ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆಯಲ್ಲಿ ಮಾದರಿ ನಡೆ; ನಮ್ಮ ಅನ್ನ ಜನಾಂದೋಲನಕ್ಕೆ ಪ್ರಸ್ತಾವ

Last Updated 12 ಮೇ 2012, 4:40 IST
ಅಕ್ಷರ ಗಾತ್ರ

ದಾವಣಗೆರೆ: ಆಹಾರ ಅಪವ್ಯಯ ತಡೆಯುವ ಸಂಬಂಧ ಜಿಲ್ಲೆಯಲ್ಲಿ `ನೀತಿಸಂಹಿತೆ~ ರೂಪಿಸಲು ಜಿಲ್ಲಾಡಳಿತ ಉದ್ದೇಶಿಸಿದೆ.

ಜನರಲ್ಲಿ ಆಹಾರದ ಮಹತ್ವ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ `ನಮ್ಮ ಅನ್ನ -ಜನಾಂದೋಲನ~ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಅನ್ನ ವ್ಯರ್ಥವಾಗದಂತೆ ತಡೆಯುವುದು ಹೇಗೆ ಎಂಬ ಬಗ್ಗೆ ಸ್ಪಷ್ಟ ನೀತಿಸಂಹಿತೆ ರೂಪಿಸಲು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ವತಿಯಿಂದ ಪ್ರಸ್ತಾವ ಸಲ್ಲಿಸಲಾಗಿದೆ. ಎಲ್ಲವೂ ನಿರೀಕ್ಷೆಯಂತೆಯೇ ನಡೆದರೆ, ಆಹಾರ ಅಪವ್ಯಯ ತಡೆಗೆ ದೇಶದಲ್ಲಿಯೇ ಪ್ರಥಮ ಬಾರಿಗೆ ಪರಿಣಾಮಕಾರಿ ಕ್ರಮ ಕೈಗೊಂಡ ಜಿಲ್ಲೆ ಎಂಬ ಖ್ಯಾತಿಗೆ ದಾವಣಗೆರೆ ಭಾಜನವಾಗಲಿದೆ.

 ನಿರ್ಣಯದಂತೆ ಸಿದ್ಧತೆ...
ದೇಶದಲ್ಲಿ ಹಸಿವಿನಿಂದ ನರಳುವವರ ಪ್ರಮಾಣ ಜಾಸ್ತಿ ಇದೆ. ಆದರೆ, ಆಹಾರ ಪದಾರ್ಥಗಳಲ್ಲಿ, ಶೇ. 50 ಭಾಗ ಬಿಸಾಡಲ್ಪಡುತ್ತಿದೆ. ಮದುವೆ ಮತ್ತಿತರ ಕಾರ್ಯಕ್ರಮಗಳಲ್ಲಿ ಅನ್ನ ಅಪಾರ ಪ್ರಮಾಣದಲ್ಲಿ ಅಪವ್ಯಯ ಆಗುತ್ತಿದೆ. ಹೀಗೆ ಬಿಸಾಡುವ ಆಹಾರ ಉಳಿಸಿದಲ್ಲಿ ಹಸಿವಿನಿಂದ ಬಳಲುತ್ತಿರುವ ಜನರಲ್ಲಿ ಶೇ. 40ರಷ್ಟು ಮಂದಿಗೆ ಪುಕ್ಕಟೆಯಾಗಿ ಆಹಾರ ಕೊಡಬಹುದು. ಈ ಹಿನ್ನೆಲೆಯಲ್ಲಿ `ಆಹಾರ ಅರಿವು~ ಮೂಡಿಸುವ ಕಾರ್ಯವನ್ನು ಕುಶಾಲನಗರದ ಎನ್.ಕೆ. ಮೋಹನ್‌ಕುಮಾರ್ ಮತ್ತು ಅವರ ಬಳಗ `ಆಹಾರ ಸಂರಕ್ಷಣಾ ಅಭಿಯಾನ ಸಮಿತಿ~ ಮಾಡುತ್ತಿದೆ. ಈ ಸಮಿತಿಯ ಮನವಿ ಪುರಸ್ಕರಿಸಿ ಇಲ್ಲಿಯೂ ಜನಾಂದೋಲನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಮಾರ್ಚ್ 16ರಂದು ಅಂದಿನ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಕೆ. ರಾಮೇಶ್ವರಪ್ಪ ಪ್ರಸ್ತಾವ ಸಿದ್ಧಪಡಿಸಿ, ಜಿಲ್ಲಾ ಪಂಚಾಯ್ತಿಗೆ ಸಲ್ಲಿಸಿದ್ದಾರೆ.

ಏನೇನು ಕ್ರಮಗಳು?
ಇತ್ತೀಚಿನ ದಿನಗಳಲ್ಲಿ ಅನ್ನದ ಅಪವ್ಯಯ ಸಾಮಾಜಿಕ ಪಿಡುಗಿನಂತೆ ಬೆಳೆಯುತ್ತಿದೆ. ಒಂದೆಡೆ, ಜನ ತುತ್ತು ಅನ್ನಕ್ಕಾಗಿ ಅಂಗಲಾಚುತ್ತಿದ್ದರೆ; ಮತ್ತೊಂದೆಡೆ, ಅನ್ನ ಸಿಕ್ಕವರು ಬೀದಿಗೆ ಚೆಲ್ಲುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇಂಥ ಪ್ರವೃತ್ತಿ ಖಾಸಗಿ ಮತ್ತು ಸಾರ್ವಜನಿಕ ವಲಯ ಎರಡರಲ್ಲೂ ಕಾಣಸಿಗುತ್ತದೆ. ಇದೊಂದು ವ್ಯಕ್ತಿಯ ಮಾನಸಿಕ ಮತ್ತು ಬೌದ್ಧಿಕ ಸ್ಥಿತಿಗೆ ಸಂಬಂಧಿಸಿದ ವಿಷಯವಾದರೂ ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ, ಅಪವ್ಯಯಕ್ಕೆ ಕಡಿವಾಣ ಹಾಕುವ ಅವಶ್ಯಕತೆ ಇದೆ. ಹೀಗಾಗಿ, ಸಾಮಾಜಿಕ ಜನಾಂದೋಲನದ ಅಗತ್ಯವಿದೆ ಎನ್ನುತ್ತಾರೆ ಅಧಿಕಾರಿಗಳು.

`ನಮ್ಮ ಅನ್ನ~ ಜನಾಂದೋಲನ ರೂಪಿಸುವುದು, ಈ ಬಗ್ಗೆ ಸಾಹಿತ್ಯ ರಚಿಸಿ ಮುದ್ರಿಸಿ ಪ್ರಚಾರ ಮಾಡುವುದು. ಸರ್ಕಾರಿ ಇಲಾಖೆ/ ಸಂಸ್ಥೆ ಹಾಗೂ ಸಾರ್ವಜನಿಕ ಸಂಸ್ಥೆ/ಸಭೆಗಳಿಗೆ ನೀತಿಸಂಹಿತೆ ಜಾರಿಗೊಳಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ಮೊದಲ ಹಂತದಲ್ಲಿ, ಜಿಲ್ಲೆಯಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಸಮಾವೇಶವನ್ನು ಜಿಲ್ಲಾ ಪಂಚಾಯ್ತಿ, ನಗರಪಾಲಿಕೆ ಹಾಗೂ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಪ್ರಾರಂಭಿಸುವುದು. 2ನೇ ಹಂತದಲ್ಲಿ ತಾಲ್ಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಹಾಗೂ 3ನೇ ಹಂತದಲ್ಲಿ, ಗ್ರಾಮ ಪಂಚಾಯ್ತಿ, ಸ್ತ್ರೀಶಕ್ತಿ ಸಂಘಗಳು, ಯುವಸಂಘಗಳ ಸಹಯೋಗದಲ್ಲಿ ಅಂದೋಲನ ನಡೆಸಲು ಉದ್ದೇಶಿಸಲಾಗಿದೆ.

ಕಡ್ಡಾಯ ಜಾರಿಗೆ ಕ್ರಮ ವಹಿಸಿ: ಆಂದೋಲನದ ಬಗ್ಗೆ ಕಿರುಹೊತ್ತಿಗೆ, ಕರಪತ್ರ ಹಾಗೂ ಭಿತ್ತಿಪತ್ರ ತಯಾರಿಸಿ, ಎಲ್ಲ ಸರ್ಕಾರಿ, ಖಾಸಗಿ ಸಂಸ್ಥೆಗಳಿಗೆ ಸರಬರಾಜು ಮಾಡುವುದು. ಶಾಲೆಗಳಲ್ಲಿ ಬಿಸಿಯೂಟ, ಹಾಸ್ಟೆಲ್ ಹಾಗೂ ಅಂಗನವಾಡಿಗಳಲ್ಲಿ, ಎಲ್ಲ ಇಲಾಖೆಗಳು ನಡೆಸುವ ಸಮಾರಂಭಗಳಲ್ಲಿ ಅನ್ನವನ್ನು ವ್ಯಯ ಮಾಡದಂತೆ ನೀತಿಸಂಹಿತೆ ರೂಪಿಸಿ ಕಡ್ಡಾಯವಾಗಿ ಜಾರಿಗೊಳಿಸುವುದು. ಜಿಲ್ಲೆಯ ಎಲ್ಲ ಕಲ್ಯಾಣಮಂಟಪ, ಸಭಾಭವನ, ಹೋಟೆಲ್/ ಅಡುಗೆ ತಯಾರಕರಿಗೆ ಪಾಲಿಕೆ ಮೂಲಕ ನೀತಿಸಂಹಿತೆ ಜಾರಿಗೊಳಿಸುವುದು.

ಆಂದೋಲನದ ಬಗ್ಗೆ ಸಮೂಹ ಮಾಧ್ಯಮ ಬಳಸಿಕೊಳ್ಳಲು, ಸಾರ್ವಜನಿಕ ಸ್ಥಳಗಳಲ್ಲಿ ಹೋರ್ಡಿಂಗ್ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಕೆ. ರಾಮೇಶ್ವರಪ್ಪ `ಪ್ರಜಾವಾಣಿ~ಗೆ ತಿಳಿಸಿದರು.
ಇದೊಂದು ಮಹತ್ವದ ಕಾರ್ಯಕ್ರಮವಾಗಿದೆ. ಆಂದೋಲನ ಜಾರಿಗೆ ಕ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಗುತ್ತಿ ಜಂಬುನಾಥ್ ತಿಳಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT