ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಗೌಡ ನೇತ್ರತ್ವದಲ್ಲಿ ಪಾದಯಾತ್ರೆ

Last Updated 4 ನವೆಂಬರ್ 2011, 19:30 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: `ನೈಸ್ ಭೂಸ್ವಾಧೀನ ವಿರೋಧಿ ವೇದಿಕೆ ಕಾರ್ಯಕರ್ತ ಸಿದ್ದಲಿಂಗಪ್ರಭು ಕೊಲೆ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು~ ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನೇತೃತ್ವದಲ್ಲಿ ಸೋಮಪುರದಿಂದ ಮುಖ್ಯಮಂತ್ರಿ ನಿವಾಸದವರೆಗೆ ಪಾದಯಾತ್ರೆ ನಡೆಸಿದರು.

ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ದೇವೇಗೌಡ, `ನೈಸ್ ರಸ್ತೆ ನಿರ್ಮಾಣಕ್ಕೆ ಯಾರ ವಿರೋಧವೂ ಇಲ್ಲ. ಆದರೆ ರಸ್ತೆ ಹೆಸರಿನಲ್ಲಿ ಸಾವಿರಾರು ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳುತ್ತಿರುವುದಕ್ಕೆ ನಮ್ಮ ವಿರೋಧವಿದೆ~ ಎಂದರು.

`ಅನಗತ್ಯ ಭೂ ಸ್ವಾಧೀನ ವಿರೋಧಿಸಿ ಹೋರಾಡುತ್ತಿದ್ದ ಸಿದ್ದಲಿಂಗಪ್ರಭು ಅವರ ಹತ್ಯೆ ಹಿಂದೆ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಮತ್ತು ಅವರ ಬೆಂಬಲಿಗರ ಕೈವಾಡವಿದೆ. ಪೊಲೀಸರಿಂದ ನ್ಯಾಯ ಸಿಗುವ ಭರವಸೆ ಇಲ್ಲ. ಹೀಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು~ ಎಂದು ಆಗ್ರಹಿಸಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ನೈಸ್ ಭೂಸ್ವಾಧೀನ ವಿರೋಧಿ ವೇದಿಕೆ ಅಧ್ಯಕ್ಷ ಪಂಚಲಿಂಗಯ್ಯ, `ನ್ಯಾಯಕ್ಕಾಗಿ ನಾವು~ ಸಂಘಟನೆಯ ಮುಖಂಡರಾದ ಇಂದೂಧರ ಹೊನ್ನಾಪುರ, ಅಗ್ನಿ ಶ್ರೀಧರ್, ದಲಿತ ಸಂಘಟನೆಗಳ ಮುಖಂಡರಾದ ಎಂ.ವೆಂಕಟಸ್ವಾಮಿ, ವಿ.ನಾಗರಾಜು, ಪಟಾಪಟ್ ನಾಗರಾಜ್, ಜೆಡಿಎಸ್ ಮುಖಂಡರಾದ ಬಂಜಾರುಪಾಳ್ಯ ಮಂಜುನಾಥ್, ಬಿ.ಕೃಷ್ಣಪ್ಪ, ರಾಚನಮಡು ವೆಂಕಟೇಶ್ ಮೊದಲಾದವರು  ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಸಿದ್ಧಲಿಂಗ ಪ್ರಭು ಅವರ ಕುಟುಂಬದ ಸದಸ್ಯರು ಹಾಜರಿದ್ದರು.

ಭರವಸೆ: ಪಾದಯಾತ್ರೆಯಲ್ಲಿ ಬಂದ ಮುಖಂಡರೊಂದಿಗೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಸಂಜೆ ತಮ್ಮ ಗೃಹ ಕಚೇರಿ `ಕೃಷ್ಣಾ~ದಲ್ಲಿ ಸಭೆ ನಡೆಸಿದರು.

ಸಭೆ ಬಳಿಕ ವರದಿಗಾರರೊಂದಿಗೆ ಮಾತನಾಡಿದ ದೇವೇಗೌಡ, `ನಮ್ಮ ಬೇಡಿಕೆಗಳ ಬಗ್ಗೆ ಎರಡು ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿಯವರು ಭರವಸೆ ನೀಡಿದ್ದಾರೆ. ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT