ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ತಳಿಗಳ ಸಂರಕ್ಷಣೆಯಲ್ಲಿ...

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ರಾಮನಗರ ತಾಲ್ಲೂಕು ನಿಜಿಯಪ್ಪನ ದೊಡ್ಡಿಯ 30ರ ಹರೆಯದ ರೈತ ಸುರೇಂದ್ರ ಅಳಿವಿನ ಹೊಸ್ತಿಲಲ್ಲಿದ್ದ ಭತ್ತದ 25 ತಳಿ, ರಾಗಿಯ 20, ನವಣೆಯ 5 ಹಾಗು ಬಾಳೆಯ 5 ದೇಸಿ ತಳಿಗಳನ್ನು ತಮ್ಮ ಜಮೀನಿನಲ್ಲಿ ಬೆಳೆದಿದ್ದಾರೆ. ಮನೆಯಲ್ಲಿ ಬೀಜ ಭಂಡಾರ ಸ್ಥಾಪಿಸಿ, ಆಸಕ್ತ ರೈತರಿಗೆ ನಾಟಿ ತಳಿಯ ಬೀಜ ಕೊಟ್ಟು ದ್ವಿಗುಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜತೆಗೆ ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿ ಮಧ್ಯವರ್ತಿಗಳ ಶೋಷಣೆಯಿಂದ ತಪ್ಪಿಸಿಕೊಂಡಿದ್ದಾರೆ.

`ಒಣಭೂಮಿ ರೈತರಿಗೆ ದೇಸಿ ತಳಿ ಬೀಜಗಳು ವರದಾನ. ಇವಕ್ಕೆ ರೋಗ ಕಡಿಮೆ. ಮಳೆಯಾಶ್ರಯದಲ್ಲಿ ಸೊಗಸಾಗಿ ಬೆಳೆಯುತ್ತವೆ. ಕಡಿಮೆ ಗೊಬ್ಬರದಲ್ಲೂ ಉತ್ತಮ ಇಳುವರಿ ನೀಡುತ್ತವೆ. ಒಕ್ಕಣೆ, ಸಂಸ್ಕರಣೆ ಸುಲಭ. ಪೌಷ್ಟಿಕಾಂಶಗಳ ಆಗರ. ಜತೆಗೆ ಬೀಜ ಸ್ವಾತಂತ್ರ್ಯ ಸಂರಕ್ಷಣೆಗೆ ಸಹಕಾರಿ~  ಎಂದು ನಾಟಿ ತಳಿ ಬೀಜಗಳ ಗುಣಗಾನ ಮಾಡುತ್ತಾರೆ ಸುರೇಂದ್ರ.

`ಎರಡು ದಶಕದ ಹಿಂದೆ ರೈತರ ಹೊಲ, ಗದ್ದೆಗಳಲ್ಲಿ ಅಧಿಕವಾಗಿ ದೇಸಿ ತಳಿಗಳೇ ಇದ್ದವು. ಬೇಸಾಯ ಕಡಿಮೆ ಖರ್ಚಿನದಾಗಿತ್ತು. ಆಹಾರದ ಭದ್ರತೆ, ಜತೆಗೆ ಆರೋಗ್ಯವೂ ಚೆನ್ನಾಗಿತ್ತು. ಹಸಿರುಕ್ರಾಂತಿ ಕಾಲೂರಿದಾಗ ಹೈಬ್ರಿಡ್ ತಳಿಗಳು ಪೇಟೆಗೆ ದಾಂಗುಡಿ ಇಟ್ಟವು. ರೈತರು ಅವುಗಳ ಆಕರ್ಷಣೆಗೆ ಮಾರುಹೋದರು. ಕಾಲಕ್ರಮೇಣ ನಾಟಿ ಬೀಜ ಸ್ವಾತಂತ್ರ್ಯ ಕಳೆದುಕೊಂಡರು. ಬೇಸಾಯ ವೆಚ್ಚ ದುಬಾರಿಯಾಯಿತು. ಲಾಭಾಂಶ ಕಡಿಮೆ. ಸಾಲ ಮತ್ತು ಬಡ್ಡಿ ಅಧಿಕವಾದವು. ಇದರಿಂದ ಬೇಸತ್ತು ಬೇಸಾಯವನ್ನು ತಾತ್ಸಾರ ಮಾಡಿದರು. ಇದೀಗ ತಪ್ಪಿನ ಅರಿವಾಗಿ ಮತ್ತೆ ದೇಸಿ ತಳಿಗಳ ಕಡೆಗೆ ದೃಷ್ಟಿಹರಿಸಿದ್ದಾರೆ~ ಎಂದು ಅವರು ವ್ಯಾಖ್ಯಾನಿಸುತ್ತಾರೆ.

ಹಳ್ಳಿಯಲ್ಲಿ ಅವರಿಗೆ ಐದು ಎಕರೆ ಜಮೀನಿದೆ. ಅಲ್ಲಿ ಕೊಳವೆ ಬಾವಿ ಇದೆ. ಪಿಯುಸಿ ವರೆಗೆ ಓದಿದ್ದರು. ಕೃಷಿಯ ಸೆಳೆತಕ್ಕೆ ಒಳಗಾಗಿ ಅಧ್ಯಯನವನ್ನು ಅರ್ಧಕ್ಕೆ ನಿಲ್ಲಿಸಿದರು. ಮೂರು ವರ್ಷದಿಂದ ಪೂರ್ಣಾವಧಿ ಕೃಷಿಕರಾಗಿ ದೇಸಿ ತಳಿ ಬೆಳೆಯುತ್ತಿದ್ದಾರೆ. ನೆರೆಯ ರೈತರಲ್ಲಿ ನಾಟಿ ತಳಿಗಳ ರುಚಿ, ಪೋಷಕಾಂಶಗಳ ಅರಿವನ್ನು ಮೂಡಿಸಲು `ಭತ್ತ ಉಳಿಸಿ~ ಆಂದೋಲನ ನಡೆಸುತ್ತಿದ್ದಾರೆ.

ಜೀವವೈವಿಧ್ಯ
 ಇವರ ತೋಟದ ಹೆಸರು `ಸುಂದರವನ~. ಇಲ್ಲಿ ಸೊಪ್ಪು, ತರಕಾರಿ, ಭತ್ತ, ರಾಗಿ, ನವಣೆ, ಹುಚ್ಚೆಳ್ಳು, ತೊಗರಿ, ಮಾವು, ಬಾಳೆ ಬೆಳೆದಿದ್ದಾರೆ. ಜೇನುಸಾಕಣೆ ಮಾಡುತ್ತಿದ್ದಾರೆ. ಹಸು, ಕುರಿ, ಎಮ್ಮೆ, ಹಾಗೂ ಮೊಲ ಸಾಕಿದ್ದಾರೆ. ತೋಟದ ಸುತ್ತಲೂ ಬಗೆಬಗೆಯ ಗಿಡಗಳನ್ನು ನೆಟ್ಟು ಹಸಿರು ಬೇಲಿ ನಿರ್ಮಿಸಿದ್ದಾರೆ. ಎಲ್ಲಾ ಬೆಳೆಗಳಿಗೆ ಹಸಿರೆಲೆ ಗೊಬ್ಬರ, ಎರೆಗೊಬ್ಬರದ ದ್ರಾವಣ, ತಿಪ್ಪೆಗೊಬ್ಬರ, ಎರೆಹುಳು ಗೊಬ್ಬರ, ಜೀವಾಮೃತ ಕೊಡುತ್ತಾರೆ. ಸ್ವತಃ ತಯಾರಿಸಿದ ಜೈವಿಕ  ಕೀಟನಾಶಕ ಬಳಕೆ ಮಾಡುತ್ತಾರೆ. ಸಂಪೂರ್ಣ ಸಾವಯವ ಕೃಷಿ ಅನುಸರಿಸುತ್ತಿದ್ದಾರೆ.

ಕೆಂಪು ಮುಂಡಗ ಭತ್ತದ ತಳಿ ರಕ್ಷಣೆಗೆ ವಿಶೇಷ ಆದ್ಯತೆ ನೀಡಿದ್ದಾರೆ. ಹಿಂದೆ ರಾಮನಗರ, ಕನಕಪುರ, ಚನ್ನಪಟ್ಟಣ, ಮಾಗಡಿ ತಾಲ್ಲೂಕುಗಳ ಸಾಕಷ್ಟು ರೈತರು ಒಣಭೂಮಿಯಲ್ಲಿ ಮುಂಡಗದ ಭತ್ತ ಬೆಳೆಯುತ್ತಿದ್ದರು. ಇತ್ತೀಚೆಗೆ ಆ ಪ್ರಮಾಣ ಬಹುತೇಕ ಕ್ಷೀಣಿಸಿತ್ತು.

ಅದಕ್ಕಾಗಿ 10 ಗುಂಟೆಯಲ್ಲಿ ಮುಂಡಗದ ನಾಲ್ಕು ತಳಿಯನ್ನು ಬೆಳೆದು ಬೀಜ ವೃದ್ಧಿ ಕೈಗೊಂಡಿದ್ದಾರೆ. ಅವುಗಳಿಗೆ ಮುಂಡಗ, 01, 02, 03 ಎಂದು ಹೆಸರಿಟ್ಟು ಬೀಜ ಭಂಡಾರದಲ್ಲಿ ಸಂರಕ್ಷಿಸಿದ್ದಾರೆ.

ಅಜೋಲಾ
ಅವರ ಜಮೀನಿನ ನಾಲ್ಕು ಅಡಿ ಆಳ ಹತ್ತು ಅಡಿ ಅಗಲದ ತೊಟ್ಟಿಯೊಳಗೆ ಅಜೋಲಾದ ಬೆಳೆ ಇದೆ. ಅವರ ಪ್ರಕಾರ ಇದನ್ನು ತಯಾರಿಸಲು ತೊಟ್ಟಿಯಲ್ಲಿ ಮೂರು ಅಂಗುಲ ನೀರು ಇಟ್ಟು, ಮೂರು ಬಾಂಡ್ಲಿ ಕೆಂಪುಮಣ್ಣು, ಒಂದು ಮಂಕರಿ ಸಗಣಿ ಹಾಕಿ ಚೆನ್ನಾಗಿ ಕಲಸಿ, ಮೂರು ದಿನ ಬಿಟ್ಟು ಬಿತ್ತನೆ ಅಜೋಲಾ  ಹಾಕಬೇಕು. ನಂತರ ನೀರಿನ ಮಟ್ಟ ಹೆಚ್ಚಿಸಿದಾಗ ಅಜೋಲಾ ಸೊಗಸಾಗಿ ಬೆಳೆಯುತ್ತದೆ. ಭತ್ತ ನಾಟಿ ಮಾಡಿದ 15 ದಿನ ಬಿಟ್ಟು ಗದ್ದೆಗೆ ಅಜೋಲಾ ಹಾಕಬೇಕು. ಅದು ವಾತಾವರಣದಲ್ಲಿರುವ ಸಾರಜನಕವನ್ನು ಹೀರಿಕೊಂಡು ಭತ್ತಕ್ಕೆ ನಿರಂತರವಾಗಿ ಪೂರೈಸುತ್ತದೆ. ಸಂಪೂರ್ಣವಾಗಿ ಕಳೆ ಹತೋಟಿಯಾಗುತ್ತದೆ. ಕಳೆ ಕೀಳುವ ಕಾರ್ಮಿಕರಿಗೆ ಕೊಡುವ ಕೂಲಿ ಉಳಿಯುತ್ತದೆ.

ಗದ್ದೆಗೆ ಹರಿಯುವ ನೀರಿಗೆ ಜೀವಾಮೃತ ಬೆರೆಸಿ ಬೆಳೆಗೆ ಪೂರೈಸುತ್ತಾರೆ. ತಿಂಗಳಿಗೊಮ್ಮೆ ಎರೆಗೊಬ್ಬರ ಹಾಕುತ್ತಾರೆ. ಇದರಿಂದಾಗಿ ಅವರ ಹೊಲದಲ್ಲಿನ ಭತ್ತ ಯಾವುದೆ ರೋಗವಿಲ್ಲದೆ ಸೊಗಸಾಗಿ ಬೆಳೆಯುತ್ತವೆ.

ಘಂಗಡಲೆ, ಕರಿಗಜಿವಿಲಿ, ಬಿಳಿನೆಲ್ಲು, ದೊಡ್ಡಿಭತ್ತ, ಬರ್ಮಬ್ಲಾಕ್, ರಸಕದಮ್, ಕಾಳಜೀರ, ಚಿನ್ನಪೊನ್ನಿ, ಎಂಎಂಎಸ್, ಮೈಸೂರು ಮಲ್ಲಿಗೆ, ಘಮ್‌ನದ್ದು, ಗಿಡ್ಡಬಾಸುಮತಿ, ಕಣತುಂಬಾ ಇತ್ಯಾದಿ 25 ವಿಧದ ಭತ್ತಗಳು ಈಗ ಅವರ ದಾಸ್ತಾನಿನಲ್ಲಿವೆ. ಇವುಗಳಲ್ಲಿ ನೀರಾವರಿ, ಒಣಭೂಮಿಯಲ್ಲಿ ಬೆಳೆಯುವ ತಳಿಗಳು, ಸುಗಂಧ ಭರಿತ, ಔಷಧೀಯ ಗುಣದ ತಳಿಗಳೆಲ್ಲ ಇವೆ. ಅಲ್ಲದೆ ಶ್ರೀಲಂಕಾ ಬೆಂಡೆ, ಕೆಂಪು ಬೆಂಡೆ, 20 ಬಗೆಯ ಔಷಧೀಯ ಸಸ್ಯಗಳು, 400 ಗುಳಿ ಏಲಕ್ಕಿ ಬಾಳೆ, ನಂಜನಗೂಡು ರಸ ಬಾಳೆ, ಕರಿಕಡ್ಡಿ ಬಾಳೆಯನ್ನು ಬೆಳೆದಿದ್ದಾರೆ.

ಸ್ವಾವಲಂಬಿ ಬೇಸಾಯ
ಕೃಷಿಗೆ ಬೇಕಾದ ಎಲ್ಲಾ ಒಳಸುರಿಗಳನ್ನು ತಯಾರಿಸಿಕೊಳ್ಳುತ್ತಾರೆ. 25 ನಾಟಿ ತಳಿ ಕೋಳಿ, ಹತ್ತು ಮೊಲ, ಏಳು ಹಸು, ಎರಡು ಎಮ್ಮೆ ಸಾಕಿದ್ದಾರೆ. ಇವುಗಳ ಸೆಗಣಿ, ಗಂಜಲವನ್ನು ಗೋಬರ್ ಗ್ಯಾಸ್‌ಗೆ ಬಳಸುತ್ತಾರೆ. ಅದರ ದ್ರಾವಣ, ಕೃಷಿ ತ್ಯಾಜ್ಯ, ಮಾವಿನ ಮರದ ಎಲೆ ಇತ್ಯಾದಿಗಳನ್ನು ಎರೆಗೊಬ್ಬರ ತೊಟ್ಟಿಗೆ ಹಾಕುತ್ತಾರೆ.

ಅವರ ಜಮೀನಿನಲ್ಲಿ 20 ಅಡಿ ಉದ್ದ, ನಾಲ್ಕು ಅಡಿ ಅಗಲದ ಎಂಟು ಎರೆಗೊಬ್ಬರ ತೊಟ್ಟಿ ಇವೆ. ಇದನ್ನು ತೋಟಗಾರಿಕೆ ಇಲಾಖೆ ಸಹಾಯಧನ ಪಡೆದು ಕಟ್ಟಿದ್ದಾರೆ. ಈ ಘಟಕಗಳಿಂದ ಆರು ತಿಂಗಳಿಗೆ ಕನಿಷ್ಠ ಎಂಟು ಟನ್ ಎರೆಗೊಬ್ಬರ ತಯಾರಿಸಿ ಬೆಳೆಗಳಿಗೆ ಬಳಸುತ್ತಾರೆ.

ಮನೆಯ ಅಡಿಗೆಗೆ ಗೋಬರ್ ಗ್ಯಾಸ್ ಬಳಕೆ ಮಾಡುತ್ತಾರೆ. ಮನೆಯಲ್ಲಿ ಬಿತ್ತನೆ ಬೀಜ ಬ್ಯಾಂಕ್ ಇದೆ. ಎಲ್ಲಾ ಬೀಜಗಳನ್ನು ಅಲ್ಲಿಂದಲೆ ಪಡೆಯುತ್ತಾರೆ. ಆಹಾರ ಧಾನ್ಯಗಳು, ಹಸು ಸಾಕಣೆಯಿಂದ ಹಾಲು, ಮೊಸರು ಹೀಗೆ ಆಹಾರದ ವಿಷಯದಲ್ಲಿ ಸ್ವಾವಲಂಬಿ ಆಗಿರುವುದು ವಿಶೇಷ.

ಬೀಜ ಬ್ಯಾಂಕ್ ಸ್ಥಾಪನೆಯಾಗಿ ಮೊನ್ನೆ ಸಂಕ್ರಾಂತಿಗೆ ಎರಡು ವರ್ಷ. ಅವರ ಬಳಿ ಸೊಪ್ಪು, ತರಕಾರಿ, ಏಕದಳ ಮತ್ತು ದ್ವಿದಳ ಧಾನ್ಯಗಳ 70 ಬಗೆಯ ದೇಸಿ ಬೀಜಗಳು ಸಂಗ್ರಹವಿದೆ. ಭತ್ತ, ರಾಗಿ, ನವಣೆಯ ನಾಟಿ ತಳಿಗಳನ್ನು 200ಕ್ಕೂ ಹೆಚ್ಚು ಸ್ಥಳೀಯ ರೈತರಿಗೆ ನೀಡಿದ್ದಾರೆ.
 
ಒಂದು ಕಿಲೊ ಬೀಜ ಪಡೆದುಕೊಂಡರೆ ಅದಕ್ಕೆ ಪ್ರತಿಯಾಗಿ ಸಂಪೂರ್ಣ ಸಾವಯವದಲ್ಲಿ ಬೆಳೆದು ಎರಡು ಕಿಲೊ ಹಿಂತಿರುಗಿಸಬೇಕು. ಸಾವಯವ ಕೃಷಿಕರಲ್ಲದವರಿಗೆ ಕಿಲೊಗೆ ಇಂತಿಷ್ಟು ಎಂದು ದರ ನಿಗದಿ ಮಾಡಲಾಗಿದೆ. ಅವರಿಂದ ಮರಳಿ ಬೀಜ ಪಡೆಯುವುದಿಲ್ಲ.

ಸಸಿಮಡಿ ತಯಾರಿಕೆ, ನಾಟಿ, ಗೊಬ್ಬರ, ಜೈವಿಕ ಕೀಟನಾಶಕ ಸಿಂಪರಣೆ, ಸಸ್ಯ ಸಂರಕ್ಷಣೆ, ಕೊಯ್ಲು, ಬೀಜ ಸಂರಕ್ಷಣೆ ವಿಷಯವಾಗಿ ಮಾರ್ಗದರ್ಶನವನ್ನು ನೀಡುತ್ತಾರೆ.

 `ಕೆಂಪು ಮುಂಡಗದ ಅಕ್ಕಿ~ ಹೆಸರಿನ ಬ್ರಾಂಡ್ ಅಡಿಯಲ್ಲಿ ತಾವು ಬೆಳೆದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರುತ್ತಾರೆ. ದೇಸಿ ತಳಿ ಬೀಜಗಳನ್ನು ಸಣ್ಣ ಪೊಟ್ಟಣದಲ್ಲಿ ಇಟ್ಟು 10 ರೂ. ದರ ನಿಗದಿ ಮಾಡಿ ಕೃಷಿ ಮೇಳಗಳಲ್ಲೂ ಮಾರುತ್ತಾರೆ. ಎರೆಹುಳು, ಎರೆಗೊಬ್ಬರ, ಮಾವು, ಬಾಳೆ, ಹಾಲು ಇನ್ನಿತರ ಉತ್ಪನ್ನಗಳ ಮಾರಾಟದಿಂದ ಸಾಕಷ್ಟು ಆದಾಯವೂ ಇದೆ. ಇವರ ಸಮಗ್ರ ಕೃಷಿ ಸಾಧನೆಗಾಗಿ ಜಿಲ್ಲಾಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿ ಸಂದಿದೆ.

ಹೆಚ್ಚಿನ ಮಾಹಿತಿಗೆ ಅವರನ್ನು 99808 07024 ಸಂಖ್ಯೆಯಲ್ಲಿ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT