ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಶ್ಚಟ ಬಿಡಿಸಿದ ದಿಟ್ಟ ಸ್ವಾಮೀಜಿ

Last Updated 23 ಜೂನ್ 2012, 19:30 IST
ಅಕ್ಷರ ಗಾತ್ರ

ಅವರು ಜೋಳಿಗೆ ಹಾಕಿಕೊಂಡು ಧನ, ಧಾನ್ಯ ಕೇಳಲಿಲ್ಲ. ಕೇಳಿದ್ದು ದುಶ್ಚಟಗಳನ್ನು ಮಾತ್ರ. ಕೇವಲ ಅರ್ಧ ಮೀಟರ್ ಬಟ್ಟೆಯ ಜೋಳಿಗೆ ವ್ಯಸನಮುಕ್ತ ವ್ಯಕ್ತಿ ಹಾಗೂ ಆರೋಗ್ಯವಂತ ಸಮಾಜ ಕಟ್ಟುವ ವಿನೂತನ ಆಂದೋಲನವಾಗಿ ರೂಪುಗೊಂಡಿತು. ಪುಟ್ಟ ಜೋಳಿಗೆಯಿಂದ ಮೂರು ಲಕ್ಷ ಜನರನ್ನು ದುಶ್ಚಟಗಳಿಂದ ಮುಕ್ತ ಮಾಡಿದ ಯಶೋಗಾಥೆ ಬಾಗಲಕೋಟೆ ಜಿಲ್ಲೆಯ ಇಳಕಲ್ಲದ ಡಾ.ಮಹಾಂತ ಸ್ವಾಮೀಜಿಗಳದು.

ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ನಾಡು ಸಂಚರಿಸಿದ ಅವರು ದುಶ್ಚಟಗಳಿಂದಾಗುವ ಸಾಮಾಜಿಕ, ಆರ್ಥಿಕ, ದೈಹಿಕ ಹಾಗೂ ಕೌಟುಂಬಿಕ ನಷ್ಟವನ್ನು, ಅವಮಾನವನ್ನು ಮನವರಿಕೆಯಾಗುವಂತೆ ಜನರಿಗೆ ತಿಳಿ ಹೇಳಿದರು. ಮಹಾಂತ ಶ್ರಿಗಳು ಹಾಗೆ ತಿಳಿ ಹೇಳಿ, ಜೋಳಿಗೆ ಹಿಡಿಯುತ್ತಿದ್ದಂತೆಯೇ ಅದರೊಳಗೆ ಮದ್ಯದ ಬಾಟಲಿಗಳು, ಬೀಡಿ, ಸಿಗರೇಟು ಹಾಗೂ ತಂಬಾಕಿನ ಪ್ಯಾಕೆಟುಗಳು, ಇಸ್ಪಿಟ್ ಎಲೆಗಳು ರಾಶಿ ರಾಶಿ ಬೀಳುತ್ತಿದ್ದವು. ಎಲ್ಲವನ್ನು ಸಾರ್ವಜನಿಕವಾಗಿ ಸುಟ್ಟು ಹಾಕಿ ಮತ್ತೆ ಚಟದತ್ತ ವಾಲದಂತೆ ಹೇಳಿ ಮುಂದಿನ ಊರಿಗೆ ನಡೆಯುತ್ತಿದ್ದರು. ಹೀಗೆ ಅವರು ಜೋಳಿಗೆಯೊಂದಿಗೆ 70ರ ದಶಕದಿಂದ ನಾಡಿನ ಸಾವಿರಾರು ಹಳ್ಳಿ ಹಾಗೂ ಪಟ್ಟಣಗಳನ್ನು ಸುತ್ತಿದರು. ಮನೆ-ಮನೆಗೆ ತೆರಳಿ ದುಶ್ಚಟಗಳ ಭಿಕ್ಷೆ ಬೇಡಿದರು. ದಲಿತರ ಕೇರಿಗಳಿಗೆ ಹೋಗಿ, ಕೈಹಿಡಿದು ದುಶ್ಚಟಗಳಿಂದ ದೂರ ಇರುವಂತೆ ವಿನಂತಿಸಿಕೊಂಡರು. ಚಟಗಳನ್ನು ತ್ಯಜಿಸುವವರಿಗೆ ಎಲ್ಲ ರೀತಿಯ ನೆರವು ನೀಡಿದರು. ಬೀದಿ ಪಾಲಾಗಿದ್ದ ಅನೇಕ ಕುಟುಂಬಗಳಲ್ಲಿ ಮತ್ತೆ ಸಂತಸದ ತರುವುದರ ಜೊತೆಗೆ ಸಮೃದ್ಧಿಗೆ ಕಾರಣರಾದರು.

ಇದಕ್ಕೊಂದು ಪುಟ್ಟ ಉದಾಹರಣೆ ಇಲ್ಲಿದೆ; ಕೆಲ ವರ್ಷಗಳ ಹಿಂದೆ ಅವರ ಬಳಿ ಬಂದ ವ್ಯಕ್ತಿಯೊಬ್ಬರು ಹೊಸದಾಗಿ ಕೊಂಡ ತಮ್ಮ ಕಾರಿನಲ್ಲಿ ಕುಳಿತುಕೊಳ್ಳಬೇಕೆಂದು ಸ್ವಾಮೀಜಿ ಅವರನ್ನು ಕೇಳಿದರು. ಇದಕ್ಕೆ ಅವರು ಒಪ್ಪಲಿಲ್ಲ. `ಇವತ್ತು ಬದುಕಿದ್ದರೆ ನಿಮ್ಮಿಂದ. ಮದ್ಯ ತ್ಯಜಿಸಬೇಕೆಂದು ನಿಮ್ಮ ಬೆತ್ತದಿಂದ ಹೊಡೆದು ಹೇಳಿದ್ರಿ. ಈಗ ಮನೆ ಕೊಂಡೆ, ಕಾರು ಕೊಂಡೆ, ಮಕ್ಕಳನ್ನು ಓದಿಸಿದೆ. ಇದೆಲ್ಲ ಸಾಧ್ಯವಾಗಿದ್ದು ನಿಮ್ಮಿಂದ~ ಎಂದು ಆ ವ್ಯಕ್ತಿ ಇವರ ಪಾದಕ್ಕೆರಗಿದರು. ಇಂಥ ಘಟನೆಗಳು ನೂರಾರು.

ಅವರು ಚಟಗಳನ್ನು ಬಿಟ್ಟವರನ್ನು ಮರೆಯಲಿಲ್ಲ. ತಮ್ಮ ಮಠಕ್ಕೆ ಕರೆದು ಸತ್ಕರಿಸಿದರು. ಪರಿವರ್ತನೆಗೊಂಡ ವ್ಯಕ್ತಿಗಳು ತಮ್ಮ ಅನುಭವ ಹೇಳಿಕೊಳ್ಳಲು ವೇದಿಕೆ ಕಲ್ಪಿಸಿಕೊಟ್ಟರು. 

ಇಂಥ ಅಪರೂಪದ ಖಾವಿಧಾರಿ 85 ವರ್ಷದ ಡಾ.ಮಹಾಂತ ಸ್ವಾಮೀಜಿಗೆ ರಾಜ್ಯ ಮದ್ಯಪಾನ ಸಂಯಮ ಮಂಡಳಿಯು 2011-12ನೇ ಸಾಲಿನ `ಸಂಯಮ~ ಪ್ರಶಸ್ತಿಯನ್ನು ಘೋಷಿಸಿದೆ. ಜುಲೈ ಎರಡರಂದು ಬಾಗಲಕೋಟೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಒಂದು ಲಕ್ಷ ರೂಪಾಯಿ ನಗದು ಜೊತೆಗೆ ಸನ್ಮಾನ ಜರುಗಲಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಹಿಪ್ಪರಗಿಯಲ್ಲಿ ಜನಿಸಿದ ಮಹಾಂತ ಶ್ರೀಗಳ ತಂದೆ ವಿರೂಪಾಕ್ಷಯ್ಯ ಪಾಲಭಾವಿಮಠ ಹಾಗೂ ತಾಯಿ ನೀಲಮ್ಮ. ತಾಯಿಯ ಹೊಟ್ಟೆಯಲ್ಲಿರುವಾಗಲೇ ಅಥಣಿ ತಾಲ್ಲೂಕಿನ ಸವದಿಯ ಸಂಗನಬಸವ ಸ್ವಾಮಿಗಳು, ಮರಿ ಹುಟ್ಟಿದ್ರ ನಮ್ಮ ಮಠಕ್ಕ ಎಂದು ಆಶೀರ್ವದಿಸಿದ್ದರಂತೆ.

ಮಠವೊಂದರ ಸ್ವಾಮೀಜಿಯಾಗಲು ಬೇಕಾದ ಸಂಸ್ಕೃತ, ಭಾರತೀಯ ತತ್ವಶಾಸ್ತ್ರ ಹಾಗೂ ಅಧ್ಯಾತ್ಮ ಶಿಕ್ಷಣವನ್ನು ಶಿವಯೋಗಮಂದಿರ ಹಾಗೂ ಕಾಶಿಯಲ್ಲಿ ಅವರು ಪಡೆದುಕೊಂಡರು. ಸವದಿ, ಮುಧೋಳ ಹಾಗೂ ನವಲಗುಂದ ಮಠಗಳ ಸ್ವಾಮೀಜಿಯಾಗಿ ಸೇವೆ ಸಲ್ಲಿಸಿದರು. ಸ್ಪಷ್ಟ ನುಡಿ, ಅಪಾರ ಪಾಂಡಿತ್ಯ ಹಾಗೂ ಸಂಗೀತದ ಜ್ಞಾನದಿಂದಾಗಿ ಕೇಲವೇ ದಿನಗಳಲ್ಲಿ ಉತ್ತಮ ಪ್ರವಚನಕಾರರು ಎಂಬ ಖ್ಯಾತಿಗೆ ಪಾತ್ರರಾದರು. ನಂತರ 1970ರ ಮೇ 17ರಂದು ಅವರು ಇಳಕಲ್ಲ ಮಠದ 19ನೇ ಪೀಠಾಧಿಪತಿಯಾದರು. ಮಠದ 16ನೇ ಪೀಠಾಧಿಪತಿಯಾಗಿದ್ದ ಮಹಾತಪಸ್ವಿ ಲಿಂ. ವಿಜಯ ಮಹಾಂತ ಶಿವಯೋಗಿಗಳ ವಚನ ಸಾಹಿತ್ಯದ ಸಂಪಾದನೆ, ಪ್ರಸಾರದ ಕೆಲಸ ಬಸವತತ್ವದತ್ತ ಮುಖ ಮಾಡಲು ಪ್ರೇರಣೆ ನೀಡಿತು. ಆದರೆ ಪ್ರವಚನಗಳ ಪರಿಣಾಮ ಜನರಲ್ಲಿ ದೀರ್ಘ ಕಾಲ ಉಳಿಯುವುದಿಲ್ಲ, ಮಾತುಗಳಿಂದ ಎಲ್ಲರನ್ನೂ ಪ್ರಭಾವಗೊಳಿಸಲು, ಬದಲಾಯಿಸಲು ಸಾಧ್ಯವಾಗುವುದಿಲ್ಲ ಎಂದು ಅರಿತ ಅವರು, ಜೋಳಿಗೆ ಕೈಗೆತ್ತಿಕೊಂಡರು. ಅದುವೇ  ಮಹಾಂತ ಜೋಳಿಗೆ. 

ಬದ್ಧತೆಗೆ ಸಾಕ್ಷಿ 
ಮಠವೊಂದರ ಸ್ವಾಮೀಜಿಯಾಗಿ ಆರಂಭಿಸಿದ ಪ್ರಗತಿಪರ ಕಾರ್ಯಗಳು ಬಸವತತ್ವದ ಬಗ್ಗೆ ಅವರಿಗಿರುವ ಬದ್ಧತೆಗೆ ಸಾಕ್ಷಿಯಾಗಿವೆ. ಇಳಕಲ್ಲ ಮಠಕ್ಕೆ ವಚನಗಳೇ ಸಂವಿಧಾನ, ಬಸವಣ್ಣನೇ ಆರಾಧ್ಯ ಗುರು. ಆದರೆ ಅನೇಕರಿಗೆ ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬಸವಣ್ಣನಿಗೆ ಆದಂತೆ ಸಂಪ್ರದಾಯವಾದಿಗಳಿಂದ ಹಾಗೂ ಪುರೋಹಿತಶಾಹಿ ಮನಸ್ಸುಗಳಿಂದ ಬಂದ ವಿರೋಧ, ಅಪಪ್ರಚಾರವನ್ನು ದಿಟ್ಟತನದಿಂದ ಎದುರಿಸಿದರು. ವೈಚಾರಿಕ ಹಾಗೂ ಪ್ರಗತಿಪರ ವಿಚಾರಗಳಿಂದ ವಿಮುಖವಾಗದ ಗಟ್ಟಿ ಸ್ವಾಮೀಜಿ ಅವರು. ತಮ್ಮ ಮಠದಿಂದಲೇ ಬಸವತತ್ವದ ಅನುಷ್ಠಾನ ಆರಂಭಿಸಿದರು. ರುದ್ರಾಭಿಷೇಕ, ದೀಪೋತ್ಸವ ಹೀಗೆ ಸಂಪ್ರದಾಯ, ಪರಂಪರೆಯ ಮುಸುಕಿನೊಳಗೆ ನಿರಂತರವಾಗಿ ನಡೆದುಕೊಂಡು ಬರುತ್ತಿದ್ದ ಆಚರಣೆಗಳನ್ನು ನಿಲ್ಲಿಸಿದರು. ಅವರು ಪ್ರಯಾಣಿಸುವಾಗ ಮರಕ್ಕೇನಾದರೂ ಬಟ್ಟೆ ಸುತ್ತಿದ್ದನ್ನು, ಬಳೆಗಳನ್ನು ಹಾಕಿದ್ದನ್ನು ಕಂಡರೆ ಕಾರು ನಿಲ್ಲಿಸಿ, ತಿಳಿವಳಿಕೆ ಹೇಳಿ, ತೆಗೆದು ಬಡವರಿಗೆ ಸೀರೆ ಹಾಗೂ ಬಳೆಗಳನ್ನು ಹಂಚುತ್ತಾರೆ. ನಾಗರ ಪಂಚಮಿಯನ್ನು ಹಾಲು ಕುಡಿಯುವ ಹಬ್ಬವನ್ನಾಗಿಸಿ, ನೂರಾರು ಲೀಟರ್ ಹಾಲು ಮಣ್ಣುಪಾಲಾಗುವುದನ್ನು ತಡೆದರು.

ಅವರ ಮಠದ ಶ್ರಾವಣ ಮಾಸದ ಜಾತ್ರೆ ಶರಣ ಸಂಸ್ಕೃತಿ ಮಹೋತ್ಸವವಾಯಿತು. ವಚನ ಕಟ್ಟುಗಳ ರಥೋತ್ಸವ, ವಚನಗಳ ತಾಡೋಲೆಗಳ ಅಡ್ಡಪಲ್ಲಕ್ಕಿ, ಜಾತಿ ಭೇದ ಇಲ್ಲದ ಲಿಂಗದೀಕ್ಷೆ, ಸಹಪಂಕ್ತಿ ಭೋಜನ ಶುರು ಮಾಡಿದರು. ಜೋತಿಷ್ಯಶಾಸ್ತ್ರ ಹಾಗೂ ವಾಸ್ತುಶಾಸ್ತ್ರಗಳ ಟೊಳ್ಳುತನ ಬಯಲಿಗೆ ಎಳೆಯಲು ಯತ್ನಿಸಿದರು. ಅಕ್ಷತೆಯ ಬದಲಿಗೆ ಹೂಮಳೆಗರೆದು ಲಗ್ನ ಮಾಡಿಸಿದರು. ಲಗ್ನಗಳಲ್ಲಿ ಸಂಸ್ಕೃತ ಮಂತ್ರಗಳ ಬದಲಾಗಿ ವಚನಗಳನ್ನು ಬಳಕೆಗೆ ತಂದರು. ವಿಧವೆಯರಿಗೆ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದರು. ಹೀಗೆ ಅನೇಕ ವೈಚಾರಿಕ ಹಾಗೂ ಪ್ರಗತಿಪರ ಕಾರ್ಯಗಳನ್ನು ಯಾರ ವಿರೋಧಕ್ಕೂ ಅಳುಕದೆ ಮುಂದುವರಿಸಿದ್ದಾರೆ.

ಸವಾಲು ಸ್ವೀಕಾರ
ಬೀದರಿನಲ್ಲಿ ನಡೆದ ಸರ್ವ ಧರ್ಮಗಳ ಸಮಾವೇಶವೊಂದರಲ್ಲಿ ಅಂದಿನ ಕೇಂದ್ರ ಸಚಿವ ರಾಮ ವಿಲಾಸ್ ಪಾಸ್ವಾನ್ ಅವರು, `ಬಸವಣ್ಣನ ಅನುಯಾಯಿಗಳಾದ ಮಠಾಧೀಶರು ತಮ್ಮ ಮಠಗಳಿಗೆ ದಲಿತರನ್ನು  ನೇಮಕ ಮಾಡುವ ಧೈರ್ಯ ತೋರುವಿರಾ?~ ಎಂದು ಸವಾಲು ಹಾಕಿದಾಗ ಸವಾಲು ಸ್ವೀಕರಿಸಿದ್ದು ಮಹಾಂತ ಸ್ವಾಮೀಜಿ ಮಾತ್ರ.

ರಾಯಚೂರು ಜಿಲ್ಲೆಯ ಲಿಂಗಸೂರಲ್ಲಿಯ ತಮ್ಮ ಶಾಖಾ ಮಠಕ್ಕೆ ಲಂಬಾಣಿ ಸಮಾಜದ ಸಿದ್ಧಲಿಂಗ ಸ್ವಾಮೀಜಿ, ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಸಿದ್ಧಯ್ಯನಕೋಟೆ ಮಠಕ್ಕೆ ದಲಿತರಾದ ಬಸವಲಿಂಗ ಸ್ವಾಮೀಜಿ ಅವರನ್ನು ನೇಮಿಸಿದರು.

2004ರಲ್ಲಿ ಇಳಕಲ್ಲದಲ್ಲಿಯ ತಮ್ಮ ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ಜಂಗಮರಲ್ಲದ ಗುರು ಮಹಾಂತ ಸ್ವಾಮೀಜಿ ಅವರನ್ನು ನೇಮಕ ಮಾಡುವುದಾಗಿ ಹೇಳಿದಾಗ ಒಪ್ಪದವರು ಅವರ ಮೇಲೆ ಹಲ್ಲೆ ಮಾಡಿದರು. ಧೈರ್ಯಗೆಡಿಸಲು ಸುಳ್ಳು ಆರೋಪಗಳನ್ನು ಮಾಡಿದರು. ಯಾವುದಕ್ಕೂ ಜಗ್ಗದ ಶ್ರಿಗಳು, ಬಸವಣ್ಣನ ಕೆಲಸ ಮಾಡುವಾಗ ಯಾರಿಗೂ ಹೆದರುವ ಅಗತ್ಯವಿಲ್ಲ ಎಂದರು. ವಿರೋಧದ ನಡುವೆ ನೇಮಕಗೊಂಡ ಗುರು ಮಹಾಂತ ಸ್ವಾಮೀಜಿ ಅವರಲ್ಲಿರುವ ವಿನಯ, ವಿದ್ಯೆ, ಸರಳತೆ, ಅಂತಃಕರಣ ಹಾಗೂ ಕ್ರೀಯಾಶೀಲತೆ ಕಂಡವರೆಲ್ಲ ಅಂದು ವಿರೋಧಿಸಿದವರೂ ಇಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಿರಿಯ ಸ್ವಾಮೀಜಿ ಕಾಯಕ ನಿಲ್ಲಬಾರದೆಂದು ಗುರು ಮಹಾಂತ ಸ್ವಾಮೀಜಿ ನಿತ್ಯ ಇಳಕಲ್ಲದಲ್ಲಿ 10-15 ಮನೆಗಳಿಗೆ ತಿರುಗಾಡಿ ಚಟಗಳನ್ನು ಜೋಳಿಗೆಗೆ ಹಾಕಿರೆಂದು ಕೇಳುತ್ತಾರೆ.

ಇದೆಲ್ಲದರ ಜೊತೆಗೆ ಬಸವತತ್ವ ಪ್ರಸಾರಕ್ಕಾಗಿ ಶರಣ ಸಿದ್ಧಾಂತ ವಿದ್ಯಾಪೀಠ, ಕಾಯಕ ಜೀವಿಗಳಿಗೆ ಬಡ್ಡಿರಹಿತ ಸಾಲ ಹಾಗೂ ಉಪಕರಣ ನೀಡಲು ಕಾಯಕ ಸಂಜೀವಿನಿ ಸಂಸ್ಥೆ, ಶಿಕ್ಷಣ ಪ್ರಸಾರಕ್ಕಾಗಿ ಹುನಗುಂದ ಹಾಗೂ ಇಳಕಲ್ಲನಲ್ಲಿ ವಿದ್ಯಾವರ್ಧಕ ಸಂಘಗಳು ಮಹಾಂತ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯ ನಿರತವಾಗಿವೆ.

ಗಮನಾರ್ಹ ಸಂಗತಿ ಎಂದರೆ, ಅಥಣಿ ತಾಲ್ಲೂಕಿನ ಸವದಿಯಲ್ಲಿ ಈ ವರ್ಷದ ಜನವರಿಯಲ್ಲಿ ವಿಶಿಷ್ಟ ಕಾರ್ಯಕ್ರಮ ನಡೆಯಿತು. ಸವದಿ ಮಠಕ್ಕೆ ಸ್ವಾಮೀಜಿಯಾಗಿ 50 ವರ್ಷವಾದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ 100 ವಿಧವೆಯರಿಗೆ ಹಸಿರು ಸೀರೆಗಳನ್ನು ಮುತ್ತೈದೆಯರಿಂದ ಕೊಡಿಸಿ, ಹಸಿರು ಬಳೆ ತೊಡಿಸಿ, ಹೂವು ಮುಡಿಸಿದರು. ಇದೆಲ್ಲ ಆದ ಮೇಲೆ ವಿಧವೆಯರ ಮಕ್ಕಳೆಲ್ಲ ಬರುವ ಹಬ್ಬಗಳಂದು ತಮ್ಮ ತಮ್ಮ ಅವ್ವನ ಕಡೆಯಿಂದ ಆರತಿ ಮಾಡಿಸಿಕೊಳ್ಳುವುದಾಗಿ ಸ್ವಾಮೀಜಿ ಬಳಿ ಪ್ರಮಾಣ ಮಾಡಿದರು. ನಂತರ 100 ಮಾಜಿ ಸೈನಿಕರ ಹಾಗೂ ರೈತರ ಪಾದಪೂಜೆಯನ್ನು ಈ ಸ್ವಾಮೀಜಿ ಕೈಗೊಂಡರು. ಇದರ ಉದ್ದೇಶ; ಮೇಲು-ಕೀಳಿಲ್ಲ ಹಾಗೂ ಜಾತಿಭೇದ ಇಲ್ಲವೆಂದು ಸಾರಲು.

ಹೀಗೆ ಅವರ ಸಮಾಜಮುಖಿ ಚಿಂತನೆಗಳು ಹಾಗೂ ವ್ಯಸನಮುಕ್ತ ಸಮಾಜಕ್ಕಾಗಿ ಕೈಗೊಂಡ ಕಾರ್ಯಗಳನ್ನು ಗಮನಿಸಿ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಅವರಿಗೆ ಈಗ ರಾಜ್ಯ ಮದ್ಯಪಾನ ಸಂಯಮ ಮಂಡಳಿಯು `ಸಂಯಮ~ ಪ್ರಶಸ್ತಿ ಘೋಷಿಸಿರುವುದು ತನ್ನನ್ನೇ ತಾನು ಗೌರವಿಸಿಕೊಂಡಂತೆ ಆಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT