜಿ ಸಲ್ಲಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ಆಸಕ್ತಿ ತೋರದೆ ಇರುವುದು, ಕಾಯ್ದೆಯ ಪರಿಣಾಮಕಾರಿ ಜಾರಿಗೆ ತೊಡಕಾಗುವ ಸಾಧ್ಯತೆ ಕಂಡುಬಂದಿದೆ. ಇದು, ಇಲಾಖೆ ಅಧಿಕಾರಿಗಳ ನಿರಾಸೆಗೂ ಕಾರಣವಾಗಿದೆ.

ಅನುದಾನರಹಿತ ಶಾಲೆಗಳಲ್ಲಿ ಶೇ 25 ಪ್ರಮಾಣದಲ್ಲಿ 1ನೇ ತರಗತಿಗೆ ಎಷ್ಟು ಸೀಟುಗಳು ಮೀಸಲಾಗಿವೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಅಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಆಯಾ ಗ್ರಾಮದ ಅಥವಾ ಬಡಾವಣೆಯ ಹತ್ತಿರದ ಅನುದಾನರಹಿತ ಶಾಲೆಗಳ ಮಾಹಿತಿ ಬಿಇಒ ಕಚೇರಿಯಲ್ಲಿ ಲಭ್ಯವಿರುತ್ತದೆ. ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಆದರೆ, ಅನುದಾನರಹಿತ ಶಾಲೆಗಳಲ್ಲಿ ಈವರೆಗೆ ಮಕ್ಕಳಿಗೆ ಪ್ರವೇಶ ಪಡೆಯಲು ಪ್ರತಿ ಶಾಲೆಗಳಲ್ಲಿ ಬೆರಳೆಣಿಕೆಯಷ್ಟು ಮಂದಿ ಪೋಷಕರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವಲಯದಲ್ಲಿ ಅತಿ ಹೆಚ್ಚಿನ `ಪ್ರತಿಷ್ಠಿತ~ ಎನಿಸಿಕೊಂಡಿರುವ ಅನುದಾನರಹಿತ ಶಾಲೆಗಳಿವೆ. ಇಲ್ಲಿ ಹೆಚ್ಚಿನ ಅರ್ಜಿಗಳು ಬರುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕೇವಲ 10, 15 ಹಾಗೂ 20... ಸಂಖ್ಯೆಯ ಅರ್ಜಿಗಳು ಮಾತ್ರ ಬಂದಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿ.ಎ. ರಾಜಶೇಖರ `ಪ್ರಜಾವಾಣಿ~ಗೆ ತಿಳಿಸಿದರು.

 ದಕ್ಷಿಣ ವಲಯ ಮುಖ್ಯ

ಕಾಯ್ದೆ ಪ್ರಕಾರ, ದಾವಣಗೆರೆ ದಕ್ಷಿಣ ವಲಯದಲ್ಲಿ 1,052, ದಾವಣಗೆರೆ ಉತ್ತರ ವಲಯದಲ್ಲಿ 600, ಚನ್ನಗಿರಿಯಲ್ಲಿ 422, ಹರಪನಹಳ್ಳಿಯಲ್ಲಿ 356, ಹರಿಹರದಲ್ಲಿ 343, ಹೊನ್ನಾಳಿಯಲ್ಲಿ 182, ಜಗಳೂರಿನಲ್ಲಿ 182 ಸೀಟು ಮೀಸಲಾಗಿವೆ. ಪ್ರವೇಶ ಅರ್ಜಿಗಳನ್ನು ಆಯಾ ಶಾಲೆ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಪಡೆಯಬಹುದು.

ಅರ್ಜಿ ಸಲ್ಲಿಕೆಗೆ ಮೇ 25ರವರೆಗೂ ಅವಕಾಶವಿದೆ. ಅಲ್ಲಿವರೆಗೆ ಪೋಷಕರು ಅರ್ಜಿ ಸಲ್ಲಿಸಿ, ಉಚಿತ ಶಿಕ್ಷಣದ ಸೌಲಭ್ಯ ಪಡೆಯಬೇಕು. ಪ್ರತಿ ಶಾಲೆಯಲ್ಲಿ ಮಕ್ಕಳ ಆಯ್ಕೆ ಪ್ರಕ್ರಿಯೆ ಮೇ 30ರಿಂದ ಜೂನ್ 5ರವರೆಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ನಿಗದಿತ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಬಂದರೆ, ಕಡಿಮೆ ಅರ್ಜಿ ಸಲ್ಲಿಕೆಯಾದ ಶಾಲೆಗಳಲ್ಲಿ ಅವಕಾಶ ಕೊಡಿಸುವುದಕ್ಕೂ ಕಾಯ್ದೆಯಡಿ ಅನುವು ಮಾಡಿಕೊಡಲಾಗಿದೆ. ಒಟ್ಟು ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ ಗಮನಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಕೆಲವು ಶಾಲೆಗಳಲ್ಲಿ ಈಗಾಗಲೇ ಪ್ರವೇಶಾತಿ ಮುಗಿದಿದೆ ಎಂಬ ಮಾಹಿತಿ ಇದೆ. ಬಹಳಷ್ಟು ಪೋಷಕರು, ಜಾತಿ, ಆದಾಯ ಮತ್ತಿತರ ಪ್ರಮಾಣಪತ್ರಗಳನ್ನು ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಹೀಗಾಗಿ ಅರ್ಜಿ ಸಲ್ಲಿಸಲು ತಡವಾಗಿದೆ. ಈ ಹಿನ್ನೆಲೆಯಲ್ಲಿ, ಮೇ 25ರ ಒಳಗೆ ಪ್ರತಿ ಅನುದಾನರಹಿತ ಶಾಲೆಗೆ ತೆರಳಿ ಸಲ್ಲಿಕೆಯಾದ ಅರ್ಜಿ ಹಾಗೂ ಪ್ರವೇಶ ಪ್ರಕ್ರಿಯೆಯ ಬಗ್ಗೆ ಪರಿಶೀಲಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT