ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೃಶ್ಯ ವೈಭವದಲ್ಲಿ ಜೈನ ತತ್ವಗಳು

Last Updated 8 ಅಕ್ಟೋಬರ್ 2012, 5:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅದೊಂದು ದಯೆಯೇ ಧರ್ಮದ ಮೂಲ ಎಂಬ ತತ್ವದ ಆಧಾರದಲ್ಲಿ ಪ್ರಾಣಿ-ಪಕ್ಷಿಗಳು ಜೀವನ ಸಾಗಿಸುತ್ತಿದ್ದ ಕಾಡು. ಒಮ್ಮೆ ಅಲ್ಲಿ ಜ್ವಾಲಾಮುಖಿಯೊಂದು ಕಾಣಿಸಿಕೊಂಡಾಗ ಖಗ-ಮೃಗಗಳು ದಿಕ್ಕೆಟ್ಟು ಓಡಿದವು. ಈ ಸಂದರ್ಭದಲ್ಲಿ ಆನೆಯೊಂದು ಕಾಲನ್ನು ಎತ್ತಿ ಇಡುವ ವೇಳೆ ಮೊಲವೊಂದು ಅದರ ಕೆಳಗೆ ಆಶ್ರಯ ಪಡೆಯಿತು. ಮೊಲದ ದಯನೀಯ ಸ್ಥಿತಿಯನ್ನು ಕಂಡ ಆನೆ ಕಾಲನ್ನು ಕೆಳಗೆ ಇಡಲೇ ಇಲ್ಲ.
 
ಹಾಗೆ ಮೊಲ ತನ್ನ ಜೀವವನ್ನು ಉಳಿಸಿಕೊಂಡಿತು. ಆ ಆನೆ ಮತ್ತೊಂದು ಜನ್ಮದಲ್ಲಿ ರಾಜನಾಗಿ ಮೆರೆಯಿತು....
ಇದು ಒಂದು ಕಥೆ. ಇದನ್ನು ಸುಂದರ ದೃಶ್ಯರೂಪಕದಲ್ಲಿ ಪ್ರಸ್ತುತಪಡಿಸಿದ ವಿಧಾನ ಮನೋಜ್ಞವಾಗಿತ್ತು. ಇಂಥ ಅನೇಕ ದೃಶ್ಯ ವೈಭವಗಳು ನಗರದ ಕಂಚಗಾರ ಗಲ್ಲಿಯ ಸ್ಥಾನಕ ಭವನದಲ್ಲಿ ಭಾನುವಾರ ಜನರ ಹೃದಯಕ್ಕೆ ಮುದ ನೀಡಿದವು. 

ಶ್ರೀ ವರ್ಧಮಾನ ಸ್ಥಾನಕವಾಸಿ ಜೈನ ಶ್ರಾವಕ ಸಂಘ, ಶ್ರೀ ವರ್ಧಮಾನ ಜೈನ ನವಯುವಕ ಮಂಡಲದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜೈನತ್ವದ ವಿವಿಧ ಆಯಾಮಗಳನ್ನು ಪರಿಚಯಿಸುವ ಪ್ರದರ್ಶನದ ತುಂಬ ದಯೆ, ಸಂಯಮ, ಪ್ರೀತಿ, ಶಾಂತಿಯ ಸಂದೇಶದ ದರ್ಶನವಾಯಿತು.

ಸೂರ್ಯ-ಚಂದ್ರರ ಉಗಮ ಸ್ಥಾನ ಎಂಬ ಕಲ್ಪನೆಯ ಮೇರುಪರ್ವತ, ಸುಖ-ಸಮೃದ್ಧಿಯ ಸಮವಸರಣ, ಭವ್ಯವಾದ ಸಮ್ಮೇತ ಶಿಖರ, ಮಾತಾ ತ್ರಿಶಾಲಾ ಅವರಿಗೆ ಕಂಡ 14 ಕನಸುಗಳ ಸುಂದರ ವರ್ಣನೆ, ನರಕದ ದೃಶ್ಯ, ಜಂಬೂ ದ್ವೀಪ, ಶೌರ್ಯಪುರಿ ನಗರ, ಸ್ಥೂಲಿ ಭದ್ರ ಮಹಲ್ ಹೀಗೆ ಒಟ್ಟು 35 ಮಳಿಗೆಗಳಲ್ಲಿ ಪ್ರದರ್ಶಿಸಲಾಗಿದ್ದ ವಿವಿಧ ದೃಶ್ಯ ರೂಪಕಗಳ ಪೈಕಿ ಒಂದೊಂದೂ ವಿಶೇಷ, ವಿಶಿಷ್ಟ.

ಥರ್ಮೋಕೋಲ್, ಹತ್ತಿ, ಮರಳು, ಮಣ್ಣು ಮತ್ತಿತರ ವಸ್ತುಗಳನ್ನು ಬಳಸಿ ಸೃಷ್ಟಿಸಿದ ರೂಪಕಗಳಿಗೆ ವಿದ್ಯುತ್ ದೀಪಗಳ ಚಿತ್ತಾರವೂ ಇತ್ತು. ವಿವಿಧ ಕಲೆಗಳ ಸಂಗಮವೂ ಆಗಿದ್ದ ಪ್ರದರ್ಶನ, ಕಲಾವಿದರ ಪ್ರತಿಭೆ ಬೆಳಗಿತು. ಕೆಲವು ದೃಶ್ಯಗಳಿಗೆ ಸುಲಭ ತಂತ್ರಜ್ಞಾನವನ್ನು ಬಳಸಿ ಚಲನವನ್ನು ಸೃಷ್ಟಿಸುವ ಮೂಲಕ ವಿಶೇಷ ಆಕರ್ಷಣೆಯನ್ನು ಒದಗಿಸಲಾಗಿತ್ತು.

ಕೋಶ ಗಣಿಕ (ವೇಶ್ಯೆ) ಬಳಿ ಇದ್ದ ಸ್ಥೂಲಿಭದ್ರರು ನಂತರ ಬದಲಾಗಿ ಮಹಾನ್ ಆದ ಕಥೆಯನ್ನು ಹೇಳುವ ಸುಂದರ ಚಿತ್ರಶಾಲೆ, ಮಹಾವೀರನಿಗೆ ತೊಂದರೆ ಮಾಡಲು ಬೆಂಕಿ ಉಗುಳುವ ಗೋಶಾಲಕ ಪ್ರಭುವಿನ ರೌದ್ರಾವತಾರ, ತ್ರಿಶಾಲಾ ಅವರು ಕಂಡ 14 ಕನಸುಗಳ ಚಿತ್ರಗಳು, ಮಲ್ಲಿಕುವರಿಯ ಮಹಲ್ ಇತ್ಯಾದಿಗಳ ಜೊತೆಗೆ ನಾಕ-ನರಕದ ದೃಶ್ಯ, ಕರ್ಮ ದೃಷ್ಟಾಂತ ಮುಂತಾದ ಮನುಷ್ಯಕುಲದ ಪೂರಕ ಬದಲಾವಣೆಗೆ ನೆರವಾಗುವ ದೃಶ್ಯಗಳು ಕೂಡ ಗಮನ ಸೆಳೆದವು.

ಉದ್ಘಾಟನೆ: ಮುರ್ಗಾವತಿ ಅವರ ಸಾನ್ನಿಧ್ಯದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೋಜ ಜೈನ್ ಪ್ರದರ್ಶನವನ್ನು ಉದ್ಘಾಟಿಸಿದರು. ಜೈನ ಮರುಧರ ಸಂಘದ ಉಪಾಧ್ಯಕ್ಷ ಶಾಂತಿಲಾಲ್ ಕಂಕರಿಯಾ, ಶ್ರೀ ವರ್ಧಮಾನ ಸ್ಥಾನಕವಾಸಿ ಜೈನ ಶ್ರಾವಕ ಸಂಘದ ಅಧ್ಯಕ್ಷ ಛಗನ್‌ರಾಜ್ ಭೂರಠ್, ಶ್ರೀ ವರ್ಧಮಾನ ಸ್ಥಾನಕವಾಸಿ ಜೈನ ಶ್ರಾವಕ ಸಂಘದ ಮಾಜಿ ಅಧ್ಯಕ್ಷ ಮಹೇಂದ್ರ ಸಿಂಘಿ ಮತ್ತಿತರರು ಉಪಸ್ಥಿತರಿದ್ದರು. 

ವ್ಯಸನಗಳಿಂದ ಮುಕ್ತರಾಗಲು ಮಾರ್ಗ
ಪ್ರದರ್ಶನದಲ್ಲಿ ವಿಶೇಷ ಗಮನ ಸೆಳೆದ ಮಳಿಗೆಗಳಲ್ಲಿ ಒಂದು, ವ್ಯಸನಗಳಿಂದ ಮುಕ್ತರಾಗಲು ಮಾರ್ಗ ತೋರಿಸುವ `ವ್ಯಸನ್~.

ಸಿಗರೇಟ್, ಗುಟ್ಕಾ, ಮದ್ಯ ಇತ್ಯಾದಿಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಚಿತ್ರ, ದೃಶ್ಯ ಹಾಗೂ ವೀಡಿಯೊ ಮೂಲಕ ತಿಳಿಯಪಡಿಸಿದ ಇಲ್ಲಿ ಆಕರ್ಷಕ ಘೋಷಣೆ ಹಾಗೂ ಭಿತ್ತಿಚಿತ್ರಗಳೂ ಗಮನ ಸೆಳೆದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT