ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಢೀರ್ ದಾಳಿ: ಕಲ್ಲು ಗಣಿಗಾರಿಕೆಗೆ ತಡೆ

Last Updated 11 ಮಾರ್ಚ್ 2011, 7:00 IST
ಅಕ್ಷರ ಗಾತ್ರ

ಪಾಂಡವಪುರ: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶದ ಮೇರೆಗೆ ಮಂಡ್ಯ ಜಿಲ್ಲಾಧಿಕಾರಿ ಸೂಚನೆಯಂತೆ ತಾಲ್ಲೂಕಿನಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯ ಕ್ರಷರ್‌ಗಳನ್ನು ನಿರ್ಬಂಧಿಸಲು ತಾಲ್ಲೂಕು ಆಡಳಿತ ಗುರುವಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡು ದಿಢೀರ್ ದಾಳಿ ನಡೆಸಿದೆ. ತಹಶೀಲ್ದಾರ್ ಬಿ.ಸಿ ಶಿವಾನಂದಮೂರ್ತಿ, ತಾ.ಪಂ ಇಓ ಡಾ.ವೆಂಕಟೇಶಪ್ಪ, ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಗೋ. ಕೃಷ್ಣಮೂರ್ತಿ ನೇತೃತ್ವದ ಅಧಿಕಾರಿಗಳ ತಂಡ ತಾಲೂಕಿನ ಹೊನಗಾನಹಳ್ಳಿ, ಬನ್ನಂಗಾಡಿ, ಕಟ್ಟೇರಿ, ಕೆ.ಬೆಟ್ಟಹಳ್ಳಿ, ಟಿ.ಎಸ್. ಛತ್ರ, ಹಳೇಬೀಡು, ಜಕ್ಕನಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯ ಸ್ಟೋನ್ ಕ್ರಷರ್‌ಗಳಿಗೆ ದಿಢೀರ್ ದಾಳಿ ನಡೆಸಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಕಲ್ಲು ಗಣಿಗಾರಿಕೆ ನಡೆಸದಂತೆ ಎಚ್ಚರಿಕೆ ನೀಡಿದರು.

ತಾಲೂಕಿನ ಹೊನಗನಹಳ್ಳಿ ಹಾಗೂ ಬನ್ನಂಗಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಶಾಸಕ ಸಿ.ಎಸ್. ಪುಟ್ಟರಾಜು ಅಣ್ಣನ ಮಕ್ಕಳಾದ ಸಿ.ಅಶೋಕ್, ಶಿವಕುಮಾರ್ ಅವರಿಗೆ ಸೇರಿದ ಬೇಬಿಬೆಟ್ಟದ ಸುತ್ತಮುತ್ತ ಹಾಗೂ ಕಾವೇರಿಪುರದಲ್ಲಿನ ಎಸ್.ಟಿ.ಜಿ ಸ್ಟೋನ್ ಕ್ರಷರ್, ಜೆಡಿಎಸ್ ಮುಖಂಡರಾದ ಕೆ.ಎಸ್. ಜಯರಾಮ್ ಅವರಿಗೆ ಸೇರಿದ ಸನ್ಮತಿ ಕ್ರಷರ್ ಹಾಗೂ ಎಂ.ಕೆ ಶಿವಕುಮಾರ್, ಎ.ಎಸ್. ರವಿ, ನಟರಾಜು, ಚಂದ್ರಶೇಖರ ಸೇರಿದಂತೆ 37 ಗಣಿ ಮಾಲೀಕರಿಗೆ ಸೇರಿದ ಸ್ಟೋನ್ ಕ್ರಷರ್‌ಗಳನ್ನು ನಿರ್ಬಂಧಿಸಲಾಯಿತು. ಈ ನಿರ್ಬಂಧವನ್ನು ಉಲ್ಲಂಘಿಸಿದರೆ ಸರಕಾರ ಕಲ್ಲು ಗಣಿಗಾರಿಕೆಯನ್ನು ತಕ್ಷಣದಲ್ಲಿ ಮುಟ್ಟುಗೋಲು ಹಾಕಿ ಕೊಳ್ಳಲಾಗುವುದೆಂದು ಅಧಿಕಾರಿಗಳು ಎಚ್ಚರಿಸಿದರು.

ಜನವಸತಿ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಸುವುದರಿಂದ ಜನರ ಆರೋಗ್ಯ ಹದಗೆಡು ವುದಲ್ಲದೆ ಪರಿಸರ ಮಾಲಿನ್ಯ ಉಂಟಾಗುತ್ತದೆ ಎಂಬ ವಿಷಯವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ಗೆ ಸಲ್ಲಿಸಲಾಗಿತ್ತು. ಈ ವಿಚಾರದಲ್ಲಿ ಹೈಕೋರ್ಟ್ ಕಟ್ಟುನಿಟ್ಟಾಗಿ ಸೇಫರ್ ಜೋನ್‌ನಿಂದ ಹೊರಗಿರುವ ಕಲ್ಲು ಗಣಿಗಾರಿಕೆಯನ್ನು ನಿರ್ಬಂಧಿಸಲು ಸರಕಾರಕ್ಕೆ ಆದೇಶಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಗಣಿ ಮಾಲೀಕರೊಬ್ಬರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿಯಿತು.

ಈ ಹಿನ್ನೆಲೆಯಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು. ಬೆಳಿಗ್ಗೆಯಿಂದ ಸಂಜೆಯತನಕ ಅಧಿಕಾರಿಗಳು ತಾಲೂಕಿನ 37 ಕಲ್ಲು ಗಣಿಗಾರಿಕೆಯ ಸ್ಥಳಕ್ಕೆ ದಾಳಿ ನಡೆಸಿ ಎಲ್ಲ ಕ್ರಷರ್‌ಗಳಿಗೆ ಪಡೆದು ಕೊಂಡಿದ್ದ ವಿದ್ಯುತ್ ಸಂಪರ್ಕವನ್ನು ಚೆಸ್ಕಾಂ ಅಧಿಕಾರಿಗಳಾದ ಶಿವಪ್ಪ, ಅಜಯ್ ನೇತೃತ್ವ ದಲ್ಲಿ ಸಿಬ್ಬಂದಿ ವರ್ಗ ಕಡಿತಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT