ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕೆ ಕೀರ್ತಿ ತಂದ ಬಾಲೆಗೆ ಆರ್ಥಿಕ ಸಂಕಷ್ಟ

ಜಂಪ್‌ರೋಪ್ ಪ್ರತಿಭೆಗೆ ಬೇಕಿದೆ ಪ್ರಾಯೋಜಕತ್ವ
Last Updated 3 ಜೂನ್ 2013, 10:32 IST
ಅಕ್ಷರ ಗಾತ್ರ

ಕುಷ್ಟಗಿ/ಹನುಮಸಾಗರ: ಜಂಪ್‌ರೋಪ್ (ಸ್ಕಿಪ್ಪಿಂಗ್) ಕ್ರೀಡೆಯ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ದೇಶಕ್ಕೆ ಚಾಂಪಿಯನ್‌ಶಿಪ್ ತಂದು ಕೊಟ್ಟ ತಂಡದಲ್ಲಿ ಪಾಲ್ಗೊಂಡಿದ್ದ ಪಟ್ಟಣದ ಬಾಲೆ ಅಮೃತಾ ಕಂಚಿ ಕುಟುಂಬ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ.

ನವದೆಹಲಿಯಲ್ಲಿ ಮೇ 23ರಿಂದ 27ರ ವರೆಗೆ ನಡೆದ ದಕ್ಷಿಣ ಏಷ್ಯಾ 2ನೇ ಅಂತರರಾಷ್ಟ್ರೀಯ ಮಟ್ಟದ ಜಂಪ್‌ರೋಪ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಜಾಂಪಿಯನ್‌ಶಿಪ್‌ಗೆ ಕಾರಣರಾದ 90 ಕ್ರೀಡಾಪಟುಗಳಲ್ಲಿ ಕರ್ನಾಟಕದವರು 38 ಜನರಲ್ಲಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಅಮೃತಾ ಕಂಚಿ,ಹನುಮಸಾಗರದ ಶಂಕರಮ್ಮ ಹಿರೇಮಠ ಮತ್ತು ಕನಕಗಿರಿಯ ಹುಸೇನ್‌ಬಾನು ಸೇರಿದ್ದಾರೆ.

ಅನೇಕ ವರ್ಷಗಳಿಂದಲೂ ಜಿಲ್ಲೆಯಿಂದ ಅಂತರರಾಷ್ಟ್ರೀಯ ಮಟ್ಟದವರೆಗೆ ನಡೆದ ಎಲ್ಲ ಸ್ಪರ್ಧೆಗಳಲ್ಲೂ ಅಮೃತಾ ಪಾಲ್ಗೊಂಡಿದ್ದಾಳೆ. ಅಷ್ಟೇ ಅಲ್ಲ ಕಳೆದ ವರ್ಷ ನೇಪಾಳದಲ್ಲಿ ನಡೆದ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲೂ ಭಾರತ ತಂಡವನ್ನು ಈಕೆ ಪ್ರತಿನಿಧಿಸಿದ್ದಾಳೆ. ಕಾಟಾಪುರದಲ್ಲಿನ ಮೊರಾರ್ಜಿ ವಸತಿ ಶಾಲೆಯಲ್ಲಿ ಕಲಿತ ಈಕೆ ಎಸ್ಸೆಸ್ಸೆಲ್ಸಿ ಯಲ್ಲಿ ಶೇ 85ರಷ್ಟು ಅಂಕಗಳನ್ನು ಪಡೆದಿದ್ದರು. ಸದ್ಯ ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಪ್ರಥಮ ವರ್ಷ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಈಕೆಗೆ ಪ್ರವೇಶ ದೊರಕಿದೆ.

ನಾಲ್ಕು ಬಾರಿ ರಾಷ್ಟ್ರಮಟ್ಟದ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದ ಸ್ಪರ್ಧೆಗಳಿಗೂ ಆಯ್ಕೆಯಾಗಿದ್ದ ಈಕೆ ಅಲ್ಲಿಗೆ ಹೋಗಿ ಬರುವ ಎಲ್ಲ ವೆಚ್ಚವನ್ನು ಪಾಲಕರು ಮತ್ತು ದಾನಿಗಳು ಭರಿಸುತ್ತ ಬಂದ್ದ್ದಿದಾರೆ. ಬಸ್‌ನಿಲ್ದಾಣದ ಬಳಿ ಚಿಕ್ಕ ಪಾನ್‌ಬೀಡಾ ಅಂಗಡಿಯೇ ತಂದೆ ಸಿದ್ದಲಿಂಗಪ್ಪ ಕಂಚಿ ಅವರ ಆರ್ಥಿಕ ಮೂಲ. ಇಷ್ಟರಲ್ಲಿಯೇ ಕುಟುಂಬ ನಿರ್ವಹಣೆಯ ಜೊತೆಗೆ ಮಗಳನ್ನೂ ದೂರದ ಪ್ರದೇಶಗಳಿಗೆ ಕಳಿಸಿಕೊಡುವುದು ಅವರಿಗೆ ಬಲು ಭಾರ ಎನಿಸಿದೆ.

ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತು ಪುರಸಭೆಯ ವಾರ್ಷಿಕ ಅನುದಾನದಲ್ಲಿ ಶೇ 2ರಷ್ಟು ಕ್ರೀಡಾನಿಧಿ ತೆಗೆದಿರಿಸಲಾಗುತ್ತಿದ್ದು, ಇಂಥ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಈ ಹಣ ಬಳಸುವ ಬಗ್ಗೆ ಸರ್ಕಾರದ ಆದೇಶವೂ ಇದೆ. ಆದರೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಹಣ ಸಿಕ್ಕಿಲ್ಲ ಎಂದು ರಾಜ್ಯ ಜಂಪ್‌ರೋಪ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಜಾಕ್ ಟೇಲರ್ ಅಸಮಾಧಾನ ವ್ಯಕ್ತಪಡಿಸಿದರು.

ಅಮೃತಾಳ ಶೈಕ್ಷಣಿಕ ವೆಚ್ಚಕ್ಕೆ ತೊಂದರೆ ಇಲ್ಲ, ಆದರೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಹೋಗುವುದಕ್ಕೆ ಪ್ರಾಯೋಜಕರ ಅವಶ್ಯಕತೆ ಇದೆ, ಕೊಪ್ಪಳದಲ್ಲಿ ಅನೇಕ ಬಹುರಾಷ್ಟ್ರೀಯ ಕಂಪೆನಿಗಳು ಇದ್ದರೂ ಅವುಗಳ ಮೂಲಕ ಈ ಕ್ರೀಡಾಪಟುಗಳಿಗೆ ಪ್ರಾಯೋಜಕತ್ವ ಕೊಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮನಸ್ಸು ಮಾಡಬೇಕು ಎನ್ನುತ್ತಾರೆ ರಜಾಕ್.

ಎಲ್ಲ ಕ್ರೀಡೆಗಳಿಗೆ ಜಂಪ್‌ರೋಪ್ ತಾಯಿ ಬೇರು ಇದ್ದಂತೆ, ಹಾಗಾಗಿ ಸದರಿ ಕ್ರೀಡೆಗೆ ರಾಷ್ಟ್ರೀಯ ಪಠ್ಯದಲ್ಲಿ ಮಾನ್ಯತೆ ನೀಡಲಾಗಿದೆ, ಅಲ್ಲದೇ ರಾಜ್ಯದಲ್ಲಿ ಪಿಯು ಶಿಕ್ಷಣ ಇಲಾಖೆ ಆಯುಕ್ತ ಚಕ್ರವರ್ತಿ ಮೋಹನ ಅವರ ಆಸಕ್ತಿಯಿಂದ ಈ ವರ್ಷದಿಂದ ಪಿಯು ಪಠ್ಯದಲ್ಲೂ ಕ್ರೀಡೆಯನ್ನು ಕಡ್ಡಾಯ ಮಾಡಲಾಗಿದೆ. ಅವಶ್ಯವಾಗಿ ಕಡ್ಡಾಯಗೊಳಿಸಬೇಕಿರುವುದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಆದರೆ ಹಳ್ಳಿಯ ಮಕ್ಕಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವುದಕ್ಕೆ ಪ್ರೋತ್ಸಾಹ ಅಗತ್ಯವಾಗಿದ್ದರೂ ರಾಜ್ಯ ಕ್ರೀಡಾ ಇಲಾಖೆ ಈ ನಿಟ್ಟಿನಲ್ಲಿ ಮನಸ್ಸು ಮಾಡಿಲ್ಲ ಎಂಬ ವಿಷಾದ ಜಂಪರೋಪ್ ಜನಪ್ರಿಯಗೊಳಿಸುವಲ್ಲಿ ಶ್ರಮಿಸುತ್ತಿರುವ ರಜಾಕ್ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT