ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಸ್ಥಾನಗಳ ವಿಂಗಡಣೆ ಸಲ್ಲ: ಅನಂತಕುಮಾರ್

Last Updated 5 ಅಕ್ಟೋಬರ್ 2012, 19:20 IST
ಅಕ್ಷರ ಗಾತ್ರ

ಬೆಂಗಳೂರು: `ಉತ್ತಮ ಆದಾಯ ಮತ್ತು ಅಧಿಕ ಭಕ್ತಸಮೂಹವಿರುವ ದೇವಸ್ಥಾನಗಳನ್ನು ಮುಜರಾಯಿ ಇಲಾಖೆ ದರ್ಜೆಯ ಆಧಾರದ ಮೇಲೆ ವಿಂಗಡಿಸಬಾರದು~ ಎಂದು ಸಂಸದ ಅನಂತಕುಮಾರ್ ಮನವಿ ಮಾಡಿದರು. 

ನಗರದಲ್ಲಿ ಶುಕ್ರವಾರ ನಡೆದ ರಾಜ್ಯ ಮಟ್ಟದ ಜಿಲ್ಲಾ ಧಾರ್ಮಿಕ ಪರಿಷತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಪ್ರತಿ ಭಕ್ತರಿಗೂ ಅವರು ನಂಬುವ ದೇವರು ಮತ್ತು ದೇವಸ್ಥಾನ ಬಗ್ಗೆ ಪವಿತ್ರ ಭಾವನೆಯಿರುತ್ತದೆ. ಹಾಗಾಗಿ ಇಲಾಖೆಯು ಎ, ಬಿ ಮತ್ತು ಡಿ ದರ್ಜೆ ನೀಡುವ ಬದಲು ಸಂಪನ್ಮೂಲ ಮತ್ತು ಭಕ್ತರ ಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳು, ದೇವಸ್ಥಾನಗಳು ಮತ್ತು ಸನ್ನಿಧಿಗಳು ಎಂದು ಹೆಸರು ನೀಡಬೇಕು~ ಎಂದು ಸಲಹೆ ನೀಡಿದರು.

`ಬಸವನಗುಡಿಯಲ್ಲಿ ಕೆಂಪೇಗೌಡರ ಧಾರ್ಮಿಕ ಮತ್ತು ಐತಿಹಾಸಿಕ ವಿಚಾರಗಳನ್ನು ಬಣ್ಣಿಸುವಂತಹ ಥೀಮ್‌ಪಾರ್ಕ್ ನಿರ್ಮಿಸಲು ಸಂಸದ ನಿಧಿಯಿಂದ 25 ಲಕ್ಷ ರೂಪಾಯಿ ಅನುದಾನವನ್ನು ನೀಡಲಾಗುವುದು. ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಥೀಮ್‌ಪಾರ್ಕ್‌ಗೆ ಈಗಾಗಲೇ ಶಿಲಾನ್ಯಾಸ ನಡೆಸಲಾಗಿದೆ~ ಎಂದು ಹೇಳಿದರು.

`ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಖಾಸಗಿ ಕಂಪೆನಿಗಳು ರಾಷ್ಟ್ರೀಯ ಸಂಸ್ಕೃತಿ ನಿಧಿಯಿಂದ ಐತಿಹಾಸಿಕ ಸ್ಥಳಗಳ ರಕ್ಷಣಾ ಜವಾಬ್ದಾರಿಯನ್ನು ಪಡೆದಿರುವಂತೆ, ರಾಜ್ಯ ಸಂಸ್ಕೃತಿ ನಿಧಿಯನ್ನು ಸ್ಥಾಪಿಸಿ ರಾಜ್ಯದಲ್ಲಿರುವ ಐತಿಹಾಸಿಕ ಸ್ಥಳಗಳನ್ನು ಕಾಪಾಡುವ ಬಗ್ಗೆ ಸರ್ಕಾರ ಇನ್ಫೋಸಿಸ್ ಮತ್ತು ವಿಪ್ರೊದಂತಹ ಖಾಸಗಿ ಕಂಪೆನಿಗಳ ಸಹಕಾರ ಪಡೆಯಬೇಕು~ ಎಂದು ತಿಳಿಸಿದರು.

ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನದ ಸಂಸ್ಥಾಪಕ ಶ್ರೀಶ್ರೀ ರವಿಶಂಕರ್ ಗುರೂಜಿ, `ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರದಿಂದ ಜಗತ್ತಿನ ಗಮನ ಸೆಳೆಯುತ್ತಿರುವ ದೇಶದಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವತ್ತ ಚಿಂತನೆ ನಡೆಸಬೇಕು~ ಎಂದ ಅವರು, `ರಾಜ್ಯದಲ್ಲಿರುವ ದೇವಾಲಯಗಳ ಪುರೋಹಿತರು ಆದಷ್ಟು ಕನ್ನಡದಲ್ಲೇ ಭಕ್ತರಿಗೆ ಆಶೀರ್ವಾದ ಮಾಡಬೇಕು. ಇದರಿಂದ ಭಕ್ತಿ ಮತ್ತು ಅಧ್ಯಾತ್ಮವೆಂಬುದು ಭಕ್ತರ ಮನಸ್ಸಿಗೆ ಹತ್ತಿರವಾಗುತ್ತದೆ~ ಎಂದು ಹೇಳಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, `ಭಕ್ತರು ಮತ್ತು ದೇವಾಲಯದ ಆಡಳಿತ ಮಂಡಳಿ ಪರಸ್ಪರ ಸಹಕಾರದೊಂದಿಗೆ ದೇವಸ್ಥಾನದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸಾರ್ವಜನಿಕ ಪ್ರಜ್ಞೆಯಿಂದ ಮಾತ್ರ ದೇವಾಲಯಗಳು ಶ್ರದ್ಧಾ ಮತ್ತು ಭಕ್ತಿ ಕೇಂದ್ರಗಳಾಗಿ ಮಾರ್ಪಡಲು ಸಾಧ್ಯವಿದೆ~ ಎಂದು ಅಭಿಪ್ರಾಯಪಟ್ಟರು. ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಎಲ್.ಎ. ರವಿಸುಬ್ರಹ್ಮಣ್ಯ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT