ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ದೇಶದಲ್ಲಿ ದ್ವಿಪಕ್ಷ ಪದ್ಧತಿ ಜಾರಿಗೆ ಬರಲಿ'

ಮಾಜಿ ಉಪ ಪ್ರಧಾನ ಅಡ್ವಾಣಿ ಅಭಿಮತ
Last Updated 22 ಏಪ್ರಿಲ್ 2013, 6:42 IST
ಅಕ್ಷರ ಗಾತ್ರ

ಹಾವೇರಿ: `ದೇಶದಲ್ಲಿ ದ್ವಿಪಕ್ಷ ಪದ್ಧತಿ ಜಾರಿಗೆ ತರಬೇಕು ಎಂಬುವವರಲ್ಲಿ ತಾವು ಒಬ್ಬರಾಗಿದ್ದು, ಎರಡೇ ಪಕ್ಷಗಳು ಇದ್ದಾಗ ಆಗುವ ಅಭಿವೃದ್ಧಿ ಹತ್ತು ಹಲವು ಪಕ್ಷಗಳನ್ನು ಸೇರಿಸಿಕೊಂಡು ಮಾಡಲಾಗುವುದಿಲ್ಲ' ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ಅಭಿಪ್ರಾಯಪಟ್ಟರು.

ಭಾನುವಾರ ಜಿಲ್ಲೆಯ ರಾಣೆಬೆನ್ನೂರಿನ ಬಿ.ಟಿ.ಪಾಟೀಲ ಮೈದಾನದಲ್ಲಿ ವಿಧಾನಸಭಾ ಚುನಾವಣೆಯ ಜಿಲ್ಲೆಯ ಆರು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಈಗಾಗಲೇ ಸಾವಿರಾರು ರಾಜಕೀಯ ಪಕ್ಷಗಳು ಇವೆ. ಕಾಂಗ್ರೆಸ್ ಹಾಗೂ ಬಿಜೆಪಿಗಳು ಉತ್ತರ ಹಾಗೂ ದಕ್ಷಿಣ ಧ್ರುವಗಳಂತಿದ್ದು, ಇವೆರಡರಲ್ಲಿ ಒಂದು ಪಕ್ಷವಿಲ್ಲದೇ ಕೇಂದ್ರದಲ್ಲಿ ಯಾವ ಪಕ್ಷಗಳು ಸರ್ಕಾರ ನಡೆಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇರುವಾಗ ಎರಡೇ ಪಕ್ಷಗಳ ವ್ಯವಸ್ಥೆ ಜಾರಿಯಲ್ಲಿರುವುದು ಸೂಕ್ತ ಎಂದರು.

ತಮ್ಮ ಭಾಷಣದಲ್ಲಿ ಹಚ್ಚಿನ ಸಮಯವನ್ನು ದ್ವಿಪಕ್ಷ ಪದ್ಧತಿಯ ಅಗತ್ಯತೆಯನ್ನು ತಿಳಿಸಿಕೊಡುವುದಕ್ಕೆ ಮೀಸಲಿಟ್ಟ ಆಡ್ವಾಣಿಯವರು, ಪರೋಕ್ಷವಾಗಿ ಯಡಿಯೂರಪ್ಪನವರ ಪ್ರಾದೇಶಿಕ ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ಹೇಳಿದರು.

ಸಹಿಸುವುದಿಲ್ಲ: ತಮ್ಮ ಆರು ದಶಕಗಳ ರಾಜಕೀಯ ಜೀವನದಲ್ಲಿ ಭ್ರಷ್ಟಾಚಾರ ಹಾಗೂ ಭಯೋತ್ಪಾದನೆಯನ್ನು ಎಂದೂ ಸಹಿಸಿಲ್ಲ. ಮುಂದೆಯೂ ಸಹಿಸುವುದಿಲ್ಲ ಎಂದ ಅವರು, ಪಾಕಿಸ್ತಾನದ ಮುಷರಫ್ ಜತೆ ಮಾತನಾಡುವ ಸಂದರ್ಭದಲ್ಲಿ ನಮ್ಮ ಜತೆ ಯುದ್ಧ ಮಾಡಿ ಅದನ್ನು ಎದುರಿಸುತ್ತೇವೆ. ಆದರೆ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ಮಾತ್ರ ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿರುವುದನ್ನು ಸ್ಮರಿಸಿಕೊಂಡರು.

ಜನಸಂಘದಿಂದ ಹಿಡಿದು ಇಂದಿನ ಬಿಜೆಪಿಯವರೆಗೆ ಅದೇ ತತ್ವವನ್ನು ಅಳವಡಿಸಿಕೊಂಡು ಬರಲಾಗಿದೆ. ಪಕ್ಷದ ಎಂತಹದೇ ವ್ಯಕ್ತಿಗಳು ಭ್ರಷ್ಟಾಚಾರದಲ್ಲಿ ತೊಡಗಿದರೆ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲು ಪಕ್ಷ ಹಿಂಜರಿಯುವುದಿಲ್ಲ ಎಂದು ಹೇಳಿದರು.

ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾ ರಕ್ಕೆ ತನ್ನಿ ಕರ್ನಾಟಕವನ್ನು ಗುಜರಾತ್, ಮಧ್ಯಪ್ರದೇಶ, ಉತ್ತರಖಂಡ ರಾಜ್ಯಗಳಂತೆ ಅಭಿವೃದ್ಧಿ ಮಾಡಲಿದ್ದೇವೆ ಎಂದರು.

`ಕೇಂದ್ರದ ದುರ್ಬಲ ನಾಯಕತ್ವದಿಂದ ಅನಾಚಾರ'
ರಾಣೆಬೆನ್ನೂರ:
ದೇಶದಲ್ಲಿ ಬಡತನ, ಭಯೋತ್ಪಾದನೆ, ಅತ್ಯಾಚಾರ ಹಾಗೂ ಅನಾಚಾರ ಪ್ರಕರಣಗಳು ಹೆಚ್ಚಾಗಲು ದೇಶದಲ್ಲಿರುವ ದುರ್ಬಲ ನಾಯಕತ್ವವೇ ಕಾರಣ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಭಾನುವಾರ ಜಿಲ್ಲೆಯ ರಾಣೆಬೆನ್ನೂರಿನ ಬಿ.ಟಿ.ಪಾಟೀಲ ಮೈದಾನದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರದ    ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಕವಲು ದಾರಿಯಲ್ಲಿರುವ ದೇಶವನ್ನು ಮುನ್ನಡೆಸಲು ಸಾಧ್ಯವಾಗದೇ ಕೇಂದ್ರದ ಯುಪಿಎ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯು ವುದು ಸೇರಿದಂತೆ ಎಲ್ಲ ರಂಗಗಳಲ್ಲಿ ವಿಫಲವಾಗಿದೆ. ಜನರು ದಿನನಿತ್ಯ ಬಳಸುವ ವಸ್ತುಗಳ ಬೆಲೆ ಗಗನಕ್ಕೆ ಹೋಗಿರುವುದರಿಂದ ಜನರು ಜೀವನ ನಡೆಸುವುದು ಕಷ್ಟವಾಗಿದೆ ಎಂದು ಹೇಳಿದರ.

ಇಂದು ದೇಶದಲ್ಲಿ ಅಡ್ವಾಣಿಯವರ ನಾಯಕತ್ವದಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಅನೇಕ ಹೋರಾಟಗಳನ್ನು ನಡೆಸಲಾಗಿದ್ದು, ದೇಶದ ಭವಿಷ್ಯ ಉಜ್ವಲಗೊಳಿಸಲು ಅಂತಹ ದಿಟ್ಟ ನಾಯಕತ್ವದ ಅವಶ್ಯಕತೆಯಿದೆ. ಅಂತಹ ನಾಯಕತ್ವ ನೀಡುವ ಶಕ್ತಿ ಬಿಜೆಪಿಗೆ ಮಾತ್ರ ಇದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ 37ಸಾವಿರ ಕೋಟಿ ಇದ್ದ ಬಜೆಟ್‌ನ್ನು ಐದು ವರ್ಷಗಳಲ್ಲಿ 1.17 ಲಕ್ಷ ಕೋಟಿಗಳಿಗೆ ಬಜೆಟ್ ಮೊತ್ತ ಹೆಚ್ಚಿಸಲಾಗಿದೆ. ರೈತರಿಗೆ 1 ಲಕ್ಷದವರೆಗೆ ಬಡ್ಡಿರಹಿತ ಸಾಲವನ್ನು ನೀಡಲಾಗಿದೆ. ರೈತರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಏತ ನೀರಾವರಿ, ಹನಿ ನೀರಾವರಿಗೆ ಆದ್ಯತೆ ನೀಡಲಾಗಿದ್ದು, 1 ಲಕ್ಷ ಏಕರೆ ಭೂಮಿಗೆ ತುಂಗಾ ಮೇಲ್ದಂಡೆ ಯೋಜನೆಯ ಮೂಲಕ ನೀರು ಹರಿಸಲಾಗಿದೆ. ರಾಜ್ಯದಲ್ಲಿ ಒಟ್ಟು 27 ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ 7 ಲಕ್ಷ ಎಕರೆ ಪ್ರದೇಶಕ್ಕೆ ನೀರು ಹರಿಸಲಾಗಿದೆ. 14 ಹೊಸ ಯೋಜನೆಗಳನ್ನು ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಘೋಸಿಸುವ ತಾಕತ್ತು ಇಲ್ಲ. ಆಯಾ ಜಾತಿಗಳ ಲಾಭ ಪಡೆಯಲು ಮುಖ್ಯಮಂತ್ರಿ ಹುದ್ದೆಯನ್ನು ಬಳಸಿಕೊಳ್ಳುತ್ತಾರೆ. ಕಾಂಗ್ರೆಸ್    ಅಭ್ಯರ್ಥಿಗಳು ಪ್ರಚಾರ ಸಂದರ್ಭದಲ್ಲಿ ಕುರುಬ ಸಮಾಜದವರಿಗೆ ಸಿದ್ಧರಾಮಯ್ಯ ನಮ್ಮ ನಾಯಕ    ಎಂದು ಹೇಳಿದರೆ, ದಲಿತ  ಕೇರಿಗಳಲ್ಲಿ ಜಿ. ಪರಮೇಶ್ವರ ನಮ್ಮ ನಾಯಕ ಎನ್ನುತ್ತಾ ಆ ಜನಾಂಗಕ್ಕೆ ದ್ರೋಹ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.

ಪ್ರಸಕ್ತ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ. ಸೂರ್ಯ ಚಂದ್ರರು ಎಷ್ಟು ಸತ್ಯವೋ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ಯಾಪ್ಟನ್ ಇಲ್ಲ: ಕಾಂಗ್ರೆಸ್‌ನಲ್ಲಿ ಸಮರ್ಥ ಕ್ಯಾಪ್ಟನ್ ಇಲ್ಲದ ತಂಡವಾಗಿದ್ದು, ಅಂತಹ ತಂಡದಿಂದ ರಾಜ್ಯದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೇ   ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಪ್ರಶ್ನಿಸಿದರು.

ಬಿಜೆಪಿಯ ಯಾವ ನಾಯಕರನ್ನು ಕೇಳಿದರೂ ಮುಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಎಂದೇ    ಹೇಳುತ್ತಾರೆ. ಆದರೆ, ಕಾಂಗ್ರೆಸ್‌ನಲ್ಲಿ ವ್ಯವಸ್ಥೆ ಇಲ್ಲ. ಪರಮೇಶ್ವರ, ಸಿದ್ದರಾಮಯ್ಯ, ಮಲ್ಲಿಕಾರ್ಜುನ    ಖರ್ಗೆ ಸೇರಿದಂತೆ ಯಾವ     ನಾಯಕರಿಗೆ ಕೇಳಿದರೂ ಮುಂದಿನ ಮುಖ್ಯಮಂತ್ರಿ `ನಾನೇ' ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು.

ಕೇಂದ್ರ ಕಾಂಗ್ರೆಸ್ ಸರ್ಕಾರ     ರಾಜ್ಯದ ಮೇಲೆ ಮಲತಾಯಿ  ಧೋರಣೆ ತೋರುತ್ತಲೇ ಬಂದಿದೆ. ಕಾವೇರಿ ನೀರಿನ ವಿವಾದ,          ವಿದ್ಯುತ್ ಉತ್ಪಾದನೆಗೆ ಬೇಕಾಗುವ ಕಲ್ಲಿದ್ದಲು ನೀಡುವುದು,  ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ರಸ್ತೆಗಾಗಿ ಹಣ ನೀಡದೇ ಇರುವುದು ಇದರಲ್ಲಿ ಸೇರಿವೆ ಎಂದ ಅವರು, ಚುನಾವಣೆಯಲ್ಲಿ ಬಿಜೆಪಿಗೆ ಕೆಟ್ಟು ಹೆಸರು ತರುವ ಉದ್ದೇಶದಿಂದಲೇ ಪಡಿತರ ಚೀಟಿ ಮೂಲಕ ನೀಡುವ ಅಕ್ಕಿ ಗೋದಿಯನ್ನು ಕಡಿಮೆ ನೀಡಿದೆ. ಪ್ರಸಕ್ತ ತಿಂಗಳಲ್ಲಿ ರಾಜ್ಯಕ್ಕೆ  28,000 ಮೆಟ್ರಿಕ್ ಟನ್ ಅಕ್ಕಿ, 10,000 ಮೆ.ಟನ್ ಗೋದಿ ಕಡಿಮೆ ನೀಡಿದೆ ಎಂದ ಪ್ರಹ್ಲಾದ ಜೋಶಿ, ಕಾಂಗ್ರೆಸ್ಸಿನ ಹಸ್ತ ಮುಳುತ್ತಿರುವ ಹಸ್ತವಾಗಿದೆ ಎಂದು ಟೀಕಿಸಿದರು.

ಮಾಜಿ ಉಪಪ್ರಧಾನಿ ಎಲ್.ಕೆ. ಅಡ್ವಾಣಿ, ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ವಿಧಾನ ಪರಿಷತ್  ಸದಸ್ಯ ಸೋಮಣ್ಣ ಬೇವಿನಮರದ, ಕುರಿ ಮತ್ತು ಉಣ್ಣೆ ಅಭಿವದ್ಧಿ      ನಿಗಮ ಅಧ್ಯಕ್ಷ ಭೋಜರಾಜ     ಕರೂದಿ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಸಿದ್ಧರಾಜ ಕಲಕೋಟಿ, ರಾಣೆಬೆನ್ನೂರ ಕ್ಷೇತ್ರದ ಅಭ್ಯರ್ಥಿ ಅರುಣ ಕುಮಾರ ಪೂಜಾರ, ಬ್ಯಾಡಗಿ ಕ್ಷೇತ್ರದ ಅಭ್ಯರ್ಥಿ ವಿರೂಪಾಕ್ಷಪ್ಪ ಬಳ್ಳಾರಿ, ಹಾವೇರಿ ಕ್ಷೇತ್ರದ ಅಭ್ಯರ್ಥಿ ಡಾ. ಮಲ್ಲೇಶಪ್ಪ ಹರಿಜನ, ಹಾನಗಲ್ ಕ್ಷೇತ್ರದ    ಅಭ್ಯರ್ಥಿ ಬಸವರಾಜ ಹಾದಿಮನಿ, ಹಿರೇಕೆರೂರ ಕ್ಷೇತ್ರದ ಅಭ್ಯರ್ಥಿ  ಪಾಲಾಕ್ಷಗೌಡ ಪಾಟೀಲ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಬಸವರಾಜ ಕೇಲಗಾರ, ಜಿ.ಪಂ. ಸದಸ್ಯ ಮಂಜುನಾಥ ಓಲೇಕಾರ, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಜಂಬಗಿ, ನಗರಾಭಿವದ್ಧಿ ಪ್ರಾಧಿಕಾರದ ಅಧ್ಯಕ್ಷ ವೀರಣ್ಣ ಅಂಗಡಿ, ಬಿಜೆಪಿ ಮುಖಂಡ ವಿ.ಸಿ. ಪಾಟೀಲ, ಕೆ.ಎನ್. ಕೋರ ಧಾನ್ಯಮಠ ಸೇರಿದಂತೆ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT