ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊರೆಗಳ ವಸಂತ ಕೊಳ ವಿರೂಪ!

Last Updated 20 ಅಕ್ಟೋಬರ್ 2012, 5:35 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಮೈಸೂರು ಅರಸರ ಮೊದಲ ರಾಜಧಾನಿ ಶ್ರೀರಂಗಪಟ್ಟಣದಲ್ಲಿ, ಆ ವಂಶದ ದೊರೆಗಳು ನಿರ್ಮಿಸಿರುವ ಗ್ರಾನೈಟ್ ಶಿಲೆಯ ವಸಂತ ಕೊಳವನ್ನು ವಿರೂಪಗೊಳಿಸಲಾಗಿದೆ.
 
ನೆಲ ಮಟ್ಟದಿಂದ 5 ಅಡಿ ಎತ್ತರದಲ್ಲಿರುವ ಈ ಕೊಳಕ್ಕೆ ನಾಲ್ಕೂ ಕಡೆಯಿಂದ ಪ್ರವೇಶಿಸಬಹುದು. ಸುಮಾರು 15 ಅಡಿ ಸುತ್ತಳತೆಯ ಈ ಕೊಳವನ್ನು ನಸುಗೆಂಪು ಬಣ್ಣದ ಗ್ರಾನೈಟ್ ಶಿಲೆ ಬಳಸಿ ನಾಜೂಕಿನಿಂದ ನಿರ್ಮಿಸಲಾಗಿದೆ.
ಈ ಕೊಳಕ್ಕೆ ನೀರು ಹರಿಸಲು ಒಳಗಾಲುವೆ ನಿರ್ಮಿಸಿದ್ದು, ಅದು ಸಂಪೂರ್ಣ ಮುಚ್ಚಿ ಹೋಗಿದೆ. ದಸರಾ ಆಚರಣೆಯ ಸಂದರ್ಭದಲ್ಲಿ, ಸಿಂಹಾಸನಾರೋಹಣಕ್ಕೂ ಮುನ್ನ ಈ ಶಿಲಾ ಕೊಳದಲ್ಲಿ ನಾಡಿನ ದೊರೆ ಪನ್ನೀರು ಸ್ನಾನ ಮಾಡುತ್ತಿದ್ದರು ಎಂಬ ಪ್ರತೀತಿ ಇದೆ. ಇಂತಹ ಕೊಳವನ್ನು ಸ್ಥಳೀಯ ಪುರಸಭೆ ಕಾರಂಜಿಯನ್ನಾಗಿ ಪರಿವರ್ತಿಸಿದೆ.

ವಿದ್ಯುತ್ ಕೇಬಲ್ ಅಳವಡಿಸುವ ಉದ್ದೇಶದಿಂದ ಕೊಳದ ಕೆಲ ಭಾಗವನ್ನು ಕಿತ್ತು ಹಾಕಲಾಗಿದೆ. ಹಾಗಾಗಿ ಅದರ ನೈಜತೆಗೆ ಭಂಗ ಬಂದಿದೆ. ಪ್ರಾಚ್ಯವಸ್ತು ಮತ್ತು ವಸ್ತುಸಂಗ್ರಹಾಲಯಗಳ ಇಲಾಖೆ ಕೂಡ ಈ ಪಾರಂಪರಿಕ ಕುರುಹು ಉಳಿಸುವ, ಅದರ ಮಹತ್ವವನ್ನು ಜನರಿಗೆ ತಿಳಿಸುವ ಪ್ರಯತ್ನಕ್ಕೆ ಮುಂದಾಗಿಲ್ಲ ಎಂಬುದು  ಇಲ್ಲಿನ ನಿವಾಸಿಗಳ ಆರೋಪ.
 
ಪಟ್ಟಣದಲ್ಲಿ ಶ್ರೀಗಂಧದ ಅರಮನೆ ಇದ್ದ ಸ್ಥಳ ಈಗ ಉದ್ಯಾನವಾಗಿದೆ. ಉದ್ಯಾನದ ನಿರ್ವಹಣೆ ಕೂಡ ಸರಿಯಾಗಿ ಇಲ್ಲದೇ ಇರುವುದು ಟೀಕೆಗೆ ಗ್ರಾಸವಾಗಿದೆ. ರಥಸಪ್ತಮಿ, ದಸರಾ ಕಾರ್ಯಕ್ರಮಗಳು ನಡೆಯುವ ದಿನಗಳಲ್ಲಿ ಮಾತ್ರ ಗಿಡ-ಗಂಟಿ ಕೀಳುವ ಕೆಲಸ ನಡೆಯುತ್ತದೆ.

ಉಳಿದ ದಿನಗಳಲ್ಲಿ ಅಷ್ಟಕ್ಕಷ್ಟೆ. ಇದೇ ಉದ್ಯಾನದ ಒಳಗಿರುವ, ವಿಜಯನಗರ ಕಾಲಕ್ಕೆ ಸೇರಿದ್ದು ಎನ್ನಲಾಗುವ ವೇಣುಗೋಪಾಲಸ್ವಾಮಿಯ ಪುಟ್ಟ ದೇಗುಲ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸುಣ್ಣ ಕಾಣದ ಶತಮಾನಗಳೇ ಕಳೆದಿದ್ದು, ಬಣ್ಣಗೆಟ್ಟಿದೆ ಎಂದು ಪರಿಸರ ಪ್ರೇಮಿಗಳು ದೂರಿದ್ದಾರೆ.

ಅರಮನೆಯ ಸಂಪ್ರದಾಯಗಳು:ಶ್ರೀರಂಗಪಟ್ಟಣದಲ್ಲಿ ದಸರಾ ಆಚರಣೆ ವೇಳೆ ಅರಮನೆಯಲ್ಲಿ ನಡೆಯುತ್ತಿದ್ದ ಸಂಪ್ರದಾಯಗಳನ್ನು ಕವಿ ಗೋವಿಂದ ವೈದ್ಯ ತನ್ನ `ಕಂಠೀರವ ನರಸರಾಜ ವಿಜಯಂ~ ಕೃತಿಯಲ್ಲಿ ಉಲ್ಲೇಖಿಸಿದ್ದಾನೆ.
 
ಬಾದ್ರಪದ ಕೃಷ್ಣ ದಶಮಿಯಂದು ಸಿಂಹಾಸನ ಜೋಡಿಸುವುದು, ಕನ್ನಡಿ ತೊಟ್ಟಿಯಲ್ಲಿ ಭದ್ರಾಸನವನ್ನು ಜೋಡಿಸುವುದು ಹಾಗೂ ಪಟ್ಟದ ಆನೆ, ಕುದುರೆ ಮತ್ತು ಹಸುಗಳನ್ನು ತರುವುದು. ಆಶ್ವಯುಜ ಶುಕ್ಲ ಪಾಡ್ಯಮಿಯಂದು ಮುಂಜಾನೆ ಎಣ್ಣೆ ಶಾಸ್ತ್ರ, ಕಂಕಣ ಧಾರಣೆ, ದರ್ಬಾರ್‌ನಲ್ಲಿ ನವಗ್ರಹ ಕಲಸ ಪೂಜೆ ಮತ್ತು ಸಿಂಹಾಸನಾರೋಹಣ. ಆಶ್ವಯುಜ ಶುಕ್ಲ ಸಪ್ತಮಿಯಂದು ಸರಸ್ವತಿ ಪೂಜೆ, ಕಾಳರಾತ್ರಿ ಮಹಿಷಾಸುರ ಸಂಹಾರ.
 
ಆಶ್ವಯುಜ ಶುಕ್ಲ ನವಮಿಯ ಮುಂಜಾನೆ ಚಂಡಿ ಹೋಮ. ದೇವಾಲಯಕ್ಕೆ ಪಟ್ಟದ ಆನೆ, ಕುದುರೆ ಖಾಸಾಯುಧಗಳನ್ನು ಕಳುಹಿಸುವುದು. ಖಾಸ್ ಸವಾರಿಯ ನಂತರ ಆಯುಧ, ಗಜಾಶ್ವಾದಿಗಳಿಗೆ ಪೂಜೆ. ರಾತ್ರಿ ದರ್ಬಾರ್ ನಂತರ ಸಿಂಹಾಸನದ ಸಿಂಹ ವಿಸರ್ಜನೆ ಮತ್ತು ದೇವರ ಮನೆಯಲ್ಲಿ ಕಂಕಣ ವಿಸರ್ಜನೆಯಾಗಬೇಕು.

ಆಶ್ವಯುಜ ಶುಕ್ಲ ದಶಮಿಯಂದು ಆಯುಧಗಳ ಉತ್ತರ ಪೂಜೆ, ವೃಶ್ಚಿಕ ಲಗ್ನದಲ್ಲಿ ವಿಜಯಯಾತ್ರೆ. ಆಶ್ವಯುಜ ಶುಕ್ಲ ಪೌರ್ಣಮಿಯಂದು ಕುಲದೇವತೆಯ ರಥಾರೋಹಣ; ಅಷ್ಟಮಿಯಂದು ಸಿಂಹಾಸನ, ಭದ್ರಾಸನ, ಪಟ್ಟದ ಆನೆ, ಕುದುರೆ ಮತ್ತು ಹಸುವನ್ನು ಯಥಾಸ್ಥಾನಕ್ಕೆ ಸೇರಿಸುವ ಸಂಪ್ರದಾಯಗಳು ಅನೂಚಾನವಾಗಿ ನಡೆಯುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT