ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಮನೆ ಬೆಲೆ ಇಳಿಮುಖ

Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

2013ನೇ ಸಾಲಿನಲ್ಲಿ ಮೊದಲ ಆರು ತಿಂಗಳಲ್ಲಿ ನವದೆಹಲಿಯಲ್ಲಿ ಮನೆಗಳಿಗೆ ಬೇಡಿಕೆ ಕುಸಿದಿದೆ. ಇದರ ಪರಿಣಾಮವಾಗಿ ನಂತರದ ತಿಂಗಳುಗಳಲ್ಲಿ ಮನೆಗಳ ಬೆಲೆಗಳಲ್ಲಿಯೂ ಕುಸಿತವಾಗಿದೆ. 2012ನೇ ಸಾಲಿನ ಕೊನೆಯ 6 ತಿಂಗಳಿಗೆ ಹೋಲಿಸಿದರೆ ಈಗ ಮನೆಗಳ ಬೆಲೆ ಶೇ 12ರಷ್ಟು ಕಡಿಮೆಯಾಗಿದೆ ಎನ್ನುತ್ತದೆ ‘ಸಿಬಿಆರ್‌ಇ ’ ವರದಿ ತಿಳಿಸಿದೆ.

ರಾಷ್ಟ್ರೀಯ ರಾಜಧಾನಿ ವಲಯವೂ (ಎನ್‌ಸಿಆರ್) ಕೂಡ ಈ ಬೆಲೆ ಕುಸಿತದ ಪರಿಣಾಮದಿಂದ ಹೊರತಾಗಿಲ್ಲ. ಅಲ್ಲಿಯೂ ಇತ್ತೀಚಿನ ತಿಂಗಳುಗಳಲ್ಲಿ ಮನೆಗಳ ಮಾರಾಟ ವಿಚಾರದಲ್ಲಿ ಅಂತಹ ಆಶಾಜನಕ ಪರಿಸ್ಥಿತಿ ಇಲ್ಲ ಎಂದು ವರದಿ ಬೊಟ್ಟು ಮಾಡಿದೆ. 

ಇದೇ ರೀತಿಯ ನಿರುತ್ಸಾಹ ಪರಿಸ್ಥಿತಿ ಇನ್ನೂ ಸ್ವಲ್ಪ ಕಾಲ ಮುಂದುವರೆಯುವ ಸಂಭವವಿದೆ ಎಂದೂ ವರದಿ ತಿಳಿಸಿದೆ.
ಆದರೆ, ನೋಯಿಡಾ–ಗ್ರೇಟರ್ ನೋಯಿಡಾ ಎಕ್ಸ್‌ಪ್ರೆಸ್‌ ಹೆದ್ದಾರಿ ವಲಯದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಇಲ್ಲಿ ಸ್ವಲ್ಪ ಮಟ್ಟಿಗೆ ಮನೆ ನಿರ್ಮಾಣ ಮತ್ತು ಮಾರಾಟ ಕ್ಷೇತ್ರದ ಚಟುವಟಿಕೆ ಆಶಾದಾಯಕವಾಗಿದೆ. ಈ ಭಾಗದಲ್ಲಿ ಆಸ್ತಿ ಖರೀದಿದಾರರ ಸಂಖ್ಯೆ ಹೆಚ್ಚಿದ್ದು, ಹಾಗೆಯೇ ಬೆಲೆಗಳು ಏರಿಕೆಯಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಆದರೆ, ಈ ಬಗೆಯ ಪರಿಸ್ಥಿತಿ ರಾಜ್ಯದ ಪ್ರಮುಖ ಪಟ್ಟಣಗಳಾದ ಬೆಂಗಳೂರು, ಮೈಸೂರಿನಲ್ಲಿ ಇಲ್ಲ. ಹೊಸ ಮನೆಗಳಿಗೆ ಖರೀದಿದಾರರಿಂದ ಬೇಡಿಕೆ ಯಥಾಸ್ಥಿತಿಯಲ್ಲಿದೆ. ಪರಿಸ್ಥಿತಿ ನವದೆಹಲಿಯಲ್ಲಿರುವಷ್ಟು ಕಳಾಹೀನವಾಗಿಯೇನೂ ಇಲ್ಲ ಎಂದು ಕೆಲವು ಸ್ಥಳೀಯ ರಿಯಲ್ ಎಸ್ಟೇಟ್ ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನಲ್ಲಿ ಉತ್ತೇಜನ
ವಿಶೇಷವಾಗಿ, ಮೈಸೂರಿನಲ್ಲಿ ಮುಂಬರುವ ದಿನಗಳಲ್ಲಿ ಉತ್ತೇಜನಕಾರಿ ಪರಿಸ್ಥಿತಿ ಇರಲಿದೆ ಎಂಬುದು ಬಹುತೇಕ ರಿಯಲ್‌ ಎಸ್ಟೇಟ್‌ ಕ್ಷೇತ್ರದ ಅನುಭವಿಗಳ ಅಭಿಪ್ರಾಯ.

ಬೆಂಗಳೂರು–ಮೈಸೂರು ಜೋಡಿ ರೈಲು ಮಾರ್ಗದ ಕಾಮಗಾರಿ ಅರ್ಧದಷ್ಟು ಪೂರ್ಣಗೊಂಡಿರುವುದು ಸಾಂಸ್ಕೃತಿಕ ರಾಜಧಾನಿಯಲ್ಲಿನ ರಿಯಲ್ ಎಸ್ಟೇಟ್‌ ಉದ್ಯಮದ ಬೆಳವಣಿಗೆಗೆ ಆಶಾದಾಯಕ ಅಂಶವಾಗಿದೆ. ಮೈಸೂರು ಮೂಲತಃ ನೆಮ್ಮದಿ ಮತ್ತು ನಿದಾನಗತಿಯ ಜೀವನ ಶೈಲಿಗೆ ಹೆಸರಾಗಿದೆ. ಸಂಚಾರ ದಟ್ಟಣೆಯಾಗಲೀ, ವಾಯುಮಾಲಿನ್ಯವಾಗಲೀ ಇಲ್ಲಿಲ್ಲ. ನೀರಿನ ಸಮಸ್ಯೆಯೂ ಬೆಂಗಳೂರಿನಷ್ಟು ಇಲ್ಲಿ ತೀವ್ರ ಸ್ವರೂಪದಲ್ಲಿಲ್ಲ. ಬೆಂಗಳೂರಿಗೆ ಹೋಲಿಸಿದರೆ ಸಹಜವಾಗಿಯೇ ಇಲ್ಲಿನ ಸ್ಥಿರಾಸ್ತಿ(ನಿವೇಶನ–ಮನೆ) ಬೆಲೆ ಕಡಿಮೆ ಇದೆ. ಹಾಗಾಗಿ, ಮೈಸೂರು ನಿಧಾನವಾಗಿಯಾದರೂ ರಿಯಲ್‌ ಎಸ್ಟೇಟ್‌ ಹೂಡಿಕೆದಾರರ ಆಕರ್ಷಣೆಯ ಕೇಂದ್ರವಾಗುತ್ತಿದೆ. ಜೋಡಿ ರೈಲು ಮಾರ್ಗ ಪೂರ್ಣಗೊಂಡ ಮೇಲಂತೂ ರಾಜಧಾನಿ ಬೆಂಗಳೂರಿಗೆ ಪ್ರಯಾಣದ ಅವಧಿ ಇನ್ನಷ್ಟು ಕಡಿಮೆ ಆಗಲಿದೆ. ಹೀಗಾಗಿ ಮೈಸೂರಿನಲ್ಲಿ ಮುಂಬರುವ ದಿನಗಳಲ್ಲಿ ಸ್ಥಿರಾಸ್ತಿಗಳಿಗೆ ಬೇಡಿಕೆ ಕುಸಿಯುವ ಹಾಗೂ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ತೊಡಕಾಗುವ ಯಾವ ಲಕ್ಷಣಗಳೂ ಇಲ್ಲ ಎನ್ನುವುದು ಇಲ್ಲಿನ ರಿಯಲ್‌ ಎಸ್ಟೇಟ್ ಉದ್ಯಮಿಗಳ ಸ್ಪಷ್ಟನುಡಿ.

ಇತ್ತೀಚೆಗಷ್ಟೇ ಜೆಎಸ್‌ಎಸ್‌ ಅಂತರರಾಷ್ಟ್ರೀಯ ಮಟ್ಟದ ಬೃಹತ್ ಆಸ್ಪತ್ರೆಯೊಂದನ್ನು ಕಟ್ಟಿದೆ. ಇದು ಸುತ್ತಲ ಪಟ್ಟಣ–ಗ್ರಾಮಗಳ ಜನರಿಗೆ ಉನ್ನತ ಮಟ್ಟದ ಆರೋಗ್ಯ ಸೌಲಭ್ಯ ದೊರಕಿಸಿಕೊಡುವ ಭರವಸೆ ಮೂಡಿಸಿದೆ. ಪ್ರಮುಖವಾಗಿ ಮುಖ್ಯಮಂತ್ರಿ ಇದೇ ಜಿಲ್ಲೆಯವರಾಗಿರುವುದರಿಂದ ಮೈಸೂರು ನಗರದ ಅಭಿವೃದ್ಧಿ ಇನ್ನುಮುಂದೆ ವೇಗ ಪಡೆದುಗೊಳ್ಳಲಿದೆ ಎಂಬ ನಿರೀಕ್ಷೆಗಳೂ ಇವೆ. ಹೀಗಾಗಿ, ಮೈಸೂರು ರಿಯಲ್ ಎಸ್ಟೇಟ್ ಉದ್ಯಮದ ಪಾಲಿಗೆ ಲಾಭ ತರುವ ನಗರವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಬೆಂಗಳೂರಿನಲ್ಲೂ ಪರಿಸ್ಥಿತಿ ಅಷ್ಟೇನೂ ನಿರಾಶಾದಾಯಕವಾಗಿಲ್ಲ. ಭರದಿಂದ ಸಾಗುತ್ತಿರುವ ಮೆಟ್ರೊ ಕಾಮಗಾರಿಯಿಂದ ಮುಂಬರುವ ದಿನಗಳಲ್ಲಿ ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಉದ್ಯಮ ಬೇಡಿಕೆ ಉಳಿಸಿಕೊಳ್ಳಲಿದೆ ಎಂಬುದು ಅನುಭವಿಗಳ ಮಾತು.

ಸದ್ಯ ಹಿಂಜರಿತ ಇಲ್ಲ
‘ಮೈಸೂರಿನ ರಿಯಲ್ ಎಸ್ಟೇಟ್ ವಲಯದಲ್ಲಿ ಸದ್ಯ ಹಿಂಜರಿತ ಇಲ್ಲ. ಜೋಡಿ ರೈಲು ಮಾರ್ಗ ಪೂರ್ಣಗೊಂಡ ಬಳಿಕ ಇಲ್ಲಿ ಆಸ್ತಿ ಬೆಲೆಗಳು ಏರಿಕೆ ಕಾಣುವುದರಲ್ಲಿ ಯಾವುದೇ ಅನುಮಾನ ಇಲ್ಲ. ಅದರಲ್ಲೂ ರಾಜ್ಯದಲ್ಲಿ ಸ್ಥಿರ ಸರ್ಕಾರ ಬಂದಿರುವುದು ಬೆಂಗಳೂರೇ ಆಗಲಿ, ಮೈಸೂರೇ ಆಗಲಿ ರಿಯಲ್ ಎಸ್ಟೇಟ್ ವಲಯದಲ್ಲಿ ಹೂಡಿಕೆ ಮಾಡುವುದಕ್ಕೆ ಸಕಾಲ.  ಮೈಸೂರಿನವರೇ ಮುಖ್ಯಮಂತ್ರಿಯಾಗಿರುವುದು, ಜೋಡಿ ರೈಲು ಮಾರ್ಗಗಳ ಕಾಮಗಾರಿ, ಉತ್ತಮ ನೀರಿನ ಸೌಕರ್ಯ ಮೊದಲಾದ ವಿಷಯಗಳು ಹೂಡಿಕೆದಾರರನ್ನು ಕೈಬೀಸಿ ಕರೆಯುತ್ತಿವೆ’.
ವೈ.ಎನ್. ರಾಜೇಂದ್ರ ಮೈಸೂರು ರಿಯಾಲ್ಟಿ ಅಸೋಸಿಯೇಷನ್ ಸದಸ್ಯ.

ಅಭಿವೃದ್ಧಿಗೆ ನೀಲನಕ್ಷೆ ಅಗತ್ಯ
‘ಮೈಸೂರಿನ ಅಭಿವೃದ್ಧಿಗೆ ಸರ್ಕಾರ ಒಂದು ಕೋರ್ ಕಮಿಟಿ ಮಾಡಬೇಕು. ಅದರಲ್ಲಿ ಬರೇ ರಾಜಕೀಯದವರಿಗೆ, ಅಧಿಕಾರಿಗಳಿಗೆ ಮಾತ್ರ ಅವಕಾಶ ಇರದೆ, ಖಾಸಗಿ ಹೂಡಿಕೆದಾರರನ್ನೂ ಸದಸ್ಯರನ್ನಾಗಿ ಪರಿಗಣಿಸಬೇಕು. ನಗರದ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಪಡಿಸಬೇಕು. ಅರಮನೆ, ಚಾಮುಂಡಿ ಬೆಟ್ಟ ಇದೆ ಎಂಬ ಕಾರಣಕ್ಕೆ ಸಹಜವಾಗಿಯೇ ಪ್ರವಾಸೋದ್ಯಮ ಮೈಸೂರಿನಲ್ಲಿ ಹೆಚ್ಚಿದೆ. ಆದರೆ, ಸರ್ಕಾರದ ವತಿಯಿಂದ ಪ್ರವಾಸಿಗರನ್ನು ಆಕರ್ಷಿಸಿಸುವುದಕ್ಕೆ ಇನ್ನಷ್ಟು ಯೋಜನೆಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ. ನಿರ್ಮಾಣ ವೆಚ್ಚದ ಹೆಚ್ಚಳ, ಗೃಹಸಾಲಗಳು ಸರಾಗವಾಗಿ ಲಭ್ಯವಾಗಿದಿರುವುದು, ನೋಂದಣಿ ಶುಲ್ಕಗಳಲ್ಲಿನ ಹೆಚ್ಚಳಗಳು ಮೊದಲಾದ ಸಮಸ್ಯೆಗಳನ್ನು ರಾಜಕೀಯ ಇಚ್ಛಾಶಕ್ತಿಯಿಂದ ನಿವಾರಿಸಿದ್ದೇ ಆದಲ್ಲಿ ಮೈಸೂರು ರಿಯಲ್ ಎಸ್ಟೇಟ್ ವಲಯದಲ್ಲಿ ಮತ್ತಷ್ಟು ವಿಜೃಂಭಿಸಲಿದೆ’.
ನಾಗಕುಮಾರ್ ಮಾಜಿ ಅಧ್ಯಕ್ಷ, ಕ್ರೆಡಾಯ್ ಮೈಸೂರು


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT