ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯತ್ತ ತೆರಳಿದ ಜಿಲ್ಲೆಯ ರೈತರು

Last Updated 23 ಸೆಪ್ಟೆಂಬರ್ 2011, 6:15 IST
ಅಕ್ಷರ ಗಾತ್ರ

ದಾವಣಗೆರೆ: ಬತ್ತ ಮತ್ತು ಕಬ್ಬು ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ರೈತರು ಗುರುವಾರ ದೆಹಲಿಗೆ ತೆರಳಿದರು.

ಬೆಳಿಗ್ಗೆ ಇಲ್ಲಿನ ರೈಲುನಿಲ್ದಾಣಕ್ಕೆ ಆಗಮಿಸಿದ ರೈತರು ಹುಬ್ಬಳ್ಳಿ ಮಾರ್ಗವಾಗಿ ದೆಹಲಿಗೆ ತೆರಳಿದರು. ಅಲ್ಲಿ ಅವರು ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಲಿದ್ದಾರೆ.ದೆಹಲಿಗೆ ತೆರಳುವುದಕ್ಕೂ ಮುಂಚೆ ರೈಲುನಿಲ್ದಾಣದಿಂದ ಗಾಂಧಿ ವೃತ್ತದವರೆಗೆ ಮೆರವಣಿಗೆ ನಡೆಸಿದ ರೈತರು, ನಂತರ ಕಬ್ಬಿಗೆ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಉಪ ವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ರವಾನಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಪಟೇಲ್ ಮಾತನಾಡಿ, ಕೇಂದ್ರದ ಆರ್ಥಿಕ ನೀತಿಯಿಂದಾಗಿ ಬತ್ತ ಮತ್ತು ಕಬ್ಬು ಬೆಳೆಗಾರರು ಸಮಸ್ಯೆ ಎದುರಿಸುವಂತಾಗಿದೆ ಎಂದು ಆರೋಪಿಸಿದರು.

ರೈತ ಮುಖಂಡ ಓಂಕಾರಪ್ಪ ಮಾತನಾಡಿ, ಮುಖ್ಯಮಂತ್ರಿ ಅವರು 2011-12ನೇ ಸಾಲಿನ ಕಬ್ಬಿನ ದರವನ್ನು ಕೇವಲ ಮಂಡ್ಯದ ಸರ್ಕಾರಿ ಸ್ವಾಮ್ಯದ ಮೈಷುಗರ್ಸ್‌ ಕಾರ್ಖಾನೆಗೆ ಸೀಮಿತವಾಗಿ ನಿಗದಿ ಮಾಡಿದ್ದು, ರಾಜ್ಯದ ಉಳಿದ ಕಾರ್ಖಾನೆ ವ್ಯಾಪ್ತಿಯ ಕಬ್ಬಿನ ದರವನ್ನೂ ಸಕ್ಕರೆ ಇಳುವರಿಗೆ ಅನುಸಾರವಾಗಿ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

ರಸ್ತೆತಡೆ: ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಈ ಸಾಲಿನ ಕಬ್ಬನ್ನು ಅರೆದು ಯೋಗ್ಯ ಬೆಲೆ ಒದಗಿಸಬೇಕು ಎಂದು ರೈತರು ಆಗ್ರಹಿಸಿದರು. ನಿರೀಕ್ಷೆಯಂತೆ ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸದ ಹಿನ್ನೆಲೆಯಲ್ಲಿ ರೈತರು ಸ್ವಲ್ಪ ಹೊತ್ತು ರಸ್ತೆತಡೆ ನಡೆಸಿ ಪ್ರತಿಭಟಿಸಿದರು.

ರೈತ ಮುಖಂಡರಾದ ಮರಡಿ ನಾಗಪ್ಪ, ಪೂಜಾರ ಅಂಜಿನಪ್ಪ, ಮುರುಗೇಂದ್ರಯ್ಯ, ಕರಿಬಸಮ್ಮ, ಜಿ. ಪ್ರಭುಗೌಡ ಮುಂತಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT