ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿವ್ಯಾ ಹೊಸದಾರಿ

Last Updated 26 ಜುಲೈ 2012, 19:30 IST
ಅಕ್ಷರ ಗಾತ್ರ

`ಹೊಸಬರು ಎಷ್ಟೇ ಸಿನಿಮಾ ಮಾಡಿದರೂ ಧಾರಾವಾಹಿಯಲ್ಲಿ ನಟಿಸುವವರಷ್ಟು ಹೆಸರು ಮಾಡಲು ಸಾಧ್ಯವಿಲ್ಲ~ ಎಂಬುದು ನಟಿ ದಿವ್ಯಾ ಶ್ರೀಧರ್ ಅನುಭವದ ಮಾತು. ಅದಕ್ಕಾಗಿ ಸಿನಿಮಾ ರಂಗದಿಂದ ಕಿರುತೆರೆಗೆ ಧುಮುಕಿರುವ ಅವರು `ಆಕಾಶದೀಪ~ ಧಾರಾವಾಹಿಯಲ್ಲಿ ಪ್ರಧಾನ  ಪಾತ್ರ ನಿರ್ವಹಿಸಲು ಒಪ್ಪಿಕೊಂಡಿದ್ದಾರೆ.

`ನಮ್ಮ ಊರು ಕೊಡಗು. ಅಲ್ಲಿ ಹೊಸ ಸಿನಿಮಾಗಳು ಹೆಚ್ಚು ಬಿಡುಗಡೆಯಾಗುವುದಿಲ್ಲ. ನಾನು ನಟಿ ಎಂದು ಹೇಳಿದಾಗ ನಂಬದ ಅನೇಕರು ನೀನು ಧಾರಾವಾಹಿಯಲ್ಲಿ ನಟಿಸಿದರೆ ನಾವು ನೋಡಬಹುದು ಎನ್ನುತ್ತಿದ್ದರು. ಅದರಿಂದ ನಾನು ಕಿರುತೆರೆಯಲ್ಲಿ ನಟಿಸಲು ಒಪ್ಪಿದೆ. ಸಿನಿಮಾರಂಗದ ಮೇಲೆ ನನಗೇನು ದೂರುಗಳಿಲ್ಲ. ಕಿರುತೆರೆಯಲ್ಲಿ ನಟಿಸಿದರೆ ಜನ ಬೇಗ ಗುರುತಿಸುತ್ತಾರೆ ಎನಿಸಿದ ಕಾರಣ ನಟಿಸುತ್ತಿರುವೆ~ ಎಂದು ತಮ್ಮ ನಿರ್ಧಾರಕ್ಕೆ ಸ್ಪಷ್ಟನೆ ನೀಡುತ್ತಾರೆ ದಿವ್ಯಾ.

`ನಾನು ಕಲಾವಿದೆ. ನನ್ನ ನಟನೆಯನ್ನು ಜನ ನೋಡಬೇಕು. ಗುರುತಿಸಬೇಕು ಎಂಬುದು ನನ್ನಾಸೆ~ ಎಂದು ಅದಕ್ಕೆ ಮತ್ತೊಂದು ಮಾತು ಸೇರಿಸುವ ದಿವ್ಯಾ ಈ ಮೊದಲು ಸಾಕಷ್ಟು ಧಾರಾವಾಹಿಗಳಿಗೆ ಅವಕಾಶ ಬಂದಿದ್ದರು ಒಲ್ಲೆ ಎಂದಿದ್ದರಂತೆ. ಯಶಸ್ವಿ ಧಾರಾವಾಹಿ ನಿರ್ದೇಶಕ ಸಕ್ರೆಬೈಲು ಶ್ರೀನಿವಾಸ್ ನಿರ್ದೇಶನದ ಧಾರಾವಾಹಿ ಎಂಬ ಕಾರಣಕ್ಕೆ ಒಪ್ಪಿಕೊಂಡಿದ್ದಾಗಿ ಹೇಳುತ್ತಾರೆ ಅವರು.

ಅವರು ನಟಿಸಿದ ಮೊದಲ ಸಿನಿಮಾ `ಆ~. ನಂತರ `ಸನಿಹ~, `ವಿಚಿತ್ರ ಪೇಮಿ~ ಚಿತ್ರಗಳಲ್ಲಿ ನಟಿಸಿದರು. ಇದೀಗ ಕಾಶೀನಾಥ್ ಅವರ `12ಎಎಂ~ ಬಿಡುಗಡೆಗೆ ಸಿದ್ಧವಾಗಿದೆ. `ಕೆಲವರು ಕಿರುತೆರೆಗೆ ಬಂದಿದ್ದಕ್ಕೆ ಮೇಲಿಂದ ಕೆಳಕ್ಕೆ ಬಂದಂತಾಗಿದೆ ಎಂದರು, ಆದರೆ ನನ್ನ ಮುಂದಿನ ವಯಕ್ತಿಕ ಬದುಕನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಇಲ್ಲಿಗೆ ಬಂದಿರುವೆ~ ಎಂದು ಕಿರುತೆರೆ ಪ್ರವೇಶಕ್ಕೆ ಮತ್ತೊಂದು ಕಾರಣವನ್ನು ಅರುಹುವ ಈ ಚೆಲುವೆಗೆ ಸಿನಿಮಾಗಳಿಗೆ ಮುಂದೆ ಅವಕಾಶಗಳು ಬಂದರೂ ಕಿರುತೆರೆಯ ಕಡೆಗೇ ಮನಸ್ಸನ್ನು ಹರಿಬಿಡುವ ಇರಾದೆ ಇದೆ.

ದಿವ್ಯಾಗೆ ಬೆಳ್ಳಿತೆರೆಗೂ- ಕಿರುತೆರೆಗೂ ಸಾಕಷ್ಟು ವ್ಯತ್ಯಾಸಗಳು ಕಾಣಿಸಿವೆ. `ಸಿನಿಮಾದಲ್ಲಿ ವೇಗ ಜಾಸ್ತಿ. ಕಿರುತೆರೆಯಲ್ಲಿ ನಿಧಾನವಾಗಿ ಕೆಲಸ ಮಾಡಬಹುದು. ಸಿನಿಮಾದಲ್ಲಿ ಚಿತ್ರೀಕರಣದ ನಂತರ ಡಬ್ಬಿಂಗ್ ಮಾಡಲು ಅವಕಾಶ ಇರುತ್ತದೆ. ಆದರೆ ಕಿರುತೆರೆಯಲ್ಲಿ ಚಿತ್ರೀಕರಣದೊಂದಿಗೆ ಸ್ಪಷ್ಟವಾಗಿ ಮಾತನಾಡಬೇಕಿರುತ್ತದೆ. ಸಿನಿಮಾಗಳಲ್ಲಿ ಸಂಭಾಷಣೆಗಳು ಕಡಿಮೆ. ಕಿರುತೆರೆಯಲ್ಲಿ ಸಂಭಾಷಣೆಗಳು ಉದ್ದುದ್ದ ಇರುತ್ತವೆ~ ಎಂದು ಪಟ್ಟಿ ಮಾಡುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT