ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವ ಕಣ ಅಸ್ತಿತ್ವ ಸಾಬೀತು

Last Updated 4 ಜುಲೈ 2012, 19:30 IST
ಅಕ್ಷರ ಗಾತ್ರ

ಜಿನೀವಾ (ಪಿಟಿಐ): ವಿಶ್ವದ ಸೃಷ್ಟಿಗೆ ಮೂಲ ಕಾರಣ ಎಂದು ನಂಬಲಾದ `ದೇವ ಕಣ~ಗಳ (ಗಾಡ್ ಪಾರ್ಟಿಕಲ್) ಅಸ್ತಿತ್ವ ಒಪ್ಪಿಕೊಂಡಿರುವ ಸ್ವಿಟ್ಜರ್‌ರ್ಲೆಂಡ್‌ನ ಯುರೋಪ್ ಪರಮಾಣು ಸಂಶೋಧನಾ ಕೇಂದ್ರದ (ಸಿಇಆರ್‌ಎನ್) ವಿಜ್ಞಾನಿಗಳು, ವಿಶಿಷ್ಟ ಕಣಗಳನ್ನು ಬಹುತೇಕ ಪತ್ತೆ ಹಚ್ಚಿರುವುದಾಗಿ ಹೇಳಿಕೊಂಡಿದ್ದಾರೆ.
ದೇವ ಕಣಗಳ ಅಸ್ತಿತ್ವದ ಬಗ್ಗೆ ಅನೇಕ ದಶಕಗಳಿಂದ ಇದ್ದ ಎಲ್ಲ ಗೊಂದಲಗಳಿಗೂ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ವಿಶ್ವದ ನಾನಾ ಭಾಗಗಳ ಸಾವಿರಾರು ಭೌತವಿಜ್ಞಾನಿಗಳಿಂದ ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಸಿಇಆರ್‌ಎನ್ ಪ್ರಧಾನ ನಿರ್ದೇಶಕ ರಾಲ್ಫ್ ಹ್ಯೂರ್, `ದೇವ ಕಣ~ಗಳನ್ನು ಪತ್ತೆ ಹಚ್ಚಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದರು. ಇದರಿಂದ ಐದು ದಶಕಗಳಿಂದ ನಿರಂತರವಾಗಿ ನಡೆದ ಸಂಶೋಧನೆಗೆ ಕೊನೆಗೂ ಉತ್ತರ ದೊರೆತಂತಾಗಿದ್ದು, ಭೌತವಿಜ್ಞಾನ ಕ್ಷೇತ್ರ ದಲ್ಲಿಯೇ ಇದೊಂದು ಹೊಸ ಮೈಲಿಗಲ್ಲಾಗಲಿದೆ.

`ನಮ್ಮ ಸುತ್ತಲಿನ ವಾತಾವರಣ ಮತ್ತು ವಿಶ್ವವನ್ನು ಅರಿಯುವ ದಿಸೆಯಲ್ಲಿ ಐತಿಹಾಸಿಕ ಹಂತವನ್ನು ತಲುಪಿರುವುದಾಗಿ~ ಅವರು ಈ ಸಂದರ್ಭದಲ್ಲಿ ಘೋಷಿಸಿದರು. `ದೇವಕಣಗಳ ಬಗ್ಗೆ ವಿಜ್ಞಾನಿಗಳಾದ ಹಿಗ್ ಬೊಸನ್ ಬೆಳಕು ಚೆಲ್ಲಿದರು.

ಈ ದಿಸೆಯಲ್ಲಿ ನಡೆಯುತ್ತಿರುವ ನಿರಂತರ ಅಧ್ಯಯನ ವಿಶ್ವ ಮತ್ತು ನಕ್ಷತ್ರ ಸಮೂಹದ ಉಗಮದ ಬಗ್ಗೆ ಹೊಸ ಸಾಧ್ಯತೆಗಳನ್ನು ನಮ್ಮ ಮುಂದೆ ತೆರೆದಿಟ್ಟಿದೆ. ನಮ್ಮ ಪಾಲಿಗೆ ಇನ್ನೂ ನಿಗೂಢವಾಗಿಯೇ ಉಳಿದಿರುವ ಅನೇಕ ಪ್ರಶ್ನೆಗಳು ಮತ್ತು ಸಂಶಯಗಳಿಗೆ ಈ ಸಂಶೋಧನೆಯಿಂದ ನಿಖರ ಉತ್ತರ ದೊರೆಯಲಿದೆ~ ಎಂದು  ವಿಶ್ವಾಸ ವ್ಯಕ್ತಪಡಿಸಿದರು.

ಈ ಬಗ್ಗೆ ಸ್ವತಂತ್ರವಾಗಿ ಅಧ್ಯಯನ ನಡೆಸಿ ವರದಿ ನೀಡುವಂತೆ ಸಿಇಆರ್‌ಎನ್ ವಿಜ್ಞಾನಿಗಳ ಎರಡು ಪ್ರತೇಕ ತಂಡಗಳನ್ನು ರಚಿಸಿತ್ತು. ಎರಡೂ ತಂಡಗಳೂ ದೇವಕಣಗಳ ಅಸ್ತಿತ್ವ ಒಪ್ಪಿಕೊಂಡಿವೆ. ಒಂದು ತಂಡ ನಿಖರವಾಗಿ ಆ ಬಗ್ಗೆ ಹೇಳದಿದ್ದರೂ ತಮ್ಮ ಸಂಶೋಧನೆ ಹೊಸ ಸಿದ್ಧಾಂತಕ್ಕೆ ಹತ್ತಿರವಾಗಿದೆ ಎಂದು ಹೇಳಿದೆ. ಮತ್ತೊಂದು ತಂಡವು, ದೇವಕಣಗಳನ್ನು ಪತ್ತೆಹಚ್ಚಿರುವುದಾಗಿ ದೃಢಪಡಿಸಿದೆ. ಆ ಮೂಲಕ ಎರಡೂ ತಂಡಗಳು ಹೊಸ ಭೌತ ಸಿದ್ಧಾಂತವೊಂದಕ್ಕೆ `ಅಧಿಕೃತ ಮುದ್ರೆ~ ಒತ್ತಿವೆ.

`ನಮಗೆ ದೊರೆತಿರುವ ಅಂಕಿ, ಅಂಶಗಳು ಮತ್ತು ಆಧಾರಗಳು ಸಂಶೋಧನೆಯ ಹತ್ತಿರಕ್ಕೆ ಕರೆದೊಯ್ದಿವೆ~ ಎಂದು ಅಧ್ಯಯನ ತಂಡದ ಮುಖ್ಯಸ್ಥ ಜೋ ಇಂಕಾಡೇಲಾ ಹೇಳಿದರು. ಆದರೆ, `ದೇವ ಕಣ~ಗಳ ಗಾತ್ರದ ಬಗ್ಗೆ ಏನನ್ನೂ ಖಚಿತವಾಗಿ ಹೇಳಲಿಲ್ಲ.

ವಿಶ್ವದ ಪ್ರತಿಯೊಂದು ವಸ್ತುಗಳ ನಿರ್ದಿಷ್ಟ ಗಾತ್ರ ಮತ್ತು ಆಕಾರಕ್ಕೆ `ದೇವ ಕಣ~ಗಳೇ  ಕಾರಣ ಎಂದು ಈ ಬಗ್ಗೆ 1964ರಿಂದ ನಿರಂತರ ಆಧ್ಯಯನ ಕೈಗೊಂಡ ಪೀಟರ್ ಹಿಗ್ ಮತ್ತು ಭಾರತೀಯ ವಿಜ್ಞಾನಿ ಸತ್ಯೇಂದ್ರನಾಥ ಬೋಸ್ ಪ್ರತಿಪಾದಿಸಿದ್ದರು.

ಅಟ್ಲಾಸ್ ಹೆಸರಿನ ಮತ್ತೊಂದು ವಿಜ್ಞಾನಿಗಳ ತಂಡ, ಐದನೇ ಸಿಗ್ಮಾ ಹಂತದಲ್ಲಿರುವ `ಹೊಸ ಕಣ~ಗಳನ್ನು ಪತ್ತೆ ಹಚ್ಚಿರುವುದಾಗಿ ದೃಢಪಡಿಸಿದೆ. ಹೊಸ ಕಣಗಳು ಖಂಡಿತವಾಗಿಯೂ ಹಿಗ್ಸ್ ಬೋಸನ್  ಅಥವಾ `ದೇವ ಕಣ~ವಾಗಿದೆ ಎಂದು ತಂಡದ ವಕ್ತಾರ ಫಾಬಿಯೋಲಾ ಜಿಯಾನೊಟ್ಟಿ ಖಚಿತಪಡಿಸಿದ್ದಾರೆ. ಐದನೇ ಸಿಗ್ಮಾ ಹಂತದಲ್ಲಿ ದೇವಕಣ ಅಸ್ತಿತ್ವವನ್ನು ಶೇ 99ರಷ್ಟು ದೃಢಪಡಿಸಬಹುದು ಎಂದೂ ಸ್ಪಷ್ಟಪಡಿಸಿದ್ದಾರೆ. 

`ಭಾರತ ತಂದೆ ಇದ್ದಂತೆ~
ಭಾರತೀಯ ವಿಜ್ಞಾನಿ ಸತ್ಯೇಂದ್ರನಾಥ ಬೋಸ್ ಅವರ ಸಿದ್ಧಾಂತವೇ ಈ ಎಲ್ಲ ಸಂಶೋಧನೆಗಳಿಗೆ ಮೂಲವಾದ ಕಾರಣದಿಂದಲೇ `ಈ ಐತಿಹಾಸಿಕ ಯೋಜನೆಗೆ ಭಾರತ ಒಂದು ರೀತಿಯಿಂದ ತಂದೆ ಇದ್ದಂತೆ~ ಎಂದು ಸಿಇಆರ್‌ಎನ್ ವಕ್ತಾರ ಪಾಲ್ ಗ್ಯುಬಿಲಿನೊ ಕಳೆದ ವರ್ಷ ಹೇಳಿದ್ದರು.

ರೋಮಾಂಚಕಾರಿ ಸಂಗತಿ
ವಿಜ್ಞಾನಿಗಳು ದೇವಕಣವನ್ನು ಪತ್ತೆಮಾಡಿರುವುದು ರೋಮಾಂಚಕಾರಿ ಸಂಗತಿಯಾಗಿದ್ದು, ಈ ಮಾಹಿತಿಯನ್ನು ಅಧ್ಯಯನ ಮಾಡಬೇಕಾಗಿದೆ ಎಂದು ಬಾಹ್ಯಾಕಾಶ ವಿಜ್ಞಾನಿ ಡಾ. ಕೆ.ಕಸ್ತೂರಿ ರಂಗನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT