ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಸ್ತಿ ಕಾಣದ ಕಾರ್ಲ್ಯಾಂಡ್ ಕಟ್ಟೆ

Last Updated 24 ಏಪ್ರಿಲ್ 2013, 8:33 IST
ಅಕ್ಷರ ಗಾತ್ರ

ಕುಮಟಾ: ಕ್ಷೇತ್ರದ ಮೊದಲ ಶಾಸಕಿ, ಕ್ರಿಯಾಶೀಲ ವ್ಯಕ್ತಿತ್ವದ ವಸಂತಲತಾ ಮಿರ್ಜಾನಕರ್ ತಮ್ಮ ಇಳಿವಯಸ್ಸಿನಲ್ಲಿ ದೂರದ ಪರದೇಶದಲ್ಲಿದ್ದರೂ ಇಲ್ಲಿನ ಗಜನಿ ರೈತರ ನೆನಪಿನಲ್ಲಿ ಇಂದಿಗೂ ಹತ್ತಿರವಾಗಿದ್ದಾರೆ. ಅವರ ನೆನಪನ್ನು ಮಾಸದೇ ಇರುವಂತೆ ಮಾಡಿದ್ದು ಮಾತ್ರ ಉಪ್ಪು ನೀರಿನ ತಡೆಗೋಡೆ.

ಅವರು ಅಂದಿನ ಹಣಕಾಸು ಮಂತ್ರಿ ರಾಮಕೃಷ್ಣ ಹೆಗಡೆ ಅವರ ಸಹಾಯದಿಂದ ಸುಮಾರು 20 ಮೈಲಿಗಳಷ್ಟು ಉದ್ದದ ತಾಲ್ಲೂಕಿನ ಅಘನಾಶಿನಿ ನದಿಯಂಚಿನ ಕೃಷಿ ಗಜನಿ ಭೂಮಿಗೆ ಉಪ್ಪು ನೀರು ನುಗ್ಗದಂತೆ ನಿರ್ಮಿಸಿದ್ದ ತಡೆಗೋಡೆ ಅವರನ್ನು ಸದಾ ನೆನಪಿನಲ್ಲುಳಿಯುವಂತೆ ಮಾಡಿದೆ. ಆದರೆ ತಡೆಗೋಡೆ ಮಾತ್ರ ನಿರ್ವಹಣೆ ಇಲ್ಲದೆ ಕುಸಿದು ಹೋಗುತ್ತಿದೆ. ಅದರ ದುರಸ್ತಿಗೆ ಯಾವ ಶಾಸಕರೂ ತಲೆ ಹಾಕಿಲ್ಲ.

ಅಘನಾಶಿನಿ ಗಜನಿ ಪ್ರದೇಶದಲ್ಲಿ ಅಂದು ಹತ್ತಾರು ಹಳ್ಳಿಗಳ ಸಾವಿರಾರು ಕುಟುಂಬಗಳಿಗೆ ಆಧಾರವಾಗಿದ್ದ ಸುಮಾರು 4,000 ಸಾವಿರ ಹೆಕ್ಟೇರ್ ಭತ್ತದ ಕೃಷಿ ಗಜನಿ ಭೂಮಿಗೆ ಅಡ್ಡಿಯಾಗಿದ್ದ ಉಪ್ಪು ನೀರನ್ನು ತಡೆಯಲು ಅಂದಿನ ಶಾಸಕಿ ವಸಂತಲತಾ ಮಿರ್ಜಾನಕರ ಅವರು ಉಪ್ಪು ನೀರು ತಡೆಗೋಡೆ (ಕಾರ್ಲ್ಯಾಂಡ್) ಯೋಜನೆ ಜಾರಿಗೆ ತಂದು ಯಶಸ್ವಿಗೊಳಿಸಿದರು. ಆ ನಂತರ ಗಜನಿ ಪ್ರದೇಶದಲ್ಲಿ ಜಂತ್ರಡಿ ಗೇಟುಗಳ ಮೂಲಕ ನೀರನ್ನು ಹೊರಗೆ-ಒಳಗೆ ತೆಗೆದುಕೊಂಡು ಎಲ್ಲ ತಳಿಯ ಭತ್ತ, ಕಗ್ಗ ಭತ್ತ, ನೈಸರ್ಗಿಕ ಸಿಗಡಿ-ಮೀನು- ಏಡಿ ಬೆಳೆಯಲು ಸಹಕಾರಿಯಾಗಿ ರೈತರ ಬದುಕಿನ ಚಿತ್ರಣವೇ ಬದಲಾಯಿತು. 

ಇಂದಿಗೂ ರೈತರು ಉಪ್ಪು ನಿರಿನಲ್ಲೂ ಬೆಳೆಯುವ ಅತ್ಯಂತ ವಿಶಿಷ್ಟ ತಳಿಯ ಕಗ್ಗ ಬತ್ತದ ಕೃಷಿಯನ್ನು ಮುಂದುವರಿಸಿಕೊಂಡು ಹೊಗುವ ಜತೆ ಲಕ್ಷಾಂತರ ರೂಪಾಯಿ ಮೌಲ್ಯದ ಮೀನು, ಸಿಗಡಿ, ಏಡಿ ಬೆಳೆದು ಬದುಕುತ್ತಿದ್ದಾರೆ. ಇಲ್ಲಿಯ ಸಿಗಡಿ, ಏಡಿ, ಮೀನು ಗೋವಾ, ಕೇರಳ ರಾಜ್ಯಗಳಿಗೆ ಹಾಗೂ ವಿದೇಶಗಳಿಗೂ ರಫ್ತಾಗುತ್ತವೆ. ಕಾರ್ಲಾಂಡ್ ಕಟ್ಟೆ ನಿರ್ಮಾಣ ಮಾಡಿ ಸುಮಾರು 40 ವರ್ಷಗಗಳೇ ಕಳೆದಿವೆ. ಆದರೆ ಮಣ್ಣಿನಿಂದ ನಿರ್ಮಿಸಿದ್ದ ತಡೆ ಸೂಕ್ತ ನಿರ್ವಹಣೆ ಇಲ್ಲದೆ  ಕುಸಿಯುತ್ತಿದೆ.

ಇಲ್ಲಿಯ ರೈತರು ಕಾರ್ಲ್ಯಾಂಡ್ ದುರಸ್ತಿ ಮಾಡಿ ಎಂದು ಪ್ರತೀ ಚುನಾವಣೆಯಲ್ಲಿ ಆರಿಸಿ ಬಂದ ಶಾಸಕರಿಗೂ ಮನವಿ ಮಾಡುತ್ತಾರೆ. ಆದರೆ  ಇನ್ನೂ ದುರಸ್ತಿ ಕೆಲಸ ಮಾತ್ರ ಆಗುತ್ತಿಲ್ಲ.

`ನಶಿಸಿ ಹೋಗುತ್ತಿರುವ ನಮ್ಮ ಸಾಂಪ್ರದಾಯಿಕ ಕಗ್ಗ ಭತ್ತ ಕೃಷಿ, ಮೀನುಗಾರಿಕೆಯನ್ನು ಉಳಿಸಲು ಕಾರ್ಲಾಂಡ್ ದುರಸ್ತಿ ಅಗತ್ಯ. ಆದರೆ ನಮ್ಮ ನಾಯಕರು ಅಂದು ಮಹಿಳಾ ಶಾಸಕಿ ವಸಂತಲತಾ ಮಿರ್ಜಾನಕರ್ ಅವರು ತೋರಿದ ಇಚ್ಛಾಶಕ್ತಿ ಮಾತ್ರ ತೋರಲು ಸಾಧ್ಯವಾಗುತ್ತಿಲ್ಲ' ಎನ್ನುವುದು ಮಾಣಿಕಟ್ಟಾ ಗಜನಿ ರೈತ ಒಕ್ಕೂಟ ಅಧ್ಯಕ್ಷ ಸಿ.ಆರ್.ನಾಯ್ಕ ಅವರ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT