ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡಮಲದೊಡ್ಡಿ ಶಾಲೆಯಲ್ಲಿಯೇ ನಿಸರ್ಗ ಸ್ವರ್ಗ

Last Updated 25 ಫೆಬ್ರುವರಿ 2012, 10:25 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ ದೊಡಮಲದೊಡ್ಡಿ ಪುಟ್ಟ ಗ್ರಾಮ. ಗ್ರಾಮದ ಸಮೀಪ ಇರುವ `ನಿಸರ್ಗ ಶಾಲೆ~ಯಿಂದ ಗ್ರಾಮ ಶೈಕ್ಷಣಿಕ ಹಾಗೂ ಪರಿಸರ ವಲಯದಲ್ಲಿ ಹೆಸರುವಾಸಿ ಆಗಿದೆ.

ನಿಸರ್ಗ ಎಂಬುದು ಸಂಯುಕ್ತ ಪ್ರೌಢ ಶಾಲೆಯ ಹೆಸರು. ಹೆಸರಿಗೆ ತಕ್ಕಂತೆ ನಿಸರ್ಗದ ನಡುವೆ ತಲೆಯೆತ್ತಿರುವ ಈ ಶಾಲೆ, ಅಲ್ಲಿನ ಹಸಿರು ಸಿರಿಯಿಂದಾಗಿ ನಿಸರ್ಗ ಪ್ರಿಯರ ಗಮನ ಸೆಳೆದಿದೆ. ವಿಶಾಲವಾದ ಪ್ರದೇಶದಲ್ಲಿ ಒಪ್ಪವಾಗಿ ಬೆಳೆಸಲಾಗಿರುವ ವಿವಿಧ ಜಾತಿಯ ಗಿಡಮರಗಳು ಹಾಗೂ ಔಷಧ ಸಸ್ಯಗಳು ಇಲ್ಲಿನ ವಿಶೇಷ. ಇದರಿಂದಾಗಿಯೇ ಸಾರ್ವಜನಿಕ ಶಿಕ್ಷಣ ಇಲಾಖೆ ಪರಿಸರ ಮಿತ್ರ ಶಾಲೆ ಪ್ರಶಸ್ತಿ ನೀಡಿ ಗೌರವಿಸಿದೆ.

ಶಾಲೆಯ ಆವರಣ ಹಾಗೂ ಸುತ್ತಮುತ್ತ ಗಿಡ ಮರ ಬೆಳೆಸುವುದು ಇಂದು ಸಾಮಾನ್ಯ ವಾಗಿದೆ. ಮಕ್ಕಳಲ್ಲಿ ಹಸಿರಿನ ಮಹತ್ವ ತಿಳಿಸ ಲೆಂದೇ ಸರ್ಕಾರ ಗಿಡಮರ ಬೆಳೆಸುವ ಯೋಜನೆ ಯನ್ನು ಜಾರಿಗೆ ತಂದಿದೆ. ಆದರೆ ಬೆರಳೆಣಿಕೆ ಯಷ್ಟು ಶಾಲೆಗಳು ಮಾತ್ರ ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿವೆ. ಅಂತಹ ಶಾಲೆಗಳಲ್ಲಿ ನಿಸರ್ಗ ಶಾಲೆ ಮುಂಚೂಣಿಯಲ್ಲಿದೆ.

ಇಲ್ಲಿ ಬೆಳೆಸಲಾಗಿರುವ ನೂರಾರು ಜಾತಿಯ ಗಿಡಮರ, ಸರ್ವ ಋತು ಹಣ್ಣಿನ ತೋಟ, ಮೂಲಿಕಾ ವನದ ಹಿಂದೆ ಶಾಲೆಯ ಪ್ರಾಂಶು ಪಾಲ ನಾಗರಾಜ್ ಹಾಗೂ ಮುಖ್ಯಶಿಕ್ಷಕಿ ಗಾಯತ್ರಿ ಶ್ರಮವಿದೆ. ಸುತ್ತೆಲ್ಲಾ ಮಾವಿನ ತೋಟಗಳನ್ನು ಬೆಳೆಸಲಾಗಿದೆ. ಆದರೆ ಇವರು ಮಾತ್ರ ತಮ್ಮ ಜಮೀನನ್ನು ನಿಸರ್ಗ ಸ್ವರ್ಗ ಮಾಡಲು ಹೊರಟಿದ್ದಾರೆ.

ಅಳಿವಿನ ಅಂಚಿನಲ್ಲಿರುವ ಔಷಧೀಯ ಸಸ್ಯಗಳನ್ನು ಬೆಳೆಸಿ ಉಳಿಸುವುದು. ಮಕ್ಕಳಲ್ಲಿ ಹಸಿರಿನ ಬಗ್ಗೆ ಅರಿವು ಮೂಡಿಸುವುದು ಈ ಪ್ರಯತ್ನದ ಹಿಂದಿನ ಉದ್ದೇಶವಾಗಿದೆ ಎಂದು ನಾಗರಾಜ್ ಹೇಳುತ್ತಾರೆ. ಇಲ್ಲಿ ಬೆಳೆಸಲಾಗುತ್ತಿ ರುವ ಸರ್ವ ಋತು ಹಣ್ಣಿನ ತೋಟ ಇಲ್ಲಿನ ಇನ್ನೊಂದು ವಿಶೇಷ. ಈ ತೋಟದಲ್ಲಿ ಮಾವು, ಸಪೋಟ, ನೇರಳೆ, ಬಾಳೆ ಇತ್ಯಾದಿ ಹಲವು ಜಾತಿಯ ಹಣ್ಣಿನ ಗಿಡಗಳನ್ನು ನಾಟಿ ಮಾಡ ಲಾಗಿದೆ. ಎಲ್ಲ ಕಾಲದಲ್ಲೂ ಯಾವುದಾದರೂ ಒಂದು ಹಣ್ಣು ಸಿಗಬೇಕು ಎಂಬುದು ಇದರ ಹಿಂದಿನ ಉದ್ದೇಶವಾಗಿದೆ.

ಇನ್ನು ವೈಜ್ಞಾನಿಕ ವಿಧಾನದಲ್ಲಿ ಬೆಳೆಸಲಾಗಿ ರುವ ಮೂಲಿಕಾ ವನದಲ್ಲಿ ನೂರಾರು ಜಾತಿಯ ಔಷಧೀಯ ಸಸ್ಯಗಳನ್ನು ಬೆಳೆಸಲಾಗಿದೆ. ವನದ ಪ್ರವೇಶ ದ್ವಾರದಲ್ಲಿ ಅಲ್ಲಿನ ಸಸ್ಯಗಳ ಹೆಸರನ್ನು ಪ್ರದರ್ಶಿಸಲಾಗಿದೆ. ಪ್ರತಿ ಗಿಡದ ಬುಡದಲ್ಲಿಯೂ ಆಯಾ ಗಿಡದ ಹೆಸರನ್ನು ಬರೆದಿಡಲಾಗಿದೆ. ಇದರಿಂದ ವೀಕ್ಷಕರಿಗೆ ಆಯಾ ಸಸ್ಯದ ಮಾಹಿತಿ ಸುಲಭವಾಗಿ ಲಭ್ಯವಾಗುತ್ತದೆ.
 

ಪರಿಸರ ಪ್ರಿಯ ದಂಪತಿಗಳಾದ ನಾಗರಾಜ್ ಹಾಗೂ ಗಾಯತ್ರಿ ತಮ್ಮ ಬಿಡುವಿನ ವೇಳೆಯನ್ನು ಗಿಡ ಬೆಳೆಸುವುದಕ್ಕೆ ಮೀಸಲಿಟ್ಟಿದ್ದಾರೆ. ಗಿಡ ಬೆಳೆಸುವ ಕಾರ್ಯದಲ್ಲಿ ಶಾಲಾ ವಿದ್ಯಾರ್ಥಿ ಗಳನ್ನೂ ತೊಡಗಿಸಿದ್ದಾರೆ. ಶಾಲೆಯ ಪ್ರತಿ ವಿದ್ಯಾರ್ಥಿಗೂ ಒಂದು ಗಿಡದ ಆರೈಕೆಯ ಜವಾಬ್ಧಾರಿಯನ್ನು ವಹಿಸಲಾಗುತ್ತದೆ. ಆ ವಿದ್ಯಾರ್ಥಿ ಶಾಲೆ ಬಿಡುವವರೆಗೆ ಅದರ ಯೋಗ ಕ್ಷೇಮ ನೊಡಿಕೊಳ್ಳುತ್ತಾನೆ. ಪಾಲಕ ವಿದ್ಯಾರ್ಥಿ ಹೆಸರನ್ನು ಗಿಡದ ಬುಡದಲ್ಲಿ ನೆಟ್ಟ ಕಲ್ಲಿನ ಮೇಲೆ ಬರೆಯಲಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕವಾಗಿ ಗಿಡಗಳನ್ನು ಬೆಳೆಸುತ್ತಾರೆ.

ಇಷ್ಟು ಮಾತ್ರವಲ್ಲದೆ ಶಾಲೆಯ ಸಮೀಪ ಮಿನಿ ಕಾಡನ್ನೂ ಬೆಳೆಸಲಾಗಿದೆ. ಇದು ಬಗೆ ಬಗೆಯ ಪ್ರಾಣಿ ಪಕ್ಷಿಗಳ ಆವಾಸವಾಗಿ ಪರಿಣಮಿಸಿದೆ. ಇದೂ ಸಾಲದೆಂಬಂತೆ ಶಾಲೆಯಲ್ಲಿ ವಿವಿಧ ಜಾತಿಯ ಪ್ರಾಣಿ ಪಕ್ಷಿಗಳನ್ನು ಸಾಕಲಾಗಿದೆ. ಈ ಎಲ್ಲದರ ಹಿಂದೆ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಸದುದ್ದೇಶವಿದೆ. ಈ ಶಾಲೆ ಪರಿಸರ ಪ್ರಿಯರ ನೆಚ್ಚಿನ ಸ್ಥಳವೂ ಆಗಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT