ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರದೃಷ್ಟಿ ಕೊರತೆಯಿಂದ ವಿಫಲವಾದ ನೀರಿನ ಯೋಜನೆ

Last Updated 4 ಫೆಬ್ರುವರಿ 2012, 4:25 IST
ಅಕ್ಷರ ಗಾತ್ರ

ಕಂಪ್ಲಿ: ಒಂದು ವರ್ಷದ ಹಿಂದೆ ಉದ್ಘಾಟನೆಗೊಂಡ ಕುಡಿಯುವ ನೀರಿನ  ಯೊಂದು ಆ ಭಾಗದ ಐದು ಹಳ್ಳಿಗಳ ಸಾವಿರಾರು ಜನತೆಯ ನೀರಿನ ಬಾಯಾರಿಕೆಯನ್ನು ತಣಿಸಬೇಕಿತ್ತು. ಆದರೆ ಕೆರೆಯಲ್ಲಿ ನೀರು ಸಂಗ್ರಹವಾಗದ ಕಾರಣ ಜನತೆ ಶುದ್ಧ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.

ಇದು ಕಂಪ್ಲಿ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಜವುಕು ಗ್ರಾಮದ ಕುಡಿಯುವ ನೀರಿನ ಯೋಜನೆಯ ಕಥೆ ವ್ಯಥೆ. ಇದಕ್ಕಾಗಿ ಸರ್ಕಾರ ರಾಜೀವ ಗಾಂಧಿ ಸಬ್ ಮಿಷನ್ ಯೋಜನೆಯಡಿ ಸುಮಾರು ರೂ. 2.23 ಕೋಟಿ ವೆಚ್ಚ ಮಾಡಿ ಜವುಕು ಕ್ಯಾಂಪ್ ಬಳಿ 18 ಎಕರೆ ಪ್ರದೇಶದಲ್ಲಿ ಬೃಹತ್ ಕೆರೆ, ಪಂಪ್ ಹೌಸ್, ರಾಸಾಯನಿಕ ಕೊಠಡಿ, ಮೂರು ಫಿಲ್ಟರ್ ಟ್ಯಾಂಕ್‌ಗಳನ್ನು ನಿರ್ಮಿಸಿದೆ. ಆದರೆ ಇಲ್ಲಿಯವರೆಗೆ ಕೆರೆಯಲ್ಲಿ ನೀರಿನ ಸಂಗ್ರಹವಿಲ್ಲದೆ ಯೋಜನೆ ಸಂಪೂರ್ಣ ನೆಲಕಚ್ಚಿದೆ.

ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ನಂ.1 ವಿತರಣೆ ಕಾಲುವೆಯಿಂದ ಈ ಕುಡಿಯುವ ನೀರಿನ ಕೆರೆಗೆ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿತ್ತು.ಆದರೆ ಇದೇ ಕಾಲುವೆ ವ್ಯಾಪ್ತಿಯಲ್ಲಿ ರೈತರು ಸಾವಿರಾರು ಎಕರೆ ಭತ್ತ ನಾಟಿ ಮಾಡುತ್ತಿದ್ದು, ಅವರಿಗೆ ಕಾಲುವೆ ನೀರು ಸಾಕಾಗದೇ ವಾಗ್ವಾದ ನಡೆಯುತ್ತವೆ.

ಈ ಕಾಲುವೆಗೆ ಕೇವಲ ಆರು ತಿಂಗಳು ಮಾತ್ರ ನೀರು ಹಾಯಿಸಲಾಗುತ್ತದೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಇದೇ ಕಾಲುವೆಯಿಂದ ಕೆರೆಗೆ ನೀರು ತುಂಬಿಸುವುದು ಅಸಾಧ್ಯದ ಮಾತು. ಅಂದಾಜು ಸಿದ್ಧಪಡಿಸುವಾಗ ಈ ಬಗ್ಗೆ ಅಧಿಕಾರಿಗಳು ಗಂಭೀರವಾಗಿ ಗಮನ ಹರಿಸದಿರುವುದೇ ಕುಡಿಯುವ ನೀರಿನ ಬೃಹತ್ ಯೋಜನೆ ಮುಗ್ಗರಿಸಲು ಪ್ರಮುಖ ಕಾರಣ ಎನ್ನುವ ಮಾತು ಐದು ಹಳ್ಳಿಯ ಜನತೆಯಿಂದ ಕೇಳಿಬರುತ್ತಿದೆ.

ಕೆಲವೇ ಕಿ.ಮೀ ಅಂತರದಲ್ಲಿ ತುಂಗಭದ್ರಾ ಬಲದಂಡೆ ಕೆಳಮಟ್ಟದ ಮುಖ್ಯ ಕಾಲುವೆ ವರ್ಷಪೂರ್ತಿ ಹರಿಯು ತ್ತಿದ್ದು, ಇದರಿಂದ ಪೈಪ್ ಅಳವಡಿಸಿ ನೀರು ತಂದು ಕೆರೆ ತುಂಬಿಸಿ ಜೊತೆಗೆ ಪಂಪ್‌ಹೌಸ್‌ಗೆ ಸದಾ ವಿದ್ಯುತ್ ಇರುವಂತೆ ಎಕ್ಸ್‌ಪ್ರೆಸ್ ಲೈನ್ ಅಳವಡಿ ಸಿದ್ದರೆ ಈ ಸಮಸ್ಯೆಯೇ ಉದ್ಭವಿಸು ತ್ತಿರಲಿಲ್ಲ.

ಜವುಕು, ಹಂಪಾದೇವನಹಳ್ಳಿ, ಜೀರಿಗ ನೂರು, ಗೋನಾಳ, ಚಿಕ್ಕಜಾಯಿಗ ನೂರು, ರೆಗ್ಯುಲೇಟರ್ ಕ್ಯಾಂಪ್‌ನ ಜನತೆ ಹಲವಾರು ವರ್ಷಗಳಿಂದ ಫ್ಲೋರೈಡ್ ಅಂಶವುಳ್ಳ ನೀರನ್ನು ಸೇವಿಸುತ್ತಾ ಕೈಕಾಲು, ಕೀಲು ನೋವುಗಳಿಂದ ಬಳಲುತ್ತಿದ್ದಾರೆ.

ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಕಾಮಗಾರಿ ಅತಂತ್ರವಾಗಿರುವ ಬಗ್ಗೆ ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಪ್ರಸ್ತಾಪಿಸಿದ್ದೀನಿ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತಂದಿದ್ದೀನಿ. ಆದರೆ ಯಾರೂ ಈ ಬಗ್ಗೆ ಕಿವಿಗೊಡು ತ್ತಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರಾದ ಎನ್. ಉಮಾದೇವಿ ಮಲ್ಲಿಕಾರ್ಜುನ ಹೇಳುತ್ತಾರೆ.

ಮುಂಬರುವ ದಿನಗಳಲ್ಲಿಯಾದರೂ ಅಧಿಕಾರಿಗಳು ಗಮನಹರಿಸಿ ಮರು ಅಂದಾಜು ಸಿದ್ಧಪಡಿಸಿ ಕೆರೆಯಲ್ಲಿ ನೀರು ಸಂಗ್ರಹಿಸಿ ಐದು ಹಳ್ಳಿಗಳ ಜನತೆಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಕ್ರಮ ತೆಗೆದುಕೊಳ್ಳುವಂತೆ ಗ್ರಾ.ಪಂ ಉಪಾಧ್ಯಕ್ಷ ಇ. ಪರಮೇಶ್ವರ, ಸದಸ್ಯರಾದ ಬಿ. ತಿಮ್ಮಾರೆಡ್ಡಿ, ಸಿ. ಈರಮ್ಮ, ರತ್ನಮ್ಮ ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT