ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರ ಸರಿದವರು

Last Updated 2 ಡಿಸೆಂಬರ್ 2012, 8:06 IST
ಅಕ್ಷರ ಗಾತ್ರ

ಆರೇಳು ವರ್ಷಗಳ ಹಿಂದೆ ಮೂಡಿಗೆರೆ ತಾಲ್ಲೂಕಿನ ಸಬ್ಲಿ ಎಂಬ ಕಾಲೊನಿಯ ಆ ಪುಟ್ಟ ಮನೆಯ ಮುಂದೆ ನೂರಾರು ಜನ ನೆರೆದಿದ್ದರು. ಹಿಂದಿನ ದಿನ ಎನ್‌ಕೌಂಟರ್‌ನಿಂದ ಪ್ರಾಣ ಬಿಟ್ಟಿದ್ದ ಕಾಲೊನಿಯ ಯುವಕ ಉಮೇಶನ ಶವವನ್ನು ಹೊತ್ತ ಪೊಲೀಸ್ ವ್ಯಾನ್ ಆಗಷ್ಟೇ ಅಲ್ಲಿಗೆ ಬಂದಿತ್ತು.

ಚಿಕ್ಕವಾದರೂ ಚೊಕ್ಕಟವಾಗಿದ್ದ ಅಲ್ಲಿನ ಮನೆಗಳು, ವಿಶಾಲವಾದ ರಸ್ತೆ, ವಿದ್ಯುತ್ ಸೌಲಭ್ಯದಿಂದ ಇಡೀ ಜಿಲ್ಲೆಗೇ ಅತಿ ದೊಡ್ಡ ಪರಿಶಿಷ್ಟ ಕಾಲೊನಿ ಎನಿಸಿಕೊಂಡ ಸಬ್ಲಿಯ ಜನ ಹೇಗೆ ತಾವು ನೋಡನೋಡುತ್ತಿದ್ದಂತೆಯೇ ಮುಖ್ಯವಾಹಿನಿ ಸೇರಿಕೊಂಡರು ಎಂಬುದರಿಂದ ಹಿಡಿದು, ಪ್ರತಿ ಬಾರಿ ಹೀಗೆ ಎನ್‌ಕೌಂಟರ್‌ಗಳು ನಡೆದಾಗಲೂ ಸರ್ಕಾರ ಪ್ಯಾಕೇಜ್‌ಗಳನ್ನು ಘೋಷಿಸಿ ಅದು ಹೇಗೆ ಕೈತೊಳೆದುಕೊಂಡು ಬಿಡುತ್ತದೆ ಎಂಬುದರವರೆಗೆ ಅಲ್ಲಲ್ಲಿ ಗುಂಪು ಗುಂಪಾಗಿ ನಿಂತಿದ್ದ ಜನ ಚರ್ಚಿಸುತ್ತಿದ್ದರು.

ಪೊಲೀಸರು, ಮಾಧ್ಯಮದವರಂತೂ ಅದು ತಮ್ಮ ಜನ್ಮಸಿದ್ಧ ಹಕ್ಕೇನೋ ಎಂಬಂತೆ ಆ ಮನೆಯ ಒಳಗೇ ಬೀಡುಬಿಟ್ಟಿದ್ದರು. ಚಿಕ್ಕ ಹಾಲ್‌ನ ಮೂಲೆಯಲ್ಲಿದ್ದ ಮರದ ಬೆಂಚೊಂದರ ಮೇಲೆ ಕಾಲು ಕೊಕ್ಕರಿಸಿಕೊಂಡು ಮಲಗಿದ್ದ ಆ ಜೀವಕ್ಕೆ ಮಾತ್ರ ಇದ್ಯಾವುದರ ಪರಿವೆಯೂ ಇರಲಿಲ್ಲ. ಕರುಳಿನ ಸಂಕಟ ತಡೆಯಲಾರದೇ ಗಟ್ಟಿಯಾಗಿ ಹೊಟ್ಟೆ ಹಿಡಿದುಕೊಂಡು, ಬಿಗಿಯಾಗಿ ಕಣ್ಣು ಮುಚ್ಚಿಕೊಂಡಿದ್ದ ಆ ವೃದ್ಧೆಯ ಕೆನ್ನೆಯ ಮೇಲಿನಿಂದ ಕಣ್ಣೀರು ಸದ್ದಿಲ್ಲದೇ ಇಳಿಯುತ್ತಿತ್ತು. ಆಕೆ ಉಮೇಶನ ತಾಯಿ.

ಬಾತು ಹೋದ ಕೆನ್ನೆಯ ಅಪ್ಪ ಹಾಗೂ ಆಗಷ್ಟೇ ಹದಿಹರೆಯಕ್ಕೆ ಕಾಲಿಟ್ಟಿದ್ದ, ಮುಗ್ಧತೆಯೇ ಮೈವೆತ್ತಂತಿದ್ದ ಉಮೇಶನ ತಮ್ಮ ಪೊಲೀಸರ ಅನುಮಾನದ ದೃಷ್ಟಿ ಮತ್ತು ಮಾಧ್ಯಮದವರ ಪ್ರಶ್ನೆಗಳ ಸುರಿಮಳೆ ಎದುರಿಸಲಾಗದೇ ಅಡುಗೆ ಕೋಣೆಯಲ್ಲಿ ತಬ್ಬಿಬ್ಬಾಗಿ ನಿಂತಿದ್ದರು.

ಅವರದು ಇಬ್ಬರು ಗಂಡು ಮಕ್ಕಳ ಪುಟ್ಟ ಸಂಸಾರ. ಬಡತನದಲ್ಲೇ ಬದುಕು ಕಟ್ಟಿಕೊಂಡವರು. ಮನೆಯಿಂದ ಮೂಡಿಗೆರೆ ಕಾಲೇಜಿಗೆ ಹೋಗಿ ಬರುತ್ತಿದ್ದ ಹಿರಿಯ ಮಗ ಉಮೇಶ ಕೆಲ ತಿಂಗಳ ಹಿಂದಷ್ಟೇ ಓದುವುದು ಬಿಟ್ಟು, ಬೇರೆ ಊರಲ್ಲಿ ಕೆಲಸಕ್ಕೆ ಸೇರಿದ್ದೇನೆ ಎಂದು ಹೇಳಿದ್ದ. ಆಗಾಗ್ಗೆ ಮನೆಗೆ ಬರುತ್ತಾ ಸಂಬಳದ ಬಾಬ್ತು ಎಂದು ಹೇಳಿ ತಾಯಿಯ ಕೈಗೊಂದಿಷ್ಟು ಹಣ ಇಟ್ಟು ಹೋಗುತ್ತಿದ್ದ.

`ಹೇಗೋ ಬದುಕಿಗೊಂದು ದಾರಿ ಕಂಡುಕೊಂಡ' ಎಂದುಕೊಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದವರಿಗೆ ಬರಸಿಡಿಲು ಬಡಿದಂತೆ `ನಿಮ್ಮ ಮಗ ನಕ್ಸಲ್, ಅವನು ನಮ್ಮ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ, ಇಗೊಳ್ಳಿ ಹೆಣ ತಂದಿದ್ದೇವೆ' ಎಂದು ಪೊಲೀಸರು ಬಂದು ಹೇಳಿದಾಗ ಆ ಹಿರಿಯ ಜೀವಗಳು ಭೂಮಿಗಿಳಿದು ಹೋಗಿದ್ದವು.

ಕೆಲಸಕ್ಕೆ ರಜೆ ಇತ್ತು ಎಂದು ಹೇಳಿ ಒಂದೆರಡು ವಾರಗಳ ಹಿಂದಷ್ಟೇ ಮನೆಗೆ ಬಂದಿದ್ದ ಮಗನಿಗೆ ಕೈಯಾರೆ ಊಟ ಬಡಿಸಿ `ಜಾಗ್ರತೆ ಮಗನೇ' ಎಂದು ಹೇಳಿ ಕಳುಹಿಸಿಕೊಟ್ಟಿದ್ದ ಆ ತಾಯಿಗೆ ಮಗನ ಸಾವಿನ ಸುದ್ದಿ ಕೇಳಿದಾಗ ಆದ ಆಘಾತ, ಏನೊಂದೂ ಮಾತನಾಡದೆ, ಯಾರನ್ನೂ ದೂಷಿಸದೆ ಮೌನವಾಗಿ ಕಣ್ಣೀರ‌್ಗರೆಯುತ್ತಿದ್ದ ಆ ದೃಶ್ಯ ನೋಡಿದವರ ಮನ ಹಿಂಡುವಂತಿತ್ತು.

ಮೊನ್ನೆ ಉಗ್ರ ಅಜ್ಮಲ್ ಕಸಾಬ್‌ನನ್ನು ಗಲ್ಲಿಗೇರಿಸಿದ ಸುದ್ದಿ ಕೇಳಿದ ಕೂಡಲೇ, ಉಮೇಶನ ಮನೆಯ ಅದೇ ಚಿತ್ರಣ ನನ್ನ ಕಣ್ಣೆದುರು ಗಕ್ಕನೇ ಬಂದು ನಿಂತಿತು. ಅಲ್ಲೆಲ್ಲೋ ದೂರದ ಪಾಕಿಸ್ತಾನದಲ್ಲಿ ಇದ್ದಿರಬಹುದಾದ ಅಂಥದ್ದೇ ಒಂದು ಪುಟ್ಟ ಮನೆಯಲ್ಲಿ ಆ ತಾಯಿಯೂ ಹೀಗೇ ಮಲಗಿರಬಹುದು. ಮಗನನ್ನು ನೇಣಿನ ಕುಣಿಕೆಗೆ ಒಡ್ಡಿದ ಸುದ್ದಿ ಕೇಳಿ ಹೀಗೆಯೇ ರೋದಿಸಿರಬಹುದು.

ಉಮೇಶನ ತಾಯಿಯಂತೆ ಅವಳ ಕರುಳೂ ಕಿತ್ತುಬಂದಂತೆ ಆಗಿರಬಹುದು. ಅವನ ಅಪ್ಪ ಮತ್ತು ಒಡಹುಟ್ಟಿದವರು ಸಮಾಜವನ್ನು ಎದುರಿಸಲಾಗದೇ ತಮ್ಮದಲ್ಲದ ತಪ್ಪಿಗಾಗಿ ಉಮೇಶನ ಮನೆಯವರಂತೆಯೇ ತಲೆ ತಗ್ಗಿಸಿ ನಿಂತಿರಬಹುದು ಎನಿಸಿ ಮನಸ್ಸು ಆರ್ದ್ರವಾಯಿತು. ಅಂದು ಉಮೇಶ, ಇಂದು ಕಸಾಬ್, ನಾಳೆ ಇನ್ಯಾರೋ? ಪಾತ್ರ ಮಾತ್ರ ಬದಲು ಅಷ್ಟೇ.

ಇಲ್ಲ, ನೂರಾರು ಜನರನ್ನು ಬಲಿ ತೆಗೆದುಕೊಂಡು ಎಷ್ಟೋ ಮನೆಗಳ ದೀಪವನ್ನೇ ನಂದಿಸಿದ ಕಸಾಬ್‌ನಂಥ ಉಗ್ರರಿಗೆ ಮರಣದಂಡನೆಯೇ ತಕ್ಕ ಶಿಕ್ಷೆ ಎನ್ನುವುದಾದರೆ ಅದಕ್ಕೆ ಅವನು ತಕ್ಕವನೇ ಸರಿ. ಅಪ್ಪ-ಅಮ್ಮನನ್ನು ಕಳೆದುಕೊಂಡ ಅದೆಷ್ಟೋ ಅನಾಥರನ್ನು ಸೃಷ್ಟಿಸಿದ, ನೂರಾರು ಹೆಣ್ಣು ಮಕ್ಕಳನ್ನು ವಿಧವೆಯರನ್ನಾಗಿ ಮಾಡಿದ, ಕೈಯಾರೆ ಮಕ್ಕಳನ್ನು ಮಣ್ಣು ಮಾಡಿ ಬಂದು ಹೆತ್ತವರು ತಮ್ಮ ಉಸಿರಿರುವವರೆಗೂ ನರಳುವಂತೆ ಮಾಡಿದ ಕಸಾಬ್‌ನಂತಹವರಿಗೆ ಅತ್ಯುಗ್ರ ಶಿಕ್ಷೆ ವಿಧಿಸಬೇಕಾದುದು ನ್ಯಾಯ ಸಹ.

ಆದರೆ, ಅಂತಹ ಕಟು ಉಗ್ರ ಮನಸ್ಸಿನ ಕಸಾಬ್‌ನೂ ಹಿಂದೊಮ್ಮೆ ನಮ್ಮೆಲ್ಲರ ಮನೆಯ ಮಕ್ಕಳಂತೆ ಮಗುವಾಗಿದ್ದವನೇ ಅಲ್ಲವೇ? ಉಮೇಶನ ಮನೆಯವರೂ ಒಳಗೊಂಡು ನಮ್ಮ ಸುತ್ತಮುತ್ತಲಿನ ಅದೆಷ್ಟೋ ಹೆತ್ತವರಂತೆ ಅವನ ಪಾಲಕರೂ ಮಗನ ಬಗ್ಗೆ ನೂರಾರು ಕನಸು ಕಟ್ಟಿಕೊಂಡಿದ್ದಿರಬಹುದು ಅಲ್ಲವೇ?

ಹಾಗಿದ್ದರೆ ಅದ್ಯಾವ ಕಾಲಘಟ್ಟದಲ್ಲಿ ಅವನ ಮುಗ್ಧತೆಯ ಪೊರೆ ಕಳಚಿ ಕ್ರೌರ್ಯದ ಪರದೆ ಆವರಿಸಿಕೊಂಡಿರಬಹುದು?ನಾಲ್ಕು ವರ್ಷಗಳ ಹಿಂದೆ ಮುಂಬೈ ದಾಳಿ ನಡೆದಾಗ ಸೆರೆ ಸಿಕ್ಕ ಏಕೈಕ ಉಗ್ರ ಕಸಾಬ್‌ನ ಮೂಲ ಜಾಲಾಡಿದಾಗ ಅವನು ಪಾಕಿಸ್ತಾನದ ಫರೀದ್‌ಕೋಟ್ ಗ್ರಾಮದವನು, ನಮ್ಮ ದೇಶದ ಲಕ್ಷಾಂತರ ಜನರಂತೆ ಸಾಮಾನ್ಯ ಬದುಕು ನಡೆಸುತ್ತಿದ್ದ ಅಲ್ಲಿನ ತಳ್ಳುಗಾಡಿ ವ್ಯಾಪಾರಿ ಅಮೀರ್ ಕಸಾಬ್‌ನ 6 ಮಕ್ಕಳಲ್ಲಿ ಒಬ್ಬ ಎಂಬುದು ಬೆಳಕಿಗೆ ಬಂದಿತ್ತು.

ದಾಳಿ ವಿಷಯ ತಿಳಿದು ಜಗತ್ತಿಗೆ ಮಾತ್ರವಲ್ಲ ಅವನ ಕುಟುಂಬಕ್ಕೂ ತೀವ್ರ ಆಘಾತವಾಗಿತ್ತು. ಈದ್ ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸಲಿಲ್ಲವೆಂದು ಅಪ್ಪನ ಜೊತೆ ಜಗಳವಾಡಿಕೊಂಡು ಮನೆ ಬಿಟ್ಟು ಹೋಗಿದ್ದ ಮಗ, ತಾಯ್ನೆಲದಿಂದಲೇ ದೂರ ಹೋಗಿ ಅಂತಹ ಮಹಾನ್ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿಬಿಡಬಹುದು ಎಂಬ ಕಲ್ಪನೆ ತಾನೇ ಆ ಬಡ ಕುಟುಂಬಕ್ಕೆ ಹೇಗೆ ಬರಲು ಸಾಧ್ಯ?

ಅಷ್ಟೇ ಏಕೆ ಕೆಲವೇ ದಿನಗಳ ಹಿಂದೆ, ಬೆಂಗಳೂರಿನ ಕಚೇರಿಗಳಲ್ಲಿ ದುಡಿಯುವ ಸಾವಿರಾರು ಜನರಲ್ಲಿ ಒಬ್ಬರಾಗಿ ಇದ್ದುಕೊಂಡೇ ದುಷ್ಕೃತ್ಯದ  ಸಂಚು ರೂಪಿಸಿ ಸಿಕ್ಕಿ ಬಿದ್ದ ಶಂಕಿತ ಉಗ್ರ ಮಹಮದ್ ಸಿದ್ಧಿಕಿ ಮತ್ತು ಸಹಚರರ ಹಿನ್ನೆಲೆ ಬೆಳಕಿಗೆ ಬಂದಾಗಲೂ ಅವರನ್ನು ಹತ್ತಿರದಿಂದ ಕಂಡವರು ದಿಗ್ಭ್ರಾಂತರಾಗಿದ್ದರು.

ಸಾಮಾನ್ಯ ಕುಟುಂಬಗಳಿಂದ ಬಂದು, ಮೇಲ್ನೋಟಕ್ಕೆ ಎಷ್ಟೊಂದು ಮುಗ್ಧರಂತೆ ಕಾಣುತ್ತಿದ್ದ ಈ ಹುಡುಗರಲ್ಲಿ, ಮಾರಣಹೋಮ ನಡೆಸಿಬಿಡುವಂತಹ ಕ್ರೌರ್ಯ ಅದೆಲ್ಲಿ ಅಡಗಿರುತ್ತದೆ ಎನಿಸಿತ್ತು.

ಯಾಕೆ ಹೀಗೆ? ನಾಲ್ಕೈದು ವರ್ಷದ ನಮ್ಮ ಮಕ್ಕಳನ್ನೇ ಎಷ್ಟೋ ಬಾರಿ, ಬೇಕಾದಂತೆ ಬೆಳೆಸಲು ನಮಗೆ ಸಾಧ್ಯವಾಗುವುದಿಲ್ಲ. ಹೀಗಿರುವಾಗ ಹೆತ್ತವರ ಎದೆಮಟ್ಟ ಬೆಳೆದುನಿಂತ ಮಕ್ಕಳು ಅದು ಹೇಗೆ ಸಂಚುಕೋರರ ಕೈಗೆ ಅಷ್ಟು ಸುಲಭದ ದಾಳಗಳಾಗಿ ಬಿಡುತ್ತಾರೆ? ಭಯೋತ್ಪಾದನೆ ಇರಬಹುದು, ನಕ್ಸಲ್ ಸಮಸ್ಯೆಯೇ ಆಗಿರಬಹುದು, ಒಟ್ಟಿನಲ್ಲಿ ಇದು ದಾರಿ ತಪ್ಪಿದ ಮಕ್ಕಳ ಕತೆ ಅಷ್ಟೇ.

ಇಂದಿಗೂ ಕಸಾಬ್‌ನಂತೆ ಸಣ್ಣಪುಟ್ಟ ಕಾರಣಕ್ಕೆ ಮನೆ ಬಿಟ್ಟು ಹೋಗುವ ಸಾಕಷ್ಟು ಮಂದಿ ನಮ್ಮ ನಡುವೆಯೂ ಇದ್ದಾರೆ. ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆ, ಉತ್ತರ ಕರ್ನಾಟಕದ ಹಳ್ಳಿಗಳ ನೂರಾರು ಮಕ್ಕಳು ಸಣ್ಣಪುಟ್ಟ ನೆಪ ಹೇಳಿಕೊಂಡು ಊರು ಬಿಟ್ಟಿದ್ದಾರೆ. ದೂರದ ಊರಲ್ಲಿ ದುಡಿಯುತ್ತಿದ್ದೇವೆ ಎಂದು ಮನೆಯವರನ್ನು ನಂಬಿಸಿ ಕಾಡು ಪಾಲಾಗಿದ್ದಾರೆ, ನಾಡಲ್ಲೇ ಇದ್ದುಕೊಂಡು ವ್ಯವಸ್ಥೆಯ ವಿರುದ್ಧ ಷಡ್ಯಂತ್ರ ಹೊಸೆಯುವವರ ಗರಡಿ ಸೇರಿದ್ದಾರೆ.

ಮುಂದೊಂದು ದಿನ ಹೆಣವಾಗಿ ಮನೆಗೆ ಬಂದಾಗ ಅಥವಾ ಕಸಾಬ್‌ನಂತೆ ಕನಿಷ್ಠ ಹೆಣವೂ ಸಿಗಲಾರದಂತೆ ಆಗಿಹೋದಾಗಷ್ಟೇ ಅವರು ಸಾಗುತ್ತಿದ್ದ ಹಾದಿಯ ಸುಳಿವು ಮನೆಯವರಿಗೆ ಸಿಗುತ್ತದೆ. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿಹೋಗಿರುತ್ತದೆ.

ಕೆಲವೊಮ್ಮೆ ಎಷ್ಟೋ ವರ್ಷ ಹೆತ್ತವರ ಸಂಪರ್ಕಕ್ಕೇ ಬಾರದೆ, ಸತ್ತೇಹೋಗಿದ್ದಾರೆ ಎಂದುಕೊಂಡಿದ್ದ ಮಕ್ಕಳು ಇಂತಹ ಸಮಾಜಘಾತುಕ ಶಕ್ತಿಗಳ ರೂಪದಲ್ಲಿ ಧುತ್ತನೇ ಅವತರಿಸಿದಾಗ ಅವರನ್ನು ಬರಮಾಡಿಕೊಳ್ಳುವ ಸ್ಥಿತಿಯಲ್ಲಿ ಮನೆಯವರೂ ಇರುವುದಿಲ್ಲ. ಅದು ನಮ್ಮದೇ ಕುಡಿ, ಆ ಶವದ ವಾರಸುದಾರರು ನಾವೇ ಎಂದು ಸಹ ಹೇಳಿಕೊಳ್ಳಲಾಗದ ದಯನೀಯ ಸ್ಥಿತಿಗೆ ಅವರು ಬಂದುಬಿಟ್ಟಿರುತ್ತಾರೆ.

ಇಂತಹವರ ರಕ್ತಸಂಬಂಧಿಗಳು ಎಂದು ಹೇಳಿಕೊಂಡು ಇತರ ಮಕ್ಕಳ ಬಾಳಿಗೂ ಕಲ್ಲು ಹಾಕಿಕೊಳ್ಳಲಾಗದೆ ಗಟ್ಟಿ ಮನಸ್ಸು ಮಾಡಿಕೊಂಡು, ಶವವನ್ನೇ ಪಡೆಯಲು ಹೋಗದಿರುವ ಉದಾಹರಣೆಗಳೂ ಸಾಕಷ್ಟಿವೆ. ಆದರೆ ಅಂತಹ ಕಠೋರ ನಿರ್ಧಾರಕ್ಕೆ ಬರುವ ಮುನ್ನ ಆ ಜೀವಗಳು ಎಂತಹ ಮೂಕವೇದನೆ ಅನುಭವಿಸಿರಬಹುದು ಎಂಬುದು ಮಾತ್ರ ಊಹೆಗೂ ನಿಲುಕದ ಸಂಗತಿ.

ಮೈಸೂರಿನ ಶ್ರೀಮಂತ ಮನೆತನದಲ್ಲಿ ಹುಟ್ಟಿ ದೆಹಲಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಕಲಿಯುವಾಗ ಕ್ರಾಂತಿಯ ಹುಚ್ಚು ಹತ್ತಿಸಿಕೊಂಡು, ಪಶ್ಚಿಮಘಟ್ಟದಲ್ಲಿ ಬೇರೂರಲು ನಕ್ಸಲೀಯರಿಗೆ ನಕ್ಷೆ ರೂಪಿಸಿಕೊಟ್ಟಿದ್ದ ಸಾಕೇತ್ ರಾಜನ್ ಇದಕ್ಕೊಂದು ಜ್ವಲಂತ ಉದಾಹರಣೆ.

ಸ್ವತಃ ಕಾಡಿನೊಳಗೆ ಇದ್ದುಕೊಂಡು ಚಟುವಟಿಕೆಯನ್ನು ವ್ಯವಸ್ಥಿತವಾಗಿ ಮುನ್ನಡೆಸುತ್ತಿದ್ದ ಆ ಸಂಘಟನಾ ಚತುರನನ್ನು ಯಶಸ್ವಿ ಕಾರ್ಯಾಚರಣೆಯಲ್ಲಿ ಪೊಲೀಸರು ಗುಂಡೇಟಿನಿಂದ ಹೊಡೆದುರುಳಿಸಿದ್ದರು. ಆಗ ಹೋರಾಟ, ಕ್ರಾಂತಿಯೆಲ್ಲ ಏನಿದ್ದರೂ ಬಡವರ ಪಾಲಿಗಷ್ಟೇ ಎಂದುಕೊಂಡಿದ್ದ ಪ್ರಜ್ಞಾವಂತರು ಬೆಚ್ಚಿ ಬಿದ್ದಿದ್ದರು.

ಈ ಅನೂಹ್ಯ ಬೆಳವಣಿಗೆಯನ್ನು ಅರಗಿಸಿಕೊಳ್ಳಲಾಗದೇ `ಬುದ್ಧಿಜೀವಿಗಳ ವಲಯ' ತತ್ತರಿಸಿತ್ತು. ಸಮಾಜದ ಉದ್ಧಾರಕ್ಕಾಗಿ ಪ್ರಾಣತೆತ್ತ ಸಾಕೇತ್ ರಾಜನ್ ಒಬ್ಬ ನಾಯಕ, ಹೀಗಾಗಿ ಅವರ ಶವವನ್ನು ಸಾರ್ವಜನಿಕರ ಪ್ರದರ್ಶನಕ್ಕೆ ಇಟ್ಟು ಮೆರವಣಿಗೆ ನಡೆಸಬೇಕು ಎಂದು ಆಗ್ರಹಿಸಿ ಇತ್ತ ರಾಜಧಾನಿಯಲ್ಲಿ `ಬುದ್ಧಿಜೀವಿಗಳು' ದೊಡ್ಡ ಹುಯಿಲು ಎಬ್ಬಿಸಿದ್ದರು.

ಆದರೆ ಅತ್ತ, ಜ್ವಾಲಾಮುಖಿಯನ್ನೇ ಒಡಲೊಳಗಿಟ್ಟುಕೊಂಡಿದ್ದರೂ ಮೇಲೆ ನಿರ್ಲಿಪ್ತತೆಯ ಮುಖವಾಡ ತೊಟ್ಟ ಸಾಕೇತ್ ತಾಯಿ ಮಾತ್ರ ಇದ್ಯಾವುದಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಇದ್ದುಬಿಟ್ಟರು. ಎಷ್ಟೋ ವರ್ಷಗಳಿಂದ ನಿರ್ದಾಕ್ಷಿಣ್ಯವಾಗಿ ತನಗೆ ಮುಖವನ್ನೇ ತೋರದ ಮಗನನ್ನು ಮತ್ತೆ ನೋಡುವುದೇ ಬೇಡ ಎಂಬಷ್ಟು ಆ ಮಾತೃ ಹೃದಯ ಕಲ್ಲಾಗಿಹೋಗಿತ್ತೋ ಅಥವಾ ತಾನು ಆವರೆಗೂ ಮನಸ್ಸಿನಲ್ಲಿ ಹುದುಗಿಸಿಕೊಂಡು ಬಂದಿದ್ದ, ತನ್ನ ಮಡಿಲಲ್ಲಿ ಆಡಿ ಬೆಳೆದ ಕಂದನ ಸುಂದರ ಚಿತ್ರಣಕ್ಕೆ ಮುಂದೆ ತಾನು ನೋಡಲಿದ್ದ ದೃಶ್ಯ ಮಸಿ ಬಳಿದುಬಿಡಬಹುದೆಂಬ ಭೀತಿಯೋ ಅಂತೂ ಆ ತಾಯಿ ಮಾತ್ರ ಮಗನ ಶವದಿಂದ ದೂರವೇ ಉಳಿದುಬಿಟ್ಟರು.

ಸಾಕೇತ್ ಜೊತೆಗೇ ಬಲಿಯಾದ ಅವರ ಸಹಚರನ ಶವ, ವಾರಸುದಾರರೇ ಇಲ್ಲದೆ ಚಿಕ್ಕಮಗಳೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಅನಾಥವಾಗಿ ಬಿದ್ದಿತ್ತು. ಕಡೆಗೆ ಅದು ರಾಯಚೂರು ಜಿಲ್ಲೆಯ ಸಿಂಧನೂರಿನ ಶಿವಲಿಂಗುವಿನದು ಎಂಬುದು ಪತ್ತೆಯಾಗುವ ಹೊತ್ತಿಗೆ ಮೂರು ದಿನ ಕಳೆದುಹೋಗಿತ್ತು.

ಒಮ್ಮೆ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಸಮಾರಂಭವೊಂದರಲ್ಲಿ ನಕ್ಸಲ್ ಬೆಂಬಲಿಗರಿಗೆ ಒಂದು ಸವಾಲು ಹಾಕಿದ್ದರು. `ಸಮಾಜ ಉದ್ಧಾರ ಮಾಡಲು, ವ್ಯವಸ್ಥೆಯ ವಿರುದ್ಧದ ನಿಮ್ಮ ಆಕ್ರೋಶ ಹೊರಹಾಕಲು ಕಂಡವರ ಮನೆಯ ಮಕ್ಕಳ ತಲೆಕೆಡಿಸಿ ಕೈಗೆ ಬಂದೂಕು ಕೊಡುವ ನೀವು, ನಿಮ್ಮ ಮಕ್ಕಳು ಮಾತ್ರ ಡಾಕ್ಟರು, ಎಂಜಿನಿಯರ್ ಆಗಬೇಕೆಂದು ಆಸೆಪಡುತ್ತೀರಿ; ಹಾಗಿದ್ದರೆ ನಿಮ್ಮ ಮಕ್ಕಳ ಕೈಗೇ ಬಂದೂಕು ಕೊಟ್ಟು ಕಾಡಿಗೆ ಕಳಿಸಿ ನೋಡೋಣ' ಎಂದಿದ್ದರು.

ಆಗ, ತಾವು ಮಾತ್ರ ಮುಖ್ಯವಾಹಿನಿಯ ಸುರಕ್ಷಿತ ವಲಯದಲ್ಲಿ ಇದ್ದುಕೊಂಡು ಬೇರೆಯವರ ಮಕ್ಕಳ ತಲೆಯಲ್ಲಿ ಕ್ರಾಂತಿಯ ಬೀಜ ಬಿತ್ತುತ್ತಿದ್ದ ಯಾರೊಬ್ಬರೂ, ಮರ್ಮಕ್ಕೆ ಚುಚ್ಚುವಂತಿದ್ದ ಈ ನೇರ ಸವಾಲಿಗೆ ಉತ್ತರಿಸುವ ಧೈರ್ಯ ತೋರಿರಲಿಲ್ಲ.

ಶೃಂಗೇರಿ ಬಳಿಯ ಬರ್ಕಣ ಎಂಬ ಕಾಡಿನಲ್ಲಿ ಒಮ್ಮೆ ನಕ್ಸಲ್ ಯುವಕನೊಬ್ಬ ಪೊಲೀಸರ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡು ಪರಾರಿಯಾಗಿದ್ದ. ಆ ನಿರ್ಜನ ಪ್ರದೇಶದಲ್ಲಿ ಆರೈಕೆ ಮಾಡುವವರಿಲ್ಲದ ಅವನ ಅರಣ್ಯ ರೋದನ ಹೇಗಿದ್ದಿರಬಹುದು ಎಂದು ಊಹೆ ಮಾಡಿಕೊಂಡಿದ್ದವರಿಗೆ ತೇಜಸ್ವಿಯವರ ಮಾತಿನ ಹಿನ್ನೆಲೆ ಸ್ಪಷ್ಟವಾಗೇ ಅರ್ಥವಾಗಿತ್ತು.

ಬಡತನದ ಬೇಗೆಯಿಂದ, ವಯೋಸಹಜ ಹುಂಬತನದಿಂದ ಅಥವಾ ಇರುವುದನ್ನೆಲ್ಲಾ ಬುಡಮೇಲು ಮಾಡಿಬಿಡುವ ಬಹು ದೊಡ್ಡ ಕ್ರಾಂತಿಕಾರಿಗಳು ತಾವು ಎಂಬ ಭ್ರಮೆಯಿಂದ ವ್ಯವಸ್ಥೆಯೆಂಬ ಮಹಾಪ್ರವಾಹಕ್ಕೆ ಎದುರಾಗಿ ನಿಂತುಬಿಡುವ ಎದೆಗಾರಿಕೆ ತೋರುವ ಈ ಮಕ್ಕಳಿಗೆ, ವಾಸ್ತವದಲ್ಲಿ ನಿಜವಾದ ಸಮಸ್ಯೆಯ ಅರಿವಿರುವುದಿಲ್ಲ.

ನಾವು ಹೋರಾಡುತ್ತಿರುವುದಾದರೂ ಯಾವ ಉದ್ದೇಶಕ್ಕೆ, ನಮ್ಮ ರಕ್ತಸಿಕ್ತ ಹೋರಾಟ ಪರಿಹಾರದ ದಾರಿ ತೆರೆಸುವಷ್ಟು ಪರಿಣಾಮಕಾರಿಯಾದದ್ದೇ ಎಂದು ಯೋಚಿಸುವ ವ್ಯವಧಾನವೂ ಇರುವುದಿಲ್ಲ. ಅಂತಹದ್ದೊಂದು ಚಿಂತನೆ ಅವರ ತಲೆಯಲ್ಲಿ ಮೊಳಕೆಯೊಡೆಯುವ ಕಾಲಕ್ಕೆ, ಹಿಂದಿರುಗಿ ಬರಲಾರದಷ್ಟು ದೂರ ಅವರು ಸಾಗಿಹೋಗಿರುತ್ತಾರೆ.

ಕಡೆಗೊಂದು ದಿನ ಕಸಾಬ್ ವಿಷಯದಲ್ಲಿ ಆದಂತೆ, `ವ್ಯವಸ್ಥೆಯ ವಿರುದ್ಧದ ಹೋರಾಟ' ಎಂಬ ನೆಳಲು-ಬೆಳಕಿನ ಆಟದಲ್ಲಿ ದಾಳಗಳಷ್ಟೇ ಉರುಳುತ್ತವೆ. ಸೂತ್ರಧಾರರು ಮಾತ್ರ ಕೂದಲನ್ನೂ ಕೊಂಕಿಸಿಕೊಳ್ಳದೆ ತೆರೆಮರೆಯಲ್ಲೇ ಉಳಿದುಬಿಡುತ್ತಾರೆ. ಹೊಸ ದಾಳಗಳಿಗಾಗಿ ಹುಡುಕಾಡುತ್ತಾರೆ. ನಿಂತಲ್ಲಿಂದ ಮತ್ತೆ ಆಟ ಶುರುವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT