ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋಸೆಗೂ ಬಂತು ‘ಮಿನಿ’ ಆಕಾರ

ರಸಾಸ್ವಾದ
Last Updated 18 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ತಿನ್ನುವ ಆಹಾರ, ಧರಿಸುವ ಉಡುಗೆ ಹೀಗೆ ಎಲ್ಲ ವಿಷಯಕ್ಕೂ ಈಗ ‘ಮಿನಿ’ ಎಂಬ ವಿಶೇಷಣ ಹೆಚ್ಚು ಪ್ರಚಲಿತ. ಹೆಣ್ಣು ಮಕ್ಕಳು ಲಂಗ–ದಾವಣಿ, ಸೀರೆಯಿಂದ ಮಿಡಿ–ಮಿನಿಯತ್ತ ವಾಲಿದರೆ, ಫುಲ್‌ ಮೀಲ್ಸ್‌ ಹೆಸರಿನಲ್ಲಿ ಜನರು ಬಯಸಿದಷ್ಟು ಆಹಾರ ಬಡಿಸುತ್ತಿದ್ದ ಮೆಸ್‌ಗಳು, ಹೋಟೆಲ್‌ಗಳು ಕೊನೆಕೊನೆಗೆ ‘ಮಿನಿ ಮೀಲ್ಸ್‌’ ಪರಿಚಯಿಸಿ ಗ್ರಾಹಕರನ್ನು ಆಕರ್ಷಿಸತೊಡಗಿದವು.

ಇದುವರೆಗೆ ಊಟದೊಂದಿಗೆ ನಂಟು ಬೆಸೆದಿದ್ದ ‘ಮಿನಿ’ ಎಂಬ ಶಬ್ದ ಈಗ ತಿಂಡಿಯೊಂದಿಗೂ ಥಳುಕು ಹಾಕಿಕೊಂಡಿದೆ. ಹೌದು, ಕತ್ರಿಗುಪ್ಪೆಯಲ್ಲಿರುವ ‘ಜನಾಹಾರ್’ ಹೋಟೆಲ್‌ ‘ಮಿನಿ ಮಸಾಲೆ ದೋಸೆ’ ಪರಿಚಯಿಸಿ, ಬಸವನಗುಡಿ ಸುತ್ತಮುತ್ತ ಸಿಕ್ಕಾಪಟ್ಟೆ ಫೇಮಸ್‌ ಆಗಿದೆ. ‘‘ಕನ್ನಡ ನೆಲದಲ್ಲಿ ಎರಡು ಸಾವಿರಕ್ಕೂ ಅಧಿಕ ವರ್ಷದಿಂದ ದೋಸೆಯ ಘಮ ಹರಡಿರಬಹುದು.

‘ತಮಿಳು ಸಂಗಂ’ನಲ್ಲಿ ದೋಸೆಯ ಬಗ್ಗೆ ಉಲ್ಲೇಖ ಇರುವುದರಿಂದ ತಮಿಳು ನೆಲದಲ್ಲೇ ಇದು ಮೊದಲಾಗಿ ಮೈದಳೆಯಿತು ಎಂಬ ಭಾವನೆ ಇದೆ. ಆದರೆ, ದೋಸೆಗೂ ಕರ್ನಾಟಕಕ್ಕೂ ಅದರಲ್ಲೂ ಮುಖ್ಯವಾಗಿ ಕರಾವಳಿ ಜಿಲ್ಲೆ ಉಡುಪಿಗೆ ಬಹಳ ಹತ್ತಿರದ ಸಂಬಂಧ ಇರುವುದು ಇತಿಹಾಸದಿಂದ ಗೊತ್ತಾಗುತ್ತದೆ.
ದೋಸೆ ಹುಟ್ಟಿದ್ದು ಉಡುಪಿಯಲ್ಲೇ ಎಂದು ಆಂಗ್ಲ ಆಹಾರ ಲೇಖಕರಾದ ಪ್ಯಾಟ್ ಚಾಂಪ್ಮನ್, ಲೀಸಾ ರೇನರ್ ಹಾಗೂ ತಂಗಪ್ಪನ್ ನಾಯರ್ ಪ್ರತಿಪಾದಿಸುತ್ತಾರೆ.

ಉಡುಪಿ ಮೂಲದ ಹೋಟೆಲ್‌ಗಳು ಪ್ರಪಂಚದ ಉದ್ದಗಲಕ್ಕೆ ತಲೆಯೆತ್ತಿದ್ದು, ಎಲ್ಲರಿಗೂ ನೂರಾರು ಬಗೆಯ ದೋಸೆಯ ರುಚಿ ಉಣಬಡಿಸುತ್ತಿರುವುದನ್ನು ನೋಡಿದರೆ ದೋಸೆಯ ಮೂಲ ಕರ್ನಾಟಕ ಎಂಬ ವಾದಕ್ಕೆ ಬಲವಾದ ಪುಷ್ಟಿ ಸಿಗುತ್ತದೆ. ದೋಸೆಯ ಮೂಲ ಏನೇ ಇರಲಿ, ಇಂದು ರುಚಿ, ಶುಚಿ ಮತ್ತು ವೈವಿಧ್ಯದ ದೋಸೆ ನೀಡುವಲ್ಲಿ ಕರ್ನಾಟಕವನ್ನು ಹಿಂದಿಕ್ಕುವ ಇನ್ನೊಂದು ರಾಜ್ಯವಿಲ್ಲ ಎಂಬುದಂತೂ ನಿಜ’. –ಹೀಗೆ ‘ದೋಸೆ ಮೀಮಾಂಸೆ’ಯನ್ನೇ ತೆರೆದಿಡುತ್ತಾರೆ ಹೋಟೆಲ್‌ ಮಾಲೀಕರಾದ ವೆಂಕಟರಾಜ ಭಟ್.

 ಛೋಟಾ ದೋಸೆ! 

ವಿಶ್ವದುದ್ದಗಲಕ್ಕೂ ಪ್ರಸಿದ್ಧಿ ಪಡೆದಿರುವ ದೋಸೆಯ ರುಚಿಯನ್ನು ಜನಾಹಾರ್‌ ಹೋಟೆಲ್‌ ಮಿನಿ ಮಸಾಲೆ ದೋಸೆ ಹೆಸರಿನಲ್ಲಿ ಗ್ರಾಹಕರಿಗೆ ದಾಟಿಸುತ್ತಿದೆ. ಬೆಳಗಿನ ವಾಕಿಂಗ್‌ಗೆಂದು ಬಂದವರು, ಮನೆಯಲ್ಲಿ ತಿಂಡಿ ತಿನ್ನದೇ ಧಾವಂತದಿಂದ ಕಚೇರಿಗೆ ಹೊರಡುವ ಉದ್ಯೋಗಿಗಳು, ವಿದ್ಯಾರ್ಥಿಗಳು, ಬೇರೆ ಬೇರೆ ಕಡೆ ದುಡಿಯುವ ಕೆಲಸಗಾರರು ಇಲ್ಲಿನ ಮಿನಿ ಮಸಾಲೆ ದೋಸೆಯನ್ನು ಇಷ್ಟಪಟ್ಟು ತಿನ್ನುತ್ತಾರಂತೆ.

ಬಸವನಗುಡಿ ಸುತ್ತಮುತ್ತಲಿನ ಆಹಾರಪ್ರಿಯರಿಗೆ ಈ ತಾಣ ಬೆಸ್ಟ್ ದೋಸೆ ಪಾಯಿಂಟ್ ಆಗಿ ರೂಪುಗೊಂಡಿದೆ. ಮಿನಿ ಮಸಾಲೆ ದೋಸೆಯಷ್ಟೇ ಅಲ್ಲದೇ ಜನಾಹಾರ್‌ನಲ್ಲಿ ಇಡ್ಲಿ, ಗರಿಗರಿ ವಡೆ, ಚೌಚೌ ಭಾತ್, ಬೊಂಬಾಟ್ ಟಿಫಿನ್ ಸಹ ಲಭ್ಯ. ‘ಜನಾಹಾರ್ ಅಂದರೆ ಜನರ- ಆಹಾರ ಎಂದಷ್ಟೇ ಅರ್ಥ. ಸಂತೃಪ್ತಿಯ ಉಪಾಹಾರಕ್ಕಾಗಿ ಎಂಬ ಧ್ಯೇಯವಾಕ್ಯದೊಂದಿಗೆ ಗ್ರಾಹಕರಿಗೆ ಶುಚಿ-ರುಚಿಯಾದ ಆಹಾರವನ್ನಷ್ಟೇ ನೀಡುವುದು ನಮ್ಮ ವಿಶೇಷ. ದಕ್ಷಿಣ ಭಾರತದ ಪ್ರಮುಖ ಆಹಾರ ಇಡ್ಲಿ, ವಡೆ, ಚೌಚೌ ಭಾತ್, ಬಿಸಿ ಬೇಳೆಭಾತ್ ಮತ್ತು ದೋಸೆ.

ಈ ಕಾರಣಕ್ಕೆ ಇವಿಷ್ಟೇ ತಿನಿಸುಗಳನ್ನು ರುಚಿಯಾಗಿ, ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ನೀಡುವುದು ನಮ್ಮ ಉದ್ದೇಶ. ಇಷ್ಟೇ ಅಲ್ಲದೆ ಪ್ರತಿ ನಿತ್ಯ ಬಗೆಬಗೆಯ ರೈಸ್ ಭಾತ್‌ಗಳನ್ನು ನೀಡುತ್ತಿದ್ದೇವೆ. ಗ್ಯಾಸ್, ತರಕಾರಿ, ದವಸ ಧಾನ್ಯಗಳ ಬೆಲೆ ಗಗನಕ್ಕೆ ಏರುತ್ತಿರುವ ಈ ದಿನಗಳಲ್ಲಿ ಕಡಿಮೆ ಬೆಲೆಗೆ ನೀಡುವುದು ಕಷ್ಟವಾಗಿದೆ’ ಎಂಬುದು ಅವರ ಅನುಭವದ ಮಾತು.

ಉಡುಪಿ ಜಿಲ್ಲೆ ಕಾರ್ಕಳ ಮೂಲದ ವೆಂಕಟರಾಜ ಭಟ್ಟರು ಅಡುಗೆ ಭಟ್ಟರಾಗಿ ವೃತ್ತಿಜೀವನ ಆರಂಭಿಸಿ ಈಗ ಹೋಟೆಲ್ ಉದ್ಯಮಕ್ಕೆ ಕಾಲಿರಿಸಿದವರು. ಹೀಗಾಗಿ ಈ ಉದ್ಯಮದ ಓರೆಕೋರೆಗಳೆಲ್ಲ ಅವರಿಗೆ ತಿಳಿದಿರುವುದು ಸಹಜ. ಅಂದಹಾಗೆ, ಜನರು ಇಲ್ಲಿನ ನಾಟಿ ಕೊತ್ತಂಬರಿ ಸೊಪ್ಪಿನ ಚಟ್ನಿಗೆ ಮಾರುಹೋಗಿದ್ದಾರಂತೆ. ಬೆಣ್ಣೆಯಂತೆ ನುಣುಪುಳ್ಳ ಚಟ್ನಿಯನ್ನು ಮಿನಿ ಮಸಾಲೆ ದೋಸೆಯೊಂದಿಗೆ ಅದ್ದಿ ತಿನ್ನುವವರ ಮುಖಭಾವನ್ನು ಕಂಡಾಗ ಅದು ನಿಜ ಎನಿಸಿತು.

‘ಹಸಿರು ಚಟ್ನಿ ಮತ್ತು ಮೆದುವಾದ ಬಿಸಿ ಇಡ್ಲಿ ಕಾಂಬಿನೇಶನ್‌ ಅನ್ನು ನಮ್ಮ ಗ್ರಾಹಕರು ಬಹುವಾಗಿ ಮೆಚ್ಚಿದ್ದಾರೆ. ಪುಟಾಣಿಗಳು ಹಾಗೂ ಹಿರಿಯ ನಾಗರಿಕರನ್ನು ಕೇಂದ್ರೀಕರಿಸಿ ಆರಂಭಿಸಿದ್ದ ಮಿನಿ ಮಸಾಲೆ ದೋಸೆ ಈಗ ಎಲ್ಲಾ ವರ್ಗದ ಜನರನ್ನು ಆಕರ್ಷಿಸುತ್ತಿದೆ. ದೊಡ್ಡ ಮಸಾಲೆ ದೋಸೆ ತಿಂದರೆ ಕೆಲವರಿಗೆ ಹೆಚ್ಚೆನಿಸುತ್ತದೆ. ಆದರೆ, ಈ ಮಿನಿ ಮಸಾಲೆ ಎಲ್ಲರಿಗೂ ಹಿತವೆನಿಸುತ್ತದೆ. ರೆಗ್ಯುಲರ್ ಮಸಾಲೆ ದೋಸೆಯೂ ಇಲ್ಲುಂಟು.

ಎಲ್ಲಾ ತಿನಿಸುಗಳ ಕಾಂಬೋ, ಭರ್ಜರಿ ಬ್ರೇಕ್ ಫಾಸ್ಟ್, ಬೊಂಬಾಟ್ ಟಿಫಿನ್ ಇಲ್ಲಿನ ಮತ್ತೊಂದು ವಿಶೇಷತೆ. ₨೪೯ಕ್ಕೆ ಸಿಗುವ ಬೊಂಬಾಟ್ ಟಿಫಿನ್‌ನಲ್ಲಿ ಇಡ್ಲಿ, ವಡೆ, ಚೌಚೌ ಭಾತ್ ಹಾಗೂ ಮಿನಿ ಮಸಾಲೆ ದೋಸೆಯೂ ಲಭ್ಯ’ ಎನ್ನುವ ಹೋಟೆಲ್‌ನ ಮತ್ತೊಬ್ಬ ಮಾಲೀಕರಾದ ರವಿಶಂಕರ್, ಗ್ರಾಹಕರ ಕೈಗೆಟುಕುವ ದರದಲ್ಲಿ ತಿನಿಸುಗಳನ್ನು ನೀಡುತ್ತಿರುವ ಹೋಟೆಲ್ ಜನಾಹಾರ್ ಮುಂದಿನ ದಿನಗಳಲ್ಲಿ ನಗರದ ವಿವಿಧೆಡೆಗಳಲ್ಲಿ ಇನ್ನಷ್ಟು ಇಂತಹ ಮಿನಿ ಔಟ್‌ಲೆಟ್‌ಗಳನ್ನು ಆರಂಭಿಸಲು ಯೋಜನೆ ಹಾಕಿಕೊಂಡಿದೆ ಎನ್ನುತ್ತಾರೆ.

₨15ಕ್ಕೆ ಸಿಗುವ ಮಿನಿ ಮಸಾಲೆ ದೋಸೆಗೆ ಭರ್ಜರಿ ಬೇಡಿಕೆ ಇದೆ. ಹಾಗೆಯೇ, ₨49ಕ್ಕೆ ಸಿಗುವ ಬೊಂಬಾಟ್ ಟಿಫಿನ್‌ ಜನರ ಮನಸ್ಸು ಗೆದ್ದಿದೆ. ಮಧ್ಯಾಹ್ನದ ಊಟಕ್ಕೆ ಮಿನಿ ಮೀಲ್ಸ್, ಸಂಜೆಯ ಸ್ನ್ಯಾಕ್ಸ್ ವೇಳೆಗೆ ಬೋಂಡಾ ಸೂಪ್, ಅವಲಕ್ಕಿ ಭಾತ್, ಶಾವಿಗೆ ಭಾತ್ ಕೂಡ ಇಲ್ಲಿ ಲಭ್ಯ. ಬಸವನಗುಡಿ, ಕತ್ರಿಗುಪ್ಪೆಯತ್ತ ಹೋಗುವ ಯೋಜನೆ ಇದ್ದರೆ ಮಿನಿ ಮಸಾಲೆ ದೋಸೆ ಸವಿಯಲು ಮರೆಯಬೇಡಿ.

ಸ್ಥಳ: ಜನಾಹಾರ್, ಕತ್ರಿಗುಪ್ಪೆ ಮುಖ್ಯರಸ್ತೆ, ಗಿರಿಯಾಸ್ ಎದುರು, ಬನಶಂಕರಿ ೩ನೇ ಹಂತ. ಸಂಪರ್ಕಕ್ಕೆ: ೯೦೩೫೧ ೦೪೫೫೯.
–ಕೆ.ಎಂ.ಸತೀಶ್‌ ಬೆಳ್ಳಕ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT